ಜನಾಂಗೀಯ ದ್ವೇಷದಲ್ಲಿ ನರಳುವ ದೇಶ ಕಟ್ಟಿಕೊಂಡು ನಾವು ಸಾಧಿಸುವುದಾದರೂ ಏನನ್ನು?

ಕೆಲವು ಪುಟಗಳೇ ಹಾಗೆ. ಮುಚ್ಚಿಟ್ಟು ಕುಳಿತರೂ ಮತ್ತೆ ಅದೇ ಪುಟಗಳೇ ಸೆಳೆದು ನಿಲ್ಲಿಸುತ್ತವೆ. ಬರೆಯದ ಹೊರತು ಬಿಡುಗಡೆಯಿಲ್ಲ. ಈ ಹುಡುಗಿ ಅಲ್ಮಾಸಾ ಸಲಿಹೋವಿಕ್ ಗೆ ಈಗ ಕೇವಲ 33 ವರ್ಷ. ಸ್ರೆಬ್ರೆನಿಕಾ ನರಮೇಧವಾದಾಗ ಈಕೆಗೆ ಎಂಟು ವರ್ಷ ವಯಸ್ಸು. ಈಕೆಯ ನೆನಪಿನ ತುಂಬ ಕೇವಲ ತನ್ನವರ ಗೋರಿಗಳೇ ಹೊರಳಾಡುತ್ತವೆ. ಸತ್ತವರೇನೋ ಸತ್ತರು, ಸಾಯದೆ ಉಳಿದವರು ಈ ನೆನಪಿನ ವಿಷ ಉಂಡೇ ಬದುಕಬೇಕು. ಈ ಹುಡುಗಿ ಜುಲೈ 11, 1995ರಲ್ಲಿ ನಡೆದ ಘಟನೆಗಳನ್ನು ‘ಅಲ್ ಜಜೀರಾ’ ದೊಂದಿಗೆ ಹಂಚಿಕೊಂಡಿದ್ದಾಳೆ. ಕೇಳಿಸಿಕೊಳ್ಳಲು ನಮ್ಮ ಗುಂಡಿಗೆಗೆ ಶಕ್ತಿ ಬೇಕು.

ಸ್ರೆಬ್ರೆನಿಕಾ ದಲ್ಲಿ ಈಕೆ, ತಾಯಿ ಮತ್ತು ಒಡಹುಟ್ಟಿದವರೊಂದಿಗೆ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅವರು ಅವತ್ತು ಓಡಬೇಕಿತ್ತು, ಹೆಚ್ಚುಕಡಿಮೆ 22 ಕಿ.ಮೀ. ದೂರದವರೆಗೆ ಓಡಬೇಕಿತ್ತು. ಪೊಟೋಕರಿ ಎಂಬ ಹಳ್ಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ನೆಲೆ ಇತ್ತು. ಅಲ್ಲಿಗೆ ತಲುಪಿಕೊಂಡು ಜೀವ ಉಳಿಸಿಕೊಳ್ಳಲು ಅವರು ಓಡಬೇಕಿತ್ತು.

ಸಲಿಹೋವಿಕ್ ಗೆ ಎಲ್ಲವೂ ನಿಚ್ಚಳವಾಗಿ ನೆನಪಿದೆ. ತಾಯಿ ಹೇಳಿದ್ದಳು, “ನಾವೀಗ ಓಡಬೇಕು ಮಕ್ಕಳೇ. ನಾನು ನಿಮ್ಮ ಕೈಹಿಡಿದು ಓಡಲು ಸಾಧ್ಯವಿಲ್ಲ. ನೀವು ನನ್ನ ಬಟ್ಟೆಯ ಚೂರೊಂದನ್ನು ಹಿಡಿದೇ ಓಡಬೇಕು. ಏನೇ ಆದರೂ ಕೈಬಿಡಬೇಡಿ, ಜತೆಗೆ ಓಡುತ್ತಲೇ ಇರಿ..” ಸಲಿಹೋವಿಕ್ ಸೇರಿದಂತೆ ಒಟ್ಟು ಐದುಮಕ್ಕಳನ್ನು ಕಟ್ಟಿಕೊಂಡು ಆಕೆ ಓಡಬೇಕಿತ್ತು. ಮಿಕ್ಕ ನಾಲ್ಕೂ ಮಕ್ಕಳೂ ಸಲಿಹೋವಿಕ್ ಗಿಂತ ದೊಡ್ಡವರು. ಹತ್ತೊಂಭತ್ತು ವರ್ಷ ವಯಸ್ಸಿನ ಅಕ್ಕ ಫಾತಿಮಾ, ಹದಿನೇಳು ವರ್ಷ ವಯಸ್ಸಿನ ಅಣ್ಣ ಅಬ್ದುಲ್ಲಾ ಆ ಜಂಗುಳಿಯಲ್ಲಿ ಕಣ್ಮರೆಯಾದರು. ಯಾಕೆಂದರೆ ಓಡುತ್ತಿದ್ದದ್ದು ಈ ಕುಟುಂಬ ಮಾತ್ರವಲ್ಲ, ಸಾವಿರಾರು ಮುಸ್ಲಿಂ ಕುಟುಂಬಗಳು ಸೆರ್ಬಿಯನ್ ಪಡೆಗಳಿಂದ ಜೀವ ಉಳಿಸಿಕೊಳ್ಳಲು ಓಡುತ್ತಿದ್ದವು.

ಪೋಟೋಕರಿಯವರೆಗೆ 22 ಕಿಮೀ ಓಡಿದ ನಂತರ ವಿಶ್ವಸಂಸ್ಥೆಯ ‘ಸೇಫ್ ಜೋನ್’ ತಲುಪಿಕೊಂಡರು. ಫಾತಿಮಾ ಮತ್ತು ಅಬ್ದುಲ್ಲಾ ಉಳಿದವರಿಗಿಂತ ವೇಗವಾಗಿ ಓಡಿದ್ದರಿಂದ ನಿರಾಶ್ರಿತರ ನೆಲೆಯಾಗಿ ಪರಿವರ್ತನೆಗೊಂಡಿದ್ದ ಬ್ಯಾಟರಿ ಫ್ಯಾಕ್ಟರಿಯೊಂದರ ಒಳಗೆ ಸೇರಿಕೊಂಡಿದ್ದರು. ಅದು ತುಂಬಿಹೋಗಿದ್ದರಿಂದ ಉಳಿದವರೆಲ್ಲ ಹೊರಗೇ ಉಳಿದರು.

pic :net
pic : net

ಸಾವಿರಾರು ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ಬ್ಯಾಟರಿ ಫ್ಯಾಕ್ಟರಿಯ ಹೊರಗೇ ಉಳಿದುಹೋದರು. ಅದು ಅತ್ಯಂತ ಯಾತನಾದಾಯಕ ನೆನಪುಗಳು. ಸೆರ್ಬ್ ಸೈನಿಕರು ಅಲ್ಲಿಗೆ ವಿಶ್ವಸಂಸ್ಥೆಯ ಪಡೆಯ ಯೂನಿಫಾರ್ಮ್ ಧರಿಸಿ ಬಂದರು. ಅಲ್ಲಿಂದ ಅವರು ಗಂಡಸರು ಮತ್ತು ಬಾಲಕರನ್ನು ಹುಡುಕಿ ಹುಡುಕಿ ಎತ್ತೊಯ್ದರು. ಹಾಗೆ ಎತ್ತಿಕೊಂಡು ಹೋದವರನ್ನೆಲ್ಲ ಸಾಮೂಹಿಕವಾಗಿ ಕೊಲ್ಲಲಾಯಿತು. ಆದರೆ ತಾಯಂದಿರು ಹೇಗಾದರೂ ತಮ್ಮ ಗಂಡ ಮತ್ತು ಮಕ್ಕಳನ್ನು ಉಳಿಸಿಕೊಳ್ಳಲು ಹೆಣಗಾಡಿದರು. ಸೆರ್ಬ್ ಯೋಧರ ಕಣ್ಣಿಗೆ ಕಾಣದಂತೆ ಅವರ ಗಂಡ, ಮಕ್ಕಳ ಮೇಲೆ ಮಲಗಿದರು. ಆದರೆ ಅಂಥ ಪ್ರಯೋಜನವೇನೂ ಆಗಲಿಲ್ಲ. ಅವರು ಹುಡುಹುಡುಕಿ ಗಂಡಸರನ್ನೆಲ್ಲ ಹೊತ್ತೊಯ್ಯುತ್ತಿದ್ದರು.

ಜುಲೈ 13ರಂದು ಸೆರ್ಬ್ ಸೈನಿಕರು ಹತ್ತಾರು ಟ್ರಕ್ ಗಳನ್ನು ಸಾಲುಸಾಲಾಗಿ ತಂದು ನಿಲ್ಲಿಸಿದರು. ನಿಮ್ಮನ್ನೆಲ್ಲ ಈ ಪ್ರಾಂತ್ಯದಿಂದ ಹೊರಗೆ ಅಲೀಜಾ (ಬೋಸ್ನಿಯಾದ ಮೊದಲ ಅಧ್ಯಕ್ಷ) ಪ್ರಾಂತ್ಯಕ್ಕೆ ಶಿಫ್ಟ್ ಮಾಡಲಾಗುವುದು ಎಂದು ಹೇಳಲಾಯಿತು. ಮೊದಲು ಹೆಂಗಸರು ಮತ್ತು ಮಕ್ಕಳು ಬನ್ನಿ. ನಂತರ ಉಳಿದ ಗಂಡಸರು ಬಂದು ನಿಮ್ಮನ್ನು ಕೂಡಿಕೊಳ್ಳುತ್ತಾರೆ ಎಂದು ಘೋಷಿಸಲಾಯಿತು. ಸೆರ್ಬ್ ಯೋಧರು, ಅಳಿದುಳಿದ ಗಂಡು ಸಂತಾನಗಳನ್ನು ಬೇಟೆಯಾಡುವ ತವಕದಲ್ಲಿದ್ದರು. ವಿಶ್ವಸಂಸ್ಥೆಯ ಪಡೆಗಳ ಎದುರೇ ಮಹಿಳೆಯರನ್ನು ಪುರುಷರನ್ನು ಬೇರೆ ಬೇರೆ ಮಾಡುತ್ತಿದ್ದರು. ನಿಶ್ಚಿತವಾಗಿ ವಿಶ್ವಸಂಸ್ಥೆಯ ಯೋಧರಿಗೆ ಮುಂದೆ ಏನಾಗಲಿದೆ ಎಂಬುದು ಗೊತ್ತಿತ್ತು, ಮಾತ್ರವಲ್ಲ ತಮ್ಮ ರಕ್ಷಣೆಯಲ್ಲಿ ಫ್ಯಾಕ್ಟರಿ ಒಳಗಿರುವವರಿಗೆ ಏನಾಗಲಿದೆಯೆಂದೂ ಗೊತ್ತಿತ್ತು! ಆದರೆ ಅವರು ಏನೂ ಮಾತನಾಡಲಿಲ್ಲ.

ಸಲಿಹೋವಿಕ್ ಮತ್ತು ಆಕೆಯ ತಾಯಿ, ಇನ್ನಿಬ್ಬರು ಮಕ್ಕಳು ಬಸ್ ಒಂದರೊಳಗೆ ತೂರಿಕೊಂಡರು. ಸಲಿಹೋವಿಕ್ ನ ಇನ್ನೊಬ್ಬ ಅಣ್ಣ ಸಲಿಹ್ ಕೂಡ ಇದ್ದನಲ್ಲ, ಅವನನ್ನು ಉಳಿಸಿಕೊಳ್ಳುವುದು ಹೇಗೆ? ಅವನಿಗೆ ಹದಿನೈದು ವರ್ಷ ವಯಸ್ಸು. ಸಲಿಹ್ ನನ್ನು ತಾಯಿ ಸೀಟ್ ಅಡಿ ತಳ್ಳಿ ಅವನ ಮೇಲೆ ಬಟ್ಟೆಯನ್ನು ಹರಡಿದಳು. ಸೆರ್ಬ್ ಸೈನಿಕರು ಬಸ್ ಒಳಗೂ ಹುಡುಕಾಡಲಿದ್ದಾರೆ ಎಂಬುದು ಅವಳಿಗೆ ಗೊತ್ತಿತ್ತು.

ಬ್ರಾಟುನಾಕ್ ಎಂಬ ಪಟ್ಟಣವನ್ನು ಟ್ರಕ್ ಗಳು ದಾಟಿಹೋಗುವಾಗ ಈ ಪುಟ್ಟ ಬಾಲಕಿ ಸಲಿಹೋವಿಕ್ ಮನುಷ್ಯನ ಅತ್ಯಂತ ಕರಾಳ ರೂಪವನ್ನು ಕಂಡಳು. ಜನಾಂಗೀಯ ಹಿಂಸೆ ಎಂಬುದು ಕೇವಲ ಬಂದೂಕುಗಳಿಂದ ಸಿಡಿಯುವುದಿಲ್ಲ, ಜತೆಗೆ ಬದುಕಿದವರ ತಿರಸ್ಕಾರ ಮತ್ತು ಕಾರಣವಿಲ್ಲದ ದ್ವೇಷವಿದೆಯಲ್ಲ ಅದನ್ನು ಹೇಗೆ ನುಂಗುವುದು? ಬ್ರಾಟುನಾಕ್ ಪಟ್ಟಣದ ‌ರಸ್ತೆಯ ಇಕ್ಕೆಲಗಳಲ್ಲಿ ಸೆರ್ಬಿಯನ್ ನಾಗರಿಕರು ನೆರೆದು ಮುಸ್ಲಿಂ ಮಹಿಳೆಯರು, ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ರಕ್ ಗಳ ಮೇಲೆ ಕಲ್ಲುಗಳನ್ನು ಎಸೆದರು. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ಟ್ರಕ್ ಗಳ ಮೇಲೆ ಉಗಿದರು, ಶಾಪ ಹಾಕಿದರು. ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ತೂರಿದರು.

ಅವರ‌್ಯಾರೂ ಶತ್ರುಗಳಾಗಿರಲಿಲ್ಲ. ಯಾವತ್ತೂ ಯಾವ ಜಗಳವೂ ಇರಲಿಲ್ಲ. ಈ ಪ್ರಮಾಣದ ದ್ವೇಷ ಅವರಲ್ಲಿ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಅದೆಲ್ಲ ಅವತ್ತು ಘಟಿಸಿತ್ತು.‌ ಸಲಿಹೋವಿಕ್ ಗೆ ಈಗಲೂ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ. ನಿಷ್ಕಾರಣವಾಗಿ ಸಹಮನುಷ್ಯರನ್ನು ದ್ವೇಷಿಸುವುದು ಹೇಗೆ ಸಾಧ್ಯ?

ಕ್ಲಾದಂಜ್ ಎಂಬ ಪಟ್ಟಣಕ್ಕೆ ಟ್ರಕ್ ಗಳು ತಲುಪಿದವು. ಅದು, ಸೆರ್ಬ್ ಪಡೆಗಳ ನಿಯಂತ್ರಣದಲ್ಲಿ ಇಲ್ಲದ ಪ್ರದೇಶ. ಅಲ್ಲಿ ಇನ್ನಷ್ಟು ಮಂದಿ‌ ಮೊದಲೇ ಸೇರಿಕೊಂಡು ತಮ್ಮ ಕುಟುಂಬದವರಿಗಾಗಿ ಕಾಯುತ್ತಿದ್ದರು. ಸಲಿಹೋವಿಕ್ ಅಕ್ಕ ಫಾತಿಮಾ ಕೂಡ ಅಲ್ಲಿ ಸಿಕ್ಕಳು. ಆದರೆ ಫಾತಿಮಾ ಜತೆ‌ ಅಬ್ದುಲ್ಲಾ ಇರಲಿಲ್ಲ! ಫಾತಿಮಾ ಮತ್ತು ಅಬ್ದುಲ್ಲಾ ಇಬ್ಬರೂ ವಿಶ್ವಸಂಸ್ಥೆಯ ರಕ್ಷಣೆಯಲ್ಲಿದ್ದರಲ್ಲವೇ? ಅಲ್ಲೂ ಕೂಡ ವಂಚನೆ ಎಸಗಲಾಯಿತು. ವಿಶ್ವಸಂಸ್ಥೆ ಅಧಿಕಾರಿಗಳ ಸಮ್ಮುಖದಲ್ಲೇ ಆ ಫ್ಯಾಕ್ಟರಿಯಲ್ಲಿ ಅಷ್ಟೂ ಜನರ ಹೆಸರುಗಳನ್ನು ಎಂಟ್ರಿ ಮಾಡಿಕೊಳ್ಳಲಾಯಿತು. ಒನ್ಸ್ ಎಗೇನ್, ಅದು ಮಹಿಳೆಯರು ಮತ್ತು ಪುರುಷರನ್ನು ಬೇರೆ ಮಾಡುವ ಸರ್ಕಸ್ಸಾಗಿತ್ತು. ಅಲ್ಲಿಂದ ಎಲ್ಲರನ್ನು ಪ್ರತ್ಯೇಕವಾಗಿ ಕ್ಲಾದಂಜ್ ಗೆ ಕರೆದೊಯ್ಯುವುದಾಗಿ ಹೇಳಲಾಯಿತು. ಹೆಣ್ಣುಮಕ್ಕಳ ಟ್ರಕ್ ಗಳು ಮಾತ್ರ ಕ್ಲಾದಂಜ್ ಗೆ ಬಂದವು. ಗಂಡಸರು, ಬಾಲಕರ ಟ್ರಕ್ ಗಳು ಸಾಮೂಹಿಕ ನರಮೇಧದ ಜಾಗಕ್ಕೆ ಹೋದವು. ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ, ಅದರೊಳಗೆ ಸಾವಿರಾರು ಜನರನ್ನು ಹೂತು ಹಾಕಲಾಯಿತು.

ಹದಿಮೂರು ವರ್ಷಗಳ ನಂತರ ಸಲಿಹೋವಿಕ್ ಗೆ ಒಂದು ದೂರವಾಣಿ ಕರೆ ಬಂತು.‌ ಆಕೆಯ ಸೋದರನ ದೇಹದ ಶೇ.30ರಷ್ಟು ಭಾಗ ಜ್ವಾರ್ನಿಕ್ ಎಂಬಲ್ಲಿ ಸಿಕ್ಕಿತ್ತು. ಸಿಕ್ಕಷ್ಟೇ ಭಾಗವನ್ನೇ ಸಲಿಹೋವಿಕ್ ಕುಟುಂಬ ಸಂಸ್ಕಾರ ನಡೆಸಿತು.

ಸಲಿಹೋವಿಕ್ ಕಳೆದ ಫೆಬ್ರವರಿಯಲ್ಲಿ ಆ ನಿರಾಶ್ರಿತರನ್ನು ಕೂಡಿಡಲಾಗಿದ್ದ ಫ್ಯಾಕ್ಟರಿಗೆ ಭೇಟಿ ನೀಡಿದ್ದಳು. ಅದು ಈಗ ಮ್ಯೂಸಿಯಂ ಆಗಿದೆ. ಅಂದು ಅಲ್ಲಿದ್ದ ನಿರಾಶ್ರಿತರ ಪಟ್ಟಿಯೂ ಅಲ್ಲಿ ಭದ್ರವಾಗಿದೆ. ಸಲಿಹೋವಿಕ್ ಕಣ್ಣಾಡಿಸುತ್ತ ಹೋದಳು. ಕೊನೆಯ ಪುಟದಲ್ಲಿ ಅಬ್ದುಲ್ಲಾ ಹೆಸರಿತ್ತು, ಅವನದೇ ಕೈಬರೆಹದಲ್ಲಿ!

ಕ್ರೌರ್ಯದ ಪರಮಾವಧಿ ಏನು ಗೊತ್ತೆ? ಎಂಟು ಸಾವಿರ ಜನರ ಮಾರಣಹೋಮ ನಡೆಸಲಾದ ಸ್ರೆಬ್ರೆನಿಕಾ ನರಮೇಧ ನಡೆದೇ ಇಲ್ಲ ಎಂದು ಕೆಲವರು ಇನ್ನೂ ವಾದಿಸುತ್ತಾರೆ. ಇದೇ ಮನಸ್ಥಿತಿಯವರು ಈ ಮಾರಣಹೋಮದ ರೂವಾರಿ ಜನರಲ್ ಮ್ಲಾಡಿಕ್ ನನ್ನು ಆರಾಧಿಸುತ್ತಾರೆ. ಜನರಲ್ ಮ್ಲಾಡಿಕ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ರೂವಾರಿ ಎಂಬುದು ರುಜುವಾತಾಗಿದ್ದರೂ ಸಹ! ಸ್ರೆಬ್ರೆನಿಕಾದಲ್ಲಿ ನಡೆದ ನರಮೇಧಕ್ಕೆ ಇಪ್ಪತ್ತೈದು ವರ್ಷಗಳು ತುಂಬಿದ ಕರಾಳ ನೆನಪಿನಲ್ಲಿ ಅಳಿದ ಉಳಿದ ಬೋಸ್ನಿಯಾದ ಮುಸ್ಲಿಂ ಸಮುದಾಯ ನರಳುತ್ತಿದ್ದರೆ ಅದೇ ಸ್ರೆಬ್ರೆನಿಕಾ ದಲ್ಲಿ ಮ್ಲಾಡಿಕ್ ನ ಪೋಸ್ಟರ್ ಗಳನ್ನು ಹಾಕಿಕೊಂಡು, Thank you General, for 11th of July, The day of liberation of Srebrenica… ಎಂದು ಹಾಡಿಹೊಗಳಲಾಗುತ್ತಿದೆ. ಗಾಯದ ಮೇಲೆ ಬರೆ ಎಂದರೆ ಇದೇ ಅಲ್ಲವೇ?

ಯಾಕೋ ಇದೆಲ್ಲ ಓದಿದಾಗ ಸಿಎಎ, ಎನ್ ಆರ್ ಸಿ ವಿರುದ್ಧ ನಾವೆಲ್ಲ ಮಾತನಾಡುತ್ತಿದ್ದ ಸಂದರ್ಭಗಳು ನೆನಪಾದವು. ಇದೆಲ್ಲ ನಮ್ಮಲ್ಲೂ ಆಗಬಾರದು ಅಂತಲ್ಲವೇ ನಾವು ಬಡಿದಾಡಿದ್ದು? ಸ್ರೆಬ್ರೆನಿಕಾದ ವಿವರಗಳನ್ನು ಓದುವಾಗ ನಿಮಗೆ ಗುಜರಾತ್ ನರಮೇಧ ನೆನಪಾಗದೇ ಇರುತ್ತದೆಯೇ? ನಾವು ಕಟ್ಟಬೇಕಿರುವ ದೇಶವಾದರೂ ಎಂಥದ್ದು. ಜನಾಂಗೀಯ ದ್ವೇಷದಲ್ಲಿ ನರಳುವ ದೇಶ ಕಟ್ಟಿಕೊಂಡು ನಾವು ಸಾಧಿಸುವುದಾದರೂ ಏನನ್ನು? ದ್ವೇಷವನ್ನೇ ಉಸಿರಾಡುವ, ಅದನ್ನೇ ತಿಂದುಂಡು ಬದುಕುವ ಜನರಿಗೆ ಇದನ್ನೆಲ್ಲ ಹೇಗೆ ವಿವರಿಸುವುದು, ಅರ್ಥ ಮಾಡಿಸುವುದು?

-ದಿನೇಶ್ ಕುಮಾರ್ ಎಸ್.ಸಿ.

Please follow and like us:
error