ಡಿಯರ್ ಮೀಡಿಯಾ ಈ ಸುದ್ದಿಯ ಗಾತ್ರ ಎಷ್ಟಿರಬೇಕಿತ್ತು?

Rajaram Tallur
ನಾಳೆ ಬೆಳಗ್ಗೆ ಹಸಿರು ನ್ಯಾಯಪೀಠ ನೇಮಿಸಿರುವ ತಜ್ಞರ ಸಮಿತಿಯು ಉಡುಪಿಗೆ ಭೇಟಿ ನೀಡಲಿದೆ. ಅವರು ಬರುತ್ತಿರುವ ಉದ್ದೇಶ: ಅದಾನಿ ಸಂಸ್ಥೆಯ ಮಾಲಕತ್ವದ UPCLಸಂಸ್ಥೆ ಈ ಪ್ರದೇಶದಲ್ಲಿ ಮಾಡಿರುವ ಪರಿಸರ ಹಾನಿಯ ವಿಶ್ಲೇಷಣೆ.
ಎರಡು ವರ್ಷಗಳ ಹಿಂದೆ ಉಡುಪಿಯಲ್ಲಿ ಬೂದಿ ಮಳೆ ಆದದ್ದು, ಅದರ ಮುಂದಿನ ಬೆಳವಣಿಗೆಗಳು ಮತ್ತು ಅದಕ್ಕಿಂತ ಮೊದಲು ಕೈಗಾರಿಕೆ ಇರುವ ಪ್ರದೇಶದ ಸ್ಥಳೀಯ ಜನಜಾಗೃತಿ ಸಮಿತಿಯು UPCLವಿರುದ್ಧ ಹೂಡಿದ ದಾವೆ… ಇವೆಲ್ಲ ಸುದೀರ್ಘ ಕಥೆ.
ಸರಳವಾಗಿ ಹೇಳಬೇಕೆಂದರೆ – ಹಣದ ಗಾತ್ರದಲ್ಲಿ ಲೆಕ್ಕ ಮಾಡಲು ಸಾಧ್ಯವಾಗದ ಅಗಾಧವಾದ ಪರಿಸರ, ಸಾಮಾಜಿಕ ಹಾನಿಯನ್ನು UPCL ಭರ್ತಿಮಾಡಿಕೊಡಬೇಕೆಂದು ಆದೇಶ ನೀಡಿತ್ತು, ಅದಕ್ಕಾಗಿ ಐದು ಕೋಟಿ ರೂ. ಗಳ ಮುಂಗಡ ಪರಿಹಾರ ಠೇವಣಿ ಇರಿಸುವಂತೆ ಆದೇಶ ನೀಡಿತ್ತು. ಆ ಬಳಿಕ, ಪೀಠದ ಆದೇಶದಂತೆ ಹಾನಿಯನ್ನು ವಿಶ್ಲೇಷಿಸಿದ “ಪರಿಣತರ ಸಮಿತಿ” ಅಂದಾಜು ನಾಲ್ಕೂ ಮುಕ್ಕಾಲು ಕೋಟಿ ರೂ.ಗಳ ಹಾನಿ ಆಗಿದೆ! ಎಂದು ಲೆಕ್ಕಾಚಾರ ಮಾಡಿ, ಠೇವಣಿ ಮಾಡಿದ ಐದು ಕೋಟಿಯಲ್ಲೇ ಸ್ವಲ್ಪಾಂಶವನ್ನು UPCLಗೆ “ವಾಪಸ್” ಕೊಡಿಸಿತ್ತು.
ಇದನ್ನು ಪ್ರಶ್ನಿಸಿ ಮೇಲ್ಮನವಿ ಮಾಡಿದ ಹಿನ್ನೆಲೆಯಲ್ಲಿ ಈಗ “ಪರಿಣತರ” ಸಮಿತಿ ಪುನರಾಗಮನ ಆಗುತ್ತಿದೆಯಂತೆ. ಅವರು ಎರಡು ದಿನ (ಡಿಸೆಂಬರ್ 6-9) ಇಲ್ಲಿ “ವಿಶ್ಲೇಷಣೆ” ಮಾಡಲಿದ್ದಾರಂತೆ.
ಇಂತಹ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳು -ಅದೂ ಸಾಮಾಜಿಕ ಜವಾಬ್ದಾರಿ ಇರುವ, ಕರಾವಳಿಯ ಪರಿಸರ-ಜನಸಮುದಾಯದ ಒಳಿತಿಗೆ ಕಟಿಬದ್ಧರೆಂದು ಸಾರಿಕೊಳ್ಳುವ ಮಾಧ್ಯಮಗಳು ಈ ಪರಿಣತರ ಸಮಿತಿಯ ಆಗಮನದ ಬಗ್ಗೆ ಹೇಗೆ ವರದಿ ಮಾಡಬೇಕಿತ್ತು? “ಜನಪರ” ರಾಜಕಾರಣಿಗಳು ಹೇಗಿರಬೇಕಿತ್ತು?
ಇಂದು ನಾನು ಕಂಡ ಏಳು ಪತ್ರಿಕೆಗಳಲ್ಲಿ ಎರಡು ಒಳಗೆಲ್ಲೋ ನಾಲ್ಕು ಸೆಂ.ಮೀ. ಉದ್ದದ ಒಂದು ಪುಟ್ಟ ಸುದ್ದಿ ಹಾಕಿವೆ. ಉಳಿದವಕ್ಕೆ ಅದು ಸುದ್ದಿಯೂ ಆಗಲಿಲ್ಲ. ಹೊಟ್ಟೆ ತುಂಬಿದ ಪತ್ರಿಕೋದ್ಯಮದ ಸುಂದರ ಮಾದರಿ ಇದು.
ಸಾರ್ವಜನಿಕವಾಗಿ ಹಾನಿಯ ವಿಶ್ಲೇಷಣೆಗೆ ಬರುವ ಪರಿಣತರ ತಂಡವೊಂದು ಬರುವುದನ್ನು ಸಾರ್ವಜನಿಕರ ಅವಗಾಹನೆಗೆ ಬರದಂತೆ ಕಾಪಾಡುವ ಮಾಧ್ಯಮಗಳು ವಾಸ್ತವದಲ್ಲಿ ಕಾಪಾಡುತ್ತಿರುವುದು ಯಾರ ಹಿತಾಸಕ್ತಿಯನ್ನು?!!
Please follow and like us:
error