ಗಾಂಧೀಜಿ ಮತ್ತು ನಾರಾಯಣಗುರು -ದಿನೇಶ ಅಮೀನಮಟ್ಟು

ಜಾತಿ ವ್ಯವಸ್ಥೆ, ಮತಾಂತರ, ಸ್ವಾತಂತ್ರ್ಯ ಮೊದಲಾದ ವಿಷಯಗಳ ಬಗ್ಗೆ ಗಾಂಧೀಜಿಯವರಿಗೆ ಗೊಂದಲಗಳಿರಲಿಲ್ಲವೇ? ಖಂಡಿತ ಇತ್ತು.

ಪ್ರಾರಂಭದ ದಿನಗಳಲ್ಲಿ ಮತಾಂತರವನ್ನು ಬಲವಾಗಿ ವಿರೋಧಿಸಿದ್ದ ಗಾಂಧಿಜಿ ಕೊನೆದಿನಗಳಲ್ಲಿ ಅಂತರ್ ಜಾತಿ ವಿವಾಹಗಳ ಪರವಾಗಿ ವಾದಿಸಿರಲಿಲ್ಲವೇ? ಗಾಂಧೀಜಿ ಇನ್ನಷ್ಟು ದಿನ ಬದುಕಿದ್ದರೆ ಈ ಬದಲಾವಣೆಯ ಪ್ರಕ್ರಿಯೆ ಎಲ್ಲಿ ಕೊನೆಗೊಳ್ಳುತ್ತಿತ್ತೋ ಗೊತ್ತಿಲ್ಲ.

ವೈಕಂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಾತ್ಮಗಾಂಧೀಜಿ 1925ರ ಮಾರ್ಚ್ ತಿಂಗಳಲ್ಲಿ ಶಿವಗಿರಿಯಲ್ಲಿದ್ದ ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ. ಅವರ ಸಂಭಾಷಣೆಯಲ್ಲಿ ಗಾಂಧಿ ಪ್ರಶ್ನೆಗೆ ಗುರುಗಳು ನೀಡಿರುವ ಉತ್ತರ ಜಾತಿ ವ್ಯವಸ್ಥೆ ಬಗ್ಗೆ ಗಾಂಧೀಜಿಯವರಿಗಿದ್ದ ಗೊಂದಲ ಮತ್ತು ಗುರುಗಳಿದ್ದ ಸ್ಪಷ್ಟತೆ ಗೊತ್ತಾಗುತ್ತದೆ.

ತಮ್ಮ ಮಾತುಕತೆಯ ಕೊನೆಯಲ್ಲಿ ಗಾಂಧೀಜಿಯವರು, ಆಶ್ರಮದ ಎದುರಿಗಿದ್ದ ಮಾವಿನ ಮರವನ್ನು ತೋರಿಸುತ್ತಾ ‘’…ಮರದಲ್ಲಿ ಭಿನ್ನ ಆಕಾರಗಳ ಎಲೆಗಳಿರುವಂತೆ ಸಮಾಜದಲ್ಲಿ ಜಾತಿ ವ್ಯವಸ್ಥೆ ಸಹಜವಾದುದಲ್ಲವೇ? ಎಂದು ಕೇಳುತ್ತಾರೆ. ( ಈ ಪ್ರಶ್ನೆಯನ್ನು ಗುರುಗಳನ್ನು ಕೆಣಕಲೆಂದು ಕೇಳಿದ್ರಾ, ಇಲ್ಲವೇ ಪ್ರಶ್ನೆ ಸಹಜವಾದ ಅವರ ಗೊಂದಲದಿಂದ ಮೂಡಿಬಂದಿತ್ತೇ?, ಗೊತ್ತಿಲ್ಲ)
ಇದಕ್ಕೆ ನಗುತ್ತಲೇ ಉತ್ತರಿಸಿದ ನಾರಾಯಣ ಗುರುಗಳು ‘’ ಭಿನ್ನ ಆಕಾರದ ಎಲೆಗಳಿರಬಹುದು, ಆದರೆ ಅವುಗಳನ್ನು ಸೇರಿಸಿ ಜಜ್ಜಿದರೆ ಅದರಿಂದ ಹೊರಡುವ ರಸದ ರುಚಿ ಒಂದೇ ಅಲ್ಲವೇ? ಎನ್ನುತ್ತಾರೆ.

ಮತಾಂತರ ಎನ್ನುವುದು ವ್ಯಕ್ತಿಯ ಸ್ವಾತಂತ್ರಕ್ಕೆ ಪರಿಣಾಮಕಾರಿ ಮಾರ್ಗವೇ? ಎಂಬ ಗಾಂಧೀಜಿ ಪ್ರಶ್ನೆಗೆ ಗುರುಗಳ ಉತ್ತರ ಹೀಗಿತ್ತು: ‘’ಮತಾಂತರಗೊಂಡವರು ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುತ್ತಿರುವುದು ನಿಜವಾಗಿರುವ ಕಾರಣ ಆ ರೀತಿಯ ಅಭಿಪ್ರಾಯ ಹೊಂದಿರುವುವರನ್ನು ದೂಷಿಸಲಾಗದು’’.

‘’ನಿಮ್ಮ ಅಭಿಪ್ರಾಯ ಆಧುನಿಕ ಭಾರತದ ಜತೆ ಹೊಂದಿಕೊಳ್ಳುತ್ತಿಲ್ಲ. ನಿಮ್ಮಲ್ಲಿ ಈ ರೀತಿಯ ಅಭಿಪ್ರಾಯವಿದ್ದರೆ, ಅಂತಿಮವಾಗಿ ನಮಗೆ ಸ್ವಾತಂತ್ರ್ಯ ಸಿಗಬಹುದು, ಆದರೆ ಸ್ವತಂತ್ರ ಭಾರತ ನಿಮ್ಮ ಕನಸಿನ ಭಾರತ ಆಗಿರುವುದಿಲ್ಲ’’ ಎಂದೂ ಗುರುಗಳು ಆ ಭೇಟಿಯ ವೇಳೆ ಎಚ್ಚರಿಸಿದ್ದರಂತೆ.

ಇಂತಹ ಭಿನ್ನ ಅಭಿಪ್ರಾಯಗಳು ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆಯೂ ಇತ್ತಲ್ಲವೇ?

ಆದರೆ ಭಿನ್ನಾಭಿಪ್ರಾಯದ ಮೂಲಕವೇ ಇವರೆಲ್ಲರ ವ್ಯಕ್ತಿತ್ವವನ್ನು ಅಳೆಯಲು ಹೊರಟರೆ ಯಾರೂ ನಮಗೆ ದಕ್ಕಲಾರರು. ಎಲ್ಲರನ್ನೂ ಪ್ರತ್ಯೇಕವಾಗಿ ಓದಿ ತಿಳಿದುಕೊಂಡು ನಂತರ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಎಲ್ಲರೂ ನಮಗೆ ದಕ್ಕಬಹುದೇನೋ?

ಈ ಹಿನ್ನೆಲೆಯಲ್ಲಿಯೇ ಗಾಂಧೀಜಿಯವರು ‘’ ನನ್ನ ಅನುಮತಿ ಇಲ್ಲದೆ ಯಾರೂ ನನ್ನನ್ನು ನೋಯಿಸಲಾರರು’’ ಎಂದು ಹೇಳಿರಬಹುದೇ?

Please follow and like us:
error