ದಮನಿತ ದನಿಗಳನ್ನು ಅಡಗಿಸುವ ಹುನ್ನಾರ

ಮೂಢನಂಬಿಕೆ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ಅಶ್ರಫ್‌ರನ್ನು ಬಂಧಿಸುವುದಾದರೆ, ಬಹಿರಂಗವಾಗಿ ಹತ್ಯೆಗೆ ಪ್ರಚೋದಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಂಧಿಸಬೇಕು. ಆತ ಬಹಿರಂಗ ಸಭೆಯೊಂದರಲ್ಲಿ ಮಾತನಾಡುತ್ತ, ನಾನು ಗೃಹಸಚಿವನಾದರೆ, ಬುದ್ಧಿಜೀವಿಗಳನ್ನೆಲ್ಲ ಸಾಲಾಗಿ ನಿಲ್ಲಿಸಿ ಗುಂಡಿಕ್ಕುವೆ ಎಂದು ಹೇಳಿದ್ದರು. ಕೇಂದ್ರದ ಇನ್ನೊಬ್ಬ ಸಚಿವ ಅನಂತಕುಮಾರ್‌ಹೆಗಡೆ ಬಾಯಿ ಬಿಟ್ಟರೆ, ಚರಂಡಿ ನೀರು ಹರಿದು ಬರುತ್ತದೆ. ಸದಾ ದ್ವೇಷದ ವಿಷ ಕಕ್ಕುತ್ತಲೇ ಇರುತ್ತಾರೆ. ಇವರ ವಿರುದ್ಧ ಕರ್ನಾಟಕದ ಪೊಲೀಸರು ಯಾವುದೇ ಕೇಸ್‌ನ್ನು ದಾಖಲಿಸಿಕೊಂಡಿಲ್ಲ.

ಭಾರತದ ಪ್ರಜಾಪ್ರಭುತ್ವ ಈಗ ಹಿಂದೆಂದೂ ಕಂಡಿರದ ಬಿಕ್ಕಟ್ಟು ಎದುರಿಸುತ್ತಿದೆ. ಜನತಂತ್ರದಲ್ಲಿ ನಂಬಿಕೆ ಇಲ್ಲದ ವ್ಯಕ್ತಿಗಳು ಮತ್ತು ಶಕ್ತಿಗಳು ಚುನಾವಣೆ ಮೂಲಕ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಬೇರುಗಳನ್ನೇ ಕಿತ್ತು ಹಾಕಲು ಹುನ್ನಾರ ನಡೆಸಿದ ಕೆಟ್ಟ ದಿನಗಳಿವು. ದೇಶದ ಸಂವಿಧಾನಕ್ಕಿಂತ ತಮ್ಮ ಮನುವಾದಿ ಧರ್ಮವೇ ಶ್ರೇಷ್ಠವೆಂದು ಪ್ರತಿಪಾದಿಸುವ ಶಕ್ತಿಗಳು ಬಹುಮುಖಿ ಭಾರತದ ಮೇಲೆ ಹಲ್ಲೆ ಮಾಡಲು ಆಕ್ರಮಣಕಾರಿಯಾಗಿ ಸಜ್ಜಾಗಿ ನಿಂತಿವೆ. ಪ್ರಭುತ್ವದ ಒಳಗೆ ಮತ್ತು ಹೊರಗೆ ಸೇರಿಕೊಂಡಿರುವ ಕರಾಳ ಶಕ್ತಿಗಳು ದೇಶದ ದಮನಿತ ಸಮುದಾಯಗಳಲ್ಲಿ ಆತಂಕದ ವಾತಾವರಣ ಉಂಟು ಮಾಡಿವೆ. ಭಾರತ 1947ರಲ್ಲಿ ಸ್ವಾತಂತ್ರ ಪಡೆಯಿತು. ದೇಶಕ್ಕೆ ಸ್ವಾತಂತ್ರ ದೊರೆತಾಗ, ಇದು ಒಂದು ದೇಶವಾಗಿರಲಿಲ್ಲ. 500 ಸಂಸ್ಥಾನಗಳು ಇಲ್ಲಿದ್ದವು. ಪ್ರತಿಯೊಂದು ಸಂಸ್ಥಾನಕ್ಕೂ ಒಬ್ಬ ರಾಜನಿದ್ದ. ಹೀಗೆ ವಿಭಿನ್ನತೆಯಿಂದ ಕೂಡಿದ ಭೂಪ್ರದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಒಂದುಗೂಡಿಸಿತು. ಇದಕ್ಕೆ ಒಕ್ಕೂಟದ ಸ್ವರೂಪ ನೀಡಿತು.

ದಮನಿತ ದಲಿತ ಸಮುದಾಯಗಳಿಗೆ ಬೆಳಕು ನೀಡಲು ಮೀಸಲು ವ್ಯವಸ್ಥೆ ಜಾರಿಗೆ ಬಂತು. ಮಹಿಳೆಯರು ಮತ್ತು ಎಲ್ಲಾ ಜಾತಿಯ ಬಡವರಿಗೆ ಸಂವಿಧಾನ ರಕ್ಷಣೆ ಒದಗಿಸಿತು. ಜನತೆ ತಮಗಾದ ಅನ್ಯಾಯವನ್ನು ಸರಕಾರದ ಗಮನಕ್ಕೆ ತರಲು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ ನೀಡಲಾಯಿತು. ಪ್ರತಿಭಟನೆ ಮಾಡುವ ಸ್ವಾತಂತ್ರ ದೊರಕಿತು. ಆಗ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂಬ ಹುನ್ನಾರಗಳು ಸಂವಿಧಾನದ ರಚನಾ ಸಮಿತಿ ಸಭೆೆಯ ಒಳಗೆ ಮತ್ತು ಹೊರಗೆ ನಡೆದವು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಇದನ್ನು ಪ್ರಬಲವಾಗಿ ವಿರೋಧಿಸಿ, ಭಾರತ ಹಿಂದೂ ದೇಶವಾದರೆ, ನಾಶವಾಗಿ ಹೋಗುತ್ತದೆ ಎಂದು ಹೇಳಿದರು. ನಮ್ಮ ಸ್ವಾತಂತ್ರ ಹೋರಾಟದ ನೇತಾರರಾದ ಮಹಾತ್ಮಾ ಗಾಂಧೀಜಿ, ಸುಭಾಶ್ಚಂದ್ರ ಬೋಸ್, ಜವಾಹರಲಾಲ್ ನೆಹರೂ, ವೌಲಾನಾ ಆಝಾದ್ ಮತ್ತು ಭಗತ್ ಸಿಂಗ್ ಇವರೆಲ್ಲರ ಆಶಯ ಎಲ್ಲಾ ಧರ್ಮಗಳಿಗೆ ಮತ್ತು ಸಮುದಾಯಗಳಿಗೆ ಸೇರಿದ ಧರ್ಮನಿರಪೇಕ್ಷ ದೇಶವಾಗಬೇಕು ಎಂಬುದಾಗಿತ್ತು.

ಹೀಗೆ ಸ್ವಾತಂತ್ರ ಪಡೆದ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವೀಕರಿಸಿ 70 ವರ್ಷಗಳು ಗತಿಸಿದವು. ಹೊಸದಾಗಿ ಸ್ವಾತಂತ್ರ ಪಡೆದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಪ್ರಯೋಗ ವಿಫಲವಾಗಿದೆ. ಆದರೆ ಭಾರತದಲ್ಲಿ ಅದು ಯಶಸ್ವಿಯಾಗಿದೆ. ಭಾರತದ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಸದೀಯ ಪ್ರಜಾಪ್ರಭುತ್ವದ ಮೂಲ ನೆಲೆಯಾದ ಇಂಗ್ಲೆಂಡಿನ ಅನೇಕ ಚಿಂತಕರು ಶ್ಲಾಘಿಸುತ್ತಾರೆ. ಭಾರತದಲ್ಲಿ ಅನಕ್ಷರಸ್ಥ, ಶೋಷಿತ ಸಮುದಾಯದ ಜನ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದರು. ಭಾರತ ಒಂದು ಅದ್ಭುತವಾದ ದೇಶ. ಯುರೋಪಿನ ಕೆಲ ದೇಶಗಳಂತೆ ಇದು ಒಂದೇ ಜನಾಂಗಕ್ಕೆ ಅಥವಾ ಧರ್ಮಕ್ಕೆ ಸೇರಿದ ದೇಶವಲ್ಲ. ಈ ದೇಶದಲ್ಲಿ ಹಲವಾರು ಜನ ಸಮುದಾಯಗಳು, ಭಾಷೆಗಳು, ಬುಡಕಟ್ಟುಗಳು, ಧರ್ಮಗಳು ಶತಮಾನಗಳಿಂದ ಸಹಬಾಳ್ವೆ ನಡೆಸಿಕೊಂಡು ಬಂದಿವೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಈ ದೇಶಕ್ಕೆ ತುಂಬಾ ಹಿಂದೆಯೇ ಬಂದವು.

ಈ ದೇಶದ ಸಂತರು, ಸೂಫಿಗಳು, ಕ್ರೈಸ್ತ ಪಾದ್ರಿಗಳು, ಯಾವುದೇ ಧರ್ಮಕ್ಕೆ ಸೇರದ ಆದಿವಾಸಿಗಳು, ತುಂಬಾ ಹಿಂದೆಯೇ ಹೊರಗಿನಿಂದ ಬಂದು ತಮ್ಮ ಸಂಸ್ಕೃತಿ ಹೇರಿದ ಆರ್ಯರು ಎಲ್ಲರೂ ಇಲ್ಲಿ ಇದ್ದಾರೆ. ಈ ವೈವಿಧ್ಯತೆಯೇ ಈ ದೇಶವನ್ನು ಕಾಪಾಡಿದೆ. ಈ ವೈವಿಧ್ಯಮಯ ಭಾರತವನ್ನು ಏಕಧರ್ಮೀಯ ದೇಶವನ್ನಾಗಿ ಮಾಡಲು ಮತ್ತು ವರ್ಣಾಶ್ರಮ ಪದ್ಧತಿ ಹೇರಲು 1947ರಲ್ಲಿ ಯತ್ನಿಸಿದ ಶಕ್ತಿಗಳು ಈಗ ಮತ್ತೆ ತಮ್ಮ ಗುರಿ ಸಾಧಿಸಲು ಹುನ್ನಾರ ನಡೆಸಿವೆ. ಬಹುಮುಖಿ ಭಾರತದ ಸಂವಿಧಾನದ ಪರವಾಗಿ, ಮಾತನಾಡುವವರನ್ನು ದೇಶದ್ರೋಹಿಗಳೆಂದು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ. ಇಲ್ಲಿನವರೆಗೆ ಈ ದೇಶ ಹಾಗೂ-ಹೀಗೂ ಹೇಗೋ ನಡೆದುಕೊಂಡು ಬಂತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಕೂಡ, ತೀರ ಭೀತಿಯ ವಾತಾವರಣ ಮೂಡಿರಲಿಲ್ಲ. ಆದರೆ, ಪ್ರಜಾಪ್ರಭುತ್ವ ಮತ್ತು ಸಮಾನತೆಯಲ್ಲಿ ನಂಬಿಕೆ ಇಲ್ಲದ, ಯಾವುದೇ ಓದಿನ ಹಿನ್ನೆಲೆಯಿಲ್ಲದ, ಸಂಘದ ಶಾಖೆಯಲ್ಲಿ ಮೆದುಳನ್ನು ಮೂಲೆಗಿಟ್ಟು ಮೈಯನ್ನು ಬೆಳೆಸಿಕೊಂಡ ವ್ಯಕ್ತಿಯ ಕೈಯಲ್ಲಿ ಈ ದೇಶ ಸಿಕ್ಕು, ಆತಂಕದ ಕಪ್ಪು ಛಾಯೆ ಕವಿದಿದೆ. ಮೂಢನಂಬಿಕೆ, ಕಂದಾಚಾರದ ವಿರುದ್ಧ ಧ್ವನಿಯೆತ್ತುವ ಹಾಗೂ ದಲಿತರು ಮತ್ತು ಆದಿವಾಸಿಗಳ ಪರವಾಗಿ ಮಾತನಾಡುವ ಕಾರ್ಮಿಕರು ಮತ್ತು ರೈತರ ಸಮಸ್ಯೆಗಳನ್ನೆತ್ತಿ ಹೋರಾಡುವ, ಮಹಿಳಾ ಸ್ವಾತಂತ್ರದ ಬಾವುಟ ಹಿಡಿದು ನಡೆಯುವ, ಎಲ್ಲರನ್ನೂ ಹತ್ತಿಕ್ಕುವ ಮಸಲತ್ತು ಕಳೆದ ನಾಲ್ಕೂವರೆ ವರ್ಷಗಳಿಂದ ತೀವ್ರವಾಗಿದೆ. ಫ್ಯಾಶಿಸ್ಟ್ ಹಂತಕ ಪಡೆಗಳು ಒಂದೆಡೆ ಬೀದಿಯಲ್ಲಿ, ವಿಚಾರವಾದಿಗಳನ್ನು ಮತ್ತು ಚಿಂತಕರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರೆ, ಇನ್ನೊಂದೆಡೆ ಪ್ರಭುತ್ವದ ಸೂತ್ರ ಹಿಡಿದವರು ಜನಪರ ಹೋರಾಟಗಾರರನ್ನು ದೇಶದ್ರೋಹಿಗಳೆಂದು ಜೈಲಿಗೆ ಹಾಕುತ್ತಿದ್ದಾರೆ.

ಈ ದೇಶದಲ್ಲಿ ಮುಸಲ್ಮಾನರು ತಮ್ಮ ಬೇಡಿಕೆಗಳಿಗಾಗಿ ಧ್ವನಿಯೆತ್ತಿದರೆ, ಭಯೋತ್ಪಾದಕರು ಎಂದು ಕರೆದು ಹತ್ತಿಕ್ಕಲಾಗುತ್ತದೆ. ದಲಿತರು ಮತ್ತು ಆದಿವಾಸಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಿದರೆ, ಅವರನ್ನು ಮಾವೋವಾದಿಗಳು ಮತ್ತು ನಕ್ಸಲರೆಂದು ಕರೆದು ಪೊಲೀಸರ ಮೂಲಕ ಹತ್ತಿಕ್ಕಿ ಜೈಲಿಗೆ ತಳ್ಳಲಾಗುತ್ತಿದೆ. ಇಂದಿರಾ ಗಾಂಧಿ ಕಾಲದಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗಲೂ ಕೂಡ ಇಂತಹ ಆತಂಕದ ವಾತಾವರಣ ಉಂಟಾಗಿರಲಿಲ್ಲ, ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರು ತಾವೇ ಅದನ್ನು ವಾಪಸ್ ಪಡೆದು ಚುನಾವಣೆಗೆ ಹೋಗಿ ಜನರು ನೀಡಿದ ತೀರ್ಪಿಗೆ ಬದ್ಧರಾಗಿ ಅಧಿಕಾರ ಕಳೆದುಕೊಂಡರು. ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲ್ಪಟ್ಟ ಜೇಪಿ, ಮೊರಾರ್ಜಿ ದೇಸಾಯಿ, ಜಾರ್ಜ್ ಫೆರ್ನಾಂಡಿಸ್, ಮಧು ದಂಡವತೆ, ಮಧು ಲಿಮೆ, ವಾಜಪೇಯಿ, ಮುಂತಾದವರನ್ನು ಇಂದಿರಾ ಗಾಂಧಿ ದೇಶದ್ರೋಹಿ ಎಂದು ಕರೆಯಲಿಲ್ಲ. ಅವರನ್ನು ಜೈಲಿಗೆ ಹಾಕಿದರೂ ಕೂಡ ರಾಜಕೀಯ ಕೈದಿಗಳಂತೆ ನೋಡಿಕೊಂಡು, ನಂತರ ಬಿಡುಗಡೆ ಮಾಡಲಾಯಿತು. ಆದರೆ, ಈಗ ಬಿಜೆಪಿಯನ್ನು ವಿರೋಧಿಸುವವರೆಲ್ಲ ದೇಶದ್ರೋಹಿಗಳು ಆಗಿದ್ದಾರೆ, ಭಿನ್ನಮತ ಹತ್ತಿಕ್ಕಲು ಇಂದಿನ ಪ್ರಭುತ್ವ ಅತ್ಯಂತ ಕೆಟ್ಟ ದಾರಿಯನ್ನು ಹಿಡಿದಿದೆ.

ಛತ್ತೀಸಗಡದ ಬಸ್ತಾರನಲ್ಲಿ ತಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಬಂದ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಹೋರಾಡುತ್ತಿರುವ ಆದಿವಾಸಿಗಳನ್ನು ನಕ್ಸಲರೆಂದು ಕರೆದು ಗುಂಡಿಕ್ಕಿ ಸಾಯಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಭೀಮಾ-ಕೋರೆಗಾಂವ್‌ನಲ್ಲಿ ದಲಿತರ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಹಲ್ಲೆ ಮಾಡಿದ ಫ್ಯಾಶಿಸ್ಟ್ ಶಕ್ತಿಗಳು ಈಗ ಅಲ್ಲಿ ನಡೆದ ಗಲಭೆಗಳ ಆರೋಪವನ್ನು ದಲಿತ ಸಂಘಟನೆಗಳ ಕಾರ್ಯಕರ್ತರ ತಲೆಗೆ ಕಟ್ಟಿ, ಮಾನವ ಹಕ್ಕುಗಳ ಹೋರಾಟಗಾರರನ್ನು ಜೈಲಿಗೆ ಹಾಕಿ, ಪ್ರಧಾನಿ ಹತ್ಯೆ ಸಂಚಿನ ಇನ್ನೊಂದು ಕತೆ ಕಟ್ಟಿ, ವರವರರಾವ್, ಆನಂದ ತೇಲ್ತುಂಬ್ಡೆ ಮುಂತಾದವರನ್ನು ಜೈಲಿಗೆ ಹಾಕಲು ಹೋಗಿ ಸುಪ್ರೀಂಕೋರ್ಟ್‌ನಿಂದ ಕಿವಿ ಹಿಂಡಿಸಿಕೊಂಡಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಕೂಡ ಪರಮೇಶ್ವರ್‌ಗೃಹ ಮಂತ್ರಿ ಆಗಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ ಸರಕಾರದ ನಿಯಂತ್ರಣ ದಲ್ಲಿ ಇಲ್ಲ. ಇಲ್ಲಿ ಬೇರು ಬಿಟ್ಟ ಸಂವಿಧಾನೇತರ ಅಧಿಕಾರ ಕೇಂದ್ರಗಳು ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿವೆ. ಈ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇ.80ರಷ್ಟು ಜನ ಸಂಘ ಪರಿವಾರದ ಸ್ವಯಂ-ಸೇವಕರೇ ತುಂಬಿದ್ದಾರೆ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಅಶ್ರಫ್ ಸಾಲೆತ್ತೂರ ಅವರನ್ನು ಬಂಧಿಸಿದ ಪೊಲೀಸರು ರಾತ್ರಿಯಿಡೀ ಜೈಲಿನಲ್ಲಿ ಕೊಳೆಯುವಂತೆ ಮಾಡಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದರು. ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತರು ಹೋರಾಡದಿದ್ದರೆ, ಇವರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು. ಅಶ್ರಫ್ ಮಾಡಿದ ಅಪರಾಧವೇನೆಂದರೆ, ಕೇರಳದ ಸಂಘಿ ಕಾರ್ಯಕರ್ತನೊಬ್ಬ ಋತುಮತಿಯಾದ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದ್ದೇ ಕೇರಳದಲ್ಲಿ ಭೀಕರ ಮಳೆ ಮತ್ತು ಪ್ರವಾಹಕ್ಕೆ ಕಾರಣವೆಂದು ಸ್ಟೇಟಸ್ ಹಾಕಿದ್ದ. ಅದಕ್ಕೆ ಪ್ರತಿಯಾಗಿ ಅಶ್ರಫ್, ‘ಪರಶುರಾಮನ ಸೃಷ್ಟಿಯಾದ ತುಳುನಾಡಿನಲ್ಲಿ ಯಾಕೆ ನೆರೆ ಹಾವಳಿ ಉಂಟಾಗಿದೆ’ ಎಂದು ಪ್ರಶ್ನಿಸಿದ್ದರು. ಬಂಟ್ವಾಳ ಪೊಲೀಸರಿಗೆ ಇದು ಮಹಾ ಅಪರಾಧವಾಗಿ ಕಂಡಿತು.

ಯಾರೂ ಸಹ ದೂರು ದಾಖಲಿಸದಿದ್ದರೂ ತಾವೇ ಸ್ವಯಂ-ದೂರು ದಾಖಲಿಸಿಕೊಂಡು ಅಶ್ರಫ್‌ರನ್ನು ಜೈಲಿಗೆ ತಳ್ಳಿದರು. ಮೂಢನಂಬಿಕೆ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ಅಶ್ರಫ್‌ರನ್ನು ಬಂಧಿಸುವುದಾದರೆ, ಬಹಿರಂಗವಾಗಿ ಹತ್ಯೆಗೆ ಪ್ರಚೋದಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಂಧಿಸಬೇಕು. ಆತ ಬಹಿರಂಗ ಸಭೆಯೊಂದರಲ್ಲಿ ಮಾತನಾಡುತ್ತ, ನಾನು ಗೃಹಸಚಿವನಾದರೆ, ಬುದ್ಧಿಜೀವಿಗಳನ್ನೆಲ್ಲ ಸಾಲಾಗಿ ನಿಲ್ಲಿಸಿ ಗುಂಡಿಕ್ಕುವೆ ಎಂದು ಹೇಳಿದ್ದರು. ಕೇಂದ್ರದ ಇನ್ನೊಬ್ಬ ಸಚಿವ ಅನಂತಕುಮಾರ್‌ಹೆಗಡೆ ಬಾಯಿ ಬಿಟ್ಟರೆ, ಚರಂಡಿ ನೀರು ಹರಿದು ಬರುತ್ತದೆ. ಸದಾ ದ್ವೇಷದ ವಿಷ ಕಕ್ಕುತ್ತಲೇ ಇರುತ್ತಾರೆ. ಇವರ ವಿರುದ್ಧ ಕರ್ನಾಟಕದ ಪೊಲೀಸರು ಯಾವುದೇ ಕೇಸ್‌ನ್ನು ದಾಖಲಿಸಿಕೊಂಡಿಲ್ಲ. ಜೀತದಾಳುಗಳ ಪರವಾಗಿ ಬದುಕಿನುದ್ದಕ್ಕೂ ಹೋರಾಟ ಮಾಡುತ್ತ ಬಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಮಾಡಿ, ನೆಲಕ್ಕೆ ಉರುಳಾಡಿಸಿ ಹೊಡೆದು, ಅವರ ಕಾವಿ ಬಟ್ಟೆ ಹರಿದು ಒಂದೂವರೆ ತಿಂಗಳಾಗುತ್ತ ಬಂದರೂ ಜಾರ್ಖಂಡ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನೂ ಬಂಧಿಸಿಲ್ಲ. ಇದು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ತಲುಪಿರುವ ದುರಂತದ ಸ್ಥಿತಿ, 2019ರ ಚುನಾವಣೆಯಲ್ಲಿ ಇದೇ ಗ್ಯಾಂಗ್ ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ನಾಶ ಮಾಡಿ, ಪ್ರಜಾಪ್ರಭುತ್ವದ ಚಟ್ಟ ಕಟ್ಟುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ಬರುವ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಮನೆಗೆ ಕಳುಹಿಸಬೇಕು.