ಎರಡು ರೂಪಾಯಿಯ ಕಷ್ಟಗಳು….Rajaram Tallur

ರೈತರು ಎಲ್ಲ ಅಡ್ಡ-ತಡೆಗಳನ್ನು ದಾಟಿ ದೆಹಲಿಯ ಹೊರವಲಯ ತಲುಪಿದ ಮೇಲೆ, ಆಳುವವರ ಎರಡನೇ ಹಂತದ ಪ್ರತಿರೋಧ ಆರಂಭವಾಗಿದೆ.
ಇಲ್ಲಿಯ ತನಕ ಸರ್ಕಾರಗಳು ತಮಗೆ ಇಷ್ಟವಿಲ್ಲದ “ಹೋರಾಟಗಳು” ಆರಂಭ ಆದಾಗ, ಅದನ್ನು ಹತ್ತಿಕ್ಕಲು ಅಥವಾ ಒಡೆಯಲು ಪ್ರಯತ್ನಿಸುವುದು ಆಳುವವರ ಪ್ರತಿಕ್ರಿಯೆಯಾಗಿರುತ್ತಿತ್ತು. ಆದರೆ, 2014ರ ಬಳಿಕ ಸುದೀರ್ಘಕಾಲ ಪ್ರತಿಪಕ್ಷವಾಗಿದ್ದ ಪಕ್ಷವೊಂದು ತನ್ನ ಸುಸಜ್ಜಿತ ಮಷೀನರಿಯೊಂದಿಗೆ ಆಡಳಿತಪಕ್ಷ ಆದ ಬಳಿಕ, ಈ ಇಷ್ಟವಿಲ್ಲದ ಹೋರಾಟಗಳನ್ನು ಹಿಮ್ಮೆಟ್ಟಿಸುವ ಮೆಕ್ಯಾನಿಸಂನಲ್ಲಿ ಮಹತ್ವದ ಬದಲಾವಣೆ ಆಗಿದೆ.
ಸರ್ಕಾರಿ ಮಟ್ಟದಲ್ಲಿ ನೀರಿನ ಫಿರಂಗಿ, ರಸ್ತೆ ಅಗೆತ, ಲಾಠಿಚಾರ್ಜ್, ಟಿಯರ್ ಗ್ಯಾಸ್ ಇತ್ಯಾದಿಗಳು ವಿಫಲವಾದ ಬಳಿಕ, ನಿನ್ನೆಯಿಂದೀಚೆಗೆ ಆಳುವವರ ಹಠಾತ್ ಪ್ರತಿರೋಧವನ್ನು ಮತ್ತದರ ರೇಂಜನ್ನು ಗಮನಿಸಿ.
ಗೃಹಸಚಿವರು: ರಸ್ತೆ ತಡೆ ಬಿಟ್ಟು ನಿಗದಿತ ಸ್ಥಳದಲ್ಲಿ ಸೇರಿ ಸತ್ಯಾಗ್ರಹ ಮಾಡಿದರೆ ನಾವು ಚರ್ಚೆಗೆ ಸಿದ್ಧ ಅನ್ನುತ್ತಾರೆ.
ಪ್ರಧಾನಮಂತ್ರಿಗಳು: ತಾವು ಪ್ರತಿನಿಧಿಸುವ ವಾರಾಣಸಿಯಿಂದ ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತಾರೆ.
ಹಣಕಾಸು ಸಚಿವರು: ಟ್ವಿಟ್ಟರ್ ನಲ್ಲಿ ತಮ್ಮ ಸರ್ಕಾರ ತೆಗೆದುಕೊಂಡ ನೀತಿ ನಿರ್ಧಾರಗಳು ಹೇಗೆ ರೈತರ ಪರ ಎಂಬುದನ್ನು ವಿವರಿಸಲು ಟ್ವೀಟ್ ಗಳ ಸರಣಿಯನ್ನೇ ಹೊರಹೊಮ್ಮಿಸುತ್ತಾರೆ.
ಕೃಷಿ ಸಚಿವರು: ನಾವು ನಿಗದಿತ ಡಿಸೆಂಬರ್ 3ಕ್ಕಿಂತ ಮೊದಲೇ 32ರೈತ ಸಂಘಟನೆಗಳೊಂದಿಗೆ ಮಾತುಕತೆಗೆ ಸಿದ್ಧ ಎನ್ನುತ್ತಾರೆ.
ಇದೆಲ್ಲದಕ್ಕೂ ರೈತರ ಪ್ರತಿಕ್ರಿಯೆ: ಸುಗ್ರೀವಾಜ್ಞೆಯ ಮೂಲಕ ಜಾರಿಯಲ್ಲಿರುವ ಹೊಸ ಕೃಷಿ ಮಸೂದೆಗಳನ್ನು ಅಮಾನತು ಮಾಡಿ; ಆಗ ಚರ್ಚೆಗೆ ಬರುತ್ತೇವೆ ಎಂದು.
ಇದೊಂದು ರೀತಿಯ ಚರ್ಚೆ ಸ್ಥಾಗಿತ್ಯದ ಸ್ಥಿತಿ. ಏಕೆಂದರೆ ಎರಡು ಕಡೆಯಿಂದ ಅವರ ನಿಲುವುಗಳಲ್ಲಿ ಬದಲಾವಣೆ ಕಷ್ಟ.
ಆಗ ಶುರುವಾಯ್ತು ನೋಡಿ… ಹನಿಹನಿ ಕೂಡಿ ಹಳ್ಳವಾಗುವ, ಅಡ್ಡ ಇರುವುದನ್ನೆಲ್ಲ ಕೊಚ್ಚಿಕೊಂಡು ಹೋಗುವ “ಎರಡು ರೂಪಾಯಿ” ಹೋರಾಟ.
ಮೊನ್ನೆ ಸಣ್ಣಗೆ ರೈತರು ಬಂದ “ದೊಡ್ಡ” ಕಾರುಗಳ ದರದ ಕುರಿತು ಆರಂಭವಾದ ಈ ಚರ್ಚೆ ಇಂದು ಬೆಳಗ್ಗೆಯ ಹೊತ್ತಿಗೆ ಪೂರ್ಣಪ್ರಮಾಣದ ಟ್ರಾಲಿಂಗ್ ಆಗಿದೆ.
>> ರೈತರ ಹೋರಾಟವನ್ನು CAA ಹೋರಾಟಗಾರರು ಹೈಜಾಕ್ ಮಾಡಿದ್ದಾರೆ ಎಂಬ ಹ್ಯಾಷ್‌ಟ್ಯಾಗ್ ಬೆಳಗ್ಗೆ ಟ್ರೆಂಡ್ ಆಗಿತ್ತು.
>> ರೈತರ ಊಟಕ್ಕೆ ಬಿರಿಯಾನಿ ಬಳಕೆ ಟ್ರಾಲ್ ಆಗುತ್ತಿದೆ.
>>ರೈತ ಹೋರಾಟದ ಹಿಂದಿರುವುದು ದಲ್ಲಾಳಿಗಳು ಎಂದು ಆಪಾದಿಸಲಾಗುತ್ತಿದೆ.
>> I Support Farmer Bill ಟ್ರೆಂಡ್ ಆಗುತ್ತಿದೆ.
ಒಟ್ಟಿನಲ್ಲಿ ರೈತರನ್ನು ಬೈಯುವುದಕ್ಕೆ ಕಷ್ಟ ಆಗುವಲ್ಲಿ ಕಾಂಗ್ರೆಸ್ಸನ್ನೂ ಕಾಂಗ್ರೆಸ್ಸನ್ನು ಬೈಯಲು ಕಷ್ಟ ಆಗುವಲ್ಲಿ CAA ಹೋರಾಟಗಾರರನ್ನೂ ಟ್ರೋಲ್ ಮಾಡುತ್ತಿದ್ದಾರೆ. ಕೃಷಿಕನ ಮೂಲ ಸಮಸ್ಯೆಯನ್ನು ಎರಡು ರೂಪಾಯಿಗಳನ್ನಿರಿಸಿ ಹೊಲಿದ ಕೌದಿಯಿಂದ ಮುಚ್ಚಲಾಗುತ್ತಿದೆ. ವಾಸ್ತವ ಸಂಗತಿಗಳ ಬದಲು ಮಿಥ್ಯಾವಾಸ್ತವಗಳನ್ನು ಮುಂದಿಟ್ಟು “ಶಬ್ದಮಾಲಿನ್ಯ” ಎಬ್ಬಿಸಲಾಗುತ್ತಿದೆ.
ತಮಾಷೆ ಎಂದರೆ 2012ರಿಂದಲೂ ಇಂತಹದೊಂದು ಮಿಥ್ಯಾವಾಸ್ತವಕ್ಕೆ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ ರೈತರ ಪರ ಇರುವವರು ಈ ಮಿಥ್ಯಾವಾಸ್ತವಕ್ಕೆ ತಮ್ಮ “ಮಾಲಿನ್ಯ”ದ ಕೊಡುಗೆಯನ್ನೂ ನೀಡುತ್ತಿದ್ದಾರೆ, ಇದೊಂಥರಾ ಇವಾನ್ ಪಾವ್ಲೋವ್ ನಡೆಸಿದ, ನಾಯಿಗಳ ಹಸಿವೆಯೊಂದಿಗೆ ಆಟ ಆಡುವ ಪ್ರಸಿದ್ಧ ಪ್ರಯೋಗದಂತಾಗಿದೆ. ಆಡಳಿತದ ಪರ ಇರುವ ಮಿಷನರಿ ಟ್ರೋಲಿಂಗ್ ನ ಉದ್ದೇಶವೇ ಈ ರೀತಿಯ “ಗಾರ್ಬೇಜ್ ಸೃಷ್ಟಿ.” ಗಾರ್ಬೇಜ್ ಸೃಷ್ಟಿ ಆದಾಗಲೇ ಮೂಲ ಸಮಸ್ಯೆ ಅದರಡಿ ಮುಚ್ಚಿಹೋಗುತ್ತದೆ.
ಇದರಿಂದಾಗಿ ರೈತ ಇನ್ನಷ್ಟು ಬಡಪಾಯಿ ಆಗಲಿದ್ದಾನೆ. ಕನಿಷ್ಟ ರೈತರ ಈ ಸಾವು-ಬದುಕಿನ ಹೋರಾಟವಾದರೂ ಅದರ ಲಾಜಿಕಲ್ ಅಂತ್ಯ ತಲುಪಲಿ.
Please follow and like us:
error