ಈ ಕೆಟ್ಟ ಕಾಲದಲ್ಲಿ ಭಗತ್ ಸಿಂಗ್ ನೆನಪು…-ಸನತ್ ಕುಮಾರ್ ಬೆಳಗಲಿ

prachalitha-sanatkumar-belagali

ಜಾತ್ಯತೀತ ಭಾರತವನ್ನು ನಾಶಪಡಿಸಿ, ಮನುವಾದಿ ಹಿಂದೂ ರಾಷ್ಟ್ರವನ್ನು ಕಟ್ಟಲು ಹೊರಟ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಈ ಕೆಟ್ಟ ದಿನಗಳಲ್ಲಿ ನಾವು ಶಹೀದ್ ಭಗತ್ ಸಿಂಗ್‌ರನ್ನು ನೆನಪಿಸಿಕೊಳ್ಳಬೇಕಿದೆ. ಕ್ರಾಂತಿಗೆ ಚಿರಾಯುವಾಗಲಿ ಎಂದು ಘೋಷಣೆ ಹಾಕಿ ತನ್ನ ಸಂಗಾತಿಗಳೊಂದಿಗೆ ಭಗತ್ ಸಿಂಗ್ ನೇಣುಗಂಬಕ್ಕೇರಿ ಮಾರ್ಚ್ 23ಕ್ಕೆ 85 ವರ್ಷಗಳು ಆಗುತ್ತವೆ.

ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಈ ಮೂವರು ಸಾವಿನ ಕಟ್ಟಕಡೆಯ ಗಳಿಗೆಯಲ್ಲೂ ಈ ದೇಶ, ಜಗತ್ತು, ಜನರು ಮತ್ತು ಸಮತಾವಾದದ ಬಗ್ಗೆ ಚಿಂತಿಸಿದರು. ಮಹಾತ್ಮಾಗಾಂಧೀಜಿ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟಕ್ಕೆ ಭಿನ್ನವಾಗಿ ನಿಂತ ಭಗತ್ ಸಿಂಗ್ ದೇಶಕ್ಕೆ ಸ್ವಾತಂತ್ರ್ಯ ಬಂದರೆ ಸಾಲದು, ಸಮಾನತೆ ಬರಬೇಕು. ಸಮಾಜವಾದಿ ಭಾರತ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು. ಗಲ್ಲಿಗೇರಿಸುವ ದಿನ ಸಂಜೆ 7:30ಕ್ಕೆ ನೇಣುಗಂಬಕ್ಕೇರಲು ಜೈಲು ಅಧಿಕಾರಿ ಕರೆಯಲು ಬಂದಾಗ, ಭಗತ್ ಸಿಂಗ್ ಪುಸ್ತಕವೊಂದನ್ನು ಓದುತ್ತಿದ್ದರು. -ಬೇಗ ಸಿದ್ಧವಾಗಿ- ಎಂದು ಜೈಲು ಅಧಿಕಾರಿ ಹೇಳಿದಾಗ, ‘‘ಕೊಂಚ ತಡೆ. ಕ್ರಾಂತಿಕಾರಿಯೊಬ್ಬ ಇನ್ನೊಬ್ಬ ಕ್ರಾಂತಿಕಾರಿಗೆ ಮುಖಾಮುಖಿಯಾಗುತ್ತಿದ್ದಾನೆ’’ ಎಂದು ಭಗತ್ ಸಿಂಗ್ ಹೇಳಿದರು. ಆ ಕೊನೆಯ ಗಳಿಗೆಯಲ್ಲಿ ಭಗತ್ ಸಿಂಗ್ ರಶ್ಯನ್ ಕ್ರಾಂತಿಕಾರಿ ನಾಯಕ ಲೆನಿನ್ ಜೀವನಚರಿತ್ರೆ ಓದುತ್ತಿದ್ದರು.

bhagati_singh_the_great

ಕೇವಲ 23ನೆ ವಯಸ್ಸಿನಲ್ಲೇ ದೇಶಕ್ಕಾಗಿ ನೇಣುಗಂಬವನ್ನೇರಿದ ಭಗತ್ ಸಿಂಗ್ ಆ ಕಿರಿಯ ವಯಸ್ಸಿನಲ್ಲೇ ಅಸಾಮಾನ್ಯ ಬುದ್ಧಿವಂತನಾಗಿದ್ದರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರವಲ್ಲ ಸ್ವಾತಂತ್ರೋತ್ತರ ಭಾರತದ ಬಗ್ಗೆ ಭಗತ್ ಸಿಂಗ್‌ರಿಗೆ ತಮ್ಮದೇ ಆದ ಆಲೋಚನೆಗಳು ಇದ್ದವು. ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇತ್ತು. ಅಂತಲೇ ತನ್ನ ಸಂಘಟನೆಗೆ ಸಮಾಜವಾದಿ ನವಜವಾನ್ ಸಭಾ ಎಂದು ಹೆಸರು ಇಟ್ಟಿದ್ದರು.

ಭಾರತ ಸ್ವತಂತ್ರಗೊಂಡ ನಂತರ ಇದು ಧರ್ಮ ಆಧಾರಿತ ರಾಷ್ಟ್ರವಾಗಬಾರದು. ಇದು ಜಾತ್ಯತೀತ ಸಮಾಜವಾದಿ ರಾಷ್ಟ್ರವಾಗಬೇಕೆಂದು ಭಗತ್ ಸಿಂಗ್ ಬಯಸಿದ್ದರು. ಅಂತಲೇ ಆಗ ಹಿಂದೂ ಮಹಾಸಭಾ ನಾಯಕರಾಗಿದ್ದ ನಂತರ ಬ್ರಿಟಿಷರಿಗೆ ಕ್ಷಮೆ ಯಾಚಿಸಿ ಜೈಲಿನಿಂದ ಹೊರಬಂದ ಸಾವರ್ಕರ್ ಜೊತೆ ಭಗತ್ ಸಿಂಗ್ ಸೇರಲಿಲ್ಲ. 1925ರಲ್ಲಿ ನಾಗಪುರದಲ್ಲಿ ಸ್ಥಾಪನೆಯಾಗಿದ್ದ ಆರೆಸ್ಸೆಸನ್ನು ಕೂಡ ಭಗತ್‌ಸಿಂಗ್ ದೂರವಿಟ್ಟಿದ್ದರು. ಆದರೂ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಚೇಲಾ ಆಗಿದ್ದ ಅವರು ಈಗ ಭಗತ್ ಸಿಂಗ್ ಹೆಸರನ್ನು ಆಗಾಗ ಅನೈತಿಕವಾಗಿ ಬಳಸಿಕೊಳ್ಳುತ್ತಾರೆ.

ಭಗತ್ ಸಿಂಗ್ ಏನಿದ್ದರೂ ಅವರ ವೈಚಾರಿಕ ದೃಷ್ಟಿಕೋನ ಯಾವುದಾಗಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಬೇರೆಯವರು ಬರೆದ ಜೀವನ ಚರಿತ್ರೆಗಳ ಅಗತ್ಯವೂ ಇಲ್ಲ. ಭಗತ್ ಸಿಂಗ್ ತಾನು ಏನಾಗಿದ್ದೆ ಮತ್ತು ವೈಚಾರಿಕ ನಿಲುವೇನು ಎಂಬ ಬಗ್ಗೆ ಜೈಲಿನಲ್ಲಿದ್ದಾಗ ಬರೆದ ಡೈರಿ ಮತ್ತು ಪತ್ರಗಳು ಈ ಮಹಾನ್ ಚೇತನ ನಡೆದು ಬಂದ ದಾರಿಗೆ ಸಾಕ್ಷಿಯಾಗಿವೆ. ಅಂತಲೇ ಭಗತ್ ಸಿಂಗ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಸಂಘ ಪರಿವಾರದ ಯತ್ನ ವಿಫಲಗೊಂಡಿತು. ಭಗತ್ ಸಿಂಗ್ ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ಯಾವ ನಾಯಕರು ಕೋಮುವಾದಿಗಳು ಆಗಿರಲಿಲ್ಲ. ಅಂತಲೇ ಅವರ ಹೆಸರನ್ನು ಬಳಸಿಕೊಳ್ಳುವಲ್ಲಿ ವಿಫಲಗೊಂಡ ಸಂಘ ಪರಿವಾರ ಈಗ ಪುರಾಣ ಕತೆಗಳಲ್ಲಿ ಇರುವ ರಾಮ, ಕೃಷ್ಣ ಮತ್ತು ಹನುಮಂತನ ಸ್ಟಿಕರ್‌ಗಳನ್ನು ವಾಹನಗಳಿಗೆ ಅಂಟಿಸಿ ಖುಷಿ ಪಡುತ್ತಿದೆ.

ಭಗತ್ ಸಿಂಗ್ ಈಗ ನಮ್ಮ ನಡುವೆ ಇಲ್ಲ. ಆದರೆ ದೇಶಕ್ಕಾಗಿ ಜನತೆಗಾಗಿ ಬಲಿ ವೇದಿಕೆಯನ್ನೇರಿದ ಅವರ ಸ್ಫೂರ್ತಿ ಇಂದಿಗೂ ಹಸಿರಾಗಿದೆ. ಜಗತ್ತಿನ ಎಲ್ಲ ದೇಶಗಳ ಯುವಕರಿಗೆ ಚೆಗುವಾರ ಐಕಾನ್ ಆಗಿರುವಂತೆ ಭಾರತದ ಯುವಕರಿಗೆ ಭಗತ್ ಸಿಂಗ್ ಇಂದಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಮಹಾನ್ ಚೇತನಗಳ ವಾರಸುದಾರರಾದ ಎಡಪಂಥೀಯ ಸಂಘಟನೆಗಳು ಈಗ ಯಾಕೆ ಹಿನ್ನಡೆ ಅನುಭವಿಸುತ್ತಿವೆ ಎಂದು ಒಮ್ಮಿಮ್ಮೆ ತುಂಬಾ ಅಚ್ಚರಿಯಾಗುತ್ತದೆ. ಯಾವುದೇ ಸಿದ್ಧಾಂತ ಇಲ್ಲವೇ ಸಂಘಟನೆ ಚಲನಶೀಲತೆ ಕಳೆದುಕೊಂಡಾಗ, ಒಮ್ಮಾಮ್ಮೆ ಈ ಸ್ಥಗಿತತೆ ಉಂಟಾಗುತ್ತದೆ. ಆದರೆ ಇದು ಶಾಶ್ವತವಲ್ಲ. ಕಳೆದ ಶತಮಾನದ 30ರ ದಶಕದಲ್ಲಿ ಯುರೋಪಿನ ಬಂಡವಾಳಶಾಹಿಗಳು ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ, ಆ ಬಿಕ್ಕಟ್ಟಿನಿಂದ ಪಾರಾಗಲು ದಾರಿ ಕಾಣದೇ ಹಿಟ್ಲರ್ ಮತ್ತು ಮುಸಲೋನಿ ಅಂತಹವರನ್ನು ಸೃಷ್ಟಿ ಮಾಡಿದರು. ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಈಗ ಅಂತಹ ಬಿಕ್ಕಟ್ಟಿನಲ್ಲಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ನರೇಂದ್ರ ಮೋದಿಯಂತಹ ನಾಯಕನನ್ನು ಸೃಷ್ಟಿಸಿತು. ಇಂತಹ ಸನ್ನಿವೇಶದಲ್ಲಿ ಜನಪರ ಚಳವಳಿಗೆ ಒಮ್ಮಿಮ್ಮೆ ಹಿನ್ನಡೆಯಾಗುತ್ತದೆ. ಆದರೆ ಕಾಲಚಕ್ರ ತಿರುಗಿದಂತೆ, ಅವು ಮತ್ತೆ ಪುಟಿದೇಳುತ್ತವೆ.

ಈ ಅಂಕಣ ಬರೆಯುವಾಗ, ಭಗತ್ ಸಿಂಗ್ ಈಗ ಬದುಕಿದ್ದರೆ ಹೇಗಿರುತ್ತಿದ್ದರು ಮತ್ತು ಈ ಕಾಲದ ಸವಾಲಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂಬ ಯೋಚನೆಯೊಂದು ತಲೆಯಲ್ಲಿ ಸುಳಿದಾಡಿತು. ಹೀಗೆ ಮೆಲುಕು ಹಾಕುತ್ತ ಹೋದಾಗ, ಒಮ್ಮೆಲೇ ಕನ್ಹಯ್ಯಕುಮಾರ್ ನೆನಪಾಯಿತು. ಭಗತ್‌ಸಿಂಗ್ ಬದುಕಿದ್ದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅವರನ್ನು ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಹಾಕುತ್ತಿತ್ತು. ಜಾತ್ಯತೀತ ಭಾರತದ ಅಗ್ರ ಪ್ರತಿಪಾದಕರಾಗಿದ್ದ ಭಗತ್ ಸಿಂಗ್ ಇವರ ಪಾಲಿಗೆ ಹಿಂದೂ ವಿರೋಧಿಯಾಗಿರುತ್ತಿದ್ದರು. ಅಂಬಾನಿ, ಅದಾನಿಯವರ ಪಾದಸೇವೆ ಮಾಡುತ್ತಿರುವ ಇವರನ್ನು ಕಂಡು ಭಗತ್ ಸಿಂಗ್ ಸುಮ್ಮನಿರುತ್ತಿರಲಿಲ್ಲ. ಬೀದಿಗಿಳಿದು ಹೋರಾಡುತ್ತಿದ್ದರು. ಸೆಕ್ಯೂಲರ್ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಭಗತ್ ಸಿಂಗ್ ನೇರ ಸಂಘರ್ಷಕ್ಕೆ ಇಳಿಯುತ್ತಿದ್ದರು.

80 ವರ್ಷದ ಹಿಂದೆಯೇ ಸಮತಾವಾದದ ಮಾತುಗಳನ್ನಾಡಿದ ಭಗತ್ ಸಿಂಗ್ ಖಾಸಗೀಕರಣ, ಉದಾರೀಕರಣ, ಕೇಸರೀಕರಣ ಇವೆಲ್ಲದರ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದರು. ಆಗ ಸರಕಾರ ಅವರನ್ನು ಜೈಲಿಗೆ ಹಾಕುತ್ತಿತ್ತು. ಕನ್ಹಯ್ಯಕುಮಾರನ್ನು ದೇಶದ್ರೋಹಿಯೆಂದು ಆರೋಪಿಸಿ ಸೆರೆಮನೆಗೆ ತಳ್ಳಿದಂತೆ, ಭಗತ್ ಸಿಂಗ್‌ರನ್ನು ತಳ್ಳುತ್ತಿತ್ತು. ಈ ಮಾತುಗಳು ಊಹಾತ್ಮಕವಾದರೂ ಈಗ ದೇಶದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ಪೂರಕವಾಗಿವೆ.
ಭಗತ್ ಸಿಂಗ್ ಮೂಢನಂಬಿಕೆ ಮತ್ತು ಕಂದಾಚಾರದ ಕಡು ವಿರೋಧಿಯಾಗಿದ್ದರು. ಅವರು ಚಿಕ್ಕವನಿದ್ದಾಗ, ಸಿಖ್ಖರ ಸಂಘಟನೆಯೊಂದು ದೇವಾಲಯಗಳಿಗೆ ದಾನ ನೀಡಿದ ಹಣ ದುರುಪಯೋಗ ಆಗುವುದನ್ನು ಪ್ರತಿಭಟಿಸಿ ಜಾಥಾ ನಡೆಸಿತ್ತು. ಈ ಜಾಥಾ ಭಗತ್ ಸಿಂಗ್ ಹಳ್ಳಿಗೆ ಬಂದಾಗ, ಹಳ್ಳಿಯ ಪಟ್ಟಭದ್ರ ಹಿತಾಸಕ್ತಿಗಳು ಜಾಥಾ ವಿರೋಧಿಸಿ ಅವರಿಗೆ ಹನಿ ನೀರು ಸಿಗದಂತೆ ಮಾಡಲು ಯತ್ನಿಸಿದರು. ಆದರೆ ಭಗತ್ ಸಿಂಗ್ ಈ ಶಕ್ತಿಗಳನ್ನು ಎದುರು ಹಾಕಿಕೊಂಡು ಜಾಥಾದಲ್ಲಿ ಇರುವ ಎಲ್ಲರಿಗೂ ಊಟ, ಉಪಚಾರದ ವ್ಯವಸ್ಥೆ ಮಾಡಿದರು. ಆಗ ಇನ್ನೂ ಅವರು 18ರ ಯುವಕ.

ಇಂತಹ ಭಗತ್ ಸಿಂಗ್ ಜನಿಸಿದ ಈ ದೇಶದಲ್ಲಿ ಸಮಾಜವಾದವನ್ನು ಕಂಡರಾಗದ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಭಕ್ತರು ದೇಶದ ಅಧಿಕಾರ ಸೂತ್ರ ಹಿಡಿದಿದ್ದಾರೆ. ಇವರು ಬರೀ ಭಕ್ತರಲ್ಲ, ದೇಶದ ಸಂಪತ್ತು ಲೂಟಿ ಮಾಡಲು ಹೊರಟ ಅಂಬಾನಿ, ಅದಾನಿಗಳಂತಹ ದೇಶ-ವಿದೇಶದ ಕಾರ್ಪೊರೇಟ್ ಖದೀಮರ ಪಾದಸೇವಕರು ಎಂಬುದು ಈಗ ಬಯಲಾಗತೊಡಗಿದೆ. ಈ ಲೂಟಿಯ ವಿರುದ್ಧ ಜನರು ಪ್ರಶ್ನಿಸಬಾರದೆಂದು ಯುವಕರಿಗೆ ಹಿಂದೂತ್ವದ ನಶೆ ಏರಿಸಲಾಗಿದೆ. ಈ ನಶೆ ಇಳಿದ ನಂತರ ಆ ಯುವಕರು ಇವರಿಗೆ ಪಾಠ ಕಲಿಸುತ್ತಾರೆ.

ಪ್ರಜಾಪ್ರಭುತ್ವದ ಮೇಲೆ ಅಚಲ ನಂಬಿಕೆ ಹೊಂದಿದ್ದ ಭಗತ್ ಸಿಂಗ್ ಚರ್ಚೆ, ಸಂವಾದದ ಅಗ್ರ ಪ್ರತಿಪಾದಕ ರಾಗಿದ್ದರು. ಆದರೆ ಈಗ ಸಂವಾದವೆಂದರೆ ಹೆದರಿ ಪಲಾಯನ ಮಾಡುವ ಈ ರಣಹೇಡಿಗಳು ವಿಶ್ವವಿದ್ಯಾನಿಲಯದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ. ಇತ್ತೀಚೆಗೆ ನಾಗಪುರದ ತುಕಡೊಜಿ ಮಹಾರಾಜ ವಿಶ್ವವಿದ್ಯಾನಿಲಯ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಲು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರನ್ನು ಆಹ್ವಾನಿಸಿತ್ತು. ಆದರೆ ಎಬಿವಿಪಿ ಬೆದರಿಕೆಗೆ ಹೆದರಿ ಈ ವಿಶ್ವವಿದ್ಯಾನಿಲಯದ ಕುಲಪತಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಉತ್ತರ ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಇದೇ ರೀತಿ ಉಪನ್ಯಾಸ ನೀಡಲು ಹೋಗಿದ್ದ ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಅವರಿಗೂ ಕೂಡ ಎಬಿವಿಪಿ ಗೂಂಡಾಗಳು ಮಾತನಾಡಲು ಬಿಡಲಿಲ್ಲ. ಇವರಷ್ಟೇ ಅಲ್ಲ, ಮೇಧಾ ಪಾಟ್ಕರ್, ಅರವಿಂದ್ ಕೇಜ್ರಿವಾಲ್, ಸ್ವಾಮಿ ಅಗ್ನಿವೇಶ್, ಯೋಗೇಂದ್ರ ಯಾದವ್ ಹೀಗೆ ಅನೇಕ ಚಿಂತಕರು ಈ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿದ್ದಾರೆ.

ಭಗತ್ ಸಿಂಗ್ ಬದುಕಿದ್ದರೆ ಈಗಿರುವ ಎಡಪಕ್ಷಗಳಲ್ಲಿ ಇರುತ್ತಿದ್ದರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಸೈದ್ಧಾಂತಿಕವಾಗಿ ಎಡಪಂಥೀಯ ನೆಲೆಯಲ್ಲಿ ನಿಂತು ಫ್ಯಾಶಿಸ್ಟ್ ವಿರೋಧಿ ಹೋರಾಟ ರೂಪಿಸುತ್ತಿದ್ದರು. ಮತಾಂತರ, ಗೋ ಹತ್ಯೆ ನಿಷೇಧ, ಲವ್ ಜಿಹಾದ್ ಇತ್ಯಾದಿ ಹೆಸರಿನಲ್ಲಿ ಇವರು ನಡೆಸುತ್ತಿರುವ ಹೇಯ ಕೃತ್ಯಗಳನ್ನು ಇವರು ವಿರೋಧಿಸುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲಾ ಆತ್ಮಹತ್ಯೆ ಮತ್ತು ಜೆಎನ್‌ಯುನಲ್ಲಿ ಇತ್ತೀಚೆಗೆ ನಡೆದ ರಜನಿ ಕೃಷ್ಣನ್ ಆತ್ಮಹತ್ಯೆ ಇವೆಲ್ಲವನ್ನು ನೋಡಿ ಭಗತ್ ಸಿಂಗ್ ಸುಮ್ಮನೆ ಕೂರುತ್ತಿರಲಿಲ್ಲ.

20ನೆ ವಯಸ್ಸಿನಲ್ಲಿ ‘‘ನಾನೇಕೆ ನಾಸ್ತಿಕ’’ ಎಂಬ ಪುಸ್ತಕ ಬರೆದು ದೇವರ ಹೆಸರಿನಲ್ಲಿ ನಡೆಯುವ ಅನಾಚಾರಿಗಳಿಗೆ ಸವಾಲು ಹಾಕಿದ ಭಗತ್ ಸಿಂಗ್ ಆದಿತ್ಯನಾಥರಂತಹ ಢೋಂಗಿ ಸನ್ಯಾಸಿಗಳು ಒಂದು ರಾಜ್ಯದ ಮುಖ್ಯಮಂತ್ರಿ ಯಾಗುವುದನ್ನು ಸುಮ್ಮನೆ ನೋಡುತ್ತ ನಿಲ್ಲುತ್ತಿರಲಿಲ್ಲ.

ಶತಮಾನಗಳಿಂದ ವಂಚನೆಗೆ ಒಳಗಾದ ಸಮುದಾಯಕ್ಕೆ ಮಾತ್ರವಲ್ಲ, ದೇಶದ ಕೋಟ್ಯಂತರ ಜನರಿಗೆ ಸಂವಿಧಾನ ಎಂಬ ಬೆಳಕನ್ನು ನೀಡಿದ ಬಾಬಾ ಸಾಹೇಬ್‌ಅಂಬೇಡ್ಕರ್ ನೀಡಿದ ಆಶಯಗಳನ್ನು ಹೊಸಕಿ ಹಾಕಲು ದೇಶದ ಅಧಿಕಾರ ಸೂತ್ರ ಹಿಡಿದ ಫ್ಯಾಶಿಸ್ಟ್ ಶಕ್ತಿಗಳು ಹುನ್ನಾರ ನಡೆಸಿರುವ ಈ ದಿನಗಳಲ್ಲಿ ಭಗತ್ ಸಿಂಗ್ ಮತ್ತೆ ಮತ್ತೆ ನೆನಪಾಗುತ್ತಾರೆ.

ಫುಲೆ, ಅಂಬೇಡ್ಕರ್, ಶಾಹು ಮಹಾರಾಜ್, ಪೆರಿಯಾರ್, ಭಗತ್ ಸಿಂಗ್, ಗಾಂಧಿ ಮತ್ತು ನೆಹರೂ ಇವರೆಲ್ಲರೂ ಕಂಡ ಸಮಾನತೆಯ ಭಾರತದ ಕನಸು ನನಸಾಗಿಲ್ಲ. ಈಗ ಆ ಕನಸನ್ನೇ ನಾಶಪಡಿಸುವ ಹುನ್ನಾರ ನಡೆದಿದೆ. ಈ ಹುನ್ನಾರ ವಿಫಲಗೊಳಿಸುವುದೇ ಭಗತ್ ಸಿಂಗ್‌ಗೆ ನಾವು ನೀಡುವ ನಿಜವಾದ ಗೌರವವಾಗಿದೆ.

Leave a Reply