ಇವರೇಕೇ ಇಷ್ಟು ಅಜ್ಞಾನಿಗಳು…? -ಕೆ.ಎಲ್.ಚಂದ್ರಶೇಖರ್ ಐಜೂರು

KL Chandrashekhar Aijoor

ಈ ಮಣ್ಣಿನ ಮೇರುನಟ ಡಾ.ರಾಜ್ಕುಮಾರ್ ಕಿಡ್ನ್ಯಾಪ್ ಆಗಿ ಇಪ್ಪತ್ತೈದು ದಿನಗಳಾಗಿದ್ದವು. ನಾನು ಅದೇ ಆಗಷ್ಟೇ ಬೆಂಗಳೂರಿನ University Law Collegeನಲ್ಲಿ ಮೊದಲ ವರ್ಷದ LL.B.ಗೆ ಪ್ರವೇಶ ಪಡೆದಿದ್ದೆ. ಬೆಂಗಳೂರಿನ ಶಾಲಾಕಾಲೇಜುಗಳಿಗೆ ಒಂದು ತಿಂಗಳ ಕಾಲ ರಜೆ ಘೋಷಿಸಲಾಗಿತ್ತು. ರಜೆಯ ಕಾರಣ ನಾನು ನಮ್ಮೂರು ರಾಮನಗರದಲ್ಲಿದ್ದೆ. ಅದು ಇಸವಿ 2000. ಆಗ ಈಗಿನಂತೆ, ಈಗಿರುವಷ್ಟು ಮನೆಮುರುಕ ಟೀವಿ ಚಾನಲ್’ಗಳು ಇರಲಿಲ್ಲ. ಆದರೂ ‘ಡಾ.ರಾಜ್ ಬಿಡುಗಡೆಗೆ ವೀರಪ್ಪನ್ 50 ಕೋಟಿ ಕೇಳ್ದ; 100 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ’ ಎಂಬೆಲ್ಲ ಸುದ್ದಿಗಳು ಜನರ ಬಾಯಿಂದ ಬಾಯಿಗೆ ಸಲೀಸಾಗಿ ಹರಿದಾಡುತ್ತಿದ್ದವು.

ಡಾ.ರಾಜ್ ಅಪಹರಣಗೊಂಡ ಕ್ಷಣದಿಂದ ಅವರ ಬಿಡುಗಡೆಯ ತನಕ ಈ ನಾಡು ತೀವ್ರ ಆಘಾತಕ್ಕೊಳಗಾಗಿತ್ತು. ಇಡೀ ರಾಜ್ ಕುಟುಂಬ ರೇಡಿಯೋ ಮೂಲಕ ಪ್ರತಿದಿನ ‘ಅಣ್ಣೈ ವೀರಪ್ಪಣೈ… ನಾ ವುನ್ ತಂಗಾಚಿ ಮಾದ್ರಿ, ನಾ ವುಂಗಳ್ ತಂಬಿ ಮಾದ್ರಿ ನೆನಚಿಕೋ’ ಎಂದು ಮಾತು ಆರಂಭಿಸಿ ಆದಷ್ಟು ಬೇಗ ರಾಜ್ಕುಮಾರರನ್ನು ಬಿಟ್ಟುಕಳಿಸುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿತ್ತು.

ರೇಡಿಯೋದಲ್ಲಿ ರಾಜ್ ಕುಟುಂಬದ ಮಾತುಗಳನ್ನು ಕೇಳಿಸಿಕೊಂಡ ಯಾರಿಗಾದರೂ ದುಃಖದ ಕಟ್ಟೆ ಒಡೆಯದೆ ಇರುತ್ತಿರಲಿಲ್ಲ.

ಆಗ ‘ಅರಗಿಣಿ’ ಅನ್ನುವ ಸಿನಿಪತ್ರಿಕೆಯೊಂದು tabloid ಸೈಜಿನಲ್ಲಿ ಪ್ರಕಟಗೊಳ್ಳುತ್ತಿತ್ತು (ಈಗ ಆ ಪತ್ರಿಕೆ ಇನ್ನೂ ಉಸಿರಾಡುತ್ತಿದೆಯೋ ಇಲ್ಲವೋ ಗೊತ್ತಿಲ್ಲ). ನನಗೆ ಮೊದಲಿನಿಂದಲೂ ಈ ಕನ್ನಡ ಸಿನಿಮಾ ನೋಡುವುದು ಮತ್ತು ಕನ್ನಡ ನಟ, ನಟಿ, ಸಿನಿಮಾಗಳ ಕುರಿತ ಪತ್ರಿಕೆಗಳ ಬರಹಗಳನ್ನು ಓದುವುದೆಂದರೆ ಅಷ್ಟಕ್ಕಷ್ಟೇ.

ಆಗೊಮ್ಮೆ ಬೇಸರ ಕಳೆಯಲೆಂದು ಗೆಳೆಯನ ಮನೆಗೆ ಹೋದಾಗ ಆಕಸ್ಮಿಕವಾಗಿ ‘ಅರಗಿಣಿ’ ಪತ್ರಿಕೆ ಕಣ್ಣಿಗೆಬಿತ್ತು. ಗೆಳೆಯ ಸ್ನಾನ ಮಾಡುತ್ತಿದ್ದುದ್ದರಿಂದ ಅನಿವಾರ್ಯವಾಗಿ ‘ಅರಗಿಣಿ’ ಪತ್ರಿಕೆ ಕೈಗೆತ್ತಿಕೊಳ್ಳಬೇಕಾಯಿತು. ಪತ್ರಿಕೆಯ ಪುಟಗಳೆಲ್ಲ ಬರೀ ಡಾ.ರಾಜ್ ಚಿತ್ರಗಳು ಹಾಗೂ ಗಾಂಧಿನಗರದ ಬಣ್ಣದ ಮಂದಿಯ ಬರಹಗಳಿಂದ ತುಂಬಿಹೋಗಿತ್ತು. ಅಂತಹ ಕುತೂಹಲವಿಲ್ಲದಿದ್ದರೂ ಒಂದೆರಡು ಬರಹ, ಅಭಿಪ್ರಾಯಗಳನ್ನು ಓದಲು ಶುರುಮಾಡಿದೆ.

ಕೆ.ಎಲ್.ಚಂದ್ರಶೇಖರ್ ಐಜೂರು

‘ಒಬ್ಬೊಬ್ಬ ಕನ್ನಡಿಗ ಒಂದೊಂದ್ರುಪಾಯಿ ಕೊಟ್ರು ಸಾಕು ಐದು ಕೋಟಿ ಆಗುತ್ತೆ. ನೋಡ್ತಾ ಇರಿ ಕನ್ನಡಿಗರು ದುಡ್ಡನ್ನ ಆ ಕಾಡುಗಳ್ಳನ ಮುಖದ ಮೇಲೆ ಬಿಸಾಡಿ ಅಣ್ಣಾವ್ರನ್ನ ಹೆಂಗ್ ಬಿಡಿಸಿಕೊಂಡು ಬರ್ತಾರಂತಾ…’ ಎಂದು ನಟಿ ಜಯಮಾಲಾರ ಹೇಳಿಕೆ ಮೊದಲು ಪತ್ರಿಕೆಯಲ್ಲಿ ಕಣ್ಣಿಗೆ ಬಿತ್ತು.

ಅದನ್ನು ಓದಿ ಮುಂದಿನ ಪುಟಕ್ಕೋದೆ, ನಟಿ ಜಯಂತಿಯವರ ಹೇಳಿಕೆಯೊಂದು ಪ್ರಕಟಗೊಂಡಿತ್ತು: ‘ಇವತ್ತಲ್ಲ ನಾಳೆ ಐದು ಕೋಟಿ ಕನ್ನಡಿಗರು ಕಾಡಿಗೆ ನುಗ್ಗಲಿದ್ದಾರೆ. ನೋಡಿ ನಮ್ಮ ಕನ್ನಡಿಗರು, ಆ ವೀರಪ್ಪನನ್ನು ಕೊಂದು ಹೇಗೆ ಅಣ್ಣಾವ್ರನ್ನ ಬಿಡಿಸಿಕೊಂಡು ಬರ್ತಾರಂತಾ…’

ನನಗೋ ನಗುವೆಂಬ ನಗು ಎಲ್ಲೆಲ್ಲಿಂದಲೋ ಕಿತ್ತುಕೊಂಡು ಬರುತ್ತಿತ್ತು. ಇವರು ಹೇಳುತ್ತಿರುವ ಐದು ಕೋಟಿ ಕನ್ನಡಿಗರು ಯಾರು? ಅವರಿಗೆ ಪ್ರತಿದಿನ ಮಾಡಲು, ಬದುಕಲು ಬೇರೇನೂ ಕೆಲಸವಿಲ್ಲವೇ? ಐದು ಕೋಟಿ ಕನ್ನಡಿಗರ ಬಳಿ ಒಂದೊಂದ್ರುಪಾಯಿ ವಸೂಲಿ ಮಾಡಲು ಹೋಗುವುದಾದರೂ ಯಾರು? ಐದು ಕೋಟಿ ಕನ್ನಡಿಗರು ಕಾಡಿಗೆ ನುಗ್ಗಿದರೆ, ಅಷ್ಟು ಕೋಟಿ ಜನಕ್ಕೂ ಊಟ, ತಿಂಡಿ, ಕಾಫಿ-ಟೀ, ಶೌಚಕ್ಕೂ-ಸ್ನಾನಕ್ಕೂ ನೀರು, ಹೊದೆಯಲು ಮಲಗಲು ರಗ್ಗು ಅದ್ಯಾರು ಕೊಡ್ತಾರವ್ವ ತಾಯಿ ಅಂದುಕೊಂಡು ನುಗ್ಗಿ ಬರುವ ನಗು ತಡೆದು ಮುಂದಿನ ಪುಟಕ್ಕೋದೆ.

ಅಲ್ಲಿ ಕಲಾಸಾಮ್ರಾಟ್, ನಿರ್ದೇಶಕ ಚಕ್ರವರ್ತಿ ಎಸ್.ನಾರಾಯಣ್ ಅವರ ಎರಡು ಪುಟಗಳ ಸುದೀರ್ಘ ಲೇಖನವಿತ್ತು: ‘ಬಹುಶಃ ಆ ದೇವರೆ ಇಂಥದೊಂದು ಸಂದರ್ಭವನ್ನು ಸೃಷ್ಟಿಸಿರಬೇಕು. ಬಹುಶಃ ಆ ದೇವರೆ ಅಣ್ಣಾವ್ರ ಮೂಲಕವೇ ಆ ದುಷ್ಟ, ಕಾಡುಗಳ್ಳ, ನರಹಂತಕ ವೀರಪ್ಪನ್’ನ ಅಂತ್ಯವಾಗಬೇಕೆಂದು ನಿರ್ಧರಿಸಿಕೊಂಡಿರಬೇಕು. ಅಣ್ಣಾವ್ರು ಆ ದುಷ್ಟನನ್ನು ಕೊಂದು ಕಾಡಿನಿಂದ ಬಂದೇ ಬರುತ್ತಾರೆಂಬ ವಿಶ್ವಾಸ ನನಗಿದೆ. ಬಹುಶಃ ಆ ನರಹಂತಕನನ್ನು ಸಂಹರಿಸಲೆಂದೇ ಅಣ್ಣಾವ್ರು ಈ ಜನ್ಮದಲ್ಲಿ ಕನ್ನಡದ ಕಲಾವಿದನಾಗಿ ಹುಟ್ಟಿರಬೇಕು. ಬಹುಶಃ ಅಣ್ಣಾವ್ರು…..’ ಲೇಖನ ಪೂರ್ತಿ ಓದುವಷ್ಟರಲ್ಲಿ ಸುಸ್ತಾಗಿಹೋಗಿದ್ದೆ.

ಉಳಿದ ಭಾಷೆಗಳ ಸಿನಿಮಾ ಮಂದಿಯ ಬಗ್ಗೆ ಹೆಚ್ಚು ನನಗೆ ಗೊತ್ತಿಲ್ಲ. ಆದರೆ, ಈ ಕನ್ನಡದ ಸಿನಿಮಾ ಮಂದಿಗಳೇಕೇ ಇಷ್ಟೊಂದು ಅಜ್ಞಾನಿಗಳಾಗಿರುತ್ತಾರೆ? ಎಂಬ ನನ್ನದೊಂದು ಪುರಾತನ ಪ್ರಶ್ನೆಗೆ ನನಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.

Please follow and like us:
error