ಉದ್ಯೋಗಕ್ಕಾಗಿ ರೈಲ್ವೆ ಟ್ರ್ಯಾಕ್ ಮೇಲೆ 25 ಕಿ.ಮೀ ನಡೆದ ಆ ದಿನಗಳು…-ರಘುತ್ತಮ ಹೂಬಾ

“ನಿರುದ್ಯೋಗ ಮಹಾರೋಗ”. ಈ ರೋಗದಿಂದ ಪ್ರತಿಯೊಬ್ಬ ಯುವಕ-ಯುವತಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮುಂದಡಿ ಇಡಬೇಕಿದೆ. ಇಲ್ಲದಿದ್ದರೆ ನಾನು ಅಂದು ರೈಲ್ವೆ ಟ್ರ್ಯಾಕ್ ಮೇಲೆ ನಡೆದಾಡಿದೆ. ಆದರೆ ಇಂದು ನಮ್ಮ ಯುವಕ – ಯುವತಿಯರು ಅದೇ ಟ್ರ್ಯಾಕ್ ಗೆ ತಲೆ ಕೊಡಲಿದ್ದಾರೆ ಅಷ್ಟೇ.
ಅದೊಂದು ದಿನ, 20 ವರ್ಷಗಳ
ಹಿಂದೆ ಇರಬಹುದು, ಶಿಕ್ಷಣದಲ್ಲಿ ಸ್ವಲ್ಪ ಡಿಸ್ಟರ್ಬ್ ಆಗಿದ್ದ ದಿನಗಳವು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಗೆಳೆಯರೊಬ್ಬರ ಕೊಠಡಿಯಲ್ಲಿ ಉಳಿದುಕೊಂಡಿದ್ದೆ. ಮೆಸ್ ಹಾಗೂ ಬೇರೆ ಬೇರೆ ವ್ಯವಸ್ಥೆ ಇದ್ದದ್ದರಿಂದ ಊಟಕ್ಕೆ ಕೊರತೆ ಇರಲಿಲ್ಲ. ಆದರೆ ದುಡ್ಡು, ಕಾಸಿಗೆ? ಓಹ್, ಉದ್ಯೋಗ ಮಾಡಿದರಾಯಿತು ಎಂದು ಉದ್ಯೋಗ ಹುಡುಕಲು ಹೊರಟೇ ಬಿಟ್ಟೆ!
ಉದ್ಯೋಗ, ಅರೆ ಎಲ್ಲಿ ಹುಡುಕುವುದು? ಹೊಟೆಲ್ ಕೆಲಸ, ಅಂಗಡಿ ಕೆಲಸ… ಇತ್ಯಾದಿ ನೆನಪಿಗೆ ಬಂದವಾದರೂ ಸ್ವಾಭಿಮಾನ ಒಪ್ಪಲಿಲ್ಲ. ಗೌರವಯುತ ಉದ್ಯೋಗ ಸರಿ ಎಂದು ಯಾವುದಾದರೂ factory ಸೇರುವುದೇ ಲೇಸು ಎಂದು ಕೈಗಾರಿಕಾ ಪ್ರದೇಶಗಳತ್ತ ಹೋಗುವುದು ಎಂದು ತೀರ್ಮಾನಿಸಿದೆ. ಕೈಗಾರಿಕಾ ಪ್ರದೇಶ, ಯಾವುದು? ತಕ್ಷಣ ನನ್ನ ನೆನಪಿಗೆ ಬಂದದ್ದು ನಂಜನಗೂಡು ಬಳಿಯ ತಾಂಡವಪುರ ಕೈಗಾರಿಕಾ ಪ್ರದೇಶ. ಮೈಸೂರು ಮತ್ತು ನಂಜನಗೂಡು ಮಧ್ಯೆ ಬರುವ ಕೈಗಾರಿಕಾ ಪ್ರದೇಶ ಅದು. ಚಾಮರಾಜನಗರದಿಂದ ಟ್ರೈನ್ ನಲ್ಲಿ ಮೈಸೂರಿಗೆ ಬರುವಾಗ ರೈಲ್ವೆ ಹಾದಿಯಲ್ಲಿ ಅದನ್ನು ಕಂಡಿದ್ದೆನಾದ್ದರಿಂದ ಅಲ್ಲಿ ನೂರಾರು ಕೈಗಾರಿಕೆಗಳಿರುತ್ತವೆ, ಆದ್ದರಿಂದ ಅಲ್ಲಿಗೇ ಹೋಗುವುದು ಸರಿ ಎಂದು ನಿರ್ಧರಿಸಿದೆ. ಹೊರಡಲು ಅನುವಾದೆ.
ಹಾಗೆ ಹೊರಡುವಾಗ ಜೇಬಿನಲ್ಲಿ ದುಡ್ಡಿದೆಯಾ ಎಂದು ನೋಡಲು ಕೈಹಾಕಿದೆ. ಇದ್ದದ್ದು ಐದೇ ರೂಪಾಯಿ! ಏನು ಮಾಡುವುದು? ಬಸ್ ಚಾರ್ಜ್ ಗೆ ಕೂಡ ಕಾಸಿಲ್ಲ. ಹಾಗಂತ ಕೆಲಸ ಹುಡುಕದೆ ಇರಲು ಸಾಧ್ಯವಿಲ್ಲ. ಹುಡುಕದಿದ್ದರೆ ನಾಳೆಯಿಂದ ಜೇಬಲ್ಲಿ ಆ ಐದು ರೂಪಾಯಿ ಕೂಡ ಇರೋಲ್ಲ! ಏನು ಮಾಡುವುದು? ಮನಸ್ಸು ಜೋರಾಗಿ ಓಡಲು ಶುರು ಮಾಡಿತು. ಒಂದು ಐಡಿಯಾ ಹೊಳೆಯಿತು. ಹೇಗಿದ್ದರೂ ಆ ಕೈಗಾರಿಕಾ ಪ್ರದೇಶ ರೈಲು ಹಾದಿಯ ಪಕ್ಕ ಬರುತ್ತದೆ. ಆದ್ದರಿಂದ ರೈಲು ಹಾದಿಗುಂಟ ನಡೆದುಕೊಂಡು ಹೋದರೆ…?
ಅದೇ ಸರಿ ಅನಿಸಿತು. ಮೈಸೂರಿನಿಂದ ರೈಲ್ವೆ ಟ್ರ್ಯಾಕ್ ಹಾದಿ ಹಿಡಿದು ನಡೆಯಲು ಪ್ರಾರಂಭಿಸಿದೆ. ಆಘಾತದ ವಿಚಾರವೆಂದರೆ, ನೇರ ಹಾದಿ ಒಂದ್ಹತ್ತು ಕಿಲೋಮೀಟರ್ ಆಗಬಹುದು ಎಂದುಕೊಂಡರೆ ಮಧ್ಯೆ ಸೇತುವೆ, ಹೊಲ- ಗದ್ದೆ, ಕೆಲವು ಕಡೆ ದುರ್ಗಮ ಹಾದಿ… ಒಂದರೆಕ್ಷಣ ವಾಪಸ್ ಹೋಗೋಣ ಅನಿಸಿತ್ತು. ತಕ್ಷಣ, ಮತ್ತೆ ಉದ್ಯೋಗದ ನೆನಪಾಗಿ ಮುಂದೆ ಹೆಜ್ಜೆ ಇಡಲಾರಂಭಿಸಿದ್ದೆ. ಏರು ಬಿಸಿಲು, ಸುಸ್ತು, ಆದರೂ ತಲೆ ಕೆಡಿಸಿಕೊಳ್ಳದೆ ಉದ್ಯೋಗದ ಬೆನ್ನತ್ತಿ ಮುಂದೆ ಸಾಗಿದೆ.
ರೈಲ್ವೆ ಟ್ರ್ಯಾಕ್ ಹಾದಿಗುಂಟ ನಡೆಯುವಾಗ ಕೆಲವೊಮ್ಮೆ ಟ್ರೈನ್ ಹತ್ತಿರವೇ ಸಾಗುತ್ತಿತ್ತು. ಹಾಗೆಯೇ ಟ್ರೈನ್ ಇಲ್ಲದಾಗ ರೈಲ್ವೆ ಟ್ರ್ಯಾಕ್ ಮೇಲೆಯೇ ನಡೆದಿದ್ದೆ! ಅಂತು ಇಂತೆಲ್ಲ ಸಾಹಸದ ಬಳಿಕ ಬೆಳಿಗ್ಗೆ 11 ಗಂಟೆಗೆ ಮೈಸೂರು ಬಿಟ್ಟವನು ಮಧ್ಯಾಹ್ನ 2 ಅಥವಾ 2-30 ಇರಬೇಕು ತಾಂಡವಪುರ ಕೈಗಾರಿಕಾ ಪ್ರದೇಶ ತಲುಪಿದೆ. ಹೆಚ್ಚು ಕಮ್ಮಿ 25 ಕಿ.ಮೀ ನಡೆದೆ. ಆದರೂ ಬೇಸರ ಇಲ್ಲ. ಉದ್ಯೋಗ ಬೇಕಲ್ಲವೆ?
ಹಾಗೆಯೇ ತತಕ್ಷಣ ತಡ ಮಾಡಬಾರದು ಎಂದು ಒಂದಷ್ಟು ಕೈಗಾರಿಕೆ ಘಟಕಗಳಲ್ಲಿ ವಿಚಾರಿಸಿದೆ. ನೋಡಿದರೆ ಎಲ್ಲೆಲ್ಲೂ ಕೆಲಸ ಖಾಲಿ ಇಲ್ಲ ಎಂದು ಸೂಚಿಸುವ No Vacancy ಬೋರ್ಡ್ ಗಳು! ಕೆಲವು ಕಡೆ ವಿಚಾರಿಸಿದಾಗ ಪೇಪರ್ ನಲ್ಲಿ ಜಾಹೀರಾತು ನೀಡುತ್ತೇವೆ. ಆಮೇಲೆ apply ಮಾಡಿ ಬನ್ನಿ ಎಂಬ ಉತ್ತರ. ಇನ್ನೊಂದೆರಡು ಫ್ಯಾಕ್ಟರಿ ನೋಡಿದೆ. ಅಲ್ಲಿ ಆ ಕೆಲಸಗಾರರು ಕೆಲಸ ಮಾಡುವ ಪರಿ ನೋಡಿಯೇ ಅದೆಷ್ಟು ಕಷ್ಟ ಎಂದು ಅರಿತು ವಿಚಾರಿಸಲೇ ಹೋಗಲಿಲ್ಲ.
ಈ ನಡುವೆ ಸಮಯ ಮಧ್ಯಾಹ್ನ 3 ನ್ನು ಮೀರಿತ್ತು. ಹೊಟ್ಟೆ ಬೇರೆ ತುಂಬಾ ಹಸಿದಿತ್ತು. ಸಮೀಪದಲ್ಲೇ ಇದ್ದ ಫುಟ್ ಪಾತ್ ಹೊಟೆಲ್ ಒಂದಕ್ಕೆ ಹೋದೆ. ಅನ್ನ ಸಾಂಬಾರ್ ಒಂದು ಪ್ಲೇಟ್ ಎಷ್ಟು ಎಂದು ಕೇಳಿದೆ. ಪ್ಲೇಟ್ 10 ರೂ ಅಂದರು. ಹಾಫ್ ಕೊಡ್ತೀರ ಅಂದೆ. ಹೌದು, 5 ರೂಪಾಯಿ ಅಂದರು. ಅರ್ಧ ಅನ್ನ ಸಾಂಬಾರ್ ತಿಂದೆ. ಹೊಟ್ಟೆ ತುಂಬ ನೀರು ಕುಡಿದೆ. ಸಂಜೆ ಮೈಸೂರಿಗೆ ಟ್ರೈನ್ 6 ಗಂಟೆಗೆ ಎಂದು ತಿಳಿಯಿತು. ಜೇಬಲ್ಲಿ ಒಂದು ಪೈಸೆ ಇರಲಿಲ್ಲ. ಜನರಲ್ ಬೋಗಿಯಲ್ಲಿ ಹತ್ತಿ ಟಿಕೆಟ್ ರಹಿತ ಪ್ರಯಾಣ ಮಾಡಿದರಾಯಿತು ಎಂದು ಸುಮ್ಮನಾದೆ ಮತ್ತು ರೈಲು ಬರುವ ತನಕ ನಿಲ್ದಾಣದಲ್ಲಿ ಒಂದಷ್ಟು ಕವನ, ಕತೆ ಗೀಚಿದೆ. ನಡುವೆ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ ಒಂದಷ್ಟು ಅಂಕಪಟ್ಟಿಗಳು, ಮಾಡಿಸಿಟ್ಟುಕೊಂಡಿದ್ದ ಎಂಪ್ಲಾಯ್ ಮೆಂಟ್ ಕಾರ್ಡ್ ನನ್ನನ್ನು ಅಣಕಿಸಿದವು. ನಾನು ಅವುಗಳನ್ನು ನೋಡಿ ಅಣಕಿಸಿದೆ. ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಅಂಕ 600ಕ್ಕೆ 475 ಎಂದಿತ್ತು, ಗಣಿತ ವಿಷಯದಲ್ಲಿ 100ಕ್ಕೆ 91 ಎಂದಿತ್ತು! ಆದರೆ ಅವ್ಯಾವುದಕ್ಕೂ ಆ ದಿನ ನಾನು ಉದ್ಯೋಗಕ್ಕಾಗಿ ರೈಲ್ವೆ ಟ್ರ್ಯಾಕ್ ಮೇಲೆ ನಡೆಯುವುದನ್ನು ತಪ್ಪಿಸಲಿಕ್ಕೆ ಆಗಲಿಲ್ಲ!
ಸಂಜೆ 5-30ಕ್ಕೆ ಟ್ರೈನ್ ಬಂತು ಯೋಜನೆಯಂತೆ ಜನರಲ್ ಬೋಗಿಯಲ್ಲಿ ಹತ್ತಿ ಕುಳಿತು ಮೈಸೂರು ತಲುಪಿದೆ. ಗೆಳೆಯನಿಗೆ ಈ ಕತೆ ಹೇಳಲಿಲ್ಲ. ಯಾಕೆಂದರೆ ಆತ ಸಂಬಂಧಿ ಕೂಡ ಹೌದು. ಹಾಗಿದ್ದರೂ ಈಗ ಎಲ್ಲರ ಮುಂದೆ ಹೇಳುತ್ತಿದ್ದೇನೆ. ಯಾಕೆಂದರೆ ಮಿತ್ರರೊಬ್ಬರು ನಿನ್ನೆ ಶಾಲೆಯೊಂದರಲ್ಲಿ ಗೌರವ ಶಿಕ್ಷಕರಾಗಿ ಎಂಟು ತಿಂಗಳು ದುಡಿದು ಸಂಬಳವಿಲ್ಲದೆ ಬಿಡುಗಡೆಗೊಂಡಿದ್ದರು. ಸಂಬಳ ಇನ್ನೂ ಆಗದ್ದಕ್ಕೆ ಇನ್ನೂ ಬಿಲ್ ಆಗಿಲ್ವಂತೆ ಸರ್
ಎಂಬುದು ಕಾರಣವಾಗಿತ್ತು. ಹಾಗಿದ್ದರೂ ಅವರು ಸ್ಕೂಟರ್ ಸ್ಟಾರ್ಟ್ ಮಾಡಿ “ಸರ್, ಬನ್ನಿ ಡ್ರಾಪ್ ಮಾಡುತ್ತೇನೆ” ಎಂದರು! ಗಾಡಿಗೆ ಪೆಟ್ರೋಲ್ ಹೇಗೆ ಬರುತ್ತದೆ, ಮನೆಗೆ ಏನು ಕೊಡುತ್ತಾರೆ, ಮದುವೆಯಾದರೆ ಇವರ ಗತಿ ಏನು…. ಹೀಗೆ ನೂರಾರು ಪ್ರಶ್ನೆಗಳು ಹಾದು ಹೋದವು. ಹಾಗೆ ಸ್ಮೃತಿಪಟಲದಲ್ಲಿ ನಾನು ಉದ್ಯೋಗ ಹುಡುಕಿ ರೈಲ್ವೆ ಟ್ರ್ಯಾಕ್ ಮೇಲೆ 25 ಕಿ.ಮೀ ನಡೆದ ಘಟನೆಯೂ ಹಾದುಹೋಯಿತು.
“ನಿರುದ್ಯೋಗ ಮಹಾರೋಗ”. ಈ ರೋಗದಿಂದ ಪ್ರತಿಯೊಬ್ಬ ಯುವಕ-ಯುವತಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮುಂದಡಿ ಇಡಬೇಕಿದೆ. ಇಲ್ಲದಿದ್ದರೆ ನಾನು ಅಂದು ರೈಲ್ವೆ ಟ್ರ್ಯಾಕ್ ಮೇಲೆ ನಡೆದಾಡಿದೆ. ಆದರೆ ಇಂದು ನಮ್ಮ ಯುವಕ – ಯುವತಿಯರು ಅದೇ ಟ್ರ್ಯಾಕ್ ಗೆ ತಲೆ ಕೊಡಲಿದ್ದಾರೆ ಅಷ್ಟೇ.
-ರಘೋತ್ತಮ ಹೊ.ಬ
Please follow and like us:
error