ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯಲ್ಲ-
ನಾ ದಿವಾಕರ

ಭಾರತದ ರಾಜಕಾರಣದಲ್ಲಿ ಮಣ್ಣಿನ ಮಕ್ಕಳಿಗೆ ಒಂದು ವಿಶೇಷ ಗೌರವ ಇದೆ. ಏಕೆಂದರೆ ಇದು ಕೃಷಿ ಆಧಾರಿತ ದೇಶ. 21ನೆಯ ಶತಮಾನದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಳ ನಡುವೆಯೂ ಭಾರತದ ಮೂಲ ಸ್ವರೂಪ ಬದಲಾಗಿಲ್ಲ. ಏಕೆಂದರೆ ಈ ದೇಶದ ಶೇ 60ರಷ್ಟು ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನೇ ಆಧರಿಸಿ ಜೀವನ ನಡೆಸುತ್ತಾರೆ. ಭಾರತದ ಪ್ರತಿಯೊಂದು ಭಾಷಿಕರಲ್ಲೂ, ಪ್ರತಿಯೊಂದು ಪ್ರದೇಶದಲ್ಲೂ ಕೃಷಿ ಆಧಾರಿತ ಹಬ್ಬಗಳನ್ನು ಆಚರಿಸುವುದನ್ನೂ ಗಮನಿಸಬಹುದು. ಗ್ರಾಮೀಣ ಭಾರತ ನೇರವಾಗಿ ಕೃಷಿಯನ್ನುಅವಲಂಬಿಸಿದರೆ, ನಗರೀಕೃತ ಭಾರತ ಪರೋಕ್ಷವಾಗಿ ಅವಲಂಬಿಸುತ್ತದೆ. ನಗರೀಕರಣ ಪ್ರಕ್ರಿಯೆ ಹೆಚ್ಚಾದಂತೆಲ್ಲಾ ಗ್ರಾಮೀಣ ಪ್ರದೇಶದಿಂದ ನಗರ/ಪಟ್ಟಣ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದ್ದರೂ ಇಂದಿಗೂ ಸಹ ನಗರ ಕೇಂದ್ರಿತ ಮಧ್ಯಮ ವರ್ಗದ ಜನತೆ ತಮ್ಮ ಮೂಲ ಬೇರುಗಳೊಂದಿಗೆ, ಗ್ರಾಮೀಣ ಕೃಷಿ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದು ಈ ವರ್ಗದ ಜನತೆ ಗ್ರಾಮಗಳಿಗೆ ಮರಳುವುದಿಲ್ಲವಾದರೂ, ಇವರ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಕೃಷಿ ಸಂಬಂಧಿತ ಚಟುವಟಿಕೆಗಳು ನೆರವಾಗುತ್ತಿರುವುದನ್ನೂ ಗಮನಿಸಬಹುದು.

ಆದರೆ ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಈ ಚಿತ್ರಣ ಹಲವು ಬದಲಾವಣೆಗಳನ್ನು ಕಂಡಿದೆ. ನವ ಉದಾರವಾದ ಮತ್ತು ಜಾಗತೀಕರಣ ಯುಗದ ಅಭಿವೃದ್ಧಿ ಪಥದಲ್ಲಿ ಕೃಷಿಯನ್ನೂ ಉದ್ಯಮ ಎಂದೇ ಪರಿಗಣಿಸಲಾಗುತ್ತದೆ. ಔದ್ಯಮಿಕ ಕ್ಷೇತ್ರದಲ್ಲಿ ಮಾರುಕಟ್ಟೆ ಅಧಿಪತ್ಯ ಸಾಧಿಸುವಂತೆಯೇ ಕೃಷಿ ಕ್ಷೇತ್ರದಲ್ಲೂ ಸಾಧಿಸಿದಲ್ಲಿ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಬಂಡವಾಳಶಾಹಿ ಧೋರಣೆ 21ನೆಯ ಶತಮಾನದಲ್ಲಿ ಎಲ್ಲೆಡೆ ವ್ಯಾಪಿಸಿದೆ. ಹಣಕಾಸು ಬಂಡವಾಳದ ಜಾಗತೀಕರಣ ಪ್ರಕ್ರಿಯೆಯಲ್ಲಿ ಕೃಷಿ ಭೂಮಿ ಜನಸಾಮಾನ್ಯರ ಜೀವನೋಪಾಯದ ಸಾಧನವಾಗುವುದಕ್ಕಿಂತಲೂ, ಮಾರುಕಟ್ಟೆಯ ಸರಕಿನಂತೆ ಬಳಕೆಯಾಗುತ್ತದೆ. ಕೃಷಿಯನ್ನೇ ನಂಬಿ ಬದುಕುವ ಕೋಟ್ಯಂತರ ಕುಟುಂಬಗಳಿಗೆ ಸುಸ್ಥಿರ ಬದುಕಿನ ಕಲ್ಪನೆ ಇರುತ್ತದೆ. ತಾವು ಸಂರಕ್ಷಿಸಿ ಕೂಡಿಟ್ಟ ಭೂಮಿಯ ಒಂದು ತುಂಡು ಮುಂದಿನ ಹಲವು ಪೀಳಿಗೆಗಳ ಜೀವನಾಧಾರವಾಗುತ್ತದೆ ಎನ್ನುವ ಉದಾತ್ತ ಚಿಂತನೆ ಇರುತ್ತದೆ. ಭಾರತದಲ್ಲಿ ಈ ಕಲ್ಪನೆಗೆ ಇಂದಿಗೂ ಒಂದು ವಾಸ್ತವಿಕ ಮೌಲ್ಯ ಇರುವುದನ್ನು ಗುರುತಿಸಬಹುದು.

ಆದರೆ ನವ ಉದಾರವಾದದ ಸಂದರ್ಭದಲ್ಲಿ ಸುಸ್ಥಿರ ಬದುಕಿನ ಪರಿಕಲ್ಪನೆಯೇ ಸಾಕಷ್ಟು ಬದಲಾಗಿದೆ. ಇಡೀ ಸಮಾಜೋ ಆರ್ಥಿಕ ವ್ಯವಸ್ಥೆಯನ್ನು ಕಾರ್ಪೋರೇಟ್ ಮಾರುಕಟ್ಟೆಯ ನಿರ್ವಹಣೆಗೆ ಒಳಪಡಿಸಿ, ಬಂಡವಾಳದ ಹರಿವು ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿ, ಭೂ ಗರ್ಭದಲ್ಲಿರುವ ಖನಿಜಗಳನ್ನೂ ಒಳಗೊಂಡಂತೆ ಸಮಸ್ತ ನೆಲ, ಜಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಮಾರುಕಟ್ಟೆಯ ಸರಕುಗಳಂತೆ ಬಳಸುವ ಮೂಲಕ ಒಂದು ಹೊಸ ಸಮಾಜವನ್ನು ನಿರ್ಮಿಸಲು ಈ ವ್ಯವಸ್ಥೆ ಶ್ರಮಿಸುತ್ತದೆ. ಈ ವ್ಯವಸ್ಥೆಯಲ್ಲಿ ತುಂಡು ಭೂಮಿ ಒಂದು ಕುಟುಂಬದ ಜೀವನೋಪಾಯಕ್ಕೆ ಆಧಾರವಾಗುವುದಕ್ಕಿಂತಲೂ ಮಾರುಕಟ್ಟೆಯಲ್ಲಿ ಬಿಕರಿಯಾಗಿ ನೂರಾರು ಜನಕ್ಕೆ ಹಂಚುವ ಸಂಪತ್ತನ್ನು ಸೃಷ್ಟಿಸುವ ಗಣಿಯಂತೆ ಕಾಣುತ್ತದೆ. ಆದರೆ ಈ ಹಂಚುವ ಪ್ರಕ್ರಿಯೆಯಲ್ಲಿ ಸುಸ್ಥಿರ ಬದುಕಿನ ಕಲ್ಪನೆ ಇರುವುದಿಲ್ಲ. ಇಂದು ನಾಳೆಗಳ ಯೋಚನೆ ಇರುವುದಿಲ್ಲ. ಸಂಪತ್ತಿನ ಸಾರ್ವತ್ರಿಕ ಒಡೆತನದ ಬದಲು ವೈಯಕ್ತಿಕ ಒಡೆತನಕ್ಕೆ ಪ್ರಾಶಸ್ತ್ಯ ಹೆಚ್ಚಾದಂತೆಲ್ಲಾ ಸಾರ್ವಜನಿಕ ಆಸ್ತಿಗಳೆಲ್ಲವೂ ಖಾಸಗಿ ಆಸ್ತಿಗಳಾಗಿ ಪರಿವರ್ತನೆಯಾಗುತ್ತವೆ. ಖಾಸಗಿ ಆಸ್ತಿ ತಲೆಎತ್ತಿದ ಕೂಡಲೇ ಮಾಲಿಕತ್ವದ ಪರಿಕಲ್ಪನೆ ಬೆಳೆದು, ಮಾಲಿಕನ ಹೊರತಾಗಿ ಉಳಿದವರೆಲ್ಲರೂ ತಮ್ಮ ಸ್ವಾಭಾವಿಕ ಹಕ್ಕುಗಳನ್ನೂ ಕಳೆದುಕೊಳ್ಳುತ್ತಾರೆ.

ಈ ಖಾಸಗಿ ಆಸ್ತಿಯ ಪರಿಕಲ್ಪನೆಯೇ ಬಡವ ಶ್ರೀಮಂತರ ನಡುವಿನ ಕಂದರವನ್ನು ಹಿಗ್ಗಿಸುತ್ತಾ ಹೋಗುವ ಒಂದು ತಂತ್ರ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾದಂತೆಲ್ಲಾ ಉಳುವವನು ಉಳ್ಳವರ ಬಳಿ ಅಂಗಲಾಚುವ ಪರಿಸ್ಥಿತಿ ಉದ್ಭವಿಸುತ್ತದೆ. ತನ್ನ ಬದುಕಿಗೆ ಆಸರೆಯಾಗುವ ತುಂಡು ಭೂಮಿ ಅನ್ಯರ ಪಾಲಾಗುವುದನ್ನು ಸಹಿಸಿಕೊಳ್ಳುತ್ತಲೇ ವ್ಯವಸಾಯಗಾರನು ಕ್ರಮೇಣ ಆ ತುಂಡು ಭೂಮಿಯಲ್ಲಿ ತನ್ನ ಜೀವನೋಪಾಯಕ್ಕೆ ಅವಶ್ಯವೆನಿಸುವ ಧಾನ್ಯಗಳನ್ನು ಬೆಳೆಯುವ ಹಕ್ಕುಗಳನ್ನೂ ಕಳೆದುಕೊಳ್ಳುತ್ತಾನೆ. ಏಕೆಂದರೆ ಭೂಮಿಯ ಮೇಲೆ ಒಡೆತನ ಸಾಧಿಸುವ ಉದ್ಯಮಿ ತನಗೆ ಬೇಕಾದ ಪದಾರ್ಥವನ್ನು ಬೆಳೆಯಲು ಇಚ್ಚಿಸುತ್ತಾನೆ. ತುಂಡು ಭೂಮಿಯನ್ನು ಕಳೆದುಕೊಳ್ಳುವ ಕೃಷಿಕ ತನ್ನ ಬದುಕು ಸವೆಸಲು ಅನ್ಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ನಗರಗಳಿಗೆ ವಲಸೆ ಹೋಗುವುದು ಒಂದು ಆಯ್ಕೆಯಾದರೆ, ತನ್ನ ಭೂಮಿಯಲ್ಲೇ ಕೂಲಿ ಮಾಡಿ ಬದುಕುವ ಮತ್ತೊಂದು ಆಯ್ಕೆ ಅವನೆದುರು ಇರುತ್ತದೆ. ಎರಡೂ ಆಯ್ಕೆಗಳು ಅವನಿಗೆ ಸುಸ್ಥಿರ ಬದುಕು ಕಲ್ಪಿಸುವುದಿಲ್ಲ. ಇದು ಅರಿವಾಗುವ ಹೊತ್ತಿಗೆ ಒಂದು ಪೀಳಿಗೆಯ ಬದುಕು ಕೊನೆಯಾಗಿರುತ್ತದೆ.

ಜೀನ್ಸ್ ಪ್ಯಾಂಟು ಧರಿಸಿರುವ, ಕಾರುಗಳಲ್ಲಿ ಓಡಾಡುವ ಶ್ರೀಮಂತ, ಮಧ್ಯಮ ವರ್ಗದ ರೈತರನ್ನು ಕಂಡು “ ಇವರೆಲ್ಲಾ ರೈತರೇ ” ಎಂದು ಲೇವಡಿ ಮಾಡುವ ನಗರವಾಸಿ ಮಧ್ಯಮ ವರ್ಗದ ಸುಶಿಕ್ಷಿತರಿಗೆ ಈ ರೈತರ ನಡುವೆಯೇ ಸ್ವಂತ ಭೂಮಿ ಇಲ್ಲದ, ತುಂಡು ಭೂಮಿಯನ್ನು ಹೊಂದಿರುವ, ಗೇಣಿ ವ್ಯವಸಾಯ ಮಾಡುವ ರೈತರೂ ಇರುತ್ತಾರೆ ಎನ್ನುವ ವಾಸ್ತವ ಅರಿವಾಗಬೇಕು. ಮನುಷ್ಯನ ಆರ್ಥಿಕ ಪರಿಸ್ಥಿತಿ ಮತ್ತು ಜೀವನಶೈಲಿಯಲ್ಲಿ ಸುಸ್ಥಿರತೆ ಕಂಡಕೂಡಲೇ ಆಧುನಿಕ ಜಗತ್ತಿನ ಬದುಕನ್ನು ಅನುಸರಿಸುವುದು ಸಹಜ. ಕೊಂಚ ಮಟ್ಟಿಗೆ ಭೂಮಿಯನ್ನು ಹೊಂದಿದ್ದು ಉಳುಮೆ ಮಾಡುವ ರೈತರು ನಗರಜೀವನದ ಆಧುನಿಕ ಶೈಲಿಯನ್ನು ಅನುಸರಿಸುವುದು ಅಪರಾಧವೇ ? ರೈತರ ಬಗ್ಗೆ ನಿಜವಾದ ಕಾಳಜಿ ಇರುವ ಸಮಾಜ, ಪ್ರತಿಯೊಬ್ಬ ರೈತನನ್ನೂ ಈ ರೂಪದಲ್ಲಿ ಕಾಣುವ ಉದಾತ್ತ ಬಯಕೆ ಹೊಂದಿದ್ದರೆ ಮಾತ್ರ ಅದನ್ನು ಒಂದು ನಾಗರಿಕ ಸಮಾಜ ಎಂದು ಪರಿಗಣಿಸಲು ಸಾಧ್ಯ. ಇಂದಿಗೂ ಜಾತಿ ಶ್ರೇಣೀಕರಣದ ಕುಲ ಕಸುಬಿನ ಪರಿಕಲ್ಪನೆಗೆ ಜೋತುಬಿದ್ದಿರುವ ಒಂದು ವರ್ಗದ ಜನರಿಗೆ ಈ ಸೂಕ್ಷ್ಮ ಅರಿವಾಗುತ್ತಿಲ್ಲ ಎನ್ನುವುದೇ ದುರಂತ.

ಇರಲಿ ಉತ್ತಮ ಬೆಂಬಲ ಬೆಲೆ, ಸಾಲ ಮನ್ನಾ ಮತ್ತು ರಸಗೊಬ್ಬರ , ಕೈಗೆಟುಕುವ ಬೆಲೆ ಹೀಗೆ ತಮ್ಮ ನಿತ್ಯ ಬದುಕಿನ ಅನಿವಾರ್ಯತೆಗಳಿಗಾಗಿ ನಿರಂತರ ಹೋರಾಟ ನಡೆಸುತ್ತಲೇ ಇರುವ ರೈತಾಪಿ ಸಮುದಾಯ ಒಂದು ದೇಶವ್ಯಾಪಿ ಆಂದೋಲನಕ್ಕೆ ಮುಂದಾಗಿರುವುದಾದರೂ ಏಕೆ ? ಇದು ಕೇವಲ ಪಂಜಾಬ್ ಮತ್ತು ಹರಿಯಾಣ ಪ್ರಾಂತ್ಯದ ರೈತರ ಆಂದೋಲನ ಅಲ್ಲ. ದೆಹಲಿ ಸಮೀಪ ಇರುವುದರಿಂದ ಈ ರಾಜ್ಯಗಳಿಂದ ಹೆಚ್ಚಿನ ರೈತರು ಭಾಗವಹಿಸುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದಲೂ ರೈತರು ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ದೇಶದ ಸಮಸ್ತ ರೈತಾಪಿ ವರ್ಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯ ವಿರುದ್ಧ ಒಕ್ಕೊರಲಿನಿಂದ ಹೋರಾಡುತ್ತಿದ್ದರೆ ಅದಕ್ಕೆ ಕಾರಣ, ಈ ಕಾಯ್ದೆಗಳು ಬಹುಸಂಖ್ಯೆಯ ರೈತರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿವೆ. ಭತ್ತ , ಗೋಧಿ, ಕಬ್ಬು ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು ಮಾರುಕಟ್ಟೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯ. ಏಕೆಂದರೆ ಬಂಡವಾಳ ವ್ಯವಸ್ಥೆ ಈ ವರ್ಗದ ಉತ್ಪಾದನೆಯ ನೆಲೆಗಳನ್ನು ಸುಲಭವಾಗಿ ಆಕರ್ಷಿಸುತ್ತದೆ. ಆದರೆ ಸಣ್ಣ ಹಿಡುವಳಿದಾರರು, ಗೇಣಿ ರೈತರು, ಭೂಹೀನ ಕೃಷಿಕರು ಮತ್ತು ಕೃಷಿಯನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಕೃಷಿ ಕಾರ್ಮಿಕರು ತಮ್ಮ ನೆಲೆ ಕಳೆದುಕೊಳ್ಳುತ್ತಾರೆ. ಭಾರತದ ಬಹುಪಾಲು ರಾಜ್ಯಗಳಲ್ಲಿ ಈ ರೈತಾಪಿಯ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿರುವುದು ವಾಸ್ತವ.

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನು ಜಾರಿಯಾದರೆ ದೇಶದ ಕೃಷಿ ಕ್ಷೇತ್ರದ ಮೂಲ ಸ್ವರೂಪವೇ ಬದಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಪಡಿಸುವುದಿಲ್ಲ, ರೈತರಿಗೆ ತಮ್ಮ ಫಸಲನ್ನು ಮಾರಾಟ ಮಾಡಲು ಮುಕ್ತ ಅವಕಾಶ ಇರುತ್ತದೆ, ಎಪಿಎಂಸಿ ರದ್ದತಿಯ ನಂತರ ದಲ್ಲಾಳಿಗಳ ಹಾವಳಿ ಇರುವುದಿಲ್ಲ ಇನ್ನೂ ಮುಂತಾದ ಆಶ್ವಾಸನೆಗಳು ಎಷ್ಟೇ ರೋಚಕವಾಗಿ ಕಂಡುಬಂದರೂ, ಸಣ್ಣ, ಅತಿ ಸಣ್ಣ ರೈತರು, ಲಾಭದಾಯಕವಲ್ಲದ ಕೃಷಿಯಲ್ಲಿ ತೊಡಗಿ ತಮ್ಮ ಜೀವನ ನಿರ್ವಹಣೆಗಾಗಿ ವ್ಯವಸಾಯ ಮಾಡುವ ರೈತರು ಮಾರುಕಟ್ಟೆ ಮತ್ತು ಬಂಡವಾಳದ ಕ್ರೂರ ಚೌಕಟ್ಟಿನಲ್ಲಿ ಸಿಲುಕಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಾರೆ. 1991ರ ಜಾಗತೀಕರಣದ ನಂತರ ಭಾರತದ ರೈತರು ಮಾರುಕಟ್ಟೆಗಾಗಿಯೇ ಬೆಳೆಯಲು ಆರಂಭಿಸಿದ ನಂತರ ಹೇಗೆ ಕಾರ್ಪೋರೇಟ್ ಕೃಷಿ ಉದ್ದಿಮೆಗಳು ಮತ್ತು ಬೀಜ-ರಸಗೊಬ್ಬರ ಕಂಪನಿಗಳ ನಿಯಂತ್ರಣಕ್ಕೊಳಪಟ್ಟಿದ್ದಾರೆ ಎನ್ನುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ಪ್ರಕ್ರಿಯೆಗೆ ಹೊಸ ಕೃಷಿ ಕಾಯ್ದೆಗಳು ಮತ್ತಷ್ಟು ಕ್ಷಿಪ್ರ ಚಾಲನೆ ನೀಡುತ್ತವೆ.

ತನ್ನ ಬದುಕಿಗಾಗಿ ಬೆಳೆಯುವ ರೈತ ಮಾರುಕಟ್ಟೆಗೆ ಬೆಳೆಯಬೇಕಾಗುತ್ತದೆ, ಮುಕ್ತ ಮಾರುಕಟ್ಟೆಯಲ್ಲಿ ಕಾರ್ಪೋರೇಟ್ ಉದ್ಯಮಿಗಳು ಬಯಸುವ ಬೆಳೆಗಳನ್ನೇ ತಾನೂ ಬೆಳೆಯಬೇಕಾದ ಅನಿವಾರ್ಯತೆಗೆ ರೈತ ಸಿಲುಕುತ್ತಾನೆ. ಸಾರ್ವಜನಿಕ ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆಯೂ ಈಗಾಗಲೇ ಜಾರಿಯಲ್ಲಿದ್ದು, ಉದ್ದಿಮೆದಾರರೇ ಬ್ಯಾಂಕುಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ . ಅಂದರೆ ಸಾಂಸ್ಥಿಕ ಸಾಲ ಸೌಲಭ್ಯಗಳ ಸ್ವರೂಪವೂ ಬದಲಾಗಲಿದ್ದು, ರೈತ ಸಮುದಾಯ ತನ್ನ ಅವಶ್ಯಕತೆಗಳನ್ನು ಪೂರೈಸಲು ಸಾಲ ಪಡೆಯಬೇಕಾದರೂ ಇದೇ ಕಾರ್ಪೋರೇಟ್ ನಿಯಂತ್ರಿತ ಹಣಕಾಸು ಸಂಸ್ಥೆಗಳ ಮೊರೆ ಹೋಗಬೇಕಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳನ್ನು ಸಗಟು ವ್ಯಾಪಾರದಲ್ಲಿ ಖರೀದಿಸುವ ಕಾರ್ಪೋರೇಟ್ ಉದ್ದಿಮೆಗಳು ತಮ್ಮ ಮಾರುಕಟ್ಟೆ ಉದ್ದಿಮೆಗೆ ಅಗತ್ಯವಾದ ವಸ್ತುವನ್ನೇ ಬೆಳೆಯಲು ಪ್ರಚೋದಿಸುತ್ತವೆ. ಆಹಾರ ಧಾನ್ಯ ಸಂಗ್ರಹಣೆಗೆ ಅವಕಾಶವಿಲ್ಲದ ಲಕ್ಷಾಂತರ ರೈತರು ತಮ್ಮ ಭೂಮಿಯಲ್ಲಿ ತಮಗೆ ಬೇಕಾದ ಬೆಳೆಯನ್ನು ಬೆಳೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇದು ನವ ಉದಾರವಾದಿ ಮಾರುಕಟ್ಟೆ ತಜ್ಞರ ದೀರ್ಘಕಾಲಿಕ ನೀಲನಕ್ಷೆ ಎನ್ನುವ ವಾಸ್ತವವನ್ನು ನಾವು ಇಂದೇ ಗ್ರಹಿಸಬಹುದಾಗಿದೆ. ಕೃಷಿ ಕ್ಷೇತ್ರದಲ್ಲಿ ಜಾಗತಿಕ ಬಂಡವಾಳದ ಪ್ರವೇಶದೊಂದಿಗೆ ರೈತಾಪಿ ವರ್ಗ ತನ್ನ ಫಸಲಿನ ಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತಲೇ ಕಾಲ ಕ್ರಮೇಣ ಭೂಮಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಮಾರುಕಟ್ಟೆಯ ಪ್ರಬಲ ಶಕ್ತಿಗಳು ತಮ್ಮ ಭದ್ರಕೋಟೆಗಳನ್ನು ನಿರ್ಮಿಸಿರುತ್ತವೆ.

ಭಾರತದ ಬಹುಪಾಲು ರೈತ ಚಳುವಳಿಗಳು ಭೂ ಹೋರಾಟವನ್ನು ನಿರ್ಲಕ್ಷಿಸಿ ಕೇವಲ ಕೃಷಿ ಚಟುವಟಿಕೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಹೋರಾಟಗಳನ್ನು ರೂಪಿಸಿಕೊಂಡು ಬಂದಿವೆ. ಮತ್ತೊಂದೆಡೆ ಎಡಪಕ್ಷಗಳನ್ನು ಹೊರತುಪಡಿಸಿದರೆ ಉಳಿದ ರೈತ ಸಂಘಟನೆಗಳು ಭೂಹೀನರ ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಅಷ್ಟಾಗಿ ಸ್ಪಂದಿಸಿಲ್ಲ ಎನ್ನುವುದೂ ವಾಸ್ತವ. ಇದು ಒಂದು ರೀತಿಯಲ್ಲಿ ರೈತ ಚಳುವಳಿಯ ದೌರ್ಬಲ್ಯವೂ ಆಗಿ ಪರಿಣಮಿಸಿರುವುದನ್ನು ಕಳೆದ ಮೂರು ದಶಕಗಳಲ್ಲಿ ಗಮನಿಸಬಹುದು. ಇಂದು ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ಹಕ್ಕೊತ್ತಾಯಗಳ ಹಿಂದೆ ಈ ದೌರ್ಬಲ್ಯದ ಛಾಯೆ ಇರುವುದನ್ನು ಗಮನಿಸಬಹುದಾದರೂ, ಕೃಷಿ ಮಸೂದೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಆಗ್ರಹವೇ ಸಮಸ್ತ ರೈತ ಸಮುದಾಯಕ್ಕೆ ಆಶಾದಾಯಕವಾಗಿ ಕಾಣುತ್ತದೆ. ಹಾಗಾಗಿಯೇ ಪ್ರಸ್ತುತ ಹೋರಾಟ ದೇಶವ್ಯಾಪಿಯಾಗಿ ರೂಪುಗೊಳ್ಳುತ್ತಿದೆ.

ಈ ಸಂದರ್ಭದಲ್ಲಿ ಭಾರತದ ರಾಜಕಾರಣದಲ್ಲಿ ಹೇರಳವಾಗಿ ಕಂಡುಬರುವ ಮಣ್ಣಿನ ಮಕ್ಕಳ ರಾಜಕೀಯ ನಿಲುವನ್ನು ನಾವಿಂದು ಪ್ರಶ್ನಿಸಬೇಕಿದೆ. ನಾಲ್ಕು ದಶಕಗಳ ಕಾಲ ರೈತರ ಪರ ಹೋರಾಟ ನಡೆಸಿ ರೈತ ನಾಯಕರೆಂದೇ ಹೆಸರಾಂತರಾಗಿ, ಹಸಿರು ಶಾಲುವನ್ನೇ ಲಾಂಛನವಾಗಿ ಬಳಸಿ ರಾಜಕೀಯ ಏಣಿಯನ್ನು ಹತ್ತುತ್ತಾ ಮುಖ್ಯಮಂತ್ರಿಯಾಗಿರುವ ಮಾನ್ಯ ಯಡಿಯೂರಪ್ಪನವರು, ಒಬ್ಬ ವ್ಯಕ್ತಿಯಾಗಿ, ರೈತಪರ ಹೋರಾಟಗಾರನಾಗಿ ಆತ್ಮಾವಲೋಕನ ಮಾಡಿಕೊಂಡಿದ್ದೇ ಆದರೆ, ತಮ್ಮ ರಾಜಕೀಯ ನೆಲೆ ತಾವೆಣಿಸಿದಷ್ಟು ಪವಿತ್ರವಲ್ಲ ಎಂದು ಗ್ರಹಿಸಬಹುದು. ಇಂದು ದೇಶಾದ್ಯಂತ ಕೇಳಿಬರುತ್ತಿರುವ ರೈತರ ದನಿ, ಆಕ್ರೋಶದ ನುಡಿಗಳು, ಆಕ್ರಂದನ ಮತ್ತು ಹಕ್ಕೊತ್ತಾಯದ ಧ್ವನಿ, ರೈತನಾಯಕರೂ ಆದ ಮಾನ್ಯ ಯಡಿಯೂರಪ್ಪನವರಿಗೂ ತಟ್ಟಿರಬೇಕು.

ನಾವು ಮಣ್ಣಿನ ಮಕ್ಕಳು ಎಂದು ಎದೆ ತಟ್ಟಿ ಹೇಳುವ ಯಾವುದೇ ರಾಜಕೀಯ ನಾಯಕರು ಈ ರೈತಾಪಿಯ ದನಿಗೆ ದನಿಯಾಗಿ ತಾವು ಪ್ರತಿನಿಧಿಸುವ ಅಥವಾ ಮುನ್ನಡೆಸುವ ಪಕ್ಷದ ನೀತಿಯನ್ನು ಪ್ರಶ್ನಿಸಬೇಕು. ಇಂದು ದೆಹಲಿಯ ಬಳಿ ನೆರೆದಿರುವ ರೈತರು ಸಂಘಟನಾತ್ಮಕ ಅಸ್ಮಿತೆಗಳನ್ನು ದಾಟಿ ಭೂಮಿಯ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಭಾರತದ ದುರಂತ ಎಂದರೆ ಜನಪರ ಹೋರಾಟಗಳು ಅಧಿಕಾರ ರಾಜಕಾರಣದ ಮೆಟ್ಟಿಲುಗಳಾಗಿ ಪರಿಣಮಿಸಿರುವುದೇ ಹೆಚ್ಚು. ದಲಿತ, ಆದಿವಾಸಿ, ರೈತ ಪರ ಹೋರಾಟಗಳು ಈ ಪ್ರವೃತ್ತಿಗೆ ಬಲಿಯಾಗಿವೆ. ಈಗ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಾತ್ವಿಕ ಹಿನ್ನೆಲೆ ಇದೆ. ಇದು ಅನ್ನ ಬೆಳೆಯುವ ರೈತನ ಅಳಿವು ಉಳಿವಿನ ಪ್ರಶ್ನೆ.

ತಾವು ರೈತನ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ರಾಜಕೀಯ ನೇತಾರರು ಈ ಹೋರಾಟನಿರತ ರೈತರ ದನಿಗೆ ದನಿಗೂಡಿಸಬೇಕು. ತಾವು ಕೃಷಿಕ ಸಮುದಾಯದ ಹಕ್ಕುಗಳಿಗೆ ಮಾನ್ಯತೆ ನೀಡುವುದೇ ಆದರೆ, ರೈತರು ಎದುರಿಸುತ್ತಿರುವ ಆತಂಕಗಳಿಗೆ ಸ್ಪಂದಿಸುವುದೇ ಆದರೆ ಈ ಹೊಸ ಕೃಷಿ ನೀತಿಯನ್ನು ಸಮ್ಮತಿಸುವ, ಸಮರ್ಥಿಸುವ ರಾಜಕೀಯ ಪಕ್ಷಗಳನ್ನು ತೊರೆದು ಹೊರಬರಬೇಕು. ತಾವೇ ಪಕ್ಷದ ಸಾರಥ್ಯ ವಹಿಸಿದ್ದಲ್ಲಿ ಕೃಷಿ ನೀತಿಯ ಬಗ್ಗೆ ತಮ್ಮ ಪಕ್ಷದ ಸ್ಪಷ್ಟ ನಿಲುವನ್ನು ಹೇಳಬೇಕು. ಮತ್ತು ರೈತರ ಹೆಸರಲ್ಲೇ ರಾಜಕೀಯ ಮಾಡುವುದಾದರೆ ಈಗ ನಡೆಯುತ್ತಿರುವ ಹೋರಾಟದಲ್ಲಿ ತಮ್ಮ ಪಕ್ಷವನ್ನು ಸಂಪೂರ್ಣವಾಗಿ ತೊಡಗಿಸಬೇಕು. ಇದು ಕರ್ನಾಟಕದ ದೇವೇಗೌಡರಿಂದ ಹರಿಯಾಣದ ಚೌತಾಲಾವರೆಗೂ ಅನ್ವಯಿಸುತ್ತದೆ.

ಈ ಸಂದರ್ಭದಲ್ಲೂ ತಮ್ಮ ಅಧಿಕಾರ ರಾಜಕಾರಣದ ಅನಿವಾರ್ಯತೆಗಳಿಗೋ, ಅಧಿಕಾರ ಪೀಠದ ವ್ಯಾಮೋಹಕ್ಕೋ ಅಂಟಿಕೊಂಡು ರೈತ ಸಮುದಾಯದೊಡನೆ ನಿಲ್ಲದಿದ್ದರೆ ಈ ಮಣ್ಣಿನ ಮಕ್ಕಳು ಮತ್ತು ಅವರ ಸಂತತಿ ಹಸಿರು ಶಾಲುಗಳನ್ನು ಬದಿಗಿಟ್ಟು ತಮ್ಮ ರಾಜಕೀಯ ಮಾಡುವುದು ಉಚಿತ. ಕೋಟ್ಯಂತರ ಸಂಖ್ಯೆಯಲ್ಲಿರುವ ಭೂತಾಯಿಯ ಮಡಿಲ ಮಕ್ಕಳ ದನಿಗೆ ದನಿಯಾಗದೆಯೇ ಹಸಿರು ಲಾಂಛನವನ್ನು ತಮ್ಮ ರಾಜಕೀಯ ಲಾಂಛನವನ್ನಾಗಿ ಬಳಸಿಕೊಳ್ಳುವ ಗೋಸುಂಬೆ ರಾಜಕಾರಣಕ್ಕೆ ರೈತ ಸಮುದಾಯವೂ ಮಾನ್ಯತೆ ನೀಡಕೂಡದು. ಭೂಮಿಯ ಹಕ್ಕುಗಳಿಗಾಗಿ ನಡೆಯುವ ಭೂ ಹೋರಾಟಗಳು ಕೃಷಿಕ ಸಮುದಾಯದ ಪಾಲಿಗೆ ಎಷ್ಟು ಮುಖ್ಯ ಎನ್ನುವುದನ್ನು ಇನ್ನಾದರೂ ರೈತ ಸಂಘಟನೆಗಳು ಮತ್ತು ಇತರ ಜನಪರ ಹೋರಾಟದ ಸಂಘಟನೆಗಳು ಗ್ರಹಿಸಬೇಕಿದೆ. ನವ ಉದಾರವಾದದ ಮಾರುಕಟ್ಟೆ ಕ್ರೌರ್ಯ ಮತ್ತು ಆಳುವ ವರ್ಗಗಳ ರಾಜಕೀಯ ಕ್ರೌರ್ಯದ ಜಂಟಿ ಕಾರ್ಯಾಚರಣೆಯನ್ನು ದೆಹಲಿಯಲ್ಲಿ ಕಾಣುತ್ತಿದ್ದೇವೆ. ಮಣ್ಣಿನ ಮಕ್ಕಳು ಇದನ್ನು ಗಮನಿಸಬೇಕಿದೆ.
-0-0-0-0-

Please follow and like us:
error