ಗ್ರಾಮಪಂಚಾಯತ್ ಗೆ ಚುನಾವಣೆ -ನನ್ನ ರಾಜಕೀಯ ಪ್ರವೇಶ

ದಿನೇಶ್ ಅಮೀನ್ ಮಟ್ಟು

ನನ್ನ ರಾಜಕೀಯ ಪ್ರವೇಶದ ಬಗ್ಗೆ ಎರಡು ವರ್ಷಗಳ ಹಿಂದೆ ಮಾಧ್ಯಮಗಳು ವರದಿ ಮಾಡಿದಾಗ ನಾನು ಅದನ್ನು ನಿರಾಕರಿಸಲು ಹೋಗದೆ ಮಜಾ ತಗೊಳ್ತಾ ಇದ್ದದ್ದು ನಿಜ. ಪತ್ರಕರ್ತನಾಗಿ ಚುನಾವಣಾ ರಾಜಕೀಯದ ಒಳ-ಹೊರಗನ್ನು ಉಳಿದವರಿಗಿಂತ ಚೆನ್ನಾಗಿ ಬಲ್ಲ ನಾನು ಈ ಬಗ್ಗೆ ವರ್ಷಗಳ ಹಿಂದೆಯೇ ನಿರ್ಧಾರ ಕೈಗೊಂಡಾಗಿತ್ತು.
ಹೀಗಿದ್ದರೂ ಈ ಬಾರಿಯ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಯೋಗ ಮಾಡಬೇಕೆಂದಿದ್ದೆ (ಈ ವರ್ಷ ಗಂಗಾವತಿಯಲ್ಲಿ ನಡೆದಿದ್ದ ನಾವು-ನಮ್ಮವರು ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಇದನ್ನು ಹೇಳಿಯೂ ಇದ್ದೆ). ಅದು ನನ್ನೊಬ್ಬನ ಪ್ರಯೋಗ ಅಲ್ಲ. ರಾಜ್ಯದಲ್ಲಿ 6000ಕ್ಕೂ ಮಿಕ್ಕಿ ಗ್ರಾಮಪಂಚಾಯತ್ ಗಳಿವೆ ಅದರಲ್ಲಿ ಕನಿಷ್ಠ 500 ಗ್ರಾಮಪಂಚಾಯತ್ ಗಳಲ್ಲಿ ಇಂತಹದ್ದೊಂದು ಪ್ರಯೋಗದ ಪ್ರಯತ್ನ ನಡೆಸಬಾರದೇಕೆ ಎಂಬ ಯೋಚನೆ ನನಗೆ ಬಂದಿತ್ತು.
ಐಟಿ-ಬಿಟಿ ಕ್ಷೇತ್ರವೂ ಸೇರಿದಂತೆ ಹುಟ್ಟೂರು ಬಿಟ್ಟು ನಗರ-ಪಟ್ಟಣ ಸೇರಿ ವೃತ್ತಿಯಲ್ಲಿ ತೃಪ್ತಿ ಕಾಣದೆ ಹಳ್ಳಿಗಳಿಗೆ ಮರಳಬೇಕೆಂದು ಹಂಬಲಿಸುತ್ತಿರುವ ನೂರಾರು ಯುವಕ-ಯುವತಿಯರು ನಮ್ಮಲ್ಲಿದ್ದಾರೆ. ಇವರಲ್ಲಿ ಒಂದು 500 ಮಂದಿ ದಿಟ್ಟನಿರ್ಧಾರ ಕೈಗೊಂಡು ಹುಟ್ಟೂರಿಗೆ ಮರಳಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ ಇರಲಿಕ್ಕಿಲ್ಲವೇ ಎಂಬ ಪ್ರಶ್ನೆ ನನ್ನ ತಲೆ ತಿನ್ನಲು ಶುರುಮಾಡಿತ್ತು.
ನಾನೊಮ್ಮೆ ದಲಿತ ಚಳುವಳಿಯ ನಾಯಕ ಬಿ.ಕೃಷ್ಣಪ್ಪ ಅವರ ಬಗ್ಗೆ ಓದುತ್ತಾ ಇದ್ದಾಗ ಅವರು ಸರ್ಕಾರಿ ನೌಕರರ ಸಮ್ಮೇಳನವನ್ನು ಉದ್ಘಾಟಿಸುತ್ತಾ ನೀಡಿದ್ದ ಕರೆ ನನ್ನ‌ ಗಮನ ಸೆಳೆದಿತ್ತು. ಅದು ‘ಗೋ ಬ್ಯಾಕ್ ಟು ಸೊಸೈಟಿ, ಪೇ ಬ್ಯಾಕ್ ಟು ಸೊಸೈಟಿ’ ಎಂಬ ಕರೆ. ಅದೇ ರೀತಿ ‘ಗೋ ಬ್ಯಾಕ್ ಟು ವಿಲೇಜ್, ಪೇ ಬ್ಯಾಕ್ ಟು ವಿಲೇಜ್’ ಎಂಬ ಕರೆಯ ಮೂಲಕ ಇಂತಹದ್ದೊಂದು ರಾಜಕೀಯ ಪ್ರಯೋಗವನ್ನು ಯಾಕೆ ಮಾಡಬಾರದು ಎಂಬ ಯೋಚನೆ ಬಂದಿತ್ತು. ಅಷ್ಟರಲ್ಲಿ ಕೊರೊನಾ ಬಂದು ಎಲ್ಲರೂ ದಿಗ್ಭಂಧನಗೊಳಗಾಗಬೇಕಾಯಿತು. ಅಲ್ಲಿಗೆ ಪ್ರಯೋಗ ಶಿಶು ಅಕಾಲಿಕ ಸಾವಿಗೀಡಾಯಿತು.
ಗ್ರಾಮಪಂಚಾಯತ್ ಚುನಾವಣೆ ನನಗೇನು ಹೊಸತಲ್ಲ. 1987ರಲ್ಲಿ ನಡೆದ ಮೊದಲ ಜಿಲ್ಲಾಪರಿಷತ್, ಮಂಡಲ ಪಂಚಾಯತ್ ಚುನಾವಣೆಯಲ್ಲಿ ನನ್ನದೇ ಒತ್ತಾಯದಿಂದ ನಮ್ಮೂರಿನಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. (ಅದಕ್ಕೆ ನಜೀರ್ ಸಾಬ್ ಜೊತೆಗಿನ ನನ್ನ ಮಾತುಕತೆಯೂ ಪ್ರೇರಣೆ) ನಮ್ಮ ಚಿಹ್ನೆ ತೆಂಗಿನ ಮತ್ತು ದೋಣಿ. ಆದರೆ ಪ್ರಬಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎದುರು ನಮ್ಮ ಅಭ್ಯರ್ಥಿಗಳಿಗೆ ಠೇವಣಿ ಕೂಡಾ ಉಳಿಯಲಿಲ್ಲ. ಆಗಲೇ ಊರಿನಲ್ಲಿ ಯುವಕ ಮಂಡಲ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದ ನಮಗೆಲ್ಲ ಇದೊಂದು ದೊಡ್ಡ ರಾಜಕೀಯ ಆಘಾತ. ಆ ಚುನಾವಣೆಯಲ್ಲೇನಾದರೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ನನ್ನ ಬದುಕಿನ ದಾರಿಯೂ ಬದಲಾಗುತ್ತಿತ್ತೋ ಏನೋ? ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನುತ್ತಾರಲ್ಲಾ ಹಾಗೆ ಒಳ್ಳೆಯದೇ ಆಯಿತು.
ನಾನು 1989ರಲ್ಲಿ ಪ್ರಜಾವಾಣಿ ಸೇರಿದಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಆಗಲೂ ಊರಿನ ರಸ್ತೆ ಮತ್ತು ಕುಡಿಯುವ ನೀರಿನ ಹೋರಾಟ ಮುಂದುವರಿದಿತ್ತು. ಕೊನೆಗೆ ನಮ್ಮ ಬೇಡಿಕೆಗೆ ಒತ್ತಾಯಿಸಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೆವು. ನಾನು ಪ್ರಜಾವಾಣಿಯ ‘ಕರ್ನಾಟಕ ದರ್ಶನ’ದಲ್ಲಿ ನಮ್ಮೂರಿನ ಮೂಲಸೌಕರ್ಯಗಳ ಸಮಸ್ಯೆ ಹಾಗೂ ಚುನಾವಣಾ ಬಹಿಷ್ಕಾರದ ನಿರ್ಧಾರದ ಬಗ್ಗೆ ಲೇಖನ ಕೂಡಾ ಬರೆದಿದ್ದೆ. ಇದನ್ನೆಲ್ಲ ನೋಡಿ ಕಾಂಗ್ರೆಸ್ ಅಭ್ಯರ್ಥಿ ಆಸ್ಕರ್ ಫರ್ನಾಂಡಿಸ್ ಓಡೋಡಿ ಬಂದು ಕೊಟ್ಟ ಆಶ್ವಾಸನೆ ಮೇರೆಗೆ ಕೊನೆಗೆ ಬಹಿಷ್ಕಾರ ಹಿಂದೆಗೆಯಲಾಯಿತು. ಕಳೆದ 30 ವರ್ಷಗಳಲ್ಲಿ ಆಸ್ಕರ್ ಫರ್ನಾಂಡಿಸ್ ಅವರಿಂದ ನಮ್ಮೂರಿಗೆ ನಯಾಪೈಸೆ ವೆಚ್ಚದ ಕೆಲಸ ಆಗಿಲ್ಲ.
ನಮ್ಮೂರು ಅಭಿವೃದ್ದಿಯ ದಿನಗಳನ್ನು ಕಂಡಿದ್ದು ಜನತಾ ಪಕ್ಷದ ಶಾಸಕರಾಗಿದ್ದ ಕೆ.ಅಮರನಾಥ ಶೆಟ್ಟಿಯವರ ಕಾಲದಲ್ಲಿ. ಅದರ ನಂತರ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರೂ ನೆರವಾದರು. ನಾನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದಾಗ ನಮ್ಮೂರಿಗೆ ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ರಸ್ತೆ ಮತ್ತಿತರ ಅಭಿವೃದ್ದಿಕಾರ್ಯಕ್ಕಾಗಿ ಒಂದು ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೆ. 35 ಲಕ್ಷ ರೂಪಾಯಿ ವೆಚ್ಚದಲ್ಲಿ ನದಿಕೊರೆತಕ್ಕೆ ತಡೆಗೋಡೆ ನಿರ್ಮಾಣವಾಗಿದೆ. ಈಗ ನದಿಗೊಂದು ಸೇತುವೆ ಕೂಡಾ ನಿರ್ಮಾಣವಾಗುತ್ತಿದೆ.
ಆದರೆ ಸುತ್ತಲೂ ಉಪ್ಪುನೀರಿನ ನದಿ ಆವರಿಸಿಕೊಂಡಿರುವುದರಿಂದ ಊರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. 30 ವರ್ಷಗಳ ಹಿಂದೆ ನಿರ್ಮಿಸಿದ್ದ ಏಕಸಂಚಾರ ರಸ್ತೆಯ ಅಗಲೀಕರಣವಾಗದೆ ಬಸ್ ಸಂಚಾರ ಸಾಧ್ಯವಾಗುತ್ತಿಲ್ಲ. ಈಗ ನಮ್ಮ ಕ್ಷೇತ್ರಕ್ಕೆ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಶಾಸಕರು. ಈ ಎರಡು ಬೇಡಿಕೆಗಳನ್ನಾದರೂ ಇವರು ಈಡೇರಿಸುವ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಇವರ ಕಾಲದಲ್ಲಿ ರಸ್ತೆ ಅಭಿವೃದ್ದಿಯೂ ಆಗಲಿಲ್ಲ, ಕುಡಿಯುವ ನೀರೂ ಬರಲಿಲ್ಲ. ಬದಲಿಗೆ ನಮ್ಮ ನದಿಯಿಂದ ಮರಳು ಸಾಗಿಸಲು ಯಾರೋ ಹೊರ ಊರಿನವರಿಗೆ ಎರಡು ಲೀಸ್ ಮಂಜೂರಾಗಿದೆ. ಈಗ ಸಿಂಗಲ್ ರೋಡಿನಲ್ಲಿ ಮರಳಿನ ಲಾರಿಗಳದ್ದೇ ಭರಾಟೆ.
ನಾನು ದಿನಕ್ಕೆ ನಾಲ್ಕು ಕಿ.ಮಿ. ನಡೆದುಕೊಂಡು ಹೋಗಿ, ದೋಣಿ ದಾಟಿ ಕಾಲೇಜು ಮುಗಿಸಿದವನು, ಈ ಅನುಭವದ ಹಿನ್ನೆಲೆಯಲ್ಲಿ ಬಹಳ ಕಷ್ಟಪಟ್ಟು ರಸ್ತೆ ಮಾಡಿದ್ದೆವು. “ ಇಂತಹ ರಸ್ತೆಯನ್ನು ಅಗಲ ಮಾಡುವುದು ಬಿಟ್ಟು ಮರಳು ಲಾರಿಗಳಿಗೆ ಅನುಮತಿ ನೀಡಿ ಅನ್ಯಾಯ ಮಾಡುತ್ತಿದ್ದಿರಲ್ಲಾ” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಹೇಳಿದರೆ ‘’ ಸರ್ಕಾರಕ್ಕೆ ಆದಾಯ ಬೇಕು, ಲೀಸ್ ರದ್ದು ಮಾಡಲಿಕ್ಕಾಗುವುದಿಲ್ಲ, ಪ್ರತಿಭಟಿಸಿದರೆ ಪೊಲೀಸರನ್ನು ಕಳಿಸಬೇಕಾಗುತ್ತದೆ” ಎಂದು ನನಗೆ “ಪ್ರೀತಿಯಿಂದ” ಹೇಳಿದರು. ಪುಣ್ಯಕ್ಕೆ ನನ್ನನ್ನು ಬಂಧಿಸುತ್ತೇನೆ ಎಂದು ಹೇಳಿಲ್ಲ.
ಅವರ ಬೆದರಿಕೆಗೆ ನಡುಗಿಹೋಗಿರುವ ನಾನು ಊರಿನ ಕಡೆ ತಲೆಹಾಕದೆ ಬೆಂಗಳೂರಿನ ಚಳಿಯಲ್ಲಿ ಮುದುಡಿ ಕುಳಿತಿದ್ದೇನೆ.
ಈ ನಡುವೆ ನಮ್ಮೂರಿನಲ್ಲಿ ನಾಳೆ ಗ್ರಾಮಪಂಚಾಯತ್ ಗೆ ಚುನಾವಣೆ ನಡೆಯುತ್ತಿದೆ.
Please follow and like us:
error