ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು ತೆರಿಗೆ, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಧರ್ಮ‌ ಎಂಬ ನೀತಿಗಳ ಹಾಗೆ ಒಂದು ದೇಶ-ಒಂದು ಮಾರುಕಟ್ಟೆ ಎಂಬ ನೀತಿ ಈ‌ ಮಸೂದೆಯಲ್ಲಿದೆ. ದೇಶದ ಒಟ್ಟಾರೆ ಕೃಷಿಕ್ಷೇತ್ರವನ್ನು ಕಾರ್ಪೊರೇಟ್ ಕ್ಷೇತ್ರದ ದೊಡ್ಡ ತಿಮಿಂಗಲಗಳಿಗೆ ಧಾರೆ ಎರೆದುಕೊಡುವ ವ್ಯವಸ್ಥಿತ ಹುನ್ನಾರ ಇದರಲ್ಲಿದೆ.

ಸಂವಿಧಾನದ ಪ್ರಕಾರ ಕೃಷಿ ಮಾರುಕಟ್ಟೆ ರಾಜ್ಯ ಪಟ್ಟಿಯಲ್ಲಿ ಬರುವ ವಿಷಯ. ಈ ಮಸೂದೆಯಿಂದಾಗಿ ರಾಜ್ಯಗಳು ಕೃಷಿ ಕ್ಷೇತ್ರದ ಮೇಲಿನ ಹಿಡಿತ ಕಳೆದುಕೊಳ್ಳಲಿವೆ. ಎಪಿಎಂಸಿ ಮಂಡಿಗಳು ಬಾಗಿಲು ಮುಚ್ಚಿಕೊಳ್ಳಲಿವೆ, ಎಪಿಎಂಸಿಗಳ ಮೂಲಕ ರಾಜ್ಯ ಸರ್ಕಾರಗಳು ಸಂಗ್ರಹಿಸುತ್ತಿದ್ದ ತೆರಿಗೆ ಇಲ್ಲದಂತಾಗಲಿದೆ. ಈಗಾಗಲೇ ಜಿಎಸ್ ಟಿಯಿಂದಾಗಿ ಸ್ವತಂತ್ರವಾಗಿ ತೆರಿಗೆ ಸಂಗ್ರಹಿಸುವ ಅವಕಾಶ ಕಳೆದುಕೊಂಡಿರುವ ರಾಜ್ಯಗಳು ಇಲ್ಲೂ ಕೂಡ ವಂಚನೆಗೆ ಒಳಗಾಗಲಿವೆ. ತೆರಿಗೆಯ ವಿಷಯ ಹಾಗಿರಲಿ, ಆಯಾ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಅಗತ್ಯ ಆಹಾರ ಪದಾರ್ಥಗಳ ದಾಸ್ತಾನು ಇದೆ ಎಂಬ ಅಂಕಿಅಂಶವೂ ರಾಜ್ಯ ಸರ್ಕಾರಗಳಿಗೆ ತಿಳಿಯದೇ ಹೋಗುವ ಸಾಧ್ಯತೆ ಇದೆ. ಯಾಕೆಂದರೆ ಹೊಸ ಮಸೂದೆ ಅಂತಾರಾಜ್ಯ ಮಾರುಕಟ್ಟೆಗಳನ್ನು ಸೃಷ್ಟಿಸಲಿದೆ. ಕಾರ್ಪೊರೇಟ್ ಶಕ್ತಿಗಳು ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿ, ತಮಗೆ ಬೇಕಾದಾಗ ಮಾರುಕಟ್ಟೆಗೆ ಬಿಡುವ ಅಧಿಕಾರ ಹೊಂದಲಿವೆ.‌

ಮಸೂದೆ ರೈತರಿಗೆ ಒಳ್ಳೆಯ ಬೆಲೆಯನ್ನು ನೀಡುವ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥ ಒದಗಿಸುವ ಭರವಸೆ ನೀಡುತ್ತದೆ. ಆದರೆ ವಿಷಯ ಅಷ್ಟು ಸರಳವಾಗಿಲ್ಲ. ಈವರೆಗೆ ರೈತರ ಉತ್ಪನ್ನಗಳ ಧಾರಣೆ ಕುಸಿದಾಗ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಿ ನೆರವಿಗೆ ನಿಲ್ಲುತ್ತಿದ್ದವು. ಹೊಸ ಮಸೂದೆಯಿಂದಾಗಿ MSP ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳಲಿದೆ.

ಬೆಳೆ ಬೆಳೆಯುವ ಮುನ್ನವೇ ಮಾರಾಟ ಸಂಸ್ಥೆಗಳು ರೈತರಿಗೆ ನೆರವು ನೀಡಲಿವೆ ಎಂಬ ಬಣ್ಣದ ಮಾತುಗಳು ಮಸೂದೆಯಲ್ಲಿದೆ. ವಿಷಯವೇನೆಂದರೆ ರೈತರು ನಿಧಾನವಾಗಿ ಈ ಕಾರ್ಪೊರೇಟ್ ಶಕ್ತಿಗಳ ಅಡಿಯಾಳಾಗಬೇಕಾಗುತ್ತದೆ. ಅವರು ನಿಗದಿ ಮಾಡಿದ್ದೇ ಬೆಲೆ,‌ ಕೊಟ್ಟಷ್ಟೇ ಹಣ.‌ ಈ ಸಂಸ್ಥೆಗಳು ದವಸಧಾನ್ಯಗಳನ್ನು ಇಷ್ಟ ಬಂದಂತೆ ದಾಸ್ತಾನು ಮಾಡಿಟ್ಟುಕೊಳ್ಳುವುದರಿಂದ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸುವ ಶಕ್ತಿಯೂ ಅವುಗಳ ಕೈಯಲ್ಲೇ ಇರಲಿದೆ. ಇದರಲ್ಲಿ ರೈತರ ಪಾತ್ರ ಏನೂ ಇರುವುದಿಲ್ಲ. ಹೆಚ್ಚುವರಿ ಧಾರಣೆಯಿಂದ ಆಗುವ ಲಾಭ ರೈತರಿಗೆ ತಲುಪುವುದಿಲ್ಲ, ಬೆಲೆ ಕುಸಿತದ ಪರಿಣಾಮ ಮಾತ್ರ ತಾಗಲಿದೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರು ದೇಶದಲ್ಲಿ ಶೇ.80ಕ್ಕೂ ಹೆಚ್ಚು. ಇವರೆಲ್ಲರೂ ತಮ್ಮ ಜಮೀನಿನಲ್ಲಿ ತಾವೇ ಪರಕೀಯರಾಗಲಿದ್ದಾರೆ. ಜಮೀನು ಅವರದು, ಬಂಡವಾಳ ಅವರದು, ಶ್ರಮ ಅವರದು. ಬೆಳೆ ಯಾವುದನ್ನು ಬೆಳೆಯಬೇಕು, ಎಷ್ಟು ಬೆಳೆಯಬೇಕು, ಎಷ್ಟು ಬೆಲೆಗೆ ಮಾರಬೇಕು ಎಂಬುದೆಲ್ಲವನ್ನೂ‌ ಕಾರ್ಪೊರೇಟ್ ಶಕ್ತಿಗಳೇ ನಿರ್ಧಾರ ಮಾಡಲಿವೆ.‌

ಮಾರುಕಟ್ಟೆ ಶಕ್ತಿಗಳು ಮತ್ತು ರೈತರ ನಡುವೆ ಉಂಟಾಗಬಹುದಾದ ವಿವಾದಗಳ ಪರಿಹಾರಕ್ಕೆ ಮೂರು ಬಗೆಯ ಕಾನೂನು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. Once again, ಇಲ್ಲೂ ಕೂಡ ರೈತರು ಹೊಡೆತ ತಿನ್ನುವ ಪಕ್ಷದಲ್ಲೇ ಇರುತ್ತಾರೆ. ಕಾರ್ಪೊರೇಟ್ ಶಕ್ತಿಗಳು ವಕೀಲರನ್ನು ನೇಮಿಸಿಕೊಳ್ಳುವುದರಿಂದ ಹಿಡಿದು, ಕಾನೂನು ಹೋರಾಟ ನಡೆಸಲು ಎಲ್ಲ ರೀತಿಯಲ್ಲೂ ಶಕ್ತರು.‌ ರೈತರಿಗೆ ನ್ಯಾಯವೆಂಬುದು ಹಗಲುಗನಸು.

ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಆಲೂಗೆಡ್ಡೆ, ಈರುಳ್ಳಿಯಂಥ ಪದಾರ್ಥಗಳನ್ನು ಅಗತ್ಯ ವಸ್ತುಗಳ ಸೇವಾ ಕಾಯ್ದೆಯಿಂದ ಹೊರಗೆ ಇಡಲಾಗುತ್ತಿದೆ. ಯುದ್ಧ ಮತ್ತು ಬರದಂಥ ವಿಕೋಪ ಪರಿಸ್ಥಿತಿಯನ್ನು ಹೊರತುಪಡಿಸಿ, ಈ ವಸ್ತುಗಳ ಮೇಲೆ ಸರ್ಕಾರ ಹಿಡಿತ ಕಳೆದುಕೊಳ್ಳಲಿದೆ.

ಮಸೂದೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾವುದೋ ದೊಡ್ಡ ಕಾರ್ಪೊರೇಟ್ ಹೌಸ್ ಕೃಷಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಹಾಗೆ ಕಾಣುತ್ತಿದೆ ಮತ್ತು ಅದರ ಬೇಡಿಕೆ ಈಡೇರಿಸಲು ರೂಪಿಸಿರುವ ಹಾಗೆ ಕಾಣುತ್ತಿದೆ. ಪಂಜಾಬ್- ಹರಿಯಾಣಾಗಳಲ್ಲಿ ಈಗಾಗಲೇ ದೊಡ್ಡ ಪ್ರತಿಭಟನೆಗಳು ನಡೆಯುತ್ತಿದೆ. ಒಬ್ಬ ಕೇಂದ್ರ ಸಚಿವೆ ರಾಜೀನಾಮೆ ನೀಡಿದ್ದಾರೆ. ಸಹಜವಾಗಿಯೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮಸೂದೆ ವಿರುದ್ಧ ತುಟಿ ಪಿಟಕ್ ಎನ್ನುವುದಿಲ್ಲ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಏನು ಮಾಡುತ್ತಾರೋ ನೋಡಬೇಕು.

ಹೊಸ ಕೃಷಿ ಮಸೂದೆ ಒಂದೆಡೆ ಭಾರತದ ಅಂತರಾತ್ಮವೇ ಆಗಿರುವ ಒಕ್ಕೂಟ ವ್ಯವಸ್ಥೆಯನ್ನು ಹದಗೆಡಿಸಿ, ರಾಜ್ಯಗಳ ಅಧಿಕಾರವನ್ನು ಕಸಿಯುತ್ತದೆ, ಇನ್ನೊಂದೆಡೆ ರೈತರ ಸ್ವಾಭಿಮಾನ, ಸ್ವಾವಲಂಬನೆಯನ್ನು ಕಿತ್ತುಕೊಂಡು ಕಾರ್ಪೊರೇಟ್ ಶಕ್ತಿಗಳ ನಿಯಂತ್ರಣಕ್ಕೆ ತಂದು ನಿಲ್ಲಿಸುತ್ತದೆ. ಮೋದಿ ಸರ್ಕಾರದ ಜನ ವಿರೋಧಿ ನೀತಿಗಳು ಇಂಥ ಕರೋನಾ ಬಿಕ್ಕಟ್ಟಿನ ಕಾಲದಲ್ಲೂ ಮುಂದುವರೆಯುತ್ತಿರುವುದನ್ನು ಗಮನಿಸಿದರೆ ಹೇಸಿಗೆ ಎನಿಸೋದಿಲ್ಲವೇ?

https://www.facebook.com/dinesh.kumar.7587370?__tn__=%2Cd%2AF%2AF-R&eid=ARDm-9hHOdgomCUm8UV0M9T5uwPhFlp-fTRyGGe4mYZYsY5nTb5PDQFVSsXJ_fP7-285YydG7WhS2oZq&tn-str=%2AF

Please follow and like us:
error