ಗುಜರಾತ್ ರಾಜ್ಯದ ದೇವರಾಜ ಅರಸು – ಮಾಧವ ಸಿಂಗ್ ಸೋಳಂಕಿ

ದಿನೇಶ ಅಮೀನ್ ಮಟ್ಟು
ಗುಜರಾತ್ ರಾಜ್ಯದ ದೇವರಾಜ ಅರಸು ಎಂದು ಖ್ಯಾತರಾಗಿದ್ದ ಮಾಧವ ಸಿಂಗ್ ಸೋಳಂಕಿ ನಿಧನರಾಗಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಕಳೆದ ಹದಿನೆಂಟು ವರ್ಷಗಳ ಗುಜರಾತ್ ರಾಜ್ಯವನ್ನಷ್ಟೇ ನೋಡಿದವರಿಗೆ ಸೋಳಂಕಿ ಅವರು ಆ ರಾಜ್ಯದಲ್ಲಿ ನಡೆಸಿದ್ದ ಸೋಷಿಯಲ್ ಎಂಜನಿಯರಿಂಗ್ ಬಗ್ಗೆ ತಿಳಿದಿರಲಾರದು.
ಒಂದು ಕಾಲದಲ್ಲಿ ಗುಜರಾತ್ ರಾಜಕೀಯ ಎನ್ನುವುದು ಪಾಟೀದಾರ್ ಎಂದು ಕರೆಯಲಾಗುವ ಪಟೇಲ್ ಸಮುದಾಯದ ಆಡುಂಬೋಲವಾಗಿತ್ತು. ರಾಜ್ಯದಲ್ಲಿ ಶೇಕಡಾ 16ರಷ್ಟಿರುವ ಪಟೇಲರು ಸೌರಾಷ್ಟ್ರ ಪ್ರದೇಶದಲ್ಲಿ ಶೇಕಡಾ 30ಕ್ಕಿಂತ ಹೆಚ್ಚಿದ್ದಾರೆ. ಮೂಲತ: ಕೃಷಿಕರಾದ ಪಟೇಲರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ವಿಸ್ತರಿಸಿಕೊಂಡು ಬೆಳೆದಿದ್ದಾರೆ ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು, ಸೂರತ್ ನಲ್ಲಿ ವಜ್ರದ ವ್ಯಾಪಾರದಲ್ಲಿ ಪಟೇಲರದ್ದೇ ಪ್ರಾಬಲ್ಯ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಅವರದ್ದೇ ಪಾರುಪತ್ಯ. ಅನಿವಾಸಿ ಭಾರತೀಯರಲ್ಲಿಯೂ ಪಟೇಲರದ್ದೇ ದೊಡ್ಡ ಸಂಖ್ಯೆ.
ಈ ಪಾಟೀದಾರ್ ಗಳ ರಾಜಕೀಯ ಯಜಮಾನಿಕೆಯಲ್ಲಿದ್ದ ಗುಜರಾತ್ ರಾಜ್ಯದ ರಾಜಕೀಯದ ಚಿತ್ರವನ್ನೇ ಬದಲಾಯಿಸಿದವರು ಮಾಧವ ಸಿಂಗ್ ಸೋಳಂಕಿ. 1980ರಲ್ಲಿ ‘ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಮರನ್ನೊಳಗೊಂಡ “ಖಾಮ್’’ (KHAM) ಕೂಟವೊಂದನ್ನು ರಚಿಸಿ ಚುನಾವಣೆ ಎದುರಿಸಿದ ಮಾಧವಸಿಂಗ್ ಸೋಳಂಕಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಈ ‘ಖಾಮ್’’ ಎನ್ನುವುದು ಕರ್ನಾಟಕದ ‘ಅಹಿಂದ’ ದ ಗುಜರಾತ್ ಮಾದರಿ.
ಪಟೇಲ್ ಸಮುದಾಯಕ್ಕೆ ಇದೊಂದು ಅನಿರೀಕ್ಷಿತ ರಾಜಕೀಯ ಆಘಾತ. ಇದರ ನಂತರದ ದಿನಗಳಲ್ಲಿ ಪಟೇಲರು ಮೊದಲು ಜನತಾದಳ ನಂತರ ಬಿಜೆಪಿ ಗಾಡಿ ಹತ್ತಿದರು. ಇದರ ಫಲವಾಗಿ 1990ರಲ್ಲಿ ಅಲ್ಲಿ ಬಿಜೆಪಿ-ಜನತಾದಳ ಮೈತ್ರಿಕೂಟ ಅಧಿಕಾರಕ್ಕೆ ಬಂತು.ಚಿಮಣ್ ಭಾಯಿ ಪಟೇಲ್ ಮುಖ್ಯಮಂತ್ರಿ, ಕೇಶುಭಾಯಿ ಪಟೇಲ್ ಉಪಮುಖ್ಯಮಂತ್ರಿಯಾದರು.
ಬಿಜೆಪಿ ಬಹಳ ಜಾಣತನದಿಂದ ಮೊದಲು ಕ್ಷತ್ರಿಯರಾಗಿರುವ ಶಂಕರ್ ಸಿಂಗ್ ವಘೇಲಾ ಅವರ ಮೂಲಕ ಕ್ಷತ್ರಿಯರನ್ನು ನಂತರದ ದಿನಗಳಲ್ಲಿ ಮುಸ್ಲಿಮ್ ಭೂತವನ್ನು ಎದುರಿಗಿಟ್ಟು ಆದಿವಾಸಿಗಳನ್ನು ತನ್ನೆಡೆಗೆ ಸೆಳೆದುಕೊಂಡು “ಖಾಮ್ ಕೂಟವನ್ನು ಒಡೆದುಹಾಕಿತು. ಆಗಲೇ ಕಾಂಗ್ರೆಸ್ ಜೊತೆ ಮುನಿಸುಕೊಂಡಿದ್ದ ಪಟೇಲರು ಬಿಜೆಪಿ ಪ್ರವೇಶ ಮಾಡಿದ್ದರು. ಅದರ ನಂತರ ಹೆಚ್ಚುಕಡಿಮೆ ಹತ್ತು ವರ್ಷಗಳ ಕಾಲ ಗುಜರಾತ್ ರಾಜಕೀಯದಲ್ಲಿ ಪಟೇಲರದ್ದೆ ಕಾರುಭಾರು.
ನರೇಂದ್ರಮೋದಿ ಮುಖ್ಯಮಂತ್ರಿಯಾದ ನಂತರ ತನ್ನನ್ನು ಹಿಂದೂಗಳ ಹೃದಯ ಸಾಮ್ರಾಟನಾಗಿ ಬಿಂಬಿಸಿಕೊಂಡು ಆ ಕಡೆ ಕೇಶುಭಾಯಿ ಪಟೇಲರನ್ನು ಈ ಕಡೆ ಕ್ಷತ್ರಿಯ ಶಂಕರ್ ಸಿಂಗ್ ವಘೇಲಾರನ್ನು ಮೂಲೆಗೆ ತಳ್ಳಿ ತನ್ನದೇ ಬಿಜೆಪಿ ಕಟ್ಟಿಕೊಂಡು ಹನ್ನೆರಡು ವರ್ಷ ಆಳಿದರು.
2007ರ ವಿಧಾನಸಭಾ ಚುನಾವಣಾ ಸಮೀಕ್ಷೆಗೆ ಗುಜರಾತ್ ಗೆ ಹೋಗಿದ್ದ ನಾನು ಗಾಂಧಿನಗರದ ತಮ್ಮ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಮಾಧವ ಸಿಂಗ್ ಸೋಳಂಕಿ ಅವರನ್ನು ಭೇಟಿಯಾಗಿ ಮಾತನಾಡಿದ್ದೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಕರ್ನಾಟಕದಲ್ಲಿ ನಡೆಸಿದ್ದ ರಾಜಕೀಯ-ಸಾಮಾಜಿಕ ಪ್ರಯೋಗದ ಸಂಪೂರ್ಣ ಅರಿವಿತ್ತು.
ಅಷ್ಟೊತ್ತಿಗೆ ವಯಸ್ಸು ಮತ್ತು ರಾಜಕೀಯ ಹಿನ್ನಡೆಯಿಂದಾಗಿ ಬಹಳ ಮೆತ್ತಗಾಗಿ ಬಿಟ್ಟಿದ್ದರು. ಅವರಿಗೆ ತಾನು ವಿವಾದಕ್ಕೆ ಸಿಲುಕಿ ಆ ಕಾಲದಲ್ಲಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಗ ಭರತ್ ಸೋಳಂಕಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮನಸ್ಸಿರಲಿಲ್ಲ. ಆದ್ದರಿಂದ ಅವರು ಬಹಳ ಎಚ್ಚರಿಕೆಯಿಂದ ‘ ನನ್ನದು ಖಾಮ್ ಕೂಟ ಆಗಿರಲಿಲ್ಲ, ಅದು ಆಮ್ ಆದ್ಮಿ ಕೂಟ ‘ ಆಗಿತ್ತು ಎಂದು ಹೇಳಿದ್ದರು. ಹೀಗಿದ್ದರೂ ಆಪ್ ದಿ ರೆಕಾರ್ಡ್ ಮಾತಿನಲ್ಲಿ ಅಹ್ಮದ್ ಪಟೇಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಉತ್ತರಪ್ರದೇಶ,ಬಿಹಾರ, ಗುಜರಾತ್ …ಹೀಗೆ ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ ಎಲ್ಲ ರಾಜ್ಯಗಳಲ್ಲಿ ಈ ಪಕ್ಷ ಹಿಂದುಳಿದ, ದಲಿತ ಮತ್ತು ಮುಸ್ಲಿಮ್ ಸಮುದಾಯಗಳ ಸಂಘಟಿತ ಶಕ್ತಿಯನ್ನು ಒಡೆದುಹಾಕಿಯೇ ರಾಜಕೀಯ ಲಾಭ ಪಡೆದಿರುವುದು. ಕರ್ನಾಟಕದಲ್ಲಿಯೂ ಇದು ಶುರುವಾಗಿದೆ.
Please follow and like us:
error