ಕನ್ಹಯಾ್ಯ ಕುಮಾರ್ ಎಂಬ ಭರವಸೆಯ ಬೆಳಕು-ಸನತ್ ಕುಮಾರ್ ಬೆಳಗಲಿ

ಕನ್ಹಯ್ಯ ಕುಮಾರ್ ಬರೀ ಒಬ್ಬ ವ್ಯಕ್ತಿಯಲ್ಲ, ಅದು ಭಾರತದ ಕನಸು. ಭಾರತವನ್ನು ಆವರಿಸಿರುವ ಮನುವಾದದ ಕಂದಾಚಾರದ ಕಗ್ಗತ್ತಲನ್ನು, ಕಾರ್ಪೊರೇಟ್ ಬಂಡವಾಳಶಾಹಿಯ ಕಬಂಧ ಬಾಹುವನ್ನು ಹಿಮ್ಮೆಟ್ಟಿಸಲು ಕನ್ಹಯ್ಯಿ ಕುಮಾರ್ ಲೋಕಸಭೆಗೆ ಆರಿಸಿ ಬರಬೇಕು. ಅದಾನಿ, ಅಂಬಾನಿಗಳಂತಹ ಬಂಡವಾಳಗಾರರು ದೇಶದ ಸಂಪತ್ತು ಲೂಟಿ ಮಾಡುವುದನ್ನು ತಡೆಯಬೇಕೆಂದರೆ, ಫ್ಯಾಶಿಸ್ಟ್ ಶಕ್ತಿಗಳು ಎಬ್ಬಿಸುವ ಕೋಮು ದಳ್ಳುರಿಯನ್ನು ನಂದಿಸಬೇಕೆಂದರೆ, ಕನ್ಹಯ್ಯಿ ಕುಮಾರ್ ಅಂಥವರು ಸಂಸತ್ತಿಗೆ ಬರಬೇಕು.


ಸುತ್ತಲೂ ಅಂಧಕಾರ ಕವಿದಿರುವಾಗ ದಟ್ಟ ನಿರಾಸೆ ಆವರಿಸುತ್ತದೆ. ಆದರೆ ಆ ಕತ್ತಲು ಶಾಶ್ವತವಾಗಿ ಇರುವುದಿಲ್ಲ. ಎಲ್ಲಿಂದಲೋ, ಯಾವುದೋ ಕಿಂಡಿಯಿಂದಲೋ ಕಾಣಿಸಿಕೊಳ್ಳುವ ಬೆಳಕು ಭರವಸೆಯನ್ನು ಮೂಡಿಸುತ್ತದೆ. ಮೊದಲು ಮಿಣುಕು ಹುಳುದಂತೆ ಗೋಚರಿಸುವ ಬೆಳಕು ಕ್ರಮೇಣ ಪ್ರಕಾಶಮಾನವಾಗಿ ಕಾರಿರುಳನ್ನು ಹಿಮ್ಮೆಟ್ಟಿಸುತ್ತದೆ. ಮಾನವ ಸಮಾಜ ನಡೆದು ಬಂದ ದಾರಿಯಲ್ಲಿ ಈ ಕತ್ತಲು ಬೆಳಕಿನ ಸಂಘರ್ಷ ಉದ್ದಕ್ಕೂ ನಡೆದುಕೊಂಡೇ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 2014ರಿಂದ ಈ ದೇಶಕ್ಕೆ ಒಂದು ವಿಧದ ಕತ್ತಲು ಕವಿಯಿತು. ಬಾಬಾ ಸಾಹೇಬರ ಬೆಳಕಿನ ಕಿರಣಗಳ ನಡುವೆಯೂ ಈ ಕಗ್ಗತ್ತಲು ತರುಣರ ಮೆದುಳನ್ನು ಆಕ್ರಮಿಸತೊಡಗಿತು. ಮನುಷ್ಯ-ಮನುಷ್ಯರ ನಡುವೆ ದ್ವೇಷದ ದಳ್ಳುರಿ ಎಬ್ಬಿಸುವ ಈ ಕಗ್ಗತ್ತಲನ್ನು ಹೇಗೆ ಹಿಮ್ಮೆಟ್ಟಿಸುವುದು ಎಂಬ ಆತಂಕ ಎಲ್ಲೆಡೆ ಮೂಡಿತ್ತು. ಅದರಲ್ಲೂ ಹೊಸ ಪೀಳಿಗೆಯ ಯುವಕರು ಯಾರದೋ ಮಾತು ಕೇಳಿ 60 ವರ್ಷಗಳಲ್ಲಿ ಈ ದೇಶದಲ್ಲಿ ಏನಾಗಿದೆ ಎಂದು ಕೇಳಿದಾಗ, ಆತಂಕ ಉಂಟಾಗುತಿತ್ತು.

ಆದರೆ, ಈ ಪ್ರಕೃತಿಯೇ ವಿಚಿತ್ರ. ಒಮ್ಮಮ್ಮೆ ಗಾಢ ಅಂಧಕಾರದಲ್ಲೂ ಅನಿರೀಕ್ಷಿತ ದಿಕ್ಕಿನಿಂದ ಬೆಳಕು ಗೋಚರಿಸುತ್ತದೆ. ಯಾರೂ ಎಲ್ಲಿಯೂ ಕೇಳಿರದಿದ್ದ ವ್ಯಕ್ತಿಗಳು ಒಮ್ಮಿಮ್ಮೆ ಮೇಲೆದ್ದು ಬಂದು ನಿರ್ಣಾಯಕ ಪಾತ್ರ ವಹಿಸುತ್ತಾರೆ.ಯಾವುದೇ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆ ಇಲ್ಲದವರು ಇತಿಹಾಸ ನಿರ್ಮಿಸುತ್ತಾರೆ. ಮಾನವ ಚರಿತ್ರೆಯಲ್ಲಿ ಇಂಥ ಅನೇಕ ಘಟನೆಗಳು ನಡೆದಿವೆ. ದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯಾ ಕುಮಾರ್ ಹೆಸರು ಮೊದಲಿಗೆ ಯಾರಿಗೂ ಗೊತ್ತಿರಲಿಲ್ಲ. 30ರೊಳಗಿನ ಈ ಯುವಕ ಅಂಧಕಾರದಲ್ಲಿ ಆಶಾಕಿರಣವಾಗಿ ಬರುತ್ತಾನೆ ಎಂದು ಯಾರೂ ನಂಬಿರಲಿಲ್ಲ. ಆದರೆ, ದಿಲ್ಲಿಯ ಕತ್ತಲ ರಾಜರು ಈ ನಂದಾದೀಪವನ್ನು ನಂದಿಸಲು ಯತ್ನಿಸಿದಾಗ, ಅದು ಇನ್ನಷ್ಟು ಪ್ರಜ್ವಲಿಸಿತು. ಕನ್ಹಯ್ಯಿ ಕುಮಾರ್ ಇಡೀ ದೇಶದ ಮನೆಮಾತಾದರು. 56 ಇಂಚಿನ ಎದೆಯ ಪ್ರಧಾನಮಂತ್ರಿಗಳು ಈತನ ಮಾತನ್ನು ಕೇಳಿ ದಿಗಿಲುಗೊಂಡರು. ಅವನನ್ನು ಹೇಗಾದರೂ ಮಾಡಿ, ಮುಗಿಸಬೇಕು ಎಂದು ಮಸಲತ್ತು ನಡೆಸಿದರು.

ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ನಾಗಪುರದ ಸಂಘ ಪರಿವಾರದ ಕೋಮುವಾದಿ ಶಕ್ತಿಗಳ ಜಂಟಿ ಕಾರ್ಯಾಚರಣೆಯ ಭಾಗವಾಗಿ ದಿಲ್ಲಿಯ ಜೆಎನ್‌ಯುನಲ್ಲಿ ಬೆಳಕಾಗಿ ಬಂದ ಕನ್ಹಯ್ಯಿ ಕುಮಾರ್ ಮುಂತಾದ ಯುವ ಸಮೂಹವನ್ನು ಹತ್ತಿಕ್ಕುವ ಯತ್ನ ನಡೆಯಿತು. ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಆಝಾದಿ ಘೋಷಣೆ ಮೊಳಗಿದಾಗ, ದಿಲ್ಲಿಯ ಚೌಕಿದಾರ ಸಿಂಹಾಸನ ನಡುಗಿತು. ಅಂತಲೇ ಅಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಲಾಯಿತು ಎಂದು ಕತೆ ಕಟ್ಟಿ ಕನ್ಹಯ್ಯಿ ಕುಮಾರ್, ಶೆಹ್ಲಾ ರಶೀದ್, ಉಮರ್ ಖಾಲಿದ್, ರಾಮನಾಗ್ ಮುಂತಾದವರನ್ನು ದೇಶದ್ರೋಹಿಗಳಂತೆ ಬಿಂಬಿಸಿ ಬಾಯಿ ಮುಚ್ಚಿಸುವ ಯತ್ನ ನಡೆಯಿತು. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ, ಕನ್ಹಯ್ಯಿ ಕುಮಾರ್‌ನನ್ನು ಬಂಧಿಸಿದರು. ಈ ಅಸಹನೆ ಎಲ್ಲಿಯವರೆಗೆ ಹೋಯಿತೆಂದರೆ, ಬಂಧನಕ್ಕೆ ಒಳಗಾದ ಕನ್ಹಯ್ಯೆ ಕುಮಾರ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ, ಅವರ ಸಮಕ್ಷಮದಲ್ಲೇ ಕಪ್ಪು ಕೋಟು ಧರಿಸಿದ ಸಂಘಿ ವಕೀಲರು ಹಲ್ಲೆ ಮಾಡಿದರು. ಆದರೆ, ವಾಸ್ತವವಾಗಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಸಭೆಯಲ್ಲಿ ಕನ್ಹಯ್ಯಾ ಕುಮಾರ್ ಅಥವಾ ಅವರ ಬೆಂಬಲಿಗರಾಗಲಿ ಯಾವುದೇ ದೇಶ ವಿರೋಧಿ ಘೋಷಣೆ ಕೂಗಿರಲಿಲ್ಲ. ಬಡತನದಿಂದ ಆಝಾದಿ, ಅಸಮಾನತೆಯಿಂದ ಆಝಾದಿ, ಕೋಮುವಾದದಿಂದ ಆಝಾದಿ, ಮನುವಾದದಿಂದ ಆಝಾದಿ ಇಂತಹ ಘೋಷಣೆಗಳನ್ನು ಕೂಗಿದರು. ಆದರೆ, ಅಲ್ಲಿ ತುಕಡೇ ತುಕಡೇ ಘೋಷಣೆ ಕೂಗಿದರೆಂದು ಕತೆ ಕಟ್ಟಿ ಅಪಪ್ರಚಾರ ಮಾಡಲಾಯಿತು.

ಸುಳ್ಳು ಸೃಷ್ಟಿಸುವುದು ಫ್ಯಾಶಿಸ್ಟರಿಗೆ ಹೊಸದಲ್ಲ. 80 ವರ್ಷಗಳ ಹಿಂದೆ ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರದಲ್ಲಿ ಇದ್ದಾಗ, ಜರ್ಮನ್ ಪಾರ್ಲಿಮೆಂಟ್‌ಗೆ ತಾನೇ ಬೆಂಕಿ ಹಚ್ಚಿಸಿದ. ಅದನ್ನು ಕಮ್ಯುನಿಸ್ಟ್ ನಾಯಕ ಡಿಮಿಟ್ರೋವ್ ತಲೆಗೆ ಕಟ್ಟಿದ. ನಂತರ ವಿಚಾರಣೆ ನಡೆದು, ಡಿಮಿಟ್ರೋವ್ ದೋಷಮುಕ್ತರಾಗಿ ಹೊರಗೆ ಬಂದರು. ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದದ್ದು ಇದೇ ಕತೆ. ಕನ್ಹಯ್ಯಾ ಕುಮಾರ್ ದೇಶದ್ರೋಹಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆದು ಕನ್ಹಯ್ಯಾ ಕುಮಾರ್ ಮತ್ತು ಅವರ ಗೆಳೆಯರು ದೋಷಮುಕ್ತರಾಗಿ ಹೊರಗೆ ಬಂದರು. ದೇಶದ್ರೋಹಿ ಘೋಷಣೆ ಕೂಗಿದ್ದಾರೆ ಎಂಬ ವೀಡಿಯೊ ನಕಲಿ ಎಂದು ನಂತರ ಬೆಳಕಿಗೆ ಬಂತು. ಕನ್ಹಯ್ಯಾ ಕುಮಾರ್ ಮೇಲೆ ದೇಶದ್ರೋಹದ ಆರೋಪ ಬಂದಾಗ, ಇಡೀ ದೇಶದ ಪ್ರಜ್ಞಾವಂತರು ಅವರ ಬೆಂಬಲಕ್ಕೆ ನಿಂತರು. ಕನ್ಹಯ್ಯೆ ಕುಮಾರ್ ದೇಶದ್ರೋಹಿಯಾದರೆ, ನಾನು ದೇಶದ್ರೋಹಿಯೆಂದು ಹೆಸರಾಂತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಹೇಳಿದರು. ತನ್ನ ಮೇಲೆ ಬಂದ ಆರೋಪದ ಬಗ್ಗೆ ಕೆರಳಿ ಕೆಂಡವಾದ ಕನ್ಹಯ್ಯೆ ಕುಮಾರ್ ಬ್ರಿಟಿಷರಿಗೆ ಕ್ಷಮೆ ಕೋರಿದ ಸಾವರ್ಕರರ ಬಾಲಬುಡುಕರಿಂದ, ತ್ರಿವರ್ಣ ಧ್ವಜ ಸುಟ್ಟವರಿಂದ ನಮಗೆ ದೇಶಭಕ್ತಿಯ ಪಾಠ ಬೇಡ ಎಂದು ಹೇಳಿದರು.

ಈಗ ದೇಶದಲ್ಲಿ ಮೋದಿ ಸರಕಾರವನ್ನು ವಿರೋಧಿಸುವವರನ್ನು ಹತ್ತಿಕ್ಕಲು ಬ್ರಿಟಿಷ್ ಕಾಲದ ರಾಜದ್ರೋಹದ ಕಾನೂನನ್ನು ಬಳಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ ಬಂದಾಗಲೇ ಇದನ್ನು ರದ್ದು ಮಾಡಬೇಕಾಗಿತ್ತು. ಬ್ರಿಟಿಷರು ಸ್ವಾತಂತ್ರ ಹೋರಾಟಗಾರರನ್ನು ಹತ್ತಿಕ್ಕಲು ತಂದ ಈ ಕರಾಳ ಶಾಸನವನ್ನು ಸ್ವಾತಂತ್ರಾ ನಂತರವೂ ಮುಂದುವರಿಸಿಕೊಂಡು ಬರಲಾಯಿತು. ಈಗಂತೂ ಮೋದಿಯನ್ನು, ಸಂಘ ಪರಿವಾರದವರನ್ನು ವಿರೋಧಿಸುವವರೆನ್ನೆಲ್ಲ ಹತ್ತಿಕ್ಕಲು ಈ ಅಸ್ತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕರಾಳ ಅಸ್ತ್ರವನ್ನು ಕನ್ಹಯ್ಯಿ ಕುಮಾರ್ ಮೇಲೆ ಬಳಸಿದ ನಂತರ ಆತನ ಜನಪ್ರಿಯತೆ ಹೆಚ್ಚಾಯಿತು. ಬಿಹಾರದ ಬೇಗುಸರಾಯ್‌ನಿಂದ ಭಾರತದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ. ಬೇಗುಸರಾಯ್ ಸಿಪಿಐನ ಭದ್ರಕೋಟೆ. ಒಂದು ಕಾಲದಲ್ಲಿ ಇದಕ್ಕೆ ಜನ ‘ಲೆನಿನ್ ಗ್ರಾಡ್’ ಎಂದು ಕರೆಯುತ್ತಿದ್ದರು. ಕಮ್ಯನಿಸ್ಟ್ ನಾಯಕ ಚಂದ್ರಶೇಖರ್ ಸಿಂಗ್ ಇಲ್ಲಿ ಚುನಾಯಿತರಾಗಿ ಲೋಕಸಭೆಗೆ ಬರುತ್ತಿದ್ದಾರೆ. ಇನ್ನು ಈಗ ಈ ಕ್ಷೇತ್ರದಲ್ಲಿ ಕನ್ಹಯ್ಯಾ ಕುಮಾರ್ ನಿಂತಿದ್ದಾರೆ. ತಿಂಗಳಿಗೆ 5 ಸಾವಿರ ಸಂಬಳ ಪಡೆಯುವ ಬಡ ಅಂಗನವಾಡಿ ಕಾರ್ಯಕರ್ತೆಯ ಮಗನಾದ ಕನ್ಹಯ್ಯಾ ಕುಮಾರ್ ನಾಮಪತ್ರ ಸಲ್ಲಿಸುವಾಗ, ಅಲ್ಲಿನ ದುಡಿಯುವ ಜನ ದುಡ್ಡು ಸೇರಿಸಿ ಠೇವಣಿ ಕಟ್ಟಿದರು. ನಾಮಪತ್ರ ಸಲ್ಲಿಸಿದ ಎರಡೇ ವಾರದಲ್ಲಿ ಜನರಲ್ಲಿ ಮನವಿ ಮಾಡಿದಾಗ, ಒಂದು ಅಥವಾ ಎರಡು ರೂಪಾಯಿಯಂತೆ ಹಣ ಸಂಗ್ರಹಿಸಿ 70 ಲಕ್ಷ ರೂಪಾಯಿಗಳನ್ನು ಕನ್ಹಯ್ಯಿರ ಚುನಾವಣಾ ನಿಧಿಗೆ ಜನರು ನೀಡಿದ್ದಾರೆ. ಕನ್ಹಯ್ಯಾ ಕುಮಾರ್ ಈಗ ಒಂದು ಪಕ್ಷಕ್ಕೆ ಸೀಮಿತವಾಗಿ ಉಳಿದಿಲ್ಲ. ಪಕ್ಷದ ಆಚೆಯೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅಂತಲೇ ಪಕ್ಷಕ್ಕೆ ಸಂಬಂಧವಿಲ್ಲದರು ತಾವಾಗಿಯೇ ನಿಧಿ ಕಳುಹಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಕುಮಾರ್‌ಗೆ ಹೀಗೆ ನಿಧಿ ಕಳುಹಿಸಬೇಕೆಂದು ಜನ ನನಗೆ ಕೇಳಿದ್ದಾರೆ. ಇಷ್ಟೊಂದು ಜನಪ್ರಿಯತೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯಾರಿಗೂ ಸಿಕ್ಕಿಲ್ಲ. ಬಹುಶಃ ಕನ್ಹಯ್ಯಿ ಕುಮಾರ್‌ರ ವಾಕ್ಚಾತುರ್ಯ ಮತ್ತು ಬದ್ಧತೆ ಇದಕ್ಕೆ ಕಾರಣವಿರಬಹುದು. ಕಮ್ಯುನಿಸ್ಟ್ ಚಳವಳಿ ಆಕರ್ಷಣೆ ಕಳೆದುಕೊಂಡಿರುವಾಗ, ಅದೇ ಚಳವಳಿಯಿಂದ ಬಂದ ಕನ್ಹಯ್ಯ್ ಕುಮಾರ್ ದೇಶ ಪ್ರಧಾನಿಗೆ ಸವಾಲು ಹಾಕುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.

ಕನ್ಹಯ್ಯಾ ಕುಮಾರ್ ಪಿಎಚ್.ಡಿ ಪದವಿ ಪಡೆಯಲು ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ, ಅಲ್ಲಿನ ವೈಚಾರಿಕತೆಯ ಪರಿಣಾಮವಾಗಿ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದರು. ಅವರನ್ನು ಕಂಡರಾಗದ ಎಬಿವಿಪಿಯಂತಹ ಬಲಪಂಥೀಯಂತಹ ಸಂಘಟನೆಗಳು ಕನ್ಹಯ್ಯಿಕುಮಾರ್ ಸ್ಕಾಲರ್‌ಶಿಪ್ ಪಡೆಯುತ್ತಾನೆ. ಆದರೆ ವ್ಯಾಸಂಗ ಮಾಡುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಆದರೆ ಆತ ಪಿಎಚ್.ಡಿ ಪ್ರಬಂಧ ಸಲ್ಲಿಸಿ ಡಾ. ಕನ್ಹಯ್ಯಾ ಕುಮಾರ್ ಆಗಿದ್ದಾರೆ. ಕನ್ಹಯ್ಯಾ ಕುಮಾರ್ ಬೇಗುಸರಾಯಿಯಿಂದ ಸ್ಪರ್ಧಿಸುತ್ತಾರೆಂದು ಗೊತ್ತಾದಾಗ, ಅವರ ವಿರುದ್ಧ ಸ್ಪರ್ಧಿಸಬೇಕಿದ್ದ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅಲ್ಲಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಇದನ್ನು ಲೇವಡಿ ಮಾಡಿದ ಕನ್ಹಯ್ಯಾ ಕುಮಾರ್, ದೇಶದ ಪ್ರಜೆಗಳನ್ನೆಲ್ಲ ಪಾಕಿಸ್ತಾನಕ್ಕೆ ಕಳುಹಿಸಲು ಹೇಳುವ ಗಿರಿರಾಜ್ ಸಿಂಗ್ ತನ್ನ ಮತ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಚುಚ್ಚಿದರು. ಕನ್ಹಯ್ಯಿ ಕುಮಾರ್ ಬರೀ ಒಬ್ಬ ವ್ಯಕ್ತಿಯಲ್ಲ, ಅದು ಭಾರತದ ಕನಸು. ಭಾರತವನ್ನು ಆವರಿಸಿರುವ ಮನುವಾದದ ಕಂದಾಚಾರದ ಕಗ್ಗತ್ತಲನ್ನು, ಕಾರ್ಪೊರೇಟ್ ಬಂಡವಾಳಶಾಹಿಯ ಕಬಂಧ ಬಾಹುವನ್ನು ಹಿಮ್ಮೆಟ್ಟಿಸಲು ಕನ್ಹಯ್ಯಿ ಕುಮಾರ್ ಲೋಕಸಭೆಗೆ ಆರಿಸಿ ಬರಬೇಕು. ಅದಾನಿ, ಅಂಬಾನಿಗಳಂತಹ ಬಂಡವಾಳಗಾರರು ದೇಶದ ಸಂಪತ್ತು ಲೂಟಿ ಮಾಡುವುದನ್ನು ತಡೆಯಬೇಕೆಂದರೆ, ಫ್ಯಾಶಿಸ್ಟ್ ಶಕ್ತಿಗಳು ಎಬ್ಬಿಸುವ ಕೋಮು ದಳ್ಳುರಿಯನ್ನು ನಂದಿಸಬೇಕೆಂದರೆ, ಕನ್ಹಯ್ಯಿ ಕುಮಾರ್ ಅಂಥವರು ಸಂಸತ್ತಿಗೆ ಬರಬೇಕು.

Please follow and like us:
error