ನನ್ನ ಅಕ್ಕನನ್ನು ಎರಡು ಬಾರಿ ಸಾಯಿಸಿದರು

‘’ ನನ್ನ ಅಕ್ಕನನ್ನು ಎರಡು ಬಾರಿ ಸಾಯಿಸಿದರು, ಮೊದಲು ದುಷ್ಕರ್ಮಿಗಳು ರೇಪ್ ಮಾಡಿ ಸಾಯಿಸಿದರು, ಘನತೆಯಿಂದ ಆಕೆಯ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನು ನೀಡದೆ ಸರ್ಕಾರ ಆಕೆಯನ್ನು ಮತ್ತೊಮ್ಮೆ ಸಾಯಿಸಿತು” ಎಂದು ಹಾಥರಸ್ ನಲ್ಲಿ ಅತ್ಯಾಚಾರಕ್ಕೀಡಾಗಿ ಸಾವಿಗೀಡಾದ ಯುವತಿಯ ತಮ್ಮ ಹೇಳುತ್ತಿದ್ದಾನೆ.

ಈ ಅಮಾಯಕನಿಗೆ ಹೇಳಲು ಬಂದಿಲ್ಲ, ಆಕೆ ಸತ್ತದ್ದು ಎರಡು ಬಾರಿ ಅಲ್ಲ, ಹಲವು ಬಾರಿ. ದುಷ್ಕರ್ಮಿಗಳು ಆಕೆಯ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿ ಸಾಧ್ಯವಾಗದೆ ಬಿಟ್ಟುಹೋಗಿದ್ದರು. ಆ ಕೆಲಸವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಜಯ್ ಮೋಹನ್ ಬಿಷ್ಠ್ ಸರ್ಕಾರ ಪೂರ್ಣಗೊಳಿಸಿತ್ತು. ಸರಿಯಾದ ಕಾಲಕ್ಕೆ ಸರಿಯಾದ ಚಿಕಿತ್ಸೆ. (ಕನಿಷ್ಠ ನಿರ್ಭಯಳಿಗೆ ಸಿಕ್ಕಿದ್ದ ಚಿಕಿತ್ಸೆ) ಈ ದಲಿತ ಯುವತಿಗೆ ಸಿಕ್ಕಿದ್ದರೆ ಆಕೆ ತನ್ನ ಕತೆ ಹೇಳಲು ಈಗಲೂ ಜೀವಂತವಾಗಿರುತ್ತಿದ್ದಳು.

ಅತ್ಯಾಚಾರದ ನಂತರ ಕತ್ತುಹಿಸುಕಿ, ನಾಲಗೆ ಕತ್ತರಿಸಿ ಸಾಯಿಸಲು ಪ್ರಯತ್ನಿಸಿದ ನಂತರ ಬಿಟ್ಟು ಓಡಿಹೋಗಿದ್ದ ಕಾರಣ ಆಕೆಯ ಗೋಣು ಮುರಿದಿತ್ತು, ಬೆನ್ನುಮೂಳೆಗೆ ಹಾನಿಯಾಗಿತ್ತು. ಅರೆಪ್ರಜ್ಞೆಯಲ್ಲಿದ್ದ ಆಕೆಯನ್ನು ಮನೆಗೆ ಹೊತ್ತುತರುತ್ತಾರೆ. ಅಲ್ಲಿಂದ ಮೋಟಾರ್ ಸೈಕಲ್ ನಲ್ಲಿ ಕೂರಿಸಿ ಸಮೀಪದ ಠಾಣೆಗೆ ಕರೆದೊಯ್ದು ಕಲ್ಲುಚಪ್ಪಡಿ ಮೇಲೆ ಮಲಗಿಸುತ್ತಾರೆ.
ಪೊಲೀಸರು ದೂರು ದಾಖಲಿಸಿಕೊಳ್ಳಲು ನೂರೆಂಟು ಪ್ರಶ್ನೆ ಕೇಳಿ ಸತಾಯಿಸಿ ಸಮಯ ಕೊಲ್ಲುತ್ತಾರೆ. ಅಲ್ಲಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಟೋ ರಿಕ್ಷಾದಲ್ಲಿ ಕಳಿಸುತ್ತಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಿಸಿದ ಕಾರಣ ಆಕೆಯನ್ನು ಆಲಿಗಡ್ ಗೆ ಕೊಂಡೊಯ್ಯಲು ಕುಟುಂಬದ ಸದಸ್ಯರು ಅಂಬ್ಯುಲೆನ್ಸ್ ಗೆ ಪೋನ್ ಮಾಡ್ತಾರೆ. ಎರಡು ಗಂಟೆ ನಂತರ ಅಂಬ್ಯುಲೆನ್ಸ್ ಬರುತ್ತದೆ. ಅಲ್ಲಿಂದ ಆಲಿಗಡ್ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಹದಿನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿ ಕೊನೆಗೆ ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಅಲ್ಲಿ 24 ಗಂಟೆಗಳ ಕಳೆಯುವುದರಲ್ಲಿ ಯುವತಿ ಪ್ರಾಣ ಬಿಡುತ್ತಾಳೆ.

ಹೊಲದಿಂದ ಹೊತ್ತು ತಂದು, ಮೋಟಾರ್ ಸೈಕಲ್ ನಲ್ಲಿ ಕೂರಿಸಿ ಅಲ್ಲಿಂದ ಠಾಣೆ ಎದುರು ಮಲಗಿಸಿ, ನಂತರ ಅಂಬ್ಯುಲೆನ್ಸ್ ಗೆ ಹಾಕಿ ಕೊಂಡೊಯ್ದಾಗ ಹಲ್ಲೆಯಿಂದ ಜರ್ಝರಿತಗೊಂಡ ಆ ಎಳೆಯ ದೇಹದ ಸ್ಥಿತಿ ಏನಾಗಿರಬೇಡ!

Please follow and like us:
error