ಕಲ್ಪನಾ ಚಾವ್ಲಾಗೆ ಒಂದು ಆತ್ಮೀಯ ಪತ್ರ…..

(ಕಲ್ಪನಾ ಚಾವ್ಲಾ ಗಗನಯಾತ್ರೆ ಕೈಗೊಂಡು ಇಂದಿಗೆ (2003 ಜನವರಿ 16) 15 ವರ್ಷ.)

ರಾಹುಲ ಬೆಳಗಲಿ

ನಾನಾಗ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿ.ಆಕೆಯ ಗಗನಯಾನದ ಬಗ್ಗೆ ತುಂಬಾ ಕುತೂಹಲವಿತ್ತು. ಆದರೆ ಆಕೆಯ ದುರಂತ ಅಂತ್ಯವಾಗಿದ್ದು ತುಂಬಾ ಬೇಸರ ಮೂಡಿಸಿತ್ತು. ಆಗ ಒಬ್ಬ ವಿದ್ಯಾರ್ಥಿಯಾಗಿ ಮತ್ತು ಅಭಿಮಾನಿಯಾಗಿ ಏಕವಚನದಲ್ಲಿ ಪತ್ರ ಬರೆದಿದ್ದೆ. ಆಗ ನಮ್ಮ ವಿಭಾಗವು ಪ್ರಕಟಿಸುತ್ತಿದ್ದ ವಿದ್ಯಾಸಮಾಚಾರದಲ್ಲಿ ಪ್ರಕಟವಾಯಿತು. ಕೆಲ ತಿಂಗಳುಗಳ ಬಳಿಕ ಉದಯವಾಣಿಯ ಮಹಿಳಾ ಸಂಪದದಲ್ಲೂ ಪ್ರಕಟವಾಯಿತು. ಮನೆಯಲ್ಲಿ ಯಾವುದೋ ಕಾರಣಕ್ಕೆ ಹುಡುಕಾಟ ನಡೆಸಿದಾಗ, ಆ ಪತ್ರ ಮತ್ತೆ ಸಿಕ್ಕಿತು. ಇವತ್ತು ಜನವರಿ 16. 15 ವರ್ಷ ಹಿಂದಿನ ನೆನಪು ಮರುಕಳಿಸಿತು)

ಪ್ರೀತಿಯ ಕಲ್ಪನಾ,

ಎಷ್ಟೋ ಸಲ ನಿನಗೆ ಪತ್ರ ಬರೆಯಬೇಕು ಅಂದ್ಕೊಂಡಿದ್ದೆ. ಆದರೆ ಅದೇ ಸಮಯಕ್ಕೆ ಯಾವುದಾದರೂ ಕೆಲಸ ಅಡ್ಡ ಬಂದುಬಿಡೋದು. ಅದು-ಇದು ಅಂತ ಮುಂದೆ ಹಾಕುತ್ತ ಬಂದಂತೆ ನೋಡೀಗ, ಯಾವ ಪರಿಸ್ಥಿತಿಯಲ್ಲಿ ಪತ್ರ ಬರೆಯುತ್ತಿದ್ದೇನೆ. ನೀ ನಮ್ಮನ್ನೆಲ್ಲ ಬಿಟ್ಟು, ಇನ್ನೊಂದು ಗ್ರಹದಲ್ಲಿ ಇರುವಾಗ, ನಾನು ಪೆನ್-ಪೇಪರ್ ಹಿಡಿದಿದ್ದೇನೆ. ನೀ ಇರುವ ಕಡೆ ಪೋಸ್ಟ್ ಆಫೀಸ್, ಕೋರಿಯರ್ ಇದೆಯೋ, ಇಲ್ವೊ ಗೊತ್ತಿಲ್ಲ. ಆದರೂ ಪತ್ರ ಬರೆಯುತ್ತಿದ್ದೇನೆ. ಹೇಗಾದರೂ ಮಾಡಿ, ಈ ಪತ್ರ ಓದುವುದು ನಿನ್ನ ಜವಾಬ್ದಾರಿ.

In this Feb. 1, 2003 file photo, debris from the space shuttle Columbia streaks across the sky over Tyler, Texas. (AP Photo/Dr. Scott Lieberman, File)

ಪ್ರತಿ ವರ್ಷ ನೀನು ಕಲಿತ ಶಾಲೆಯಿಂದ ಇಬ್ಬರು ವಿದ್ಯಾಥರ್ಿಗಳನ್ನು ‘ನಾಸಾ’ಕ್ಕೆ ಕರೆದೊಯ್ಯುತ್ತಿದ್ದೆ. ಅವರಿಬ್ಬರನ್ನು “ನನ್ನ ದೇಶದವರು” ಎಂದು ಹೆಮ್ಮೆಯಿಂದ ಅಮೆರಿಕದವರ ಎದುರು ಸಾರಿ ಸಾರಿ ಹೇಳುತ್ತಿದ್ದೆ. ಅಮೆರಿದಲ್ಲಿ ನೆಲೆ ಸಿಕ್ಕ ಕೂಡಲೇ “ಭಾರತ ನನ್ನ ದೇಶವೇ” ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವವರಿಂದ ದೂರ ಉಳಿದು, ನಿಜವಾದ ಭಾರತೀಯಳು ಎನ್ನಿಸಿಕೊಂಡೆ. “ನಾಸಾ” ಕೇವಲ ಕಲ್ಪನೆಯಾಗಿದ್ದ ನಮಗೆ, ಅಲ್ಲಿ ಭಾರತೀಯರಿಗೂ ಪ್ರವೇಶವಿದೆ. ಅವರದ್ದೇ ಬುದ್ಧಿಶಕ್ತಿಯಿಂದ ಅದಕ್ಕೆ ಮೆರುಗು ಬಂದಿದೆ ಎಂದು ತೋರಿಸಿಕೊಟ್ಟೆ.

ನಿನ್ನ ಅಪ್ಪ ಬಯಸಿದಂತೆ ನೀನು ವೈದ್ಯೆಯಾಗಲಿಲ್ಲ. ಆದರೆ ಅವರ ನಿರೀಕ್ಷೆಗೂ ಮೀರಿ ಬೆಳೆದುಬಿಟ್ಟೆ. ಚಂದ್ರ, ನಕ್ಷತ್ರ ಬಗ್ಗೆ ಮಾತನಾಡುತ್ತಿದ್ದ ಹುಡುಗಿಯರನ್ನು ಕಂಡು ನಗುತ್ತಿದ್ದವರ ಬಾಯಿ ಮುಚ್ಚಿಸಿದೆ. ವೈದ್ಯೆಯಾಗುವುದೇ ದೊಡ್ಡ ಹುದ್ದೆಯೆಂದು ಹೇಳುತ್ತಿದ್ದವರಿಗೆ ಸರಿಯಾದ ಉತ್ತರ ನೀಡಿ, ಗಗನಯಾತ್ರಿಯಾದೆ. “ಆಕೆಯೇನ್ರಿ ಮಾಡ್ತಾಳೆ? ಅಡುಗೆ ಮನೆಯಲ್ಲಿ ಕೆಲಸ ಮಾಡಿದ್ರೇನೆ ದೊಡ್ಡದು” ಎಂಬ ಪುರುಷ ಪ್ರಧಾನ ಸಮಾಜಕ್ಕೆ ಮಹಿಳೆ ಅಂದ್ರೆ ಯಾರು ಎಂಬುದನ್ನು ತೋರಿಸಿಕೊಟ್ಟೆ. ಇನ್ಮುಂದೆ ಹೀಗೆಲ್ಲ ಮಾತನಾಡದಂತೆ ಅವರ ಮಾನಸಿಕತೆಗೆ ಎಚ್ಚರಿಕೆಯೂ ನೀಡಿದೆ. ರಾಕೇಶ ಶಮರ್ಾ ಬಳಿಕ ಭಾರತೀಯರು ಗಗನ ಯಾತ್ರಿಯ ಕನಸು ಕೈಬಿಟ್ಟಾಗ, ನೀನು ಗಗನಕ್ಕೆ ಎರಡು ಸಲ ಪ್ರಯಾಣಿಸಿದೆ. ಸಾಹಸದ ಸಾಧನೆ ಮಾಡಿದೆ. ಭಾರತ ಹಿಂದುಳಿದ ರಾಷ್ಟ್ರವಿರಬಹುದು. ಆದರೆ ಅಲ್ಲಿ ವಾಸಿಸುವವರು ಹಿಂದುಳಿದವರಲ್ಲ ಎಂಬ ಸಂದೇಶ ಜಗತ್ತಿಗೆ ನೀಡಿದೆ. “ಓ ಚಂದ್ರವೇ, ನೀನು ಅದೆಷ್ಟು ಬೆಳ್ಳಗಿದ್ದಿ. ಕಲ್ಪನಾ ಅಲ್ಲಿ ಬರುತ್ತಾಳೆ” ಎಂದು ಚಂದ್ರನಿಗೆ ಸೂಚನೆ ಸಹ ಕೊಟ್ಟೆ.

ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನ ಶಾಲೆಯಲ್ಲಿ ಕಲಿಯುತ್ತಿರುವಾಗಲೇ, ನೀನು ಆಕಾಶ, ನಕ್ಷತ್ರ ಬಗ್ಗೆ ಆಸಕ್ತಿ ವಹಿಸಲು ಶುರು ಮಾಡಿದೆ. ಬಾಹ್ಯಾಕಾಶದ ಶಿಕ್ಷಣ ಪಡೆದು ಅದರಲ್ಲೇ ಮುಂದುವರೆಯಲು ದೃಢ ಮನಸ್ಸಿನಿಂದ ನಿಶ್ಚಯಿಸಿದೆ. ಅದರಂತೆಯೇ 1982ರಲ್ಲಿ ಚಂಡೀಗಡನ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದೆ. ಪ್ರತಿಷ್ಠಿತ ಐಐಟಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ನೀ ಬಯಸಲಿಲ್ಲ. ಹಲವು ಹುಡುಗರ ಜೊತೆ ನೀನು ಒಬ್ಬಳೇ ವೈಮಾನಿಕ ಎಂಜಿನಿಯರಿಂಗ್ ಕ್ಲಾಸ್ ಕೂರುತ್ತಿದ್ದೆ. ಆ ಕಾಲೇಜಿನಿಂದ ಡಿಗ್ರಿ ಕೂಡ ಪಡೆದೆ.

ನಂತರ, ನೀನು ಅಮೆರಿಕಗೆ ಹಾರಿಬಿಟ್ಟೆ. ಅಲ್ಲಿಂದ ನಿನ್ನ ಕಡೆಯಿಂದ ಯಾವ ಸುದ್ದಿಯೂ ಬರಲಿಲ್ಲ. ಅಲ್ಲಿಯೂ ಸಹ ಶಿಕ್ಷಣ ಮುಂದುವರೆಸಿದ್ದಿ ಎಂಬುದು ತಡವಾಗಿ ಗೊತ್ತಾಯಿತು. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮತ್ತು ಕೊಲಂಬೊ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡಿದ್ದು ಗೊತ್ತಾಗಿ ಖುಷಿಯಾಯಿತು. ನೀನು 1995ರಲ್ಲಿ ನಾಸಾ ಸೇರಿದ್ದು ಗೊತ್ತಾಗಿ ಹೆಮ್ಮೆಯಾಯಿತು.

ನೀನು ಯಾವತ್ತೂ ಸುದ್ದಿಯಾಗಲು ಬಯಸುತ್ತಿರಲಿಲ್ಲ. ಆದರೆ ಸುದ್ದಿಯೇ ನಿನ್ನ ಹುಡುಕಿಕೊಂಡು ಬಂತು. 1997ರ ನವೆಂಬರ್ 19ರಂದು ನೀನು ಮೊದಲನೇ ಸಲ ಸ್ಪೇಸ್ ಶಟಲ್ ಎಸ್ಟಿಎಸ್-87ರಲ್ಲಿ ಹೋಗುತ್ತಿರುವ ವಿಷಯ ಗೊತ್ತಾಯಿತು. ನೀನು ಹೋಗುವ ಬಗ್ಗೆ ನಮ್ಮ ದಿನಪತ್ರಿಕೆ, ವಾರಪತ್ರಿಕೆಗಳು ನಿನ್ನ ಬಗ್ಗೆ ಲೇಖನ ಬರೆದಿದ್ದೇ ಬರೆದಿದ್ದು. ನಿಜಕ್ಕೂ, ನೀನು ಆಗ ಭಾರತದಲ್ಲಿ ಇದ್ದಿದ್ದರೆ, ನಿನಗೆ ಆಶ್ಚರ್ಯ ಆಗೋದು. ಏಕೆಂದರೆ, ನೀನು ಅಂತಿಂಥ ಸಾಧನೆ ಮಾಡಿರಲಿಲ್ಲ. ನೀನು ಮೊದಲ ಭಾರತೀಯ ಗಗನಯಾತ್ರಿಯಾಗಿದ್ದೆ. ಇದರ ಬಗ್ಗೆ ಯಾರೂ ಯೋಚನೆ ಸಹ ಮಾಡಿರಲಿಲ್ಲ.

ನೀನು ಮೊದಲ ಬಾರಿ ಗಗನಕ್ಕೆ ಹೋದಾಗ, ನನಗೆ ತುಂಬಾ ಗಾಬರಿಯಾಗಿತ್ತು. ನೀ ಮರಳಿ ಬರುವೆ ಅಂತ ಖಾತ್ರಿಯಿತ್ತು. ಎರಡನೇ ಬಾರಿ ಗಗನಕ್ಕೆ ಹೋದಾಗಲೂ ನೀ ಮರಳಿ ಬರುವೆ ಅಂತ ನಂಬಿಕೆಯಿತ್ತು. ಆದರೂ ಮನಸ್ಸಿನಲ್ಲಿ ಯಾಕೋ ಗಲಿಬಿಲಿ. ಸಮಾಧಾನ ಇಲ್ಲದಂತೆ. ನೀನು ಗಗನಕ್ಕೆ ಹೋಗಿ, ಆಗಲೇ 16 ದಿನಗಳು ಕಳೆದಿದ್ದವು. ಇವತ್ತು ನೀ ಭೂಮಿಗೆ ಮರಳುವ ಕೊನೆಯ ದಿನವೆಂದು ಟಿವಿ ಹಚ್ಚಿಕೊಂಡು ಅದರ ಎದುರು ಕೂತೆ. ಭೂಮಿ ಮೇಲೆ ನೀ ಹೆಜ್ಜೆಯಿಡಲು ಇನ್ನೇನೂ ಎಂಟೇ ನಿಮಿಷ. ಕಾತರದಿಂದ ಕಾಯುವಷ್ಟರಲ್ಲಿ… ನಾನು ಅಂದ್ಕೊಂಡಂತೆ ಯಾವುದೂ ನಡೆಯಲಿಲ್ಲ. ಇರಲಿ, ಇದರ ಬಗ್ಗೆ ಮುಂದೆ ಮಾತನಾಡೋಣ.

ನೀನು ಆಕಾಶಕ್ಕೆ ಹೋಗಬೇಕು, ಚಂದ್ರನನ್ನ ನೋಡಬೇಕು, ಅದರ ಮೇಲೆ ಹೆಜ್ಜೆ ಇಡಬೇಕು ಅಂತ ಯಾವಾಗಲೂ ಬಯಸುತ್ತಿದ್ದೆ. ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದೆ. ಅದಕ್ಕೆ ಅಪ್ಪ, “ನಿನ್ನ ಖುಷಿಯೇ, ನನ್ನ ಖುಷಿಯಮ್ಮ” ಎಂದು ನೀ ನಿರೀಕ್ಷಿಸಿದಂತೆಯೇ ಶಿಕ್ಷಣ ಕೊಡಿಸಿದರು. ನೀನು ತುಂಬಾ ಜಾಣೆ. ಎಲ್ಲವನ್ನೂ ಬೇಗಬೇಗನೇ ಕಲಿತುಬಿಟ್ಟೆ. ವಿಮಾನ ಹಾರಿಸುವ ಲೈಸೆನ್ಸ್ ಸಹ ಸಿಕ್ಕಿಬಿಟ್ಟಿತು. ವಿಮಾನದಲ್ಲಿ ಹಾರುತ್ತ, ನೀ ಅಮೆರಿಕ ತಲುಪಿಬಿಟ್ಟೆ.

ಮೊನ್ನೆ ನಿನ್ನ ಟೀಚರ್ ಹೇಳ್ತಾ ಇದ್ದರು. ನೀನು ತುಂಬಾ ಜಾಣೆ ಅಂತೆ. ಓದಿನಲ್ಲಿ ತುಂಬಾ ಮುಂದೆ ಅಂತೆ. ಏನೇ ಕೆಲಸ ಇರಲಿ-ಬಿಡಲಿ, ಹೋಮ್ ವಕರ್್ ಸಿದ್ಧಪಡಿಸಿಕೊಂಡು, ತೋರಿಸುವುದು ಒಂದು ದಿನವೂ ತಪ್ಪಿಸಲಿಲ್ಲವಂತೆ. “ಕಲ್ಪಾನಗೆ ಶಾಲೆ ಪಾಠಗಳು ಅಲ್ಲದೇ ಹೊರಗಿನ ಚಟುವಟಿಕೆಗಳ ಬಗ್ಗೆ ತುಂಬಾ ಆಸಕ್ತಿಯಿತ್ತು. ಬೆಟ್ಟ ಹತ್ತುವುದು, ಕಾಡುಪ್ರಾಣಿಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ ಆಕೆಗೆ ತುಂಬಾ ಇಷ್ಟ. ನಿಸರ್ಗವು ಆಕೆಗೆ ತುಂಬಾ ಖುಷಿ ಕೊಡುತಿತ್ತು” ಎಂದು ನಿನ್ನ ದೊಡ್ಡಣ್ಣ ಸಂಜಯ್ ಟಿವಿಯಲ್ಲಿ ಹೇಳ್ತಾ ಇದ್ದ. ಆ ಕ್ಷಣವೇ ನಿನ್ನ ಭೇಟಿಯಾಗಬೇಕೆಂದು ಹಂಬಲಿಸಿದೆ. ನಿನ್ನ ಚತುರತೆ, ಪ್ರತಿಭೆ ಮತ್ತು ಸಾಹಸಮಯ ಕತೆಗಳನ್ನು ನಿನ್ನಿಂದಲೇ ಕೇಳಿ ತಿಳಿಯುವ ಆಸೆಯಿತ್ತು. ನಿನ್ನ ಭೇಟಿಯ ನೆಪದಲ್ಲಿ ಒಂದಿಡೀ ದಿನ “ನಾಸಾ” ನೋಡಬಹುದಿತ್ತು.

ಮೊನ್ನೆ ಒಂದು ಪತ್ರಿಕೆಯಲ್ಲಿ “ಗಗನಯಾನಿಗಳು ರಾಜಕಾರಣಿಗಳ ಆಟಿಕೆಗಳೇ” ಎಂದು ಲೇಖಕನೊಬ್ಬ ಪ್ರಶ್ನಿಸಿದ್ದ. ನಿನಗೆ ಯಾವತ್ತಾದರೂ ಹೀಗೆ ಅನ್ನಿಸಿತ್ತಾ? ನಿನಗೆ ಅದ್ಹೇಗೆ ಗೊತ್ತಾಗಬೇಕು. ನೀನು ಯಾವಾಗಲೂ ಸಾಹಸ ಮಾಡುವುದರ ಬಗ್ಗೆ, ಇಲ್ಲಿಂದ ಆಕಾಶ ಎಷ್ಟು ದೂರ ಎಂಬುದರ ಬಗ್ಗೆಯೇ ಚಿಂತಿಸುತ್ತಿದ್ದೆ. ನಿನ್ನ ಆಸೆ, ಆಕಾಂಕ್ಷೆಗಳು, ನಿನ್ನ ಯೋಚನೆಗಳೇ ನಿನ್ನ ಜೀವಕ್ಕೆ ಮಾರಕವಾಯಿತು.

ನೀನು ಗಗನಯಾತ್ರೆಯಲ್ಲಿದ್ದಾಗ, ಅಮೆರಿಕದ ಅಧಿಕಾರಿಯೊಬ್ಬ “ನಮ್ಮ ಬಾಹ್ಯಾಕಾಶ ಅನ್ವೇಷಣೆ, ನಮ್ಮ ರಾಷ್ಟ್ರದ ರಕ್ಷಣೆ ದೃಷ್ಟಿಯಲ್ಲಿ ಮಹತ್ವಯುತ ಉಪಗ್ರಹ ಸಾಮಥ್ರ್ಯ ತಂದುಕೊಟ್ಟಿದೆ” ಎಂದು ಹೇಳುತ್ತಿದ್ದ. ನನಗೆ ಸಿಟ್ಟು ಬಂತು. ಆ ಅಧಿಕಾರಿಗೆ ಗಗನಯಾತ್ರಿಗಳ ಜೀವಕ್ಕಿಂತ, ಉಪಗ್ರಹ ಸಾಮಥ್ರ್ಯವೇ ಮುಖ್ಯವಾಯಿತೇ? ನಿನ್ನಂತಹ ಗಗನಯಾತ್ರಿಗಳಿಗೆ ಸೌಲಭ್ಯ ಮತ್ತು ಇತರ ವ್ಯವಸ್ಥೆ ಮಾಡಿ ಗಗನಕ್ಕೆ ಕಳುಹಿಸಿ ಬಿಡುತ್ತಾರೆ. ಆದರೆ ನಿಮ್ಮ ಜೀವದ ಗ್ಯಾರಂಟಿ ಕೊಟ್ಟಿರುವುದಿಲ್ಲ. ನೀನು 16 ದಿನಗಟ್ಟಲೇ ಗಗನದಲ್ಲಿ ಯಶಸ್ವಿ ಕಾರ್ಯ ಮುಗಿಸಿಕೊಂಡು ಮರಳದಿದ್ದರೂ ತಮ್ಮ ರಾಷ್ಟ್ರ ರಕ್ಷಣೆಯಿಂದ ಬಾಹ್ಯಾಕಾಶ ಅನ್ವೇಷಣೆ ಉಪಯುಕ್ತ ಎಂದು ಹೇಳಬಹುದು. ಹೀಗಿದೆ ಅವರ ವರ್ತನೆ. ನೀನು ಮೂರನೇ ಸಲ ಗಗನಯಾತ್ರೆಗೆ ಹೋಗಲು ಮರಳದಿದ್ದರೂ, ಅವರಿಗೆ ಇನ್ನೊಬ್ಬ ಗಗನಯಾತ್ರೆ ಸಿಗುತ್ತಾರೆ.

2003 ಜನವರಿ 16. ಅವತ್ತು ನೀನು ಎರಡನೇ ಸಲ ಆರು ಬಾಹ್ಯಾಯಾನಿಗಳ ಜೊತೆ ಕೊಲಂಬಿಯಾ ಎಂಬ ಗಗನನೌಕೆ ಏರಿದ್ದೆ. “ಹೋಗಿ ಬರುವೆ’ ಎಂದು ಎಲ್ಲರಿಗೂ ನಗುತ್ತಲೇ ಕೈಬೀಸಿದೆ. ಅದೇನೋ ನಿನ್ನ ವೈಜ್ಞಾನಿಕ ಪರಿಭಾಷೆಯಲ್ಲಿ ಮೈಕ್ರೊಗ್ರ್ಯಾವಿಟಿ ಬಗ್ಗೆ ಪ್ರಯೋಗ ಮಾಡಬೇಕು ಎಂದು ಹೇಳುತ್ತಿದ್ದೆ. ನೀನು ಗಗನದಲ್ಲಿ ಪ್ರಯೋಗ ಮಾಡುತ್ತಿರುವಾಗ, ಆಗಾಗ್ಗೆ ಟಿವಿಯವರು ತೋರಿಸುತ್ತಿದ್ದರು. ಇದರ ಜೊತೆಗೆ ನೀನು ಫೆಬ್ರುವರಿ 1ರಂದು ಮರಳುವೆ ಅಂತ ಗೊತ್ತಾಯಿತು. ಅವತ್ತು ತುಂಬಾ ಖುಷಿಯಾಯಿತು. ನೀನು ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದು ನನಗೆ ಖುಷಿ ಉಂಟು ಮಾಡಿತ್ತು. ಮಾತು ಕೊಟ್ಟಂತೆ ನೀನು ಬರಬೇಕಿತ್ತು.

ನಾನು ಅವತ್ತು ಎಲ್ಲಾ ಕೆಲಸ ಬಿಟ್ಟು ಟಿವಿ ಹಚ್ಚಿಕೊಂಡು ಕೂತೆ. ನಿನ್ನೂರಿನ ಕನರ್ಾಲ್ ಜನರು ನಿನ್ನ ಬರುವಿಕೆಯನ್ನೇ ಕಾಯ್ತಾ ಕೂತಿದ್ದರು. ನಿಮ್ಮೂರಿನ ಜನರಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ನಿನ್ನ ಸುರಕ್ಷಿತ ಮರಳುವಿಕೆಗೆ ಬೇಡಿಕೊಳ್ಳುತ್ತಿದ್ದ. ಅದರಲ್ಲೂ ಅಮೆರಿಕದ ಕೊಲಂಬಿಯಾ ಎಂಬ ಅನುಭವಿ ಗಗನನೌಕೆಯಲ್ಲಿ ಹೋಗಿದ್ದಿ. ನಿರಾತಂಕವಾಗಿ, ಸುರಕ್ಷಿತವಾಗಿ ಬರುತ್ತಾಳೆ ಬಿಡಿ ಎಂಬ ಉಮೇದು, ಆತ್ಮವಿಶ್ವಾಸ ಮನದಲ್ಲಿತ್ತು.

ರಾತ್ರಿ 7.45. ಇನ್ನೇನೂ 16 ನಿಮಿಷವಿದೆ. “ನಮ್ಮ ಕಲ್ಪನಾ ಇಳೀತಾಳೆ ನೋಡ್ರಿ” ಎಂದು ಪ್ರತಿಯೊಬ್ಬರು ಮಾತನಾಡಿಕೊಳ್ಳುತ್ತಿದ್ದರು. ನೀ ಪ್ರಯಾಣಿಸುತ್ತಿದ್ದ ಕೊಲಂಬಿಯಾ ಕಾಣಿಸಿತು. ಬಂದಳು, ಬಂದಳು ಎಂಬ ಉದ್ಘೋಷವೂ ಜೋರಾಯಿತು.

ನಾನು ನೋಡಿದ ರಾಕೆಟ್ಗಳಿಗೆಲ್ಲ ಕೆಳಗಡೆ ಬೆಂಕಿ ಇರುವುದು ಗೊತ್ತು. ಆದರೆ ನಿನ್ನ ಕೊಲಂಬಿಯಾ ರಾಕೆಟ್ (ಗಗನನೌಕೆ) ಬರ್ತಾ ಬರ್ತಾ ಮೈಗೆಲ್ಲ ಬೆಂಕಿ ಹೊತ್ತಿಕೊಂಡಿತ್ತು. ನನಗೆ ಗಾಬರಿಯಾಯಿತು. ಬೆಂಕಿ ಒಮ್ಮಿಂದೊಮ್ಮೆಲೇ ಹೇಗೆ ಇಡೀ ರಾಕೆಟ್ಗೆ ಹೊತ್ತಿಕೊಳ್ಳುತ್ತೆ ಅಂತ ಆಶ್ಚರ್ಯವಾಯಿತು. ನನಗೇನೂ ಅರ್ಥವಾಗಲಿಲ್ಲ. ನೀ ಸುರಕ್ಷಿತವಾಗಿ ಮರಳುವೆ ಎಂದು ಮನಸ್ಸು ಪದೇ ಪದೇ ಹೇಳುತಿತ್ತು. ರಾಕೆಟ್ಗೆ ಬೆಂಕಿ ಬಿದ್ದರೂ ನೀನು ಪಾರಾಗುವೆ ಎಂದು ಭಾವಿಸಿದ್ದೆ. ನಿಜಕ್ಕೂ ಆ ಬೆಂಕಿಯಿಂದ ನೀನು ಪಾರಾಗಿಲಿಲ್ವಾ?

ಕಲ್ಪನಾ, ಅವತ್ತು ನಿಜಕ್ಕೂ ಏನಾಯಿತು? ರಾಕೆಟ್ಗೇಕೆ ಬೆಂಕಿ ಹೊತ್ತಿಕೊಂಡಿತು. ನನಗಂತೂ ಏನೂ ಅರ್ಥವಾಗಲಿಲ್ಲ. ಅಂದ ಹಾಗೆ, ಅಮೆರಿಕದವರು ಅಷ್ಟೆಲ್ಲ ಸುರಕ್ಷತೆ, ತಂತ್ರಜ್ಞಾನ, ವಿಜ್ಞಾನವೆಂದು ಬಡಬಡಾಯಿಸುತ್ತಾರೆ. ನಿನ್ನ ರಾಕೆಟ್ ಕಾಪಾಡಲು ಅವರಿಗೆ ಆಗಲಿಲ್ಲವೇ?

“ತಾಪಮಾನ ತುಂಬಾ ಏರಿಕೆಯಾಗಿದ್ದಕ್ಕೆ ಬೆಂಕಿ ಹೊತ್ತಿಕೊಂಡಿತು. ನೌಕೆಯ ಎಡಭಾಗದಲ್ಲಿ ತಾಪಮಾನ ತುಂಬಾ ಏರಿ, ಎಡರಕ್ಕೆಯ ಸೂಕ್ಷ್ಮ ಸಂವೇದಕಗಳು (ಸೆನ್ಸರ್) ನಾಶವಾಯಿತು. ನಂತರ ಭಾರ ತಪ್ಪಿ, ಎಡಭಾಗಕ್ಕೆ ಹೆಚ್ಚು ಹೊರೆಯಾದಾಗ, “ನಾಸಾ”ದ ಸಂಪರ್ಕ ಕಡಿದುಹೋಯಿತು. ಇದರಿಂದ ಬಲ ಭಾಗದ ರಕ್ಕೆಗಿಂತ ಎಡಭಾಗದ ರಕ್ಕೆಯ ತಾಪಮಾನ ಏರಿತು. 5 ನಿಮಿಷಗಳ ಅವಧಿಯಲ್ಲಿ 60 ಡಿಗ್ರಿ ಫ್ಯಾರನಹೀಟ್ನಷ್ಟು ಏರಿತು. ಕಂಪ್ಯೂಟರ್ ನೆರವಿನಿಂದ ಅದನ್ನು ನಿಯಂತ್ರಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ನೌಕೆ ಭೂಮಿಗೆ ಮರಳುವಾಗ, ಭೂಮಂಡಲದ ವಾತಾವರಣದ ಜೊತೆ ಘರ್ಷಣೆಗೆ ತುತ್ತಾಗಿ ಸುಟ್ಟು ಹೋಯಿತು. ಉಷ್ಣ ನಿರೋಧಕ ಘಟಕಗಳು ನಾಶವಾಗಿದ್ದವು” ಅಂತ ಯಾರೋ ಹೇಳಿದರು. ಅವರ ಮಾತು ನಿಜ ಅನ್ನಿಸಿತು.

ಕೊಲಂಬಿಯಾ ಗಗನನೌಕೆ ಗಗನಕ್ಕೇರುವ ಮುನ್ನ ಅದರಲ್ಲಿನ ಇಂಧನ ಟ್ಯಾಂಕ್ನ ಇನ್ಸುಲೇಟಿಂಗ್ ಫೋಮ್ನ ತುಣುಕುವೊಂದು ಸಿಡಿದು ಗಗನನೌಕೆಯ ಎಡರಕ್ಕೆಗೆ ಬಡಿದಿತ್ತು ಅಂತೆ. ಹೌದೇ? ಇದರಿಂದ ಉಷ್ಣ ನಿರೋಧಕ ಘಟಕಗಳಿಗೆ ಹಾನಿಯಾಗಿತ್ತಂತೆ? ನಿನಗೆ ಇದೆಲ್ಲವೂ ಗೊತ್ತಿತ್ತೇ?

ಹಾ..ಇನ್ನೊಂದು ಮಾತು. ಸಂಪ್ರೀತ್ಕೌರ್ ಎಂಬ ಹುಡುಗಿ ನಿನ್ನ ಕೇಳ್ತಾ ಇದ್ದಳು. ನೀನೇನೋ ಆಕೆಗೊಮ್ಮೆ ನಾಸಾಗೆ ಕರೆದೊಯ್ದಿದ್ದೆ ಅಂತೆ. “ಕಲ್ಪನಾ ದೀದಿ ಅಂದ್ರೆ ನನಗೆ ಬಹಳ ಇಷ್ಟ. ಆಕೆಯೇ ನನಗೆ ಪ್ರೇರಣೆ” ಎಂದೆಲ್ಲಾ ಹೇಳಿದಳು. “ಯಾವಾಗ ಬರ್ತಾಳೆ” ಎಂದು ಕೇಳಿದಳು. ಆಕೆಗೆ ಏನೆಂದು ಉತ್ತರಿಸಲಿ.

ಕಲ್ಪನಾ, ನಿಜ ಹೇಳು. ಇನ್ನೊಮ್ಮೆ ಭೂಮಿಗೆ ಬರಲು ನಿನಗೆ ಆಗಲ್ವೆ? ಸಾಧ್ಯವಾದರೆ, ಒಮ್ಮೆ ಬಂದು ಹೋಗು…..ಎಲ್ಲೇ ಇದ್ದರೂ ನೀ ಖುಷಿಯಾಗಿರು, ಸ್ಫೂರ್ತಿಯಾಗಿರು.

ಧನ್ಯವಾದ.
ರಾಹುಲ ಬೆಳಗಲಿ

Please follow and like us:
error