ಇವತ್ತು ಮೇಷ್ಟ್ರು ಜನ್ಮದಿನ… ಮತ್ತೆ ಮಳೆಯಂತೆ ಸುರಿದುಹೋಗುವ ನೆನಪುಗಳು…

ನಾನು ಡಾ.ಯು.ಆರ್. ಅನಂತಮೂರ್ತಿಯವರನ್ನು ಮೊದಲ ಬಾರಿ ನೋಡಿದ್ದು ಇಪ್ಪತ್ತು ವರ್ಷಗಳ ಹಿಂದೆ ಹೆಗ್ಗೋಡಿನಲ್ಲಿ. ಕೆ.ವಿ.ಸುಬ್ಬಣ್ಣನವರು ಪ್ರತಿ ವರ್ಷ ಏರ್ಪಡಿಸುತ್ತಿದ್ದ ಸಂಸ್ಕೃತಿ ಶಿಬಿರಕ್ಕೆ ನಾನು ಶಿಬಿರಾರ್ಥಿಯಾಗಿ ಹೋಗಿದ್ದೆ. ಆಗ ನನಗೆ ವಯಸ್ಸು ಹತ್ತೊಂಭತ್ತು. ತಲೆ ತುಂಬಾ ಸಾಹಿತ್ಯದ ಹುಚ್ಚು. ನಾನು ಓದುತ್ತಿದ್ದ ಸೈನ್ಸ್‌ಗೂ ನನ್ನ ಅಭಿರುಚಿಗಳಿಗೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆ ವರ್ಷ ‘ದೇವ ದೇವಿಯರು’ ಎಂಬ ಥೀಮ್ ಇಟ್ಟುಕೊಂಡು ಶಿಬಿರ ಏರ್ಪಡಿಸಲಾಗಿತ್ತು. ಎಂದಿನಂತೆ ಅನಂತಮೂರ್ತಿಯವರೇ ಶಿಬಿರದ ನಿರ್ದೇಶಕರು. ಆ ವರ್ಷ ಪ್ರಖ್ಯಾತ ದೇಸೀ ಚಿಂತಕ ಆಶೀಶ್ ನಂದಿ ಬಂದಿದ್ದರು. ಇನ್ನು ನಮ್ಮ ಘಟನಾನುಘಟಿ ಸಾಹಿತಿಗಳ ದಂಡೇ ಅಲ್ಲಿ ನೆರೆದಿತ್ತು. ನಮ್ಮ ಬಹುತೇಕ ಸಾಹಿತಿಗಳೆಲ್ಲ ಮೇಷ್ಟ್ರುಗಳೇ. ಹೀಗಾಗಿ ಒಬ್ಬೊಬ್ಬರೂ ಸುತ್ತಲೂ ಪ್ರಭಾವಳಿಯಂತೆ ಒಂದಷ್ಟು ಹುಡುಗರು-ಹುಡುಗಿಯರು ನೆರೆದಿರುತ್ತಿದ್ದರು. ಹೆಚ್ಚು ಗುಂಪು ಸೇರುತ್ತಿದ್ದದ್ದು ಕಿ.ರಂ.ನಾಗರಾಜ್ ಅವರ ಸುತ್ತ. ಇನ್ನುಳಿದಂತೆ ಎಲ್ಲೋ ಒಂದು ಮೂಲೆಯಲ್ಲಿ ಎಲೆಅಡಿಕೆ ಜಗಿಯುತ್ತಾ ಸುಬ್ಬಣ್ಣ ಕೂತಿರುತ್ತಿದ್ದರು. ಡಿ.ಆರ್.ನಾಗರಾಜ್ ಆಗ ನಾವೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ದ ಹೊಳೆಯುವ ನಕ್ಷತ್ರ.
ಎಲ್ಲರ ನಡುವೆ ಅನಂತಮೂರ್ತಿಯವರು ಜೀನ್ಸ್ ಮತ್ತು ಟೀ ಶರ್ಟ್ ತೊಟ್ಟು ಮಿಂಚುತ್ತಿದ್ದರು. ಸದಾ ಹಸನ್ಮುಖಿ. ಎಲ್ಲರನ್ನೂ ಮೈದಡವಿ ಮಾತನಾಡುವ ಆತ್ಮೀಯತೆ. ಮಾತಿಗೆ ನಿಂತರೆ ಎಲ್ಲಿ ಒಂದು ಶಬ್ದ ಕೇಳದೇ ಹೋದೀತೋ ಎಂಬ ಆತಂಕದಿಂದಲೇ ಇಡೀ ಭಾಷಣವನ್ನು ಕೇಳುವಂತೆ ಮಾಡುವ ಮಾಯಾವಿತನ. ಇಡೀ ದಿನ ಏನೇ ಚರ್ಚೆ ಆಗಿರಲಿ, ಸಂಜೆ ಹೊತ್ತು ಗುಂಪುಗುಂಪುಗಳಲ್ಲಿ ಹರಟೆ ಶುರುವಾದಾಗೆಲ್ಲ ಮಾತಿನ ಕೇಂದ್ರ ಬಿಂದು ಅನಂತಮೂರ್ತಿಯವರೇ ಆಗಿರುತ್ತಿದ್ದರು. ಅಷ್ಟರಮಟ್ಟಿಗೆ ಇಡೀ ಶಿಬಿರವನ್ನು ಅವರು ಆವರಿಸಿಕೊಂಡುಬಿಟ್ಟಿದ್ದರು.
ಆಗ ನಿಜವಾಗಿಯೂ ನನಗೆ ಅನಂತಮೂರ್ತಿಯವರೆಂದರೆ ಅಷ್ಟಕ್ಕಷ್ಟೆ. ಸಂಸ್ಕಾರ, ಭಾರತೀಪುರ, ಅವಸ್ಥೆ ಕೃತಿಗಳನ್ನೆಲ್ಲ ಓದಿಯಾಗಿತ್ತು. ಸಂಸ್ಕಾರ ಕಾದಂಬರಿಯಂತೂ ಹುಚ್ಚು ಹಿಡಿಸುವಷ್ಟು ಇಷ್ಟವಾಗಿತ್ತು. ಆದರೆ ಅನಂತಮೂರ್ತಿಯವರನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ನಾನು ಲಂಕೇಶರ ಕಟ್ಟಾ ಅಭಿಮಾನಿ. ಹೀಗಾಗಿ ಅವರು ಏನೇ ಬರೆದರೂ ಅದೇ ಅಂತಿಮ ಸತ್ಯ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಿದ್ದೆ. ಲಂಕೇಶರು ಹಲವು ಬಾರಿ ಅನಂತಮೂರ್ತಿಯವರ ವಿರುದ್ಧ ನಿಂತಾಗ (ಡಾಲರ್ಸ್ ಕಾಲೋನಿ ಮನೆ ಇತ್ಯಾದಿ) ಸಹಜವಾಗಿಯೇ ಒಂದು ಗುಮಾನಿ ಶುರುವಾಗಿಬಿಟ್ಟಿತ್ತು. ಆ ವಯಸ್ಸೇ ಅಂಥದ್ದಾಗಿತ್ತು. ನನ್ನ ವಯೋಮಾನದ ಬಹುತೇಕರ ಸಮಸ್ಯೆಯೂ ಅದೇ ಆಗಿತ್ತು. ಲಂಕೇಶರ ಅಭಿಮಾನಿಗಳು ಅನಂತಮೂರ್ತಿ ಅಭಿಮಾನಿಗಳಾಗುವಂತಿರಲಿಲ್ಲ, ಅದೇ ರೀತಿ ಅನಂತಮೂರ್ತಿಯವರನ್ನು ಇಷ್ಟಪಡುವವರು ಲಂಕೇಶರ ಟೀಕಾಕಾರರಾಗಿರುತ್ತಿದ್ದರು. ಇದು ಒಂದು ಬಗೆಯಲ್ಲಿ ಕುವೆಂಪು-ಬೇಂದ್ರೆಯವರನ್ನು ಬೇರೆಬೇರೆಯಾಗಿಟ್ಟು ನೋಡಿದ ಸಾಂಸ್ಕೃತಿಕ ಜಗಳದ ಹಾಗೆಯೇ.
ಆ ಹೊತ್ತಿಗಾಗೆಲ್ಲ ಅನಂತಮೂರ್ತಿಯವರನ್ನು ಅನುಮಾನದ ಕಣ್ಣಿನಿಂದ ನೋಡುವ ಚಾಳೀಸು ಎಲ್ಲ ಕಡೆ ಹರಿದಾಡುತ್ತಿತ್ತು. ನಾನೂ ಸಹ ಅಂಥದ್ದೇ ಬಣ್ಣದ ಕನ್ನಡಕದಿಂದಲೇ ಅವರನ್ನು ನೋಡುತ್ತಿದ್ದೆ. ತೀರಾ ಕೆಲವರಂತೂ ಸಾರಾಸಗಟಾಗಿ ‘ಆಯಪ್ಪನೂ ಚಡ್ಡಿನೇ ಕಣ್ರೀ’ ಎನ್ನುವಂಥ ಬಿರುಸಾದ ಹೇಳಿಕೆ ಕೊಟ್ಟುಬಿಡುತ್ತಿದ್ದರು. ‘ಅನಂತಮೂರ್ತಿ ಕೂಡ ಬ್ರಾಹ್ಮಣ್ಯಕ್ಕೆ ಅಂಟಿಕೊಂಡವರೇ ಕಣ್ರೀ, ಬುದ್ಧಿಜೀವಿ ಅನ್ನೋದು ಮುಖವಾಡ ಅಷ್ಟೆ’ ಅನ್ನುವ ಮನೋಭಾವ ಆಗ ಸಾರ್ವತ್ರಿಕವಾಗಿ ಹರಿದಾಡುತ್ತಿತ್ತು. ಸಹಜವಾಗಿಯೇ ನಾನೂ ಆ ಪ್ರಭಾವಕ್ಕೆ ಒಳಗಾಗಿ ಒಂದು ಬಗೆಯ ಗುಮಾನಿಯಲ್ಲೇ, ಆದರೆ ಮತ್ತೊಂದೆಡೆ ಅಭಿಮಾನ-ಹೆಮ್ಮೆಯಿಂದ ಅವರನ್ನು ನೋಡುತ್ತಿದ್ದೆ.
ಸಂಸ್ಕೃತಿ ಶಿಬಿರದ ಸಮಾರೋಪದ ದಿನವೋ ಏನೋ? ಅನಂತಮೂರ್ತಿಯವರ ಜತೆ ಸಂವಾದ ಏರ್ಪಾಡಾಗಿತ್ತು. ಯಾರು ಬೇಕಾದರೂ ಪ್ರಶ್ನೆ ಕೇಳಬಹುದಿತ್ತು. ವೇದಿಕೆಯಲ್ಲಿ ಡಿ.ಆರ್.ನಾಗರಾಜ್ ಕೂಡ ಇದ್ದರು. ಯಾರು ಏನೇ ಪ್ರಶ್ನೆ ಕೇಳಿದರೂ ಅನಂತಮುರ್ತಿಯವರು ಖಡಕ್ಕಾಗಿ, ನಗುನಗುತ್ತಾ ಉತ್ತರಿಸುತ್ತಿದ್ದರು. ನಾನು ಎದ್ದು ನಿಂತು ದಿಢೀರನೆ ಒಂದು ಪ್ರಶ್ನೆ ಕೇಳಿಬಿಟ್ಟೆ. ಇಡೀ ಸಭಾಂಗಣಕ್ಕೇ ಬಾಂಬ್ ಬಿದ್ದ ಹಾಗಾಗಿಹೋಗಿತ್ತು. ಭಾರತೀಪುರ ಕಾದಂಬರಿಯ ಪಾತ್ರವೊಂದನ್ನು ಉಲ್ಲೇಖಿಸುತ್ತ, ಅನಂತಮೂರ್ತಿಯವರು ದಸರಾ ಉದ್ಘಾಟನೆಯಲ್ಲಿ ಪೂಜೆ ಸಲ್ಲಿಸಿದ್ದರ ಔಚಿತ್ಯ ಕುರಿತ ಪ್ರಶ್ನೆ ಅದಾಗಿತ್ತು.
ಅನಂತಮೂರ್ತಿಯವರು ಉತ್ತರಿಸಲಿಲ್ಲ, ಈ ಪ್ರಶ್ನೆಗೆ ಡಿ.ಆರ್.ನಾಗರಾಜ್ ಉತ್ತರ ಹೇಳಲಿ ಎಂದು ಹೇಳಿ ಸುಮ್ಮನೆ ಕುಳಿತುಬಿಟ್ಟರು. ಇದು ನನಗೆ ಸಂಬಂಧಿಸಿದ ಪ್ರಶ್ನೆ ಅಲ್ಲ, ಹೀಗಾಗಿ ನನ್ನ ಬಳಿ ಉತ್ತರವಿಲ್ಲ ಎಂದು ಡಿ.ಆರ್ ಸುಮ್ಮನಾಗಿಬಿಟ್ಟರು. ಅಲ್ಲಿಗೆ ನನ್ನ ಪ್ರಶ್ನೆ ಉತ್ತರವಿಲ್ಲದೆ ಉಳಿದುಹೋಯಿತು. ಆದರೆ ಸಭೆ ಮುಗಿದ ನಂತರ ಎಷ್ಟೊಂದು ಮಂದಿ ನನ್ನನ್ನು ಮುತ್ತಿಕೊಂಡು ‘ಎಷ್ಟು ಒಳ್ಳೆಯ ಪ್ರಶ್ನೆ ಕೇಳಿದ್ಯಪ್ಪಾ, ಅವರು ಉತ್ತರ ಕೊಡಲೇ ಇಲ್ಲ’ ಎಂದು ಹೇಳಿದರು. ನನಗೆ ಒಳಗೊಳಗೆ ಒಂಥರಾ ಹೆಮ್ಮೆ, ಮತ್ತೊಂದೆಡೆ ಏನೋ ತಲೆಹರಟೆ ಮಾಡಿಬಿಟ್ಟೆನಾ ಅನ್ನುವ ಹಳಹಳಿಕೆ.
೨೦೦೧ರ ಹೊತ್ತಿಗೆ ಬದುಕನ್ನು ಅರಸಿಕೊಂಡು ಬೆಂಗಳೂರಿಗೆ ಬಂದನಂತರ ಕೆಲವು ಸಮಾನಮನಸ್ಕ ಪತ್ರಕರ್ತರೊಂದಿಗೆ ಸೇರಿ ‘ಸಂವಹನ’ ಎಂಬ ಪುಟ್ಟ ಸಂಘಟನೆಯನ್ನು ಆರಂಭಿಸಿದ್ದೆವು. ಅಷ್ಟು ಹೊತ್ತಿಗಾಗೆಲ್ಲ ಅನಂತಮೂರ್ತಿಯವರ ಕುರಿತಾದ ನನ್ನ ಪೂರ್ವಾಗ್ರಹಗಳೆಲ್ಲ ಕರಗಿಹೋಗಿದ್ದವು. ಅವರನ್ನು ನೋಡುವ ಕ್ರಮವೇ ಬದಲಾಗಿಹೋಗಿತ್ತು. ಪಿ.ಲಂಕೇಶರು ನಿಧನವಾದ ನಂತರವಂತೂ ಜಗತ್ತಿನ ಯಾವುದೇ ವಿದ್ಯಮಾನಗಳಿಗೆ ಅನಂತಮೂರ್ತಿಯವರು ಹೇಗೆ ಸ್ಪಂದಿಸುತ್ತಾರೆ ಎಂಬುದೇ ನನ್ನಂಥವರಿಗೆ ಮುಖ್ಯವಾಗಿಹೋಗಿತ್ತು. ಮೇಷ್ಟ್ರು ನಿಧಾನವಾಗಿ ಅರ್ಥವಾಗತೊಡಗಿದ್ದರು.
‘ಸಂವಹನ’ದ ಮೂಲಕ ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಎಂಬ ವಿಷಯವನ್ನಿಟ್ಟುಕೊಂಡು ವಿಚಾರಸಂಕಿರಣವೊಂದನ್ನು ಏರ್ಪಡಿಸಿದೆವು. ಆಗಲೇ ನಾನು ಮೊದಲ ಬಾರಿಗೆ ಡಾಲರ್ಸ್ ಕಾಲೋನಿಯ ‘ಸುರಗಿ’ ಒಳಗೆ ಕಾಲಿಟ್ಟಿದ್ದು. ಅದೊಂದು ವಿಶಿಷ್ಟ ಅನುಭವ. ಮನೆಯ ಒಳಗೇ ಹಿತ್ತಲಿನಲ್ಲಿ ಒಂದು ಸಣ್ಣ ಮಾವಿನ ಮರ, ಮಾವಿನ ಹೀಚು ಬಂದಿತ್ತು. ಅಲ್ಲೇ ಕುಳಿತು ನಮ್ಮ ಮಾತುಕತೆ. ನಮ್ಮ ಈ ಮಾತುಕತೆ ಸಾಧ್ಯವಾಗಿದ್ದು ಆಗ ಉದಯವಾಣಿಯಲ್ಲಿದ್ದ ಎನ್.ಎ.ಎಂ. ಇಸ್ಮಾಯಿಲ್ ಅವರಿಂದಾಗಿ. ಜತೆಯಲ್ಲಿ ಪತ್ರಕರ್ತ ಗೆಳೆಯರಾದ ಸತೀಶ್ ಶಿಲೆ, ಮಂಜುನಾಥ ಸ್ವಾಮಿ, ಕುಮಾರ್ ಅವರುಗಳಿದ್ದರು. ಸುಮಾರು ಒಂದೂವರೆ ಗಂಟೆ ಅವರು ಮಾತನಾಡಿದರು. ನಾವು ತನ್ಮಯರಾಗಿ ಕೇಳುತ್ತಲೇ ಇದ್ದೆವು. ಮೇಷ್ಟ್ರು ನಮ್ಮ ವಿಚಾರ ಸಂಕಿರಣಕ್ಕೆ ಬರುವುದಾಗಿ ಒಪ್ಪಿಗೆ ಇತ್ತು ಕಳುಹಿಸಿಕೊಟ್ಟರು.
ಆ ವಿಚಾರ ಸಂಕಿರಣಕ್ಕೆ ಆಗಷ್ಟೇ ಅಮೆರಿಕದಿಂದ ಬಂದಿದ್ದ ರವಿಕೃಷ್ಣಾರೆಡ್ಡಿಯವರನ್ನು ಕರೆದಿದ್ದೆವು. ಅವರು ಮಾತನಾಡುತ್ತ, ‘ ಈ ಮನುಷ್ಯ (ಅನಂತಮೂರ್ತಿ) ಎರಡೂ ಕಡೆಯಲ್ಲೂ ನಿಷ್ಠುರಗಳಿಗೆ ಒಳಗಾದವರು ಕಣ್ರೀ. ಒಂದು ಕಡೆ ಪ್ರಗತಿಪರರು ಅವರನ್ನು ಅನುಮಾನದಿಂದಲೇ ನೋಡುತ್ತ ಬಂದರು. ಅವರ ಮೇಲೆ ಟೀಕಾಪ್ರಹಾರ ಮಾಡುತ್ತಲೇ ಬಂದರು. ಇತ್ತ ಮೂಲಭೂತವಾದಿಗಳ ವಿರುದ್ಧ ನಿರಂತರ ಮಾತನಾಡುತ್ತ ಬಂದ ಪರಿಣಾಮವಾಗಿ ಅವರಷ್ಟು ನಿಂದನೆಗಳನ್ನು ಎದುರಿಸಿದವರು ಮತ್ತೊಬ್ಬರಿಲ್ಲ. ಈ ಸಮಯದಲ್ಲಿ ನಾವು ಅವರ ಬೆನ್ನಿಗೆ ನಿಲ್ಲಬೇಕು. ಅವರ ಧ್ವನಿ ಜೀವಂತವಾಗಿರಬೇಕು.’ ಎಂದು ಹೇಳಿದ್ದರು.
ಈ ಕಾರ್ಯಕ್ರಮ ನಡೆದ ಕೆಲವು ತಿಂಗಳುಗಳ ನಂತರ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಮಂದಿ ಸತ್ತುಹೋದರು. ಊರೂರೇ ನಾಶವಾಗಿಹೋಯಿತು. ನೆರೆ ನಿರ್ವಹಣೆಯನ್ನು ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕಷ್ಟಪಡುವಂತಾಯಿತು. ನಾವು ‘ಸಂವಹನ’ದ ಮೂಲಕ ಮತ್ತೊಂದು ವಿಚಾರ ಸಂಕಿರಣವನ್ನು ಏರ್ಪಡಿಸಿದೆವು. ಮೇಷ್ಟ್ರನ್ನು ಕಂಡು ಮಾತನಾಡಿಸಲು ಹೋಗಿದ್ದ ನಾವು ಈ ವಿಚಾರಸಂಕಿರಣದ ಕುರಿತು ಹೇಳಿದಾಗ, ನಾನು ಬರುತ್ತೇನೆ ಎಂದು ತಾವಾಗಿಯೇ ಹೇಳಿದರು. ಹೇಳಿದಂತೆಯೇ ಬಂದು ಮಾತನಾಡಿದರು.
ಅದಾದ ನಂತರ ೨೦೦೯ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಟೀಕಿಸುವ ಭರದಲ್ಲಿ ತೀರಾ ಕೊಳಕಾದ ಭಾಷೆಯನ್ನು ಪ್ರಯೋಗಿಸತೊಡಗಿದ್ದರು. ಅದರಲ್ಲೂ ಕಡಿ, ಕೊಚ್ಚು, ಕೊಲ್ಲು ಥರದ ಭಾಷೆ ಯಥೇಚ್ಛವಾಗಿ ಬಳಕೆಯಾಗುತ್ತಿತ್ತು. ಈ ರೋಗ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗದೆ ಎಲ್ಲ ಪಕ್ಷಗಳಲ್ಲೂ ಕಾಣಿಸಿಕೊಂಡಿತ್ತು. ಇದನ್ನು ನಾಗರಿಕ ಸಮಾಜ ಸುಮ್ಮನೆ ನೋಡಿಕೊಂಡಿರುವುದು ಸರಿಯಲ್ಲ ಎಂಬುದು ನಮ್ಮ ಅಭಿಮತವಾಗಿತ್ತು. ಅದಕ್ಕಾಗಿ ‘ಸಂವಹನ’ದ ಮೂಲಕವೇ ಒಂದು ಸಣ್ಣ ಕ್ಯಾಂಪೇನ್ ಮಾಡಲು ಮುಂದಾದೆವು. ಕನ್ನಡದ ಹೆಸರಾಂತ ಸಾಹಿತಿ-ಕಲಾವಿದರನ್ನೆಲ್ಲ ಒಂದೆಡೆ ಸೇರಿಸಿ ಒಂದು ಪತ್ರಿಕಾಗೋಷ್ಠಿ ಮಾಡುವುದು, ನಂತರ ಚುನಾವಣಾ ಅಧಿಕಾರಿಗಳಿಗೆ ಒಂದು ಮನವಿ ಪತ್ರ ನೀಡುವುದೆಂದು ನಿರ್ಧಾರವಾಯಿತು. ಮತ್ತೆ ನಾವು ಹೋಗಿದ್ದು ಮೇಷ್ಟ್ರ ಬಳಿಗೆ. ಯಾರನ್ನೂ ಬಿಡದೇ, ಎಲ್ಲರನ್ನೂ ಕರೆಯಿರಿ ಎಂದು ಮೇಷ್ಟ್ರು ಹೇಳಿದರು. ಜಿ.ಎಸ್.ಎಸ್ ಅವರಿಗೆ ಹುಶಾರಿಲ್ಲ, ಬರುವುದು ಕಷ್ಟವಾಗಬಹುದು. ಆದರೆ ಅವರ ಸಹಿಯಾದರೂ ಪಡೆಯಲು ಪ್ರಯತ್ನ ಪಡಿ ಎಂದು ಸೂಚಿಸಿದ್ದರು. ಅವರು ಹೇಳಿದಂತೆಯೇ ಫೋನ್ ಮೂಲಕವೇ ಒಂದಷ್ಟು ಮಂದಿಗೆ ಆಹ್ವಾನ ನೀಡಿದೆವು. ಆಶ್ಚರ್ಯವೆಂದರೆ ನಾವು ಕರೆದ ಎಲ್ಲ ದಿಗ್ಗಜರೂ ಬಂದಿದ್ದರು. ಸಾಹಿತಿ-ಕಲಾವಿದರು ಒಂದೇ ವೇದಿಕೆಯಲ್ಲಿ ಹೀಗೆ ಸೇರಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಒಬ್ಬರ ಮುಖ ಒಬ್ಬರು ನೋಡದವರೂ ಅಂದು ಅಕ್ಕಪಕ್ಕ ಬಂದು ಕುಳಿತುಕೊಂಡಿದ್ದರು.
ಹೀಗೆ ಪದೇಪದೇ ಮೇಷ್ಟ್ರು ಜತೆ ಮಾತನಾಡುವ ಸಂದರ್ಭಗಳು ಒದಗಿಬರುತ್ತಿದ್ದವು. ಆದರೂ ನನ್ನ ಬಗ್ಗೆ ಅವರಲ್ಲಿ ಏನೂ ಹೇಳಿಕೊಂಡಿರಲಿಲ್ಲ. ಆದರೆ ಅವಧಿಯಲ್ಲಿ ಪ್ರಕಟಗೊಂಡ ನನ್ನ ಪದ್ಯಗಳನ್ನು ಓದಿ ‘ನಿನ್ನ ಪದ್ಯಗಳನ್ನು ಓದಿದೆ, ತುಂಬಾ ಚೆನ್ನಾಗಿವೆ, ಎಲ್ಲ ಪದ್ಯಗಳನ್ನು ನಾನು ಓದಬೇಕು, ನನಗೆ ಮೇಲ್ ಮಾಡು’ ಎಂದು ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಒಮ್ಮೆ ಅಚಾನಕ್ಕಾಗಿ ನನ್ನ ಜನ್ಮದಿನದಂದೇ ಅವರು ಫೋನ್ ಮಾಡಿದ್ದರು. ಹೇಗೋ ಅವರಿಗೆ ಅವತ್ತು ನನ್ನ ಜನ್ಮದಿನ ಎಂಬುದು ಗೊತ್ತಾಗಿತ್ತು. ಶುಭಾಶಯ ಹೇಳಿದರು. ನನಗೆ ಮಾತೇ ಹೊರಡಲಿಲ್ಲ.
ನಾನು ಕೆಲಸ ಬದಲಿಸಿದ್ದೆ. ಅದು ಮೇಷ್ಟ್ರಿಗೆ ಗೊತ್ತಾಗಿತ್ತು. ‘ಹೇಗಿದೆಯೋ ಹೊಸ ಕೆಲಸ, ಸಾಕಷ್ಟು ಸಂಬಳ ಸಿಗ್ತಿದೆ ತಾನೇ? ಮೊದಲು ಬದುಕು- ಆಮೇಲೆ ಉಳಿದದ್ದು’ ಎಂದು ಒಮ್ಮೆ ಹೇಳಿದರು. ಅದನ್ನು ನೆನಪಿಸಿಕೊಂಡಾಗೆಲ್ಲ ನನಗೆ ಕಣ್ಣು ತುಂಬಿಕೊಳ್ಳುತ್ತವೆ. ಅವರ ಅಷ್ಟೊಂದು ಪ್ರೀತಿಗೆ ಯೋಗ್ಯನಾಗಿದೆನಲ್ಲ ಎಂದು ಖುಷಿಯೆನಿಸುತ್ತದೆ.
ನನ್ನ ವೃತ್ತಿ ಬದುಕಿನಲ್ಲಿ ಏರಿಳಿತಗಳು ಆಗುತ್ತ ಕಡೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ‘ಕರವೇ ನಲ್ನುಡಿ’ಯನ್ನು ಆರಂಭಿಸುವ ಸಂದರ್ಭ ಎದುರಾಯಿತು. ಅದರ ಬಿಡುಗಡೆಯ ಅದ್ದೂರಿ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಇಟ್ಟುಕೊಳ್ಳುವುದೆಂದು ತೀರ್ಮಾನವಾಯಿತು. ಯಾರಿಂದ ಪತ್ರಿಕೆಯನ್ನು ಬಿಡುಗಡೆಗೊಳಿಸುವುದು ಎಂದು ಚರ್ಚಿಸಿದಾಗ ಎಲ್ಲರೂ ಅಂತಿಮಗೊಳಿಸಿದ್ದು ಮೇಷ್ಟ್ರ ಹೆಸರನ್ನೇ.
ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ನಾರಾಯಣಗೌಡರ ಜತೆ ನಾನೂ ಸಹ ಮೇಷ್ಟ್ರ ಮನೆಗೆ ಹೋದೆ. ಮೇಷ್ಟ್ರು ನಗುನಗುತ್ತ ಬಂದು ಗೌಡರ ಕೈ ಹಿಡಿದು ಒಳಗೆ ಕರೆದುಕೊಂಡುಹೋದರು. ನಾನು ನಿಮ್ಮ ಜತೆ ಸ್ವಲ್ಪ ಹೊತ್ತು ಮಾತನಾಡಬೇಕು ಎಂದು ಹೇಳಿ ಅವರಾಗಿಯೇ ಒಂದಷ್ಟು ಹೊತ್ತು ಮಾತನಾಡಿದರು. ಕರವೇ ಸಂಘಟನೆಯ ಬಗ್ಗೆ ಅವರಿಗೆ ಅಭಿಮಾನವಿತ್ತು. ‘ಗೌಡ್ರೆ, ನಿಮಗೆ ಇದು ಸಾಧ್ಯವಿದೆ, ನೀವು ಇದನ್ನು ಮಾಡಬೇಕು’ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಅವರು ಪಾಠ ಹೇಳುವ ಮೇಷ್ಟ್ರೇ ಆಗಿದ್ದರು. ನಾವು ವಿಧೇಯ ವಿದ್ಯಾರ್ಥಿಗಳಾಗಿ ಕೇಳುತ್ತ ಹೋದೆವು. ‘ನನ್ನ ಬದುಕಿನ ಎರಡು ಕೊನೆಯ ಆಸೆಗಳನ್ನು ಹೇಳುತ್ತಿದ್ದೇನೆ. ಕನ್ನಡ ಶಾಲೆಗಳು ಉಳಿಯಬೇಕು. ಸಮಾನ ಶಾಲಾ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಎಲ್ಲದಕ್ಕೂ ನಾವು ಸರ್ಕಾರವನ್ನು ನಂಬಿಕೊಂಡು ಕೂರುವುದು ಸಾಧ್ಯವಿಲ್ಲ. ಹೀಗಾಗಿ ಪ್ರತಿ ತಾಲ್ಲೂಕಿನಲ್ಲೂ ನೀವೇ ಒಂದೊಂದು ಒಳ್ಳೆಯ ಕನ್ನಡ ಶಾಲೆಯನ್ನು ನಡೆಸುವಂತಾಗಬೇಕು. ಮತ್ತೊಂದು, ಗಣಿಗಾರಿಕೆ ರಾಷ್ಟ್ರೀಕರಣಗೊಳ್ಳಬೇಕು. ಗಣಿ ಸಂಪತ್ತನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕು. ನಮಗೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಸರ್ಕಾರವೇ ಗಣಿಗಾರಿಕೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಅಷ್ಟು ಹೊತ್ತಿಗಾಗಲೇ ಮೇಷ್ಟ್ರ ಆರೋಗ್ಯ ಸ್ಥಿತಿ ಹದಗೆಡುವುದಕ್ಕೆ ಶುರುವಾಗಿತ್ತು. ನಾರಾಯಣಗೌಡರು ಸ್ವಭಾವತಃ ಭಾವುಕರು. ಹೀಗಾಗಿ ಮೇಷ್ಟ್ರು ಕೊನೆಯ ಆಸೆ ಎಂದು ಹೇಳಿಕೊಂಡಿದ್ದನ್ನು ಅವರು ಬಹಳ ಸಂಕಟದಿಂದ ಕೇಳಿಸಿಕೊಂಡಿದ್ದರು. ಅನಾರೋಗ್ಯದ ನಡುವೆಯೂ ‘ಕರವೇ ನಲ್ನುಡಿ’ ಪತ್ರಿಕೆ ಉದ್ಘಾಟನೆಯ ಕಾರ್ಯಕ್ರಮಕ್ಕೆ ಮೇಷ್ಟ್ರು ಬಂದರು. ಮನೆಗೆ ಹೋದಾಗ ಮಾತನಾಡಿದ್ದನ್ನೇ ಅವರು ಇನ್ನೊಂದಿಷ್ಟು ವಿಸ್ತರಿಸಿ ಭಾಷಣ ಮಾಡಿದರು. ಆಗಲೂ ಸಹ ಇದು ನನ್ನ ಕೊನೆಯ ಆಸೆ ಎಂದೇ ಹೇಳಿದ್ದರು. ಆ ಭಾಷಣವನ್ನು ನಾನು ಕೇಳಿ ಬರೆದು, ಯಥಾವತ್ತಾಗಿ ‘ನಲ್ನುಡಿ’ಯಲ್ಲಿ ಪ್ರಕಟಿಸಿದೆ. ಆ ಭಾಷಣ ಅವರ ಕೃತಿಯೊಂದರಲ್ಲೂ ದಾಖಲಾಯಿತು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಎರಡು ಆದೇಶಗಳು ಹೊರಬಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಆರಂಭಿಸಿತು. ಟಿ.ಎ.ನಾರಾಯಣಗೌಡರು ಬೆಂಗಳೂರಿನ ಸಿಟಡೆಲ್ ಹೋಟೆಲ್‌ನಲ್ಲಿ ದುಂಡುಮೇಜಿನ ಸಭೆಯೊಂದನ್ನು ಏರ್ಪಾಡುಮಾಡಿದರು. ಮೇಷ್ಟು ಆಗ ಪ್ರತಿನಿತ್ಯ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿತ್ತು. ಮನೆಯಲ್ಲೇ ಡಯಾಲಿಸಿಸ್ ಶುರುವಾಗಿತ್ತು. ಆದರೂ ಇಂಥದ್ದೊಂದು ಸಭೆ ಇದೆ, ನೀವು ಬರಬೇಕು ಎಂದು ಕರೆದೆವು. ಅವರ ಆರೋಗ್ಯ ಸ್ಥಿತಿ ಏರುಪೇರಾಗುತ್ತಲೇ ಇದ್ದರಿಂದಾಗಿ ಅವರು ಬರುವುದು ನಮಗಂತೂ ಅನುಮಾನವೇ ಆಗಿತ್ತು. ಬೆಳಿಗ್ಗೆ ಅನಂತಮೂರ್ತಿಯವರಿಂದಲೇ ನನಗೆ ಫೋನು ಬಂತು, ‘ನಾನು ಸಿದ್ಧನಾಗಿದ್ದೇನೆ, ನಿಮ್ಮ ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ’ ಎಂದರು.
ಅವರಿಗೆ ಆಗ ನಡೆದಾಡಲೂ ಕಷ್ಟವಾಗುತ್ತಿತ್ತು. ಕೈಗೆ ಊರುಗೋಲೊಂದನ್ನು ಕೊಡಲಾಗಿತ್ತು. ಮೇಷ್ಟ್ರು ಸಭೆಗೆ ಬಂದರು. ಬಂದು ಅತ್ಯಂತ ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಅವರ ಮಾತಿನ ಮೇಲೆಯೇ ನಂತರ ಒಂದಷ್ಟು ಚರ್ಚೆಗಳು ಆದವು. ಇತರ ಗಣ್ಯರು ಮಾತನಾಡುವಾಗ ಅದನ್ನೆಲ್ಲ ಕೇಳಿಸಿಕೊಂಡು ಮೇಷ್ಟ್ರು ಆಗಾಗ ಪ್ರತಿಕ್ರಿಯೆ ನೀಡಿದರು. ಅವರ ಜೀವನೋತ್ಸಾಹಕ್ಕೆ, ಅಂದುಕೊಂಡಿದ್ದನ್ನು ಪ್ರತಿಪಾದಿಸಲು ಹೊರಡುವ ಧೀಮಂತಿಕೆಗೆ ಯಾವ ಬೇಲಿಯೂ ಇರಲಿಲ್ಲ. ಯಾವ ಗಡಿಯೂ ಇರಲಿಲ್ಲ.
ಕಳೆದ ಏಳೆಂಟು ವರ್ಷಗಳಲ್ಲಿ ಅನಂತಮೂರ್ತಿಯವರ ವಿರುದ್ಧ ಮೂಲಭೂತವಾದಿ ಸಮೂಹ ದೊಡ್ಡಮಟ್ಟದಲ್ಲಿ ‘ದಾಳಿ’ ಆರಂಭಿಸಿದವು. ಕೆಲವು ಪತ್ರಿಕೆಗಳು ಇದಕ್ಕಾಗಿಯೇ ವೇದಿಕೆ ಕಲ್ಪಿಸಿದ್ದವು. ಒಂದು ಪತ್ರಿಕೆಯಂತೂ ಅನಂತಮೂರ್ತಿಯವರ ವಿರುದ್ಧ ದೊಡ್ಡದೊಂದು ಎಸ್ ಎಂಎಸ್ ಕ್ಯಾಂಪೇನ್ ನಡೆಸಿ, ಅವರ ವಿರುದ್ಧ ಬಂದ ಎಲ್ಲ ರೀತಿಯ ಟೀಕೆ, ಲೇವಡಿ, ನಿಂದನೆಗಳನ್ನು ಪುಟಗಟ್ಟಲೆ ಪ್ರಕಟಿಸಿತು.
ಅನಂತಮೂರ್ತಿಯವರ ವಿರುದ್ಧ ಒಂದು ಬಗೆಯ ಸಾಂಸ್ಕೃತಿಕ ದ್ವೇಷ, ಅಸೂಯೆ, ಸಿಟ್ಟು ಹೊಂದಿದ್ದ ವೈಚಾರಿಕ ವಲಯದ ಗಣ್ಯರೂ ಕೂಡ ಇದನ್ನು ಪ್ರತಿಭಟಿಸಲು ಮುಂದಾಗಲಿಲ್ಲ. ಕೆಲವು ಪತ್ರಿಕೆಗಳಂತೂ ಮೇಷ್ಟ್ರ ಸುದ್ದಿಗಳನ್ನು ಪ್ರಕಟಿಸದೆ ಒಂದು ಬಗೆಯ ಅನಧಿಕೃತ ‘ಬಹಿಷ್ಕಾರ’ವನ್ನು ಜಾರಿಯಲ್ಲಿಟ್ಟಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ಅನಂತಮೂರ್ತಿಯವರನ್ನು ಹಣಿಯುವುದೇ ಫ್ಯಾಸಿಸ್ಟ್ ಶಕ್ತಿಗಳ ಪ್ರಮುಖ ಅಜೆಂಡಾ ಆಗಿಹೋಯಿತು. ಅನಂತಮೂರ್ತಿಯವರನ್ನು ಪ್ರೀತಿಸುವವರು ಅವರ ಕುರಿತು ಏನೂ ಮಾತನಾಡದಂಥ ಮಾತಿನ ‘ದಿಗ್ಬಂಧನ’ವನ್ನು ಹೇರುವ ಪ್ರಯತ್ನಗಳೂ ನಡೆದವು. ಕಡೆಗೆ ನರೇಂದ್ರ ಮೋದಿ ಕುರಿತ ‘ಮೋದಿ ಭಾರತದಲ್ಲಿ ನಮ್ಮಂಥವರು ಬದುಕಿರಬಾರದು ಕಣ್ರೀ’ ಎಂದು ಭಾವೋದ್ವೇಗದಲ್ಲಿ ಹೇಳಿದ ಹೇಳಿಕೆಗೆ ರೆಕ್ಕೆ ಪುಕ್ಕ ಮಾಂಸ ರಕ್ತ ಎಲ್ಲ ತುಂಬಿ ಅವರ ವಿರುದ್ಧ ಮತ್ತೊಂದು ಸುತ್ತಿನ ಸಂಘಟಿತ ದಾಳಿ ನಡೆದುಹೋಯಿತು. ಬದುಕಿನ ಕೊನೆಗಾಲದಲ್ಲಿ ಅವರ ಮನೆಯ ಮುಂದೆ ಮೀಸಲು ಪೊಲೀಸ್ ಪಡೆಯ ವ್ಯಾನ್ ರಕ್ಷಣೆಗಾಗಿ ನಿಲ್ಲುವಂಥ ಕರಾಳ ಸ್ಥಿತಿ ನಿರ್ಮಾಣವಾಯಿತು.
ಆದರೆ ಮೇಷ್ಟ್ರು ಇದೆಲ್ಲವನ್ನೂ ಜೀರ್ಣಿಸಿಕೊಂಡಿದ್ದ ರೀತಿಯೇ ಆಶ್ಚರ್ಯಕರವಾದದ್ದು. ಅವರಿಗೆ ವೈಯಕ್ತಿಕವಾಗಿ ದ್ವೇಷಿಸುವುದು ಗೊತ್ತಿರಲಿಲ್ಲ. ಈ ಎಲ್ಲ ‘ದಾಳಿ’ಯ ಕುರಿತು ಮಾತನಾಡಿದಾಗೆಲ್ಲ ಅವರು ನಗುನಗುತ್ತಲೇ ಪ್ರತಿಕ್ರಿಯಿಸುತ್ತಿದ್ದರು. ಒಮ್ಮೆಯೂ ಅವರು ಆವೇಶಕ್ಕೆ ಒಳಗಾಗಿದ್ದನ್ನು ನಾನು ಕಾಣೆ. “‘ಹೌದು, ಕಾಲ ಬಹಳ ಕ್ರೂರವಾಗಿದೆ. ನನ್ನ ಬಗ್ಗೆ ಕೆಲವು ಲೇಖನ, ಕಮೆಂಟ್ ಗಳನ್ನು ನಾನು ನನ್ನ ಹೆಂಡತಿ, ಮಕ್ಕಳಿಗೆ ತೋರಿಸೋದೂ ಇಲ್ಲ. ಯಾಕೆಂದರೆ ಹುಶಾರಿಲ್ಲ, ನೀನು ಸಾಯಿ ಅಂತಾನೇ ಬರೆದಿರುತ್ತಾರೆ. ಹಾಗೆಲ್ಲ ಬರೆಯುವವರು ಹಿಂದೂಗಳಂತೂ ಅಲ್ಲ. ಯಾಕೆಂದರೆ ಹಿಂದೂಗಳಾಗಿದ್ದರೆ ಅವರಿಗೆ ಹಿರಿಯರ ಬಗ್ಗೆ ಗೌರವ ಇರುತ್ತೆ. ಇಂಥವರು ಪ್ರಾಚೀನ ಭಾರತವನ್ನೂ ಸೃಷ್ಟಿಸಲಾರರು. ಆಧುನಿಕ ಭಾರತವನ್ನೂ ಸೃಷ್ಟಿಸಲಾರರು.” ಎಂದು ತಣ್ಣಗೆ ಹೇಳುವ ಧೀಮಂತಿಕೆ ಅವರಿಗಿತ್ತು.
ಅನಂತಮೂರ್ತಿಯವರು ಬಹುತೇಕ ಸಂದರ್ಭದಲ್ಲಿ ಹೃದಯದ ಮಾತನ್ನೇ ಕೇಳುತ್ತಿದ್ದರೆನಿಸುತ್ತದೆ. ಅವರು ಏನನ್ನೇ ಮಾಡಿದರೂ ಪ್ರೀತಿಯಿಂದಲೇ ಮಾಡುತ್ತಿದ್ದರು, ಟೀಕೆಯನ್ನೂ ಸಹ. ಅವರಿಗೆ ಸಿಟ್ಟು ಬರುತ್ತಿರಲಿಲ್ಲವೆಂದೇನಲ್ಲ. ಆದರೆ ಸಿಟ್ಟಿಗಿಂತ ನೋವು ಪಟ್ಟುಕೊಳ್ಳುತ್ತಿದ್ದದ್ದೇ ಹೆಚ್ಚು. ಅವರಿಗೆ ಮೂತ್ರಪಿಂಡ ವೈಫಲ್ಯವಾದ ನಂತರ ಚಿಕಿತ್ಸಾ ವೆಚ್ಚಕ್ಕಾಗಿಯೇ ವಿಶ್ವವಿದ್ಯಾಲಯವೊಂದರ ಕುಲಪತಿಯಾದರು ಎಂಬ ಅರ್ಥ ಬರುವಂತೆ ಲೇಖಕರೊಬ್ಬರು ಬರೆದಿದ್ದರು. ಅದು ಬ್ಲಾಗ್ ಒಂದರಲ್ಲಿ ಪ್ರಕಟವಾಗಿತ್ತು. ಮೇಷ್ಟ್ರಿಗೆ ನಿಜಕ್ಕೂ ಸಿಟ್ಟು ಬಂದಿತ್ತು. ‘ಏನ್ರೀ ಇಷ್ಟೊಂದು ಇನ್ ಹ್ಯೂಮನ್ ಆಗಬೇಕಾ?’ ಇವರುಗಳು ಎಂದು ನೊಂದು ನುಡಿದಿದ್ದರು. ‘ನಾನು ಫೋನ್ ಮಾಡಿ ಅವರಿಗೆ ಹೇಳಿದೆ, ತಕ್ಷಣ ಆ ಲೇಖನ ತೆಗೆಯುವುದಾಗಿ ಹೇಳಿದರು, ಆದರೆ ಇನ್ನೂ ತೆಗೆದಿಲ್ಲ’ ಎಂದು ನೊಂದು ನುಡಿದಿದ್ದರು.
‘ಕರವೇ ನಲ್ನುಡಿ’ಗಾಗಿ ಅವರನ್ನು ಸಂದರ್ಶಿಸಿದಾಗ ನಿಮಗೆ ಅತಿ ಹೆಚ್ಚು ನೋವು ತಂದ ಘಟನೆ ಯಾವುದು ಎಂದು ಕೇಳಿದ್ದೆ. ಆಗ ಅವರು ಹೇಳಿದ್ದು ಜೆ.ಎಚ್.ಪಟೇಲರ ಕಾಲದಲ್ಲಿ ತಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ಎದ್ದ ವಿವಾದದ ಕುರಿತು. ಮೇಷ್ಟ್ರು ಮಾರುಕಟ್ಟೆ ದರದಲ್ಲೇ ನಿವೇಶನ ತೆಗೆದುಕೊಂಡಿದ್ದರು. ಆದರೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡೆದರು ಎಂಬ ಮಾತೇ ಉಳಿದುಕೊಂಡುಬಿಟ್ಟಿತು. ‘ಟೆನ್ನಿಸ್ ಕಲಿಯುವವರು ವಾಲ್ ಕ್ಲಾಕ್ ಅನ್ನು ಹೇಗೆ ಗುರಿಯಾಗಿಟ್ಟುಕೊಳ್ಳುತ್ತಾರೋ ಹಾಗೆ ರಾಜಕೀಯ ಟೆನಿಸ್ ಆಡುವವರು ನನ್ನನ್ನು ವಾಲ್ ಕ್ಲಾಕ್ ಮಾಡಿಕೊಂಡರು’ ಎಂದು ಮೇಷ್ಟ್ರು ಒಂದೇ ಸಾಲಿನಲ್ಲಿ ಆ ಘಟನೆಯನ್ನು ವರ್ಣಿಸಿದ್ದರು.
ಇಂಥ ಕೆಲವು ವಿಷಯಗಳನ್ನು ಬಿಟ್ಟರೆ ಮೇಷ್ಟ್ರು ಯಾವುದೇ ರೀತಿಯ ನಿಂದನೆಗಳಿಗೂ ಅಂಜಿದವರಲ್ಲ. ಕೊನೆಗಾಲದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಸಮರವನ್ನು ಅವರು ಲೆಕ್ಕಕ್ಕೇ ಇಟ್ಟುಕೊಂಡಿರಲಿಲ್ಲ. ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ಅವರು ಹಿಂದೆ ಮುಂದೆ ನೋಡಿದವರೂ ಅಲ್ಲ. ನಡೆದಾಡುವ ವಿಶ್ವವಿದ್ಯಾಲಯದಂತಿದ್ದ ಅವರು ಕೊನೆಯ ದಿನಗಳವರೆಗೆ ತಮ್ಮ ಜ್ಞಾನವನ್ನು ತಮ್ಮ ನಂತರದ ಪೀಳಿಗೆಯವರಿಗೆ ದಾಟಿಸಲು ಪ್ರಯತ್ನಿಸುತ್ತಲೇ ಇದ್ದರು.
‘ಎಲ್ಲದರ ಬಗೆಗಿನ ನಿಜವಾದ ಪ್ರೀತಿಯಿದ್ದರೆ ಅನಾರೋಗ್ಯ ಕಾಡುವುದೇ ಇಲ್ಲ’ ಎನ್ನುತ್ತಿದ್ದರು ಅನಂತಮೂರ್ತಿಯವರು. ಹೀಗೆ ಹೇಳುವ ಸಂದರ್ಭದಲ್ಲಿ ಅವರಿಗೆ ಎರಡೂ ಮೂತ್ರಪಿಂಡಗಳು ವಿಫಲಗೊಂಡಿದ್ದವು. ರಕ್ತದೊತ್ತಡದ ಸಮಸ್ಯೆಯಿತ್ತು. ವೈದ್ಯರ ಪ್ರಕಾರ ಅವರು ಬಹುಬಗೆಯ ರೋಗಗಳಿಂದ ಬಳಲುತ್ತಿದ್ದರು!
ನಿಜ, ಅವರ ಜೀವನಪ್ರೀತಿಯೇ ಅವರನ್ನು ಕೊನೆಗಾಲದವರೆಗೆ ಚೈತನ್ಯದ ಚಿಲುಮೆಯಂತೆ ಬದುಕಿಸಿತು. ಗಾಢ ಪ್ರೀತಿಯೇ ಅವರ ಜೀವದ್ರವ್ಯವಾಗಿತ್ತು. ಅವರಷ್ಟು ಜೀವನ್ಮುಖಿಯಾಗಿ ಬದುಕಲು ಮತ್ತೆ ಯಾರಿಗೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ತೀವ್ರವಾಗಿ ಬದುಕಿದರು, ಗಾಢವಾಗಿ ಬದುಕನ್ನು ಪ್ರೀತಿಸಿದರು. ಅವರ ಅಂತ್ಯಸಂಸ್ಕಾರದ ದಿನ ರವೀಂದ್ರ ಕಲಾಕ್ಷೇತ್ರ ಮತ್ತು ಕಲಾಗ್ರಾಮಕ್ಕೆ ಹರಿದು ಬಂದ ಸಾವಿರಾರು ಜೀವಗಳಿಗೆ ಅನಂತಮೂರ್ತಿಯವರ ಪ್ರೀತಿ ದಕ್ಕಿತ್ತು. ನಿಷ್ಠುರವಾದ ಸತ್ಯಗಳನ್ನು ಹೇಳುತ್ತಿದ್ದವರಾಗಿಯೂ ಮೇಷ್ಟ್ರು ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದರು ಎಂಬುದಕ್ಕೆ ಇದೇ ಸಾಕ್ಷಿಯಾಗಿತ್ತು.
– ದಿನೇಶ್ ಕುಮಾರ್ ಎಸ್.ಸಿ
Please follow and like us:
error