ಕ್ಷಮಿಸಿ‌ಬಿಡಿ ಸರ್, ನೀವು ಯಾರೆಂಬುದು ಈ ಪಾಪಿಗಳಿಗೆ ತಿಳಿಯದು-ದಿನೇಶ್ ಕುಮಾರ್ ಎಸ್.ಸಿ.

ನಾಡೋಜ ಹಂಪನಾ ಅವರನ್ನು ಕರೆಯಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ ಮಂಡ್ಯ ಪೊಲೀಸರಿಗೆ ಅವರ ಬಗ್ಗೆ‌ ಕಿಂಚಿತ್ತಾದರೂ ಗೊತ್ತಿರಬಹುದೇ? ಹಂಪನಾ ಎಂದೂ ಒರಟೊರಟಾಗಿ ಮಾತನಾಡಿದವರಲ್ಲ. ಅವರ ಮಾತು ಎಷ್ಟು‌ ಮೃದುವೋ ಮನಸೂ ಕೂಡ ಅಷ್ಟೆ. ಭಾವಹಿಂಸೆಯೂ ಪಾಪ ಎಂದು ಹೇಳುವ ಜೈನ‌ ಪರಂಪರೆಯಿಂದ ಬಂದವರು ಅವರು.‌ ಶ್ರಮಣ ಪರಂಪರೆಯ ಆಳ‌ ಅಗಲವನ್ನು ಹೊಕ್ಕು, ಜ್ಞಾನದ ಭಂಡಾರವನ್ನು ಕನ್ನಡಿಗರ ಮುಂದೆ ಇಟ್ಟವರು ಅವರು. ಒಂದಲ್ಲ, ಎರಡಲ್ಲ‌ ಹದಿಮೂರು ಸಂಶೋಧನಾ‌ ಕೃತಿಗಳನ್ನು ಕೊಟ್ಟವರು.
ಹಂಪನಾ‌ ಕೇವಲ ಕನ್ನಡದ ವಿದ್ವಾಂಸರಲ್ಲ,‌ ಅವರು ಇಡೀ ದೇಶಕ್ಕೆ ಹೆಮ್ಮೆ ತರುವ ಸಂಶೋಧಕರು. ಪಾಲಿ ಮತ್ತು ಪ್ರಾಕೃತಗಳ ಕುರಿತು ಅವರ ಜ್ಞಾನ,‌ ತಿಳಿವಳಿಕೆ ಅಪಾರ.‌ ಭಾರತದ ಧಾರ್ಮಿಕತೆ ಎಂದರೆ ಕೇವಲ ವೈದಿಕತೆ‌ ಎಂದು‌‌ ಬಿಂಬಿಸುವ ರಾಜಕೀಯ ಹುನ್ನಾರಗಳ ನಡುವೆ ಹಂಪನಾ ಜೈನ ಧಾರ್ಮಿಕ ಪರಂಪರೆಯ ವೈಭವವನ್ನು ತೆರೆದಿಟ್ಟವರು.
ಅಷ್ಟಕ್ಕೂ ಮಂಡ್ಯ ಪೊಲೀಸರಿಗೆ ಈ ಭಾಷಾ‌ವಿಜ್ಞಾನ, ಸಂಶೋಧನೆ, ವಿದ್ವತ್ತು ಇತ್ಯಾದಿ ಪದಗಳ ಅರ್ಥವಾದರೂ ಗೊತ್ತಿರಲು ಸಾಧ್ಯವೇ?
ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳಲ್ಲಿ ಹಂಪನಾ ಸರ್ಕಾರವನ್ನು ಟೀಕಿಸಿದ್ದು ಕ್ರಿಮಿನಲ್ ಅಪರಾಧ ಹೇಗಾಗುತ್ತದೆ. ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಅಥವಾ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆಯೇ? ಕೇಂದ್ರ ಸರ್ಕಾರ‌ ದುರ್ಯೋಧನನಂತೆ‌ ವರ್ತಿಸುತ್ತಿದೆ ಎಂದರೆ ಆಕಾಶ ತಲೆ ಮೇಲೆ ಬಿದ್ದು ಹೋಯಿತೇ? ದುರ್ಯೋಧನ ಅನ್ನುವುದು ‘ಗೋಲಿ‌ ಮಾರೋ ಸಾಂಲೋಕೋ’ ಎಂಬ ಘೋಷಣೆಗಿಂತ‌ ಅಪಾಯಕಾರಿಯೇ?
ಮಂಡ್ಯ ಪೊಲೀಸರು ಹಂಪನಾ‌ ಅವರನ್ನು ಪೊಲೀಸ್ ಠಾಣೆಗೆ ಕರೆದು ಮುಚ್ಚಳಿಕೆ ಬರೆಯಿಸಿಕೊಂಡು ಅವರಿಗೆ ಮಾತ್ರ ಅವಮಾನ ಮಾಡಿಲ್ಲ. ಮೂರುಸಾವಿರ ವರ್ಷಗಳ ಇತಿಹಾಸದ ಕನ್ನಡ‌ ಪರಂಪತೆಯನ್ನೇ ಅಪಮಾನಿಸಿದ್ದಾರೆ.‌ ಕನ್ನಡದ ಇತಿಹಾಸವನ್ನು ಕಟ್ಟಿಕೊಟ್ಟ‌ ಸಾವಿರಾರು ಸಂಶೋಧಕರು,‌ ಪ್ರಾಜ್ಞರು,‌ ವಿದ್ವಜ್ಜನರನ್ನು ಅಪಮಾನಿಸಿದ್ದಾರೆ. ಕರ್ನಾಟಕವನ್ನು,‌ ಮಂಡ್ಯವನ್ನು ಅಪಮಾನಿಸಿದ್ದಾರೆ.
ಮಂಡ್ಯ ಪೊಲೀಸರು, ಕರ್ನಾಟಕ‌ ಸರ್ಕಾರ ಕ್ಷಮೆ ಕೇಳಿದರೂ ಈ ಗಾಯ ವಾಸಿಯಾಗುವುದಿಲ್ಲ, ಈ‌ ಕಳಂಕ‌ ತೊಲಗುವುದಿಲ್ಲ.
ತಪ್ಪು ಯಾವನೇ ಮಾಡಿರಲಿ, ಕನ್ನಡ ಕುಲದ ಒಂದು ಸಣ್ಣ ಹನಿಯಾಗಿ ನನ್ನ ಹೊಣೆಗಾರಿಕೆಯೂ ಇರುವುದರಿಂದ, ಹಂಪನಾ ಅವರ ಪಾದಗಳಿಗೆ ಎರಗಿ ಕ್ಷಮೆ ಯಾಚಿಸುತ್ತೇನೆ. ಕ್ಷಮಿಸಿ‌ಬಿಡಿ ಸರ್, ನೀವು ಯಾರೆಂಬುದು ಈ ಪಾಪಿಗಳಿಗೆ ತಿಳಿಯದು.
– ದಿನೇಶ್ ಕುಮಾರ್ ಎಸ್.ಸಿ.
Please follow and like us:
error