ಎಲ್ಲ ಬಗೆಯ ಸರ್ವಾಧಿಕಾರಿಗಳನ್ನು ನಾವು ಒಂದೇ ಬಗೆಯಲ್ಲೇ ವಿಮರ್ಶಿಸಿ ನೋಡಬೇಕು – ದಿನೇಶ್ ಕುಮಾರ್ ಎಸ್.ಸಿ.

ಸಣ್ಣದಾಗಿ ಜೇನುಗೂಡಿಗೆ ಬೆಂಕಿ‌ ಇಟ್ಟ ಹಾಗಿದೆ.‌ ಇರಲಿ,‌ ಇದೆಲ್ಲ ಸಹಜ. ಟರ್ಕಿಯ ಎರ್ದೋಗಾನ್ ಗೆ ಇಂಡಿಯಾದಲ್ಲೂ ಅಭಿಮಾನಿಗಳು ಇದ್ದಾರೆ ಎಂಬುದು ಅರ್ಥವಾಯಿತು.‌ ಡೊನಾಲ್ಡ್ ಟ್ರಂಪ್ ಗೆ ಇಂಡಿಯಾದಲ್ಲಿ, ಮೋದೀಜೀಗೆ ಅಮೆರಿಕದಲ್ಲಿ ಅಭಿಮಾನಿಗಳು ಇಲ್ಲವೇ? ಹಾಗೆಯೇ ಇದು ಅಂದುಕೊಂಡರಾಯಿತು. ಹಿಟ್ಲರನಿಗೂ ಅಭಿಮಾನಿಗಳಿದ್ದರು, ವೀರಪ್ಪನ್ ಗೂ ಇದ್ದರು.

ಎರ್ದೊಗಾನ್ ಜಗತ್ತಿನ ಹಲವೆಡೆ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ್ದಾನೆ ಎನ್ನುವುದು ಅವನ ಅಭಿಮಾನಿಗಳ ಪ್ರೀತಿಗೆ ಕಾರಣ. ಸರಿಯೇ, ಅದರಲ್ಲಿ‌ ತಪ್ಪೇನಿಲ್ಲ. ಆದರೆ ಖುರ್ದಿಷ್ ಜನರು ಯಾವ ಧರ್ಮದವರು? ಕ್ರಿಶ್ಚಿಯನ್ನರಾ? ಯಹೂದಿಗಳಾ? ಹಿಂದೂಗಳಾ? ಯಾರು ಉತ್ತರಿಸುವವರು? ಪ್ಯಾಲೆಸ್ಟೈನಿಗಳು, ರೋಹಿಂಗ್ಯಾಗಳು ಮಾತ್ರ ಮುಸ್ಲಿಮರಾ? ಚೀನಾದ ಉಯ್ಗರ್ ಮುಸ್ಲಿಮರನೇನು ಪಾಪ ಮಾಡಿದ್ದರು? ಹಾಗೆ ಹೇಳೋದಾದರೆ ಉಯ್ಗರ್ ಮುಸ್ಲಿಮರು ಟರ್ಕಿಶ್ ಮೂಲದವರು. ಕರುಳು ಬಳ್ಳಿ ಸಂಬಂಧ. ಆ ಲೆಕ್ಕಕ್ಕೆ ಬೀಜಿಂಗ್ ಮೊದಲ ಎದುರಾಳಿ ಆಗಬೇಕಿತ್ತಲ್ಲವೇ ಈ ಎರ್ದೋಗಾನ್ ಗೆ? ಯಾಕೆ‌ ಉಸಿರೆತ್ತುತ್ತಿಲ್ಲ? ವೊಕೇಷನಲ್ ಟ್ರೈನಿಂಗ್ ಹೆಸರಿನಲ್ಲಿ ಪಶ್ಚಿಮ ಚೀನಾದಲ್ಲಿ ಹತ್ತು ಲಕ್ಷ ಉಯ್ಗರ್ ಮುಸ್ಲಿಮರನ್ನು ಕೂಡಿಟ್ಟುಕೊಂಡಿರುವ ಚೀನಾ ಆಡಳಿತದ ವಿರುದ್ಧ ಎರ್ದೋಗಾನ್ ಯಾಕೆ ದಂಡೆತ್ತಿ ಹೋಗುತ್ತಿಲ್ಲ? ಯಾಕೆ, ಉಯ್ಗರ್ ಮುಸ್ಲಿಮರ ವಿಷಯ ಚೀನಾದ ಆಂತರಿಕ‌ ವಿಷಯ ಎಂದು ಟರ್ಕಿ ವಿದೇಶಾಂಗ ಸಚಿವ ತಿಪ್ಪೆ ಸಾರಿಸಿದ್ದು? ಆರ್ಥಿಕ ಕುಸಿತದಿಂದ ಪರದಾಡುತ್ತಿದ್ದ ಟರ್ಕಿಗೆ ಚೀನಾ ಹಣಕಾಸಿನ ಸಹಾಯ ನೀಡುತ್ತಿದೆ ಎಂದೇ? ಕಳೆದ ವರ್ಷ ಜೂನ್ ನಲ್ಲಿ ಚೀನಾದ ಪೀಪಲ್ಸ್ ಬ್ಯಾಂಕ್ ಟರ್ಕಿ ಆರ್ಥಿಕತೆ ಮೇಲೆತ್ತುವ ಕಾರ್ಯಕ್ಕಾಗಿ ಒಂದು ಬಿಲಿಯನ್ ಡಾಲರ್ ಧನಸಹಾಯ ಮಾಡಿದಾಗ, ಅದನ್ನು ಜಿಂಗ್ ಪಿಂಗ್ ಮುಖಕ್ಕೆ ವಾಪಾಸು ಎರಚಬಹುದಿತ್ತಲ್ಲವೇ? ಟೈಗರ್ ಜಿಂದಾ ಥಾ, ಲೇಖಿನ್ ಸೋರಹಾತಾ ಕ್ಯಾ?

ಎರ್ದೋಗಾನ್ ಸಮರ್ಥಕರಿಗೆ ಯಾಸೆರ್ ಅರಾಫತ್ ಎಂಬ ಪ್ಯಾಲಿಸ್ಟೈನ್ ನಾಯಕನಿದ್ದ, ಆತನನ್ನು ಇಡೀ ಜಗತ್ತು ಗೌರವಿಸುತ್ತಿತ್ತು ಎಂಬುದು ನೆನಪಿಲ್ಲ‌ ಅಥವಾ ಗೊತ್ತೇ ಇಲ್ಲ. ಇಸ್ರೇಲ್ ನಿಂದ ಬಿಡುಗಡೆ ಪಡೆಯುವ ಹೋರಾಟ ಅರಾಫತ್ ಕೈಯಲ್ಲಿ ಇರುವವರೆಗೆ ಜೀವಂತವಾಗಿತ್ತು. ಆದರೆ ಯಾವಾಗ ಹಮಾಸ್ ನಂಥ ತೀವ್ರವಾದಿ ಸಂಘಟನೆಗಳು ಮುನ್ನೆಲೆಗೆ ಬಂದವೋ ಪ್ಯಾಲೆಸ್ಟೈನ್ ಹೋರಾಟವನ್ನು ಇಸ್ರೇಲ್ ಹತ್ತಿಕ್ಕಲು ಕಷ್ಟಪಡಬೇಕಾಗಿ ಬರಲಿಲ್ಲ. ಅರಾಫತ್ ತೆರೆಮರೆಗೆ ಸರಿದರು, ಇಸ್ರೇಲ್ ವಿಜೃಂಭಿಸಿತು. ಅರಾಫತ್ ಎಂಬ ನಾಯಕ ವಿಶ್ವಮನ್ನಣೆಗೆ ಯಾಕೆ ಪಾತ್ರವಾಗಿದ್ದರು? ಯಾಕೆ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು? ಯಾಕೆ ಇಂಡಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸ್ವತಂತ್ರ ದೇಶದ ಮಾನ್ಯತೆ ಇಲ್ಲದಿದ್ದರೂ ಪ್ಯಾಲೆಸ್ಟೈನ್ ರಾಯಭಾರಿ ಕಚೇರಿಗಳಿಗೆ ಅವಕಾಶ ನೀಡಿ, ಇಸ್ರೇಲನ್ನು ದೂರವಿಡಲಾಗಿತ್ತು? ಇದನ್ನೆಲ್ಲ ಒಂಚೂರು ಎರ್ದೋಗಾನ್ ಅಭಿಮಾನಿಗಳು ಅಧ್ಯಯನ ಮಾಡಿದರೆ ಒಳಿತು.

ನಿಜ, ಎರ್ದೋಗಾನ್ ಬೇರೆ ಬೇರೆ ದೇಶಗಳಲ್ಲಿ ಮುಸ್ಲಿಮರ ವಿರುದ್ಧ ಅನ್ಯಾಯಗಳು ನಡೆದಾಗ ಧ್ವನಿ ಎತ್ತಿದ. ಬೇರೆ ಕಡೆಯ ವಿಷಯ ಹೋಗಲಿ, ಇಂಡಿಯಾದಲ್ಲಿ ಮುಸ್ಲಿಮರ ವಿರುದ್ಧದ ದೌರ್ಜನ್ಯ ಗಳ ವಿರುದ್ಧವೂ ಧ್ವನಿ‌ ಎತ್ತಿದ. ಅದೊಂದೇ ಅವನು ದೊಡ್ಡ ನಾಯಕನೆನಿಸಿಕೊಳ್ಳಲು ಅರ್ಹತೆಯೇ? ಹೆಣ್ಣು-ಗಂಡು ಸಮಾನರಲ್ಲ ಎಂದು ಹೇಳುವವನು ಇವತ್ತಿನ ಕಾಲಘಟ್ಟದಲ್ಲಿ ಹೇಗೆ ಒಬ್ಬ ನಾಯಕನಾಗಲು ಸಾಧ್ಯ? ತನ್ನ ತಾಯಿ, ತನ್ನ ಹೆಂಡತಿ ತನಗೆ ಸಮಾನರು ಎಂದು ಭಾವಿಸದೇ ಹೋದವನು ತನ್ನ ದೇಶದ ಜನತೆಯನ್ನು ಹೇಗೆ ಸಮಾನರೆಂದು ಭಾವಿಸಿಯಾನು?

ಜಗತ್ತಿನ ಯಾವ ಮೂಲೆಯಲ್ಲಿ ಯಾರೇ ದೌರ್ಜನ್ಯ, ಅಪಮಾನ, ಹಿಂಸೆ, ಅತ್ಯಾಚಾರಗಳಿಗೆ ಒಳಗಾದರೂ ಅವರು ನಮ್ಮ ಸಂಗಾತಿಗಳು. ಅವರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ, ಬೌದ್ಧ,‌ ಜೈನ ಇನ್ನಿತರ ಯಾರೇ ಆಗಿರಲಿ. ಇನ್ನೂ ಬಿಡಿಸಿ ಹೇಳುವುದಾದರೆ ಅವರು ಸುನ್ನಿ, ಶಿಯಾ, ವಹಾಬಿ ಅಥವಾ ಇನ್ಯಾವುದೇ ಪಂಥದವರೇ ಆಗಿರಲಿ. ಒಂದು ಧರ್ಮ, ಜನಾಂಗದ ಆಧಾರದಲ್ಲಿ ಹಿಂಸೆಗೆ ಗುರಿಪಡಿಸುವವರನ್ನು ನಾವು ಒಪ್ಪಲಾರೆವು. ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಹಿಂಸೆಗೆ ಗುರಿಯಾದ ಹಿಂದೂಗಳು ಕೂಡ ನಮ್ಮ ಬಂಧುಗಳೇ. ಸಿಎಎ ಅಡಿಯಲ್ಲಿ ನೀವು ಅವರಿಗೆ ಪೌರತ್ವ ಕೊಡುವುದಾದರೆ ಕೊಡಿ, ಯಾರು ಬೇಡ ಎಂದವರು? ಆದರೆ ಮುಸ್ಲಿಮರನ್ನು ಯಾಕೆ ಹೊರಗಿಟ್ಟಿರಿ ಎಂದಲ್ಲವೇ ನಾವು ಪ್ರಶ್ನಿಸಿದ್ದು. ವಲಸಿಗರು ಯಾವ ಧರ್ಮದವರೇ ಆಗಿರಲಿ, ಒಂದೇ ರೀತಿಯಲ್ಲಿ‌ ನೋಡಿ ಎಂದು ನಾವು ಹೇಳಿದ್ದಲ್ಲವೇ?

ಎರ್ದೋಗಾನ್ ನಿಂದ ಹಿಡಿದು ಜೇರ್ ಬೋಲ್ಸನಾರೋವರೆಗೆ ಎಲ್ಲ ಬಗೆಯ ಸರ್ವಾಧಿಕಾರಿಗಳನ್ನು ನಾವು ಒಂದೇ ಬಗೆಯಲ್ಲೇ ವಿಮರ್ಶಿಸಿ ನೋಡಬೇಕು. ಒಬ್ಬೊಬ್ಬರನ್ನು ಒಂದೊಂದು ಬಗೆಯಲ್ಲಿ ನಾವು ನೋಡುತ್ತಿದ್ದೇವೆಂದರೆ, ಒಬ್ಬನನ್ನು ಟೀಕಿಸಿ ಮತ್ತೊಬ್ಬನನ್ನು ತಬ್ಬಿಕೊಳ್ಳುತ್ತಿದ್ದೇವೆಂದರೆ ನಮ್ಮ ಸಾಮಾಜಿಕ ನಿಯತ್ತೇ ಖೋಟಾ ಎನಿಸಿಕೊಳ್ಳುತ್ತದೆ.

ಎರ್ದೋಗಾನ್ ಜಗತ್ತಿನ ಮುಸಲ್ಮಾನರ ಹಕ್ಕುಗಳ ಬಗ್ಗೆ ಹೋರಾಡುವ ಮೊದಲು ಟರ್ಕಿಯಲ್ಲಿನ ಖುರ್ದಿಷ್ ಮುಸ್ಲಿಮರ ಹಕ್ಕುಗಳನ್ನು ಎತ್ತಿ ಹಿಡಿಯಬೇಕಲ್ಲವೇ? ಟರ್ಕಿ‌ ಸಂವಿಧಾನದ ಪ್ರಕಾರವೇ ಖುರ್ದ್, ಖುರ್ದಿಶ್ ಎಂಬ ಪದಗಳ ಬಳಕೆಯನ್ನೇ ಯಾಕೆ ನಿಷೇಧಿಸಲಾಗಿದೆ? ಅದನ್ನು ಆತ ಮೊದಲು ಕಿತ್ತೊಗೆಯಬೇಕು. ಖುರ್ದಿಷ್ ಜನರ ಮಕ್ಕಳಿಗೆ ಅವರ ಭಾಷೆಯಲ್ಲೇ ಶಿಕ್ಷಣ ಕೊಡಲು ಮುಂದಾಗಬೇಕು.‌ ಖುರ್ದಿಷ್ ಜನರ ಬದುಕುವ ಹಕ್ಕನ್ನು ಗೌರವಿಸಬೇಕು. ಆದರೆ ಎರ್ದೋಗಾನ್ ಮಾಡಿದ್ದೇನು? ತನ್ನ ದೇಶದ ಖುರ್ದಿಷ್ ಜನರ ಮೇಲೆ ದಬ್ಬಾಳಿಕೆ ಮಾಡಿದ್ದಲ್ಲದೆ, ನೆರೆಯ ದೇಶಗಳ ಖುರ್ದ್ ನಾಗರಿಕರ ಮೇಲೂ ಏರಿ ಹೋಗುತ್ತಿಲ್ಲವೇ? ಉತ್ತರ ಸಿರಿಯಾದಲ್ಲಿ ಖುರ್ದಿಷ್ ಜನರ ನರಮೇಧವನ್ನು ಎರ್ದೋಗಾನ್ ಯಾಕೆ ನಡೆಸಿದ? ಇದು ಯಾವ ಬಗೆಯ ಇಸ್ಲಾಂ ಪ್ರೇಮ? ಇಲ್ಲಾರೀ, ಅವರು ಖುರ್ದಿಷ್ ಬಂಡುಕೋರರು, ಭಯೋತ್ಪಾದಕರ ವಿರುದ್ಧ ಸಮರ ಸಾರಿದ್ದು ಎಂದು ನೀವು ಹೇಳಬಹುದು. ಆದರೆ ಸಿರಿಯಾದಲ್ಲಿ ಸಾಮಾನ್ಯ ಜನರನ್ನು ಬೀದಿಗೆಳೆದು ಟರ್ಕಿ ಸೈನ್ಯ ದಾರುಣವಾಗಿ ಕೊಲ್ಲುತ್ತ ಬಂತಲ್ಲ ಕಳೆದ ವರ್ಷ? ಅದಕ್ಕೇನು ಹೇಳುತ್ತೀರಿ?

ಪ್ರಶ್ನೆಗಳು ಸಾವಿರವಿದೆ. ಉತ್ತರಿಸುವವರು ಯಾರು? ನಿಜ, ಟರ್ಕಿಯಲ್ಲಿ ಎರ್ದೋಗಾನ್ ಹಲವರಿಗೆ ಇಷ್ಟವಿರಬಹುದು. ಅದು ಎರ್ದೋಗಾನ್ ಹುಟ್ಟಿಸಿದ ಹೊಸ ಬಗೆಯ ನ್ಯಾಷನಲಿಸಂನ ಹೆಮ್ಮೆ. ಈ ಬಗೆಯ ನ್ಯಾಷನಲಿಸಮ್ ಗಳು ಅತಿ ಭಯಾನಕ ಜನಾಂಗೀಯ ನರಮೇಧಗಳನ್ನು ಸಮರ್ಥಿಸುತ್ತವೆ. ಒಂದು ಬಗೆಯ ಜನಾಂಗೀಯ ನರಮೇಧವನ್ನು ನೀವು ಒಪ್ಪಿದರೆ, ಇನ್ಯಾವುದೇ ಜನಾಂಗೀಯ ನರಮೇಧವನ್ನು ಖಂಡಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತೀರಿ.

 

– ದಿನೇಶ್ ಕುಮಾರ್ ಎಸ್.ಸಿ.

Please follow and like us:
error