fbpx

ಕಾಲಾ ಎಂಬ ದೇಶದ ನೈಜ ಕಲಾಕೃತಿ…

-ರಾಹುಲ ಬೆಳಗಲಿ

ಕಲಾಕೃತಿಗೆ ಯಾವತ್ತೂ ಇಂಥದ್ದೇ ಚೌಕಟ್ಟು ಎಂಬುದು ಇರುವುದಿಲ್ಲ. ಕ್ಯಾನ್ವಾಸ್ ಮೇಲೆ ಬಗೆಬಗೆಯ ರೇಖೆಗಳು ಮತ್ತು ಬಣ್ಣಗಳು ಮಿಳಿತಗೊಂಡು ಸಿದ್ಧವಾಗುವ ಕಲಾಕೃತಿ ಅಂತಿಮ ಸ್ವರೂಪ ಪಡೆದ ಮರುಕ್ಷಣವೇ ಅದು ಕಲಾವಿದನ ಕಲ್ಪನೆಯಿಂದ ಬಿಡುಗಡೆಯಾಗುತ್ತದೆ. ಕಲಾವಿದನಿಗೆ ಕಲಾಕೃತಿ ಒಂದೇ ತೆರನಾಗಿ ಗೋಚರಿಸಿದರೆ, ಕಲಾಸಕ್ತರಿಗೆ ಅದು ಹಲವು ಅರ್ಥಗಳಲ್ಲಿ ಕಾಣಿಸುತ್ತದೆ. ಹಿರಿಯ ನಟ ರಜನಿಕಾಂತ್ ಅಭಿನಯದ “ಕಾಲಾ” ಚಿತ್ರ ಕೂಡ ಅಂಥದ್ದೇ ಒಂದು ಕಲಾಕೃತಿ!

ಭಾರತದ ಹಲವು ಬಣ್ಣಗಳನ್ನು ಪರಿಚಯಿಸುವ “ಕಾಲಾ” ಚಿತ್ರವು ಎರಡೂವರೆ ಗಂಟೆಯ
ಅವಧಿಯಲ್ಲಿ ಒಂದೊಂದು ಬಣ್ಣದ ಸಂಕೇತ ಮತ್ತು ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸುತ್ತದೆ. ಬಿಳಿ ಬಣ್ಣದೊಳಗಿನ ಅಹಂಕಾರ-ಕಪ್ಪು ಬಣ್ಣದೊಳಗಿನ ಸ್ವಾಭಿಮಾನ. ಬಿಳಿ ಮೈಯೊಳಗಿನ ಉನ್ನತ ಶಿಕ್ಷಣದ ದರ್ಪ-ಕಪ್ಪು ಮೈಯೊಳಗಿನ ಅನಕ್ಷರತೆ ಅಂಧಕಾರ. ಕಪ್ಪನೆಯ ಚುಕ್ಕಿ ಕಂಡರೂ ಅಸಹ್ಯಪಡುವಷ್ಟು ಬಿಳಿ-ಅಪಮಾನ ನುಂಗಿಕೊಂಡೇ ಬದುಕುವ ಕಪ್ಪು. ಹುಟ್ಟಿರುವುದೇ ಆಳ್ವಿಕೆ ನಡೆಸಲು ಎಂಬುದು ಬಿಳಿ ಬಣ್ಣದ ಸವರ್ಾಧಿಕಾರ-ಒಂದೇ ನೆಲದಲ್ಲಿ ನೋವು-ನಲಿವು ಹಂಚಿಕೊಂಡು ಬಾಳಿದರೆ ಸಾಕು ಎಂಬುದು ಕಪ್ಪು ಬಣ್ಣದ ಸಾರ್ಥಕಭಾವ. ವಿಕೃತಿಯನ್ನು ವಿಜೃಂಭಿಸುವ ಕೇಸರಿ-ಅದರ ವಿರುದ್ಧ ಸೆಣಸಾಡುವ ನೀಲಿ ಮತ್ತು ಕೆಂಪು. ಬಿಳಿ ಮೈಬಣ್ಣದವರ-ಉಡುಪಿನವರ ದಬ್ಬಾಳಿಕೆ-ದೌರ್ಜನ್ಯ ಎಷ್ಟೇ ನಡೆಯಲಿ, ಕೊನೆಗೆ ಕಪ್ಪು ಮೈಬಣ್ಣದವರ-ಕಪ್ಪು ಬಟ್ಟೆ ತೊಟ್ಟವರದ್ದೇ ಜಯ ಎಂಬ ಸಂದೇಶ. ಅದಕ್ಕೆ ನೀಲಿ ಮತ್ತು ಕೆಂಪು ಬಣ್ಣದ ಸಾಂಗತ್ಯ.

ಶತಮಾನಗಳಿಂದ ಇರುವ ಬಡವರು ಮತ್ತು ಶ್ರೀಮಂತರ ನಡುವಿನ ಸಂಘರ್ಷಕ್ಕೆ ಹೊಸ ವ್ಯಾಖ್ಯಾನ ನೀಡಲು ಯತ್ನಿಸಿರುವ ಈ ಚಿತ್ರವು ಬದಲಾಗುತ್ತಿರುವ ಜನರ ಜೀವನಶೈಲಿ ಮತ್ತು ಪರಿವರ್ತನೆಯ ಕಾಲಘಟ್ಟದಲ್ಲಿ ಭಾರತವು ಎದುರಿಸುತ್ತಿರುವ ಹೊಸ ಸವಾಲುಗಳನ್ನು ಸಣ್ಣಪುಟ್ಟ ದೃಶ್ಯಗಳ ಮೂಲಕ ತೋರಿಸುತ್ತದೆ. ಶ್ರೀಮಂತರ ಪಾಲಿಗೆ ಮುಂಬೈಯ ಧಾರಾವಿ ಎಂಬ ಕೊಳೆಗೇರಿಯು ಬೃಹತ್ ಕಟ್ಟಡ ಅಥವಾ ಮಾಲ್ ನಿಮರ್ಿಸಲು ಅತ್ಯಂತ ಫಲವತ್ತಾದ ಜಾಗದಂತೆ ಕಂಡರೆ, ಬಡವರ ಪಾಲಿಗೆ ಇಡೀ ಕೊಳಗೇರಿಯೇ ಒಂದು ಪುಟ್ಟ ಜಗತ್ತು. ಅಲ್ಲೇ ಹುಟ್ಟು, ಬದುಕು ಮತ್ತು ಸಾವು.

ಏಷ್ಯಾದಲ್ಲೇ ಅತ್ಯಂತ ವಿಶಾಲವಾದ ಕೊಳೆಗೇರಿಯಾದ ಧಾರಾವಿ ಆವರಣದಲ್ಲೇ ನಡೆಯುವ ಈ ಚಿತ್ರ ಜನರ ಸುಖ-ದುಃಖ, ನೋವು-ನಲಿವು, ಯಾತನೆ-ಸಂಭ್ರಮ ಎಲ್ಲವನ್ನೂ ಸಾಂಕೇತಿಕವಾಗಿ ತೋರಿಸುವುದರ ಜೊತೆಗೆ ಭವಿಷ್ಯದಲ್ಲಿ ತಲೆದೋರಲಿರುವ ಎಚ್ಚರಿಕೆಯನ್ನು ನೀಡುತ್ತದೆ. ಶೋಷಣೆ, ದಬ್ಬಾಳಿಕೆ ಮತ್ತು ದೌರ್ಜನ್ಯ ತಕ್ಕ ಉತ್ತರ ನೀಡಿ ಜನರು ತಮ್ಮ ಹಕ್ಕು-ಬದುಕಿಗಾಗಿ ಸಿಡಿದೆದ್ದರೆ, ಯಾವುದೂ ಸಹ ಉಳಿಯಲ್ಲ-ಉಳಿಯಲು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುತ್ತದೆ.

ಬಡವರ-ಶ್ರೀಮಂತರ ಅಸಮಾನತೆಯ ನೆರಳಿನಲ್ಲೇ ಕೆಲ ಭಿನ್ನತೆಯನ್ನು ಕಾಣಬಹುದು. ಒಂದು ದೃಶ್ಯದಲ್ಲಿ ಹರಿದಾದಾ ಅಭಯಂಕರ್ (ನಾನಾ ಪಾಟೇಕರ್) ತಮ್ಮ ಮೊಮ್ಮಗಳಿಗೆ ಕಾಲಾ (ರಜನಿಕಾಂತ್) ಕಾಲಿಗೆ ನಮಸ್ಕರಿಸಲು ಹೇಳಿದಾಗ, “ಬೇಡಮ್ಮ, ನೀನು ಕಾಲಿಗೆ ನಮಸ್ಕರಿಸುವುದು ಬೇಡ. ನಮಸ್ಕಾರ ಹೇಳಿದರೆ ಸಾಕು” ಎಂದು ಮೊಮ್ಮಗಳನ್ನು ಕಾಲಾ ವಾಪಸ್ ಕಳುಹಿಸುತ್ತಾರೆ. ಮತ್ತೊಂದು ದೃಶ್ಯದಲ್ಲಿ ಅಧಿಕಾರಿಗಳು ಮತ್ತು ಬೇರೆ ಬೇರೆ ಜನರು ತಮ್ಮ ಕಾಲಿಗೆ ಬಿದ್ದು ನಮಸ್ಕಾರ ಹೇಳುತ್ತಿರುವಾಗ, ಕಟ್ಟಡ ವಿನ್ಯಾಸಗಾತರ್ಿ ಝರೀನಾ (ಹುಮಾ ಖುರೇಷಿ) ಯಾಕೆ ಕಾಲಿಗೆ ನಮಸ್ಕರಿಸುತ್ತಿಲ್ಲ ಎಂಬ ಸಿಟ್ಟು ಹರಿದಾದಾಗೆ ಬರುತ್ತೆ.

ಧಾರಾವಿ ಕೊಳೆಗೇರಿಯನ್ನು ಸಂಪೂರ್ಣವಾಗಿ ಕೆಡವಿ ಹಾಕಿ ಕಟ್ಟಡ ನಿಮರ್ಿಸುವ, ಆಸ್ಪತ್ರೆ ಕಟ್ಟುವ, ಅಪಾರ್ಟಮೆಂಟ್ ತಲೆಯೆತ್ತುವಂತೆ ಮಾಡುವುದರ ಕುರಿತು ನೀಲನಕ್ಷೆ ಪ್ರದಶರ್ಿಸುತ್ತಿರುವ ವೇಳೆ ಗಾಲ್ಫ್ ಮೈದಾನದ ಬಗ್ಗೆಯೂ ಪ್ರಸ್ತಾಪವಾಗುತ್ತದೆ. ಅದಕ್ಕೆ ಯುವಕನೊಬ್ಬ, “ನಾವೆಲ್ಲರೂ ಕಬ್ಬಡ್ಡಿ, ಫುಟ್ಬಾಲ್, ಕ್ರಿಕೆಟ್ ಆಡುವವರು. ಗಾಲ್ಫ್ ಮೈದಾನ ಯಾಕೆ” ಎಂದು ಪ್ರಶ್ನಿಸಿದಾಗ, “ಹೈಕ್ಲಾಸ್
ಜನರಿಗೆ ಗಾಲ್ಫ್ ಮೈದಾನ ಬೇಕು ಎಂಬ ಉತ್ತರ ಸಿಗುತ್ತದೆ. ಇದು ಅಲ್ಲಿನ ಜನರನ್ನು ಕಂಗೆಡಿಸುತ್ತದೆ. ಇಡೀ ಕಟ್ಟಡ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಅಲ್ಲಿಂದ ಹೊರಟುಬಿಡುತ್ತಾರೆ.

ಶ್ರೀಮಂತರ ಮನ ತಣಿಸಲು, ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಮತ್ತು ಇಡೀ ಪ್ರದೇಶದ ಸ್ವರೂಪವನ್ನು ಬದಲು ಮಾಡುವುದಕ್ಕೆ ರೂಪಿಸಲಾದ ಯೋಜನೆಯನ್ನು ವಿರೋಧ ವ್ಯಕ್ತಪಡಿಸಿದ ಮತ್ತು ಅಡ್ಡಿಪಿಸಿದ ಏಕೈಕ ಕಾರಣಕ್ಕೆ ಧಾರಾವಿ ಕೊಳೆಗೇರಿಯ ಜನರು ಪಡುವ ಯಾತನೆ ಅಷ್ಟಿಷ್ಟಲ್ಲ. ಒಂದೆಡೆ ಅವರ ಮನೆಗಳು ಬೆಂಕಿಗೆ ಆಹುತಿಯಾದರೆ, ಮತ್ತೊಂದೆಡೆ ವಿದ್ಯುತ್ ಪೂರೈಕೆಯಿಲ್ಲದೇ ಕತ್ತಲಲ್ಲೇ ಕಾಲ ಕಳೆಯಬೇಕಾಗುತ್ತದೆ. ಅತ್ತ ನೀರಿನ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ, ಇತ್ತ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗುತ್ತದೆ. ಅಶಕ್ತರಾದ ಈ ಜನರನ್ನು ಇಲ್ಲಿಂದ ಒದ್ದೋಡಿಸಲು ಶಕ್ತಿವಂತರೆಲ್ಲ ಒಂದಾಗುತ್ತಾರೆ. ಆಪ್ತರು ಮತ್ತು ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡರೂ ಮತ್ತು ಸ್ವತಃ ತಮ್ಮ ಪ್ರಾಣಕ್ಕೆ ಕುತ್ತು ಬಂದರೂ ಜನರು ಅಲ್ಲಿಂದ ಕದಲುವುದಿಲ್ಲ. ಕಾರಣ, ಅವರಿಗೆ ಆ ಇಡೀ ಕೊಳೆಗೇರಿಯೇ ಸರ್ವಸ್ವ ಮತ್ತು ಜೀವಾಳ.

ಧಾರಾವಿ ಬದುಕು-ಬವಣೆ ಮಧ್ಯೆ ಇಲ್ಲಿ ರಜನಿಕಾಂತ್ (ಕಾಲಾ) ಕೊಂಡಿಯಿದ್ದಂತೆ. ಯಾವುದೇ ಪಕ್ಷ ಅಥವಾ ಸಂಘಟನೆಯಿಲ್ಲದ ಒಬ್ಬ ನಾಯಕ. ಆ ಕಾಲಾಗೆ ಇಡೀ ಕುಟುಂಬವೇ ಒಂದು ಶಕ್ತಿಯಿದ್ದಂತೆ. ಅಲ್ಲಿನ ನಿವಾಸಿಗಳೆಲ್ಲ ಸ್ನೇಹಿತರು-ಸಂಬಂಧಿಕರು. ಅವರೊಂದಿಗೆ ಸೇಂದಿ ಕುಡಿಯುವ, ಸಿಗರೇಟು ಸೇದುವ, ನಕ್ಕುನಲಿಯುವ, ಹಾಡುತ್ತ-ಕುಣಿಯುವುದರ ಜೊತೆಜೊತೆಗೆ ಪ್ರಾಣ ಕಳೆದುಕೊಳ್ಳಲು ಸಹ ಹೆದರುವುದಿಲ್ಲ. ಆ ಜನರ ಸಲುವಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡು ಗಾಢ ನೋವು ಅನುಭವಿಸಿದರೂ ಜನರ ಸಲುವಾಗಿ ಶ್ರೀಮಂತಿಕೆ-ಸರ್ವಾಧಿಕಾರಿ ಎದುರು ಎಂದಿಗೂ ರಾಜಿಯಾಗಲ್ಲ. ಆತನಿಗೆ ಕಪ್ಪು ಬಣ್ಣದ ಮೇಲೆ ಹೆಚ್ಚು ಪ್ರೀತಿ.

ಹರಿದಾದಾ ಅಭಯಂಕರ್ದ್ದು (ನಾನಾ ಪಾಟೇಕರ್) ತಣ್ಣನೆಯ ಕ್ರೌರ್ಯ ಉಳಿದವರ ರಕ್ತ ಬಿಸಿ ಮಾಡುತ್ತದೆ. ಮುಂಬೈಯ ಅತ್ಯಂತ ಪ್ರಭಾವಿ ವ್ಯಕ್ತಿಯ ಪಾತ್ರವನ್ನು ನಿಭಾಯಿಸಿರುವ ಹರಿದಾದಾ ತನ್ನ ವಿರೋಧಿಯನ್ನು ಮನೆಯಲ್ಲಿ ತನ್ನ ಕೈಯಾರೆ ಕೊಲೆ ಮಾಡಲು ಸಹ ಹೇಸುವುದಿಲ್ಲ. ಸಾಂವಿಧಾನಿಕ ಅಧಿಕಾರದಲ್ಲಿ ಇರದಿದ್ದರೂ ಮುಖ್ಯಮಂತ್ರಿ, ಸಚಿವ ಮತ್ತು ಶಾಸಕರ ಮೇಲೆಯಲ್ಲದೇ ಇಡೀ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾನೆ. ವೈಫಲ್ಯತೆ, ಪ್ರತಿವಾದ, ಪ್ರತ್ಯುತ್ತರ ಆತನನ್ನು ಕಂಗೆಡಿಸುತ್ತದೆ. ಶ್ವೇತ ಬಣ್ಣದ ವಿಪರೀತ ವ್ಯಾಮೋಹಿ. ಅದಕ್ಕಾಗಿ ಆತನ ವಸ್ತುಗಳೆಲ್ಲ ಬಿಳಿ.

ಕಾಲಾ ಪತ್ನಿಯಾಗಿ ಕರ್ಪೂರವಲ್ಲಿ (ಈಶ್ವರಿ ರಾವ್), ಕಾಲಾ ಪ್ರಿಯತಮೆಯಾಗಿ ಜರೀನಾ (ಹುಮಾ ಖುರೇಷಿ), ಮರಾಠಿ ಯುವತಿಯಾಗಿ ಅಂಜಲಿ ಪಾಟೀಲ (ಪಾಯಲ್), ಕಾಲಾ ಆಪ್ತಸ್ನೇಹಿತನಾಗಿ ವಾಲಿಯಪ್ಪ (ಸಾಮುಕಾರ್ತಿಕನ್), ಕಾಲಾ ಮಗ ಲೆನಿನ್ (ಮಣಿಕಂಠನ್) ಗಮನ ಸೆಳೆಯುತ್ತಾರೆ. ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಂತೋಷ ನಾರಾಯಣ (ಸಂಗೀತ ನಿರ್ದೇಶಕ) ಮತ್ತು ಪಿಎ.ರಂಜೀತ್ (ನಿರ್ದೇಶಕ) ಚೆನ್ನಾಗಿದೆ. ರಜನಿಕಾಂjತ್ ಅಳಿಯಾ ಧನುಷ್ (ನಿರ್ಮಾಪಕ).

ರಜನಿಕಾಂತ್ ಸ್ಟೈಲ್, ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡವರಿಗೆ ಈ ಚಿತ್ರ ನಿರಾಸೆ ಮೂಡಿಸುವುದಿಲ್ಲ.

ಚಿತ್ರ ನೋಡಿ ಚಿತ್ರಮಂದಿರ ಹೊರ ಬರುವ ವೇಳೆಗೆ ಮನದಲ್ಲಿ ಒಂದು ಸಾಲು ಮೂಡದೇ ಇರುವುದಿಲ್ಲ.

Black is beautiful…

-ರಾಹುಲ ಬೆಳಗಲಿ

Please follow and like us:
error
error: Content is protected !!