ಡಾ.ಅಂಬೇಡ್ಕರ್‌ರವರ ಬರಹಗಳ ವಿರುದ್ಧ ವ್ಯವಸ್ಥಿತ ಅಸ್ಪೃಶ್ಯತಾಚರಣೆ?

-ರಘೋತ್ತಮ ಹೊ.ಬ

ಭಾರತದ ಯಾವುದೇ ಪುಸ್ತಕದ ಅಂಗಡಿಗಳಲ್ಲಿ ಡಾ.ಅಂಬೇಡ್ಕರ್‌ರವರು ಬರೆದಿರುವ ಪುಸ್ತಕಗಳು ದೊರೆಯುವುದಿಲ್ಲ. ಹೌದು, ಇದು ಕಟು ಸತ್ಯ. ನಾವು ಅಥವಾ ಅಂಬೇಡ್ಕರರ ಬಗ್ಗೆ ಓದಲು ಆಸಕ್ತಿ ಇರುವ ಯಾರೇ ಆದರೂ ಡಾ.ಅಂಬೇಡ್ಕರ್ ರವರು ಬರೆದಿರುವ ಪುಸ್ತಕಗಳನ್ನು ಖರೀದಿಸಲು ಭಾರತದ ಯಾವುದೇ ಪುಸ್ತಕದ ಮಳಿಗೆಗೆ ಹೋದರು ಪುಸ್ತಕಗಳು ಅವರಿಗೆ ದೊರೆಯುವುದೇ ಇಲ್ಲ! ತಮಾಷೆಗೆ ಹೇಳುತ್ತಿಲ್ಲ. ಮೊನ್ನೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಬೆಂಗಳೂರಿನ ಉದಯೋನ್ಮುಖ ನರರೋಗತಜ್ಞರಾದ ಡಾ.ಲಿಂಗರಾಜುರವರು ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಅಂತರರಾಷ್ಟ್ರೀಯ ವೇದಿಕೆಯೊಂದರ ಆಹ್ವಾನದ ಮೇರೆಗೆ ಡಾ.ಅಂಬೇಡ್ಕರರ Annihilation of caste (ಜಾತಿ ವಿನಾಶ) ಕೃತಿ ಬಗ್ಗೆ ಮಾತನಾಡಲು ಒಪ್ಪಿಕೊಂಡು ಪುಸ್ತಕ ಹುಡುಕಲು ಬೆಂಗಳೂರಿನ ಪುಸ್ತಕ ಮಳಿಗೆಯೊಂದಕ್ಕೆ ಹೊರಟಿದ್ದಾರೆ. ಆದರೆ ಅವರಿಗೆ ಡಾ.ಅಂಬೇಡ್ಕರರು ಬರೆದಿರುವ ಒಂದು ಪುಸ್ತಕ ಕೂಡ ಸಿಕ್ಕಿಲ್ಲ. ಏಷ್ಯಾದ ಬೃಹತ್ ಪುಸ್ತಕ ಮಾರಾಟ ಮಳಿಗೆ ಎಂದು ಬೋರ್ಡ್ ಹಾಕಿಕೊಂಡಿರುವ, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹಲವಾರು ಬ್ರ‍್ಯಾಂಚ್‌ಗಳನ್ನು ಹೊಂದಿರುವ ಆ ಪುಸ್ತಕ ಮಳಿಗೆಯಲ್ಲಿ ಟಾಲ್ ಸ್ಟಾಯ್, ಕಾರ್ಲ್ ಮಾರ್ಕ್ಸ್ ಹೀಗೆ ವಿದೇಶಿ ಚಿಂತಕರ ಕೃತಿಗಳು ಸಿಗುತ್ತವೆ. ಆದರೆ ಸ್ವದೇಶಿ ಡಾ.ಅಂಬೇಡ್ಕರರ ಪುಸ್ತಕಗಳು ಸಿಗುವುದಿಲ್ಲ. ಇದು ಆ ಮಳಿಗೆಯೊಂದರ ಕತೆಯಲ್ಲ, ಭಾರತದ ಎಲ್ಲಾ ನಗರಗಳ ಪುಸ್ತಕ ಮಳಿಗೆಗಳ ಕತೆಯಿದು. ಈ ಬಗ್ಗೆ ಮಾತನಾಡಿರುವ ಡಾ.ಲಿಂಗರಾಜುರವರು “ಅಂಬೇಡ್ಕರರ ಆ ಕೃತಿ ಕಾನೂನುಬಾಹಿರವೇ? ಇಲ್ಲ. ಏಕೆಂದರೆ ಅದನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯವೇ ಪಠ್ಯಪುಸ್ತಕವಾಗಿ ಮಾನ್ಯತೆ ನೀಡಿದೆ. ಆದರೆ ವಾಸ್ತವ ಏನೆಂದರೆ ಕೆಲವು ದುಷ್ಟ ಶಕ್ತಿಗಳು ಅಂಬೇಡ್ಕರರ ಕೃತಿಗಳು ಯಾರಿಗೂ ಸಿಗದಂತೆ, ಜನರನ್ನು ತಲುಪುದಂತೆ ತಡೆದಿವೆ” ಎನ್ನುತ್ತಾರೆ. ಕೊನೆಯಲ್ಲಿ ಅಮೆಜಾನ್ ಮೂಲಕ ತಾನು ಪುಸ್ತಕ ತರಿಸಿಕೊಂಡಿದ್ದಾಗಿ ಡಾ.ಲಿಂಗರಾಜು ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಅಂಬೇಡ್ಕರರ ಕೃತಿಗಳಿಗೆ ಬೇಡಿಕೆ ಕಡಿಮೆಯೇ? ಆ ಕಾರಣಕ್ಕೆ ಮಳಿಗೆಗಳು ತರಿಸುತ್ತಿಲ್ಲವೆ ಎಂದರೆ ಖಂಡಿತ ಇಲ್ಲ. ವಾಸ್ತವ ಏನೆಂದರೆ ಡಾ.ಅಂಬೇಡ್ಕರರು ಬರೆದಿರುವ ಕೃತಿಗಳಿಗೆ ಭಾರೀ ಬೇಡಿಕೆ ಇದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಅತಿ ಹೆಚ್ಚು ಮಾರಾಟ ಆಗುವುದು ಡಾ.ಅಂಬೇಡ್ಕರ್ ಸಂಬಂಧಿಸಿದ ವೈಚಾರಿಕ ಕೃತಿಗಳೇ! ಡಾ.ಅಂಬೇಡ್ಕರರ ಹೆಸರಿನ ಕಾರಣಕ್ಕೆ ಆ ಕೃತಿಗಳಿಗೆ ಬೇಡಿಕೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಕೃತಿಗಳಿಗೆ ಈ ಮಟ್ಟಿಗಿನ ಬೇಡಿಕೆಗೆ ಕಾರಣ ಆ ಕೃತಿಗಳ ವಸ್ತು, ವಿಚಾರಗಳನ್ನು ಉತ್ಕೃಷ್ಟ ಇಂಗ್ಲಿಷ್ ಭಾಷೆಯಲ್ಲಿ ಮಂಡಿಸಿರುವ ಶೈಲಿ, ಓದುಗನನ್ನು ಹಿಡಿದಿಡುವ ಧಾಟಿ. ಕುತೂಹಲಕರ ವಿಚಾರವೆಂದರೆ ಅಂಬೇಡ್ಕರರ ಒಂದು ಪುಟ್ಟ ಕೃತಿ ಒಂದು ಬೃಹತ್ ಚಳುವಳಿಯನ್ನೇ ಒಂದು ಬೃಹತ್ ರಾಜಕೀಯ ಪಕ್ಷವನ್ನೇ ಹುಟ್ಟು ಹಾಕಿದೆ ಎಂದರೆ…! ೧೯೭೦ರ ಸಂದರ್ಭದಲ್ಲಿ ದಿವಂಗತ ಕಾನ್ಷೀರಾಮ್‌ರವರಿಗೆ ಡಾ.ಅಂಬೇಡ್ಕರ್ ರವರ ಈ “ಅನ್ನಿಹಿಲೇಷನ್ ಆಫ್ ಕ್ಯಾಸ್ಟ್” ಕೃತಿ ಸಿಕ್ಕಿ ಇಡೀ ರಾತ್ರಿ ಅವರು ಅದನ್ನು ಓದಿ ಜ್ಞಾನೋದಯಗೊಂಡು ಬಹುಜನ ಸಮಾಜ ಪಕ್ಷದ ಉದಯಕ್ಕೆ ಕಾರಣರಾಗುತ್ತಾರೆ! ಆ ಮಟ್ಟಿಗಿನ ಭವ್ಯ ವಸ್ತು, ಸ್ಪೂರ್ತಿ ಚಿಲುಮೆ ಇರುವ ಕೃತಿಗಳು ಡಾ.ಅಂಬೇಡ್ಕರರದು.

ಈ ನಿಟ್ಟಿನಲ್ಲಿ ಅವರ “ಅನ್ನಿಹಿಲೇಷನ್ ಆಫ್ ಕ್ಯಾಸ್ಟ್” ಜೊತೆಗೆ “ರೆವಲ್ಯೂಷನ್ ಅಂಡ್ ಕೌಂಟರ್ ರೆವಲ್ಯೂಷನ್”, “ರಿಡಲ್ಸ್ ಇನ್ ಹಿಂದೂಯಿಸA”, “ವೂ ವರ್ ಶೂದ್ರಾಸ್”, “ದಿ ಅಂಟಚಬಲ್ಸ್”, “ಪ್ರಾಬ್ಲಂ ಆಫ್ ರುಪೀ”, “ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ “, “ಬುದ್ಧ ಅಂಡ್ ಹಿಸ್ ಧಮ್ಮ” ಹೀಗೆ ಡಾ.ಅಂಬೇಡ್ಕರರ ಇತರೆ ಕೃತಿಗಳು ಅವುಗಳ ವಸ್ತುಗಳ ಜೊತೆಗೆ ಪ್ರಾಚೀನ ಭಾರತದ ಇತಿಹಾಸ, ಭಾರತದ ಸ್ವಾತಂತ್ರ‍್ಯ ಸಂದರ್ಭದ ಘಟನೆಗಳು, ಈ ದೇಶದ ಸಾಮಾಜಿಕ ಕಟುಸತ್ಯಗಳನ್ನು ಐತಿಹಾಸಿಕ ದಾಖಲೆಗಳೊಡನೆ ಮನಮುಟ್ಟುತ್ತವೆಯೆಂದರೆ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆಯೆಂದರೆ…, ಅದರಲ್ಲೂ ಅವರ “ಪ್ರಾಬ್ಲಂ ಆಫ್ ರುಪೀ” ಪುಸ್ತಕ ಈ ದೇಶದ ಹಣಕಾಸು ವ್ಯವಸ್ಥೆ ನಿಯಂತ್ರಣ ಮಾಡುವ ಉತ್ಕೃಷ್ಟ ಬ್ಯಾಂಕ್ ಆದ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ” ಸ್ಥಾಪನೆಗೆ ಕಾರಣವಾದರೆ “ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ” ಕೃತಿ ದೇಶ ವಿಭಜನೆಯ ಕಾರ್ಯವನ್ನು ಸುಲಲಿತವಾಗಿ ನಡೆಯಲಿಕ್ಕೆ ನೆರವಾಯಿತು. ದುರಂತವೆಂದರೆ ಇಂತೆಲ್ಲ ಮಹತ್ವದ ಜ್ಞಾನ ಮತ್ತು ಐತಿಹಾಸಿಕ ಬೆಳವಣಿಗೆ ಮಯ ಹಿನ್ನೆಲೆಯನ್ನು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳು ಜನಸಾಮಾನ್ಯರಿಗೆ ತಲುಪಲು ಬಿಟ್ಟಿಲ್ಲ. ಮತ್ತೊಂದು ವಾಸ್ತವವೆಂದರೆ ಭಾರತದ ಪ್ರಕಾಶನ ಸಂಸ್ಥೆಗಳ, ಪುಸ್ತಕ ಮಳಿಗೆಗಳ ಇಂತಹ ಧೋರಣೆ ಕೊನೆಗಾಣ ಸಲು ೧೯೮೦ರ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಅಲ್ಲಿನ ಅಂಬೇಡ್ಕರರ ಅನುಯಾಯಿಗಳ ಒತ್ತಾಯದ ಫಲವಾಗಿ ಸರ್ಕಾರ ಸಂಪೂರ್ಣ ಇಂಗ್ಲಿಷ್ ಭಾಷೆಯಲ್ಲಿದ್ದ ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸಲು ಆರಂಭಿಸಿತು. ಮಹಾರಾಷ್ಟ್ರದ ಈ ಯೋಜನೆಗೆ ಕೈಗೂಡಿಸಿದ ಇತರೆ ರಾಜ್ಯಗಳು ತಮ್ಮ ತಮ್ಮ ಭಾಷೆಗಳಲ್ಲಿ ಅವುಗಳನ್ನು ಅನುವಾದಿಸಿ ಪ್ರಕಟಿಸಿದವು. ಈ ನಡುವೆ ಬಾಬಾಸಾಹೇಬ್ ಅಂಬೇಡ್ಕರರ ಇಂಗ್ಲಿಷ್ ಬರಹಗಳಿಗೆ ಈ ಮಟ್ಟಿಗಿನ ರಾಷ್ಟ್ರವ್ಯಾಪಿ ಬೇಡಿಕೆ ಮತ್ತು ದಲಿತ ಸಂಘಟನೆಗಳಿAದ ಒತ್ತಾಯ ಬಂದ ಹಿನ್ನೆಲೆಯಲ್ಲಿ ೨೦೦೪ ರಲ್ಲಿ ಯುಪಿಎ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆಯಾದ ಕುಮಾರಿ ಶೆಲ್ಜಾರವರ ಒತ್ತಾಸೆಯ ಮೇರೆಗೆ ಮಹಾರಾಷ್ಟ್ರದ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿ ಅಂಬೇಡ್ಕರರ ಪುಸ್ತಕಗಳು ಎಲ್ಲೆಡೆ ದೊರೆಯಲಿಕ್ಕೆ ಕಾರಣವಾಯಿತು. ಹಾಗೆಯೇ ಯುಪಿಎ ಸರ್ಕಾರ ಡಾ.ಅಂಬೇಡ್ಕರರ ಈ ಎಲ್ಲಾ ಬರಹಗಳ ಸಂಪುಟಗಳನ್ನು ಪಿಡಿಎಫ್ ಮೂಲಕ ಅಂತರ್ಜಾಲದಲ್ಲೂ ಪ್ರಕಟಿಸಿದೆ. ಆಸಕ್ತರು ಯಾರೂ ಬೇಕಾದರೂ ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಬಹುದು. ಆದರೆ ಪ್ರಶ್ನೆಯೇನೆಂದರೆ ಭಾರತದ ಪುಸ್ತಕ ಮಳಿಗೆಗಳಲ್ಲಿ ಅಂಬೇಡ್ಕರರ ಈ ಪುಸ್ತಕಗಳ ಲಭ್ಯತೆ?

ಹಾಗಿದ್ದರೆ ಮಹಾರಾಷ್ಟ್ರ ಸರ್ಕಾರ ಪ್ರಕಟಿಸುವ ಮೊದಲು ಅವುಗಳು ಲಭ್ಯವಿರಲಿಲ್ಲವೆಂದೇ? ಪ್ರಕಟವಾಗಿರಲಿಲ್ಲವೆಂದೇ? ಅದಕ್ಕಾಗಿ ಪ್ರಕಾಶನ ಸಂಸ್ಥೆಗಳಿಗೆ ಈ ಕಾರ್ಯ ಸಾಧ್ಯವಾಗಲಿಲ್ಲವೆಂದೇ? ಹಾಗೇನಿಲ್ಲ, ಲಭ್ಯವಿತ್ತು, ಪ್ರಕಟವಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರರ ಸಹಪಾಠಿ ವಾಲ್ಮೀಕಿ ಭಂಗಿ ಸಮುದಾಯದ ದಿ.ಭಗವಾನ್‌ದಾಸ್‌ರವರು ೧೯೬೦, ೭೦ ರ ಹೊತ್ತಿಗೆ “ದಸ್ ಸ್ಪೋಕ್ ಅಂಬೇಡ್ಕರ್ (ಅಂಬೇಡ್ಕರ್ ಹೀಗೆ ಹೇಳಿದರು)” ಹೆಸರಿನಲ್ಲಿ ಸ್ವಂತ ಖರ್ಚು ಮತ್ತು ಶ್ರಮದ ಮೂಲಕ ಸರಣ ರೂಪದಲ್ಲಿ ಪ್ರಕಟಿಸಿದರು. ಹಾಗಿದ್ದರೂ ಭಾರತದ ಪುಸ್ತಕ ಮಳಿಗೆಗಳು ಅಂಬೇಡ್ಕರರ ಆ ಸಂಪುಟಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ ಅಥವಾ ತಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡಲು ಮುಂದೆ ಬರಲಿಲ್ಲ. ಯಾಕೆ ಹೀಗೆ? ಈ ಲೇಖನದ ಆರಂಭದಲ್ಲೇ ಪ್ರಸ್ತಾಪಿಸಿರುವ ಹಾಗೆ “ಕೆಲವು ದುಷ್ಟ ಶಕ್ತಿಗಳು”. ಹೌದು, ಕೆಲವು ದುಷ್ಟ ಶಕ್ತಿಗಳು, ಅಸ್ಪೃಶ್ಯತಾಚರಣೆಯ ಮನಸ್ಥಿತಿ ಹೊಂದಿರುವ ದುಷ್ಟ ಶಕ್ತಿಗಳು ಅವು. ಸಂವಿಧಾನ ವಿರೋಧಿ ಶಕ್ತಿಗಳು ಎಂದು ಕೂಡ ಹೇಳಬಹುದು. ಯಾಕೆಂದರೆ ಸಂವಿಧಾನದ ಅನುಚ್ಛೇದ ೧೯ “ಅಭಿವ್ಯಕ್ತಿ ಸ್ವಾತಂತ್ರ‍್ಯ” ನೀಡುತ್ತದೆ. ಆದರೆ ಇಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ತಡೆಯೊಡ್ಡಲಾಗಿದೆ. ಯಾವ ಮಟ್ಟಿಗೆ ಎಂದರೆ ಈಗಲೂ ವಯಕ್ತಿಕವಾಗಿ ಬಹುತೇಕರು ನನ್ನನ್ನು “ಸರ್, ಅಂಬೇಡ್ಕರರ ಬರಹಗಳ ಭಾಷಣಗಳ ಇಂಗ್ಲಿಷ್ ಸಂಪುಟಗಳು ಎಲ್ಲಿ ಸಿಗುತ್ತವೆ?” ಎಂದರೆ ನನಗೆ ಭಾರತದ ಯಾವ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ ಎಂದು ಹೇಳಲಿಕ್ಕೆ ಖಂಡಿತ ಸಾಧ್ಯವಾಗುವುದಿಲ್ಲ. ಆ ಮಟ್ಟಿಗೆ ಅಂಬೇಡ್ಕರರ ಅಭಿವ್ಯಕ್ತಿ ಸ್ವಾತಂತ್ರ‍್ಯ ಅಸ್ಪೃಶ್ಯತಾಚರಣೆ ಮೂಲಕ ದಮನವಾಗಿದೆ. ಅಂದಹಾಗೆ ಇದಕ್ಕೆ ಯಾರನ್ನು ದೂರುವುದು? ಯಾರು ಹೊಣೆ? ಉತ್ತರ: ಈ ದೇಶದ ಹಿಂದುತ್ವವಾದಿ, ಜಾತಿವಾದಿ, ಮನುವಾದಿ ಮನಸ್ಸುಗಳು ಎಂದು ನೇರ ಹೇಳದೆ ವಿಧಿಯಿಲ್ಲ. ಪ್ರಶ್ನೆ ಏನೆಂದರೆ ಮುಂದಾದರೂ ಇಂತಹ ಪರಿಸ್ಥಿತಿ ತೊಲಗುವುದೇ? ಅಂಬೇಡ್ಕರರ ಬರಹಗಳು ಎಲ್ಲರಿಗೂ ಧಕ್ಕುವುದೇ, ಈ ದೇಶದ ಜನಸಾಮಾನ್ಯರ ಜ್ಞಾನ ದಾಹ ಹಿಂಗಿಸುವುದೇ? ಕಾದು ನೋಡಬೇಕಷ್ಟೆ.

Please follow and like us:
error