ನಮ್ಮ ಧ್ವನಿ ಗೆಳೆಯರಿಂದ ಮಹೇಂದ್ರಕುಮಾರ್ ಹುಟ್ಟು ಹಬ್ಬ-ಒಡನಾಟದ ಮೆಲುಕು

-ದಿನೇಶ್ ಅಮೀನಮಟ್ಟು

ಸಾರ್ವಜನಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವವರು ಹಠಾತ್ತನೆ ಅಗಲಿಹೋದ ನಂತರ ಅವರ ಕುಟುಂಬದ ಸದಸ್ಯರನ್ನು ಎದುರಿಸುವುದು ಬಹಳ ಮುಜುಗರದ ಕೆಲಸ, ನಮ್ಮದೇನೂ ತಪ್ಪಿಲ್ಲದಿದ್ದರೂ ಅವರ ಹೆಂಡತಿ-ಮಕ್ಕಳನ್ನು ನೋಡಿದಾಗ ಸ್ವಲ್ಪ ಗಿಲ್ಟ್ ಆಗುತ್ತದೆ. ಈ ಹೆಂಡತಿ-ಮಕ್ಕಳು ಕೆಲವು ಸಂದರ್ಭಗಳಲ್ಲಿ ತಮ್ಮ ಗಂಡ ಇಲ್ಲವೇ ಅಪ್ಪನ ಹಳೆಯ ಗೆಳೆಯರ ಜೊತೆ ಸಿಟ್ಟಿನಿಂದ,ದ್ವೇಷದಿಂದ ಮಾತನಾಡಿದ್ದನ್ನು ನಾನು ಕೇಳಿದ್ದೇನೆ., ಇದೊಂದು ಸಹಜ ಪ್ರತಿಕ್ರಿಯೆ, ತಪ್ಪೆನ್ನಲಾಗದು.

ಮಹೇಂದ್ರ ಕುಮಾರ್ ಅಂತಿಮ ದರ್ಶನದ ದಿನ ದೂರದಿಂದ ನೋಡಿದ್ದು ಬಿಟ್ಟರೆ ಅವರ ಪತ್ನಿ ಮತ್ತು ಮಕ್ಕಳನ್ನು ನಾನು ಎಂದೂ ಭೇಟಿ ಮಾಡಿದ್ದಿಲ್ಲ, ನಿನ್ನೆ ‘ನಮ್ಮ ಧ್ವನಿ’ ಯ ಗೆಳೆಯರು ಮಹೇಂದ್ರಕುಮಾರ್ ಹುಟ್ಟು ಹಬ್ಬಕ್ಕೆ ಆಹ್ಹಾನಿಸಿದಾಗ ಇಲ್ಲ ಎನ್ನಲಾಗದೆ ಹೋಗಿದ್ದೆ. ಅಲ್ಲಿಗೆ ಈಗ ಕೊಪ್ಪದಲ್ಲಿ ನೆಲೆಸಿರುವ ಮಹೇಂದ್ರಕುಮಾರ್ ಪತ್ನಿ ತನ್ನಿಬ್ಬರು ಮಕ್ಕಳ ಜೊತೆ ಬಂದಿರುವುದನ್ನು ನೋಡಿ ಆಶ್ಚರ್ಯವಾಯಿತು.. ಈ ಮೂವರೂ ‘ನಮ್ಮ ಧ್ವನಿ’ ಯ ಯುವಕರ ಜೊತೆ ಮನೆ ಸದಸ್ಯರೇನೋ ಎಂಬಂತೆ ಆತ್ಮೀಯವಾಗಿ ನಡೆದುಕೊಂಡಿದ್ದನ್ನು ಕಂಡು ಇನ್ನೂ ಆಶ್ಚರ್ಯವಾಯಿತು. ಮಹೇಂದ್ರ ಕುಮಾರ್ ಪತ್ನಿ ಆಗಾಗ ಕಣ್ಣೊರೆಸಿಕೊಳ್ಳುತ್ತಿದ್ದರೂ ಇಡೀ ಕಾರ್ಯಕ್ರಮದಲ್ಲಿ ತನ್ನ ದು:ಖ, ಕಷ್ಟಗಳನ್ನು ತೋರಿಸಿಕೊಳ್ಳದೆ ಗಂಭೀರವಾಗಿ ಭಾಗವಹಿಸಿದ್ದರು. ರಕ್ತದಾನ ಕೂಡಾ ಮಾಡಿದರು, ಕೇಕ್ ಕಟ್ ಮಾಡಿದರು, ವೇದಿಕೆಯಲ್ಲಿ ಕೂತಿದ್ದರು, ನಮ್ಮೆಲ್ಲರ ಜೊತೆ ನಗುನಗುತ್ತಾ ಮಾತನಾಡಿದರು, ಗ್ರೂಪ್ ಪೋಟೊದಲ್ಲಿ ಬಂದು ಸೇರಿಕೊಂಡರು.

ಈ ಹೆಣ್ಣುಮಗಳ ಸ್ಥಾನದಲ್ಲಿ ಬೇರೆ ಯಾರಾದರೂ ಸಾಮಾನ್ಯ ಮನಸ್ಥಿತಿಯವರಾಗಿದ್ದರೆ ತನ್ನ ಗಂಡ ಸಾರ್ವಜನಿಕ ಜೀವನವನ್ನು ಕಟ್ಟಿಕೊಂಡು ನಮ್ಮನ್ನೆಲ್ಲ ಅಗಲಿ ಹೋಗುವಂತಾಯಿತು, ಇಂತಹವರ ಸಹವಾಸವೇ ಬೇಡ ಎಂದು ದೂರ ಇರುತ್ತಿದ್ದರೇನೋ? ಹಾಗೆ ವರ್ತಿಸಿದ್ದರೂ ತಪ್ಪೆಂದು ಹೇಳಲಾಗದು. ಹಾಗೆ ನಡೆದುಕೊಳ್ಳದೆ ಎಲ್ಲರ ಮನಸ್ಸು ಗೆದ್ದುಬಿಟ್ಟ ಈ ಹೆಣ್ಣುಮಗಳ ಒಳ್ಳೆಯ ಮನಸ್ಸಿಗೆ ತಲೆಬಾಗಬೇಕೆನಿಸಿತು. ತಾಯಿ-ಮಕ್ಕಳಿಗೆ ಒಳ್ಳೆಯದಾಗಲಿ, ಮಹೇಂದ್ರಕುಮಾರ್ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯೂ ಇರಲಿ.

‘ನಮ್ಮ ಧ್ವನಿ’ ಯ ಯುವಮಿತ್ರರು ಅಗಲಿಹೋದ ತಮ್ಮ ನಾಯಕನನ್ನು ಮರೆಯದೆ ಹುಟ್ಟುಹಬ್ಭವನ್ನು ಆಚರಿಸುವ ಮೂಲಕ ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಅರ್ಥಕಳೆದುಕೊಂಡಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ದೂರದ ಊರುಗಳಿಂದ ಮಹೇಂದ್ರಕುಮಾರ್ ಅಭಿಮಾನಿಗಳು ಬಂದಿದ್ದರು. ಕೊರೊನಾ ಕಾಲದಲ್ಲಿ ಎಲ್ಲಿಯೂ ಸಾರ್ವಜನಿಕ ಸಭೆಗಳಿಗೆ ಹೋಗದಿರುವ ನಾನು ಗೆಳೆಯ ಅಬ್ಬಾಸ್ ಕಿಗ್ಗ ಕರೆದಾಗ ಊರಲ್ಲಿದ್ದೇನೆ ಎಂದು ಮೊದಲು ತಪ್ಪಿಸಿಕೊಂಡು. ನಂತರ ಮಹೇಂದ್ರಕುಮಾರ್ ನೆನಪಾಗಿ ಒಪ್ಪಿಕೊಂಡೆ. ಅವರು ಬದುಕಿದ್ದಾಗ ಹುಟ್ಟುಹಬ್ಬಕ್ಕೆ ಕರೆದಿದ್ದರೂ ನಾನು ಹೋಗಿರಲಿಲ್ಲ.

ಕಾರ್ಯಕ್ರಮವನ್ನು ರಾ.ಚಿಂತನ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರೆ ಅಬ್ಬಾಸ್, ಮಹೇಂದ್ರನಾಯಕ್, ಅಬ್ಬಾಸ್ ಕಿಗ್ಗ, ಅಬೂಬಕರ್ ಮೊದಲಾದವರು ನೇಪಥ್ಯದಲ್ಲಿ ನಿಂತು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು. ಯೋಗೇಶ್ ಮಾಸ್ಟರ್, ಫೈರ್ ಬ್ರಾಂಡ್ ಹನುಮೇಗೌಡ ಮತ್ತು ಭವ್ಯಕೃಷ್ಣಮೂರ್ತಿ ಅವರು ಮಹೇಂದ್ರಕುಮಾರ್ ಒಡನಾಟವನ್ನು ಮೆಲುಕುಹಾಕಿದರು. ಮಹೇಂದ್ರಕುಮಾರ್ ಅವರಿಗೆ ಖುಷಿಯಾಗಿರಬಹುದು.

Please follow and like us:
error