ಕರೋನಾ‌ ವ್ಯಾಕ್ಸಿನ್ ಕಥೆ…

ಯಾವ ಚಾನೆಲ್ ನೋಡಿದರೂ ಕೊವ್ಯಾಕ್ಸಿನ್ ಕಥೆ ಓಡುತ್ತಿದೆ. ಒಂಚೂರು ರಿಲಾಕ್ಸ್ ಆಗಿ ಚರ್ಚಿಸೋಣ. ಐಸಿಎಂಆರ್ ಹೇಳುತ್ತಿರುವಂತೆ ಕೊವ್ಯಾಕ್ಸಿನ್ ಆಗಸ್ಟ್ ನಲ್ಲಿ ಬರಲು ಸಾಧ್ಯವೇ? ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ.ಬಲರಾಂ ಭಾರ್ಗವ್ ಆ.15ರೊಳಗೆ ವ್ಯಾಕ್ಸಿನ್ ಜನಬಳಕೆಗೆ ತಯಾರಾಗಿರುತ್ತದೆ ಎಂದೇನೋ ಹೇಳಿದರು. ಆದರೆ ಅದು ಅಷ್ಟು ಸುಲಭವೇ? ಕೇಂದ್ರ ಸರ್ಕಾರ ಒಂದೆರಡು ದಿನಗಳಲ್ಲಿ ಕೋವಿಡ್ ವ್ಯಾಕ್ಸಿನ್ ಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಯೊಂದನ್ನು‌ ಹೊರಡಿಸಲಿದೆ. ಮೀಡಿಯಾಗಳು ಆತುರಕ್ಕೆ ಬಿದ್ದು ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಕನ್ನಡ ಮೀಡಿಯಾಗಳು ಸುದ್ದಿಯನ್ನು ಸರಿಯಾಗಿ ಗ್ರಹಿಸುವುದಿಲ್ಲ, ಇಂಗ್ಲಿಷ್ ಮಾಹಿತಿಗಳನ್ನು ಸರಿಯಾಗಿ Translate ಕೂಡ ಮಾಡುವುದಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತ ಎಂದು ಗಂಟೆಗಟ್ಟಲೆ ಪ್ರೋಗ್ರಾಮ್ ಮಾಡಿದವರು ಇವರೇ ಅಲ್ಲವೇ? ಕೊನೆಗೆ ಏನಾಯಿತು? ಇವರು ಹೇಳೋದೆಲ್ಲ ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಒಂದು ಸಾವಿರ ಕರೋನಾ ಔಷಧಿ ಮತ್ತು ವ್ಯಾಕ್ಸಿನ್ ಬಂದು ಬೀಳಬೇಕಿತ್ತು. ಇದೆಲ್ಲ ಒಂದೆಡೆಯಾದರೆ ಬಾಬಾ ರಾಮದೇವನ ‘ಔಷಧಿ’ಯನ್ನು ಹೊತ್ತು ಮೆರೆಸಿ, ಕೊನೆಗೆ ಅವನು ಕ್ರಿನಿಕಲ್ ಟ್ರಯಲ್ ಗೂ ಅನುಮತಿ ಪಡೆದಿರಲಿಲ್ಲವೆಂಬುದು ಗೊತ್ತಾದ ಮೇಲೆ ದಢಾರ್ ಅಂತ ಕೆಳಗೆ ಬೀಳಿಸಿದರು. ಈಗ ಕೊವ್ಯಾಕ್ಸಿನ್ ಕಥೆ. ಅದೂ ಕೂಡ ರೆಕ್ಕೆಪುಕ್ಕ ಸೇರಿಸಿ ಹಾರಿಸುತ್ತಿವೆ. ಮುಗ್ಧ ಜನರನ್ನು ದಾರಿತಪ್ಪಿಸುವುದು ಒಂದು ಅಪರಾಧ.

ಕೊವ್ಯಾಕ್ಸಿನ್ ಎನ್ನುವುದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ( ICMR) ಸಂಸ್ಥೆಯು ಭಾರತ್ ಬಯೋಟೆಕ್ ಸಂಸ್ಥೆಯೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಕರೋನಾ ವ್ಯಾಕ್ಸಿನ್. ಯಾವುದೇ ವ್ಯಾಕ್ಸಿನ್ ತಯಾರಿಕೆ ಆದರೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದಿಂದ ಅನುಮತಿ ಇರಬೇಕು. ಕೊವ್ಯಾಕ್ಸಿನ್ ನ ಮೊದಲ ಮತ್ತು ಎರಡನೇ ಹಂತದ ಟ್ರಯಲ್ ಗಾಗಿ ಅನುಮತಿ ಪಡೆಯಲಾಗಿದೆ. ಮೊದಲ‌ ಹಂತದ ಪ್ರಯೋಗವನ್ನು ಒಟ್ಟು ಒಂದು ಸಾವಿರ ಜನರ ಮೇಲೆ ಮಾಡಲಾಗುವುದು. ಈ ಪ್ರಯೋಗಗಳಿಗೆ ದೇಶದಾದ್ಯಂತ ಒಟ್ಟು ಹನ್ನೆರಡು ಮೆಡಿಕಲ್ ಇನ್ಸ್ಟಿಟ್ಯೂಷನ್ ಗಳು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪಾಟ್ನಾದ ಏಮ್ಸ್ ನಲ್ಲಿ ಮೊದಲ ಪ್ರಯೋಗಗಳು ನಡೆಯಲಿವೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾದರಷ್ಟೆ ಎರಡನೇ ಹಂತದ ಪ್ರಯೋಗಗಳು ನಡೆಯಲು ಸಾಧ್ಯ. ಎರಡನೇ ಹಂತದ ಪ್ರಯೋಗಗಳಿಗೆ ದೊಡ್ಡ ಪ್ರಮಾಣದ ಜನರನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದೆಲ್ಲದಕ್ಕೂ ಸಮಯ ಹಿಡಿಯುತ್ತದೆ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಆಫ್ ಇಂಡಿಯಾ (CTRI) ಪ್ರಕಾರ ಭಾರತ್ ಬಯೋಟೆಕ್ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ಎರಡು ಹಂತಗಳಿಗೆ ಒಟ್ಟು ಹದಿನೈದು ತಿಂಗಳ ಅವಧಿಯನ್ನು ನಮೂದಿಸಲಾಗಿದೆ.
ಜಾಗತಿಕವಾಗಿ ವ್ಯಾಕ್ಸಿನ್ ತಯಾರಿಕೆಯ ಪ್ರೊಟೋಕಾಲ್ ಗಳ ಪ್ರಕಾರ ಮೊದಲೆರಡು ಹಂತಗಳ ಕ್ಲಿನಿಕಲ್ ಟ್ರಯಲ್ ಗಳಿಗೆ ಕಡಿಮೆ ಎಂದರೂ ಆರರಿಂದ ಎಂಟು ತಿಂಗಳು ಬೇಕು.

ಸಾರ್ಸ್ ಕೋವಿಡ್ -19ರ ನಿಷ್ಕ್ರಿಯ ಕಣಗಳನ್ನೇ ವ್ಯಾಕ್ಸಿನ್ ಗಾಗಿ ಬಳಸಿ, ಅದನ್ನು ಕೋವಿಡ್ ಸೋಂಕಿರದ ಮನುಷ್ಯನ ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಮನುಷ್ಯನ ದೇಹದಲ್ಲಿ ಸಹಜವಾಗಿ ಆಂಟಿಬಾಡೀಸ್ ಉತ್ಪತ್ತಿಯಾಗಿ ಅದು ಮುಂದೆ ಕೋವಿಡ್ ಸೋಂಕು ತಗುಲಿದರೂ ಅದನ್ನು ಶಕ್ತಿಶಾಲಿಯಾಗಿ ಹಿಮ್ಮೆಟ್ಟಿಸುವ ಶಕ್ತಿ ಹೊಂದಿರುತ್ತದೆ. ಇದು ವ್ಯಾಕ್ಸಿನ್ ನ ಸಂಕ್ಷಿಪ್ತ ಗ್ರಹಿಕೆ. ಕೊವ್ಯಾಕ್ಸಿನ್ ಗೆ ವರದಿಗಳ ಪ್ರಕಾರ 22 ರಿಂದ 55 ವರ್ಷದೊಳಗಿನ ಆರೋಗ್ಯವಂತರನ್ನು ಪ್ರಯೋಗಕ್ಕೆ ಅಣಿ ಮಾಡಲಾಗುತ್ತಿದೆ. ಇತರ ದೇಶಗಳಲ್ಲೂ ಬಹುತೇಕ ಇದೇ ಏಜ್ ಗ್ರೂಪ್ ನವರ ಮೇಲೆ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆದರೆ ಕರೋನಾದಿಂದ ಹೆಚ್ಚು ಸಾವಿಗೀಡಾಗುತ್ತಿರುವ 70 ವರ್ಷ ದಾಟಿದ ಹಿರಿಯರಿಗೆ ಈ ವ್ಯಾಕ್ಸಿನ್ ಸಹಕಾರಿಯಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕು.

ಮೀಡಿಯಾ ಭಜನೆಯನ್ನು ಬಿಟ್ಟು ವಾಸ್ತವವನ್ನು ಗಮನಿಸುವುದಾದರೆ ಇದುವರೆಗೆ ಜಗತ್ತಿನಲ್ಲಿ ಯಾವುದೇ ವ್ಯಾಕ್ಸಿನ್ ಎಲ್ಲ ಹಂತದ ಪರೀಕ್ಷೆ ಮುಗಿಸಿ ಬಳಕೆಗೆ ಸಿದ್ಧವಾಗಿಲ್ಲ. ಎರಡು ಹಂತಗಳ ಯಶಸ್ವಿ ಪರೀಕ್ಷೆಗಳನ್ನು ಮುಗಿಸಿ ಮೂರನೇ ಹಂತದ ಪ್ರಯೋಗಗಳಿಗೆ ಇಳಿದಿರುವುದು ಜಗತ್ತಿನಲ್ಲಿ ಮೂರು ವ್ಯಾಕ್ಸಿನ್ ಗಳು ಮಾತ್ರ. WHO ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ನೂರಾರು ವ್ಯಾಕ್ಸಿನ್ ತಯಾರಿಸಲಾಗುತ್ತಿದೆಯಾದರೂ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಟ್ಟಿರುವುದು ಹತ್ತೊಂಭತ್ತು ಮಾತ್ರ.

ಮೂರನೇ ಹಂತದ ಪ್ರಯೋಗಗಳಿಗೆ ಒಳಗಾಗಿರುವ ಕರೋನಾ ವ್ಯಾಕ್ಸಿನ್ ಗಳ ಪೈಕಿ ಎರಡು ಚೀನಾಗೆ ಸೇರಿದ್ದು! ಮತ್ತೊಂದನ್ನು ಯೂನಿವರ್ಸಿಟಿ ಆಫ್ ಆಕ್ಸ್ ಫರ್ಡ್ ನ ವಿಜ್ಞಾನಿಗಳು ತಯಾರಿಸುತ್ತಿದ್ದಾರೆ. ಚೀನಾ ನ್ಯಾಷನಲ್ ಫಾರ್ಮಾಸೆಟಿಕಲ್ ಗ್ರೂಪ್ ( ಸಿನೋಫಾರ್ಮ್) ಒಂದು ವ್ಯಾಕ್ಸಿನ್ ತಯಾರಿಸಿದರೆ, ಸಿನೋವ್ಯಾಕ್ ಎಂಬ ಇನ್ನೊಂದು ಸಂಸ್ಥೆ ಮತ್ತೊಂದು ವ್ಯಾಕ್ಸಿನ್ನನ್ನು ಮೂರನೇ ಹಂತದ ಪ್ರಯೋಗಗಳಿಗೆ ಇಳಿಸಿದೆ.

ಸಿನೋವ್ಯಾಕ್ ಅತಿಹೆಚ್ಚು ಕರೋನಾ ಸೋಂಕಿಗೆ ಒಳಗಾಗಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ತನ್ನ ಮೂರನೇ ಹಂತದ ಪ್ರಯೋಗ ನಡೆಸಲಿದೆ. ಇದಕ್ಕಾಗಿ 9000 ಮಂದಿ ಆರೋಗ್ಯ ಸಿಬ್ಬಂದಿಯನ್ನು ನೇಮಕ‌ ಮಾಡಿದೆ. ಬ್ರೆಜಿಲ್ ನ ಔಷಧಿ ತಯಾರಿಕಾ ಸಂಸ್ಥೆ Instituto Bultanton ಜತೆ ಸಿನೋವ್ಯಾಕ್ ಒಪ್ಪಂದ ಮಾಡಿಕೊಂಡಿದೆ. ಅಲ್ಲಿನ ಸರ್ಕಾರವೂ ಈಗಾಗಲೇ ಮೂರನೇ ಹಂತದ ಪ್ರಯೋಗಗಳಿಗೆ ಅನುಮತಿ ನೀಡಿದೆ.‌ ಚೀನಾ, ತನ್ನಲ್ಲಿ ಕೋವಿಡ್-19 ಕಾಣಿಸಿಕೊಂಡ ಆರಂಭದಲ್ಲೇ ವ್ಯಾಕ್ಸಿನ್ ತಯಾರಿಕೆ ಕಾರ್ಯ ಆರಂಭಿಸಿತ್ತು. ಜನವರಿಯಲ್ಲೇ ಇದು ಶುರುವಾಗಿತ್ತು. ಹೀಗಾಗಿ ಆರು ತಿಂಗಳವರೆಗೆ ನಡೆದ ಎರಡು ಹಂತದ ಕ್ಲಿನಿಕಲ್ ಟ್ರಯಲ್ ಗಳ ನಂತರ ಈಗ ಮೂರನೇ ಹಂತದ ಟ್ರಯಲ್ ಆರಂಭಗೊಂಡಿದೆ. ಸಿನೋವ್ಯಾಕ್ ತನ್ನ ವ್ಯಾಕ್ಸಿನ್ ಬಗ್ಗೆ ಎಷ್ಟು ಆತ್ಮವಿಶ್ವಾಸದಿಂದ ಇದೆಯೆಂದರೆ ಅದು ವ್ಯಾಕ್ಸಿನ್ ತಯಾರಿಕಾ ಘಟಕವನ್ನು ನಿರ್ಮಿಸಲು ಆರಂಭಿಸಿದೆ. ಈ ವರ್ಷಾಂತ್ಯದೊಳಗೆ ಒಂದು ಕೋಟಿ ಜನರಿಗೆ ಬೇಕಾದಷ್ಟು ವ್ಯಾಕ್ಸಿನ್ ತಯಾರಿಸುವ ಗುರಿ ಹೊಂದಿದೆ.

ವಿಷಯ ಹೀಗಿರುವಾಗ ಕೊವ್ಯಾಕ್ಸಿನ್ ಇಂಡಿಯಾದಲ್ಲಿ ಆಗಸ್ಟ್ 15ಕ್ಕೆ ಮಾರುಕಟ್ಟೆಯಲ್ಲಿರುತ್ತದೆ ಎಂದು ಹೇಳುವುದು ಒಂದು ರಾಜಕೀಯ ಹೇಳಿಕೆಯ ಹಾಗೆ ಕೇಳಿಸುತ್ತಿದೆ‌. ಈ ಹಿನ್ನೆಲೆಯಲ್ಲೇ ದೇಶದ ವೈದ್ಯಕೀಯ ಸಮುದಾಯ ಆತಂಕ ವ್ಯಕ್ತಪಡಿಸುತ್ತಿದೆ. ಆತುರಕ್ಕೆ ಬಿದ್ದು ಜನರ ಜೀವಗಳ ಜತೆ ಚೆಲ್ಲಾಟವಾಡಬಾರದು ಎಂದು ಎಚ್ಚರಿಸುತ್ತಿದೆ.

ಭಾರತಕ್ಕೆ ತನ್ನದೇ ಆದ ವ್ಯಾಕ್ಸಿನ್ ಬೇಕೇಬೇಕು. ಭಾರತೀಯರ ಮೇಲೇ ಪ್ರಯೋಗಿಸಿ ಯಶಸ್ವಿಯಾದ ಭಾರತೀಯ ವ್ಯಾಕ್ಸಿನ್ನೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳೆಲ್ಲವೂ ಸ್ವಾಗತಾರ್ಹ. ಆದರೆ ಈ ವ್ಯಾಕ್ಸಿನ್ ಜನರ ಮೇಲೆ ಸಾಮೂಹಿಕವಾಗಿ ಬಳಕೆಯಾಗುವ ಮುನ್ನ, ಅದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಲೇಬೇಕು. ಅದಕ್ಕಾಗಿಯೇ ಮೂರು ಹಂತದ ಪ್ರಯೋಗಗಳ ಪ್ರೊಟೋಕಾಲ್ ಇರುವುದು.

ಇದು ಕರೋನಾ ವ್ಯಾಕ್ಸಿನ್ ಅಸಲಿ ಕಥೆ. ಇದ್ಯಾವುದರ ಪರಿಜ್ಞಾನವೂ ಇಲ್ಲದೆ ನಮ್ಮ ಮೀಡಿಯಾಗಳು, ಬೆಳಿಗ್ಗೆ ಗೋಧಿಹಿಟ್ಟು ಕಲೆಸಿ ಅರ್ಧ ಗಂಟೆಯಲ್ಲಿ ಚಪಾತಿ ಮಾಡಿದಷ್ಟೇ ಸುಲಭ ವ್ಯಾಕ್ಸಿನ್ ತಯಾರಿಸೋದು ಎಂದು ಭ್ರಮಿಸಿದ್ದಾರೆ. ತಮ್ಮ ಭ್ರಮೆಯನ್ನೇ ಅವು ಜನರಿಗೂ ಹಂಚುತ್ತವೆ. ನಮ್ಮ ಕರ್ಮ, ಜನ ಅದನ್ನು ನಂಬುತ್ತಾರೆ!

  • ದಿನೇಶ್ ಕುಮಾರ್ ಎಸ್.ಸಿ
Please follow and like us:
error