ಆದಿ ಜಾಂಬವ -ಜಂಬೂದ್ವೀಪೇ- ಭರತ ಖಂಡೇ – ಭರ್ತವರ್ಷೇ ಏನಿದರ ಅರ್ಥ ?! -ಡಾ.ವಡ್ಡಗೆರೆ ನಾಗರಾಜಯ್ಯ 

ಆದಿ ಜಾಂಬವ ಅಥವಾ ಮಹಾ ಆದಿಗ:
(ಭಾಗ -1)

ಆದಿಜಾಂಬವನು ಮಾದಿಗರ ಮೂಲ ಪುರುಷ. ಜಾನಪದ ಮೌಖಿಕ ಪುರಾಣಕಾವ್ಯಗಳ ಪ್ರಕಾರ ಅವನು ವಿಶ್ವಸೃಷ್ಡಿಗೂ ಆರು ತಿಂಗಳು ಮೊದಲೇ ಹುಟ್ಟಿದ ಆದಿ ಪುರುಷ. ವಿಶ್ವವನ್ನು ತಾನೆ ಸೃಷ್ಟಿಸಿದ ಆದಿ ವ್ಯಕ್ತಿಯಾದ ಕಾರಣ “ಆದಿಗ”. ವಿಶ್ವಸೃಷ್ಟಿಗೂ ಮೊದಲೇ ಈತನಿದ್ದ ಕಾರಣ ” ಮಹಾ ಆದಿಗ” ಆಗಿದ್ದಾನೆ. ಮಹಾಆದಿಗ ವ್ಯಕ್ತಿಯು ಮಾದಿಗ ಆಗಿ ಮತ್ತು ಅವನ ಸಂತತಿಯವರು ಮಾದಿಗರಾಗಿ ನಾಮಾಂಕಿತರಾಗಿದ್ದಾರೆ. 

ಆದಿಜಾಂಬವನೇ ಜಂಬೂದ್ವೀಪದ ಆದಿ ಮಾದಿಗ. ಭಾರತ ದೇಶದ ಪ್ರಾಚೀನ ಹೆಸರು ಜಂಬೂದ್ವೀಪ. ಜಂಬೂವ ಅರ್ಥಾತ್ ಜಾಂಬವನು ಭಾರತ ದೇಶದ ಎಲ್ಲಾ ಜೀವಿಗಳಿಗೆ ಮತ್ತು ಜನಾಂಗಗಳಿಗೆ ಹಿರಿಯವನಾಗಿ ಮೊದಲೇ ಹುಟ್ಟಿದ ಪಿತಾಮಹನಾದ್ದರಿಂದ ಇವನನ್ನು ‘ ಆದಿ ತಾತ ಅಥವಾ ತಾತ ಜಾಂಬವ’ ಎಂದು ಕರೆಯುತ್ತಾರೆ.

ಎಮ್ಮಾ ರೋಶಾಂಬು ಕ್ಲೌ ಹೇಳುವಂತೆ “Aryans made their conquests, and this man Adi Jambava, who was ‘ the first Madiga’ was one of those who were in possessions of the soil when the invaders came”. ಅಂದರೆ ಆರ್ಯರು ಭಾರತದ ಮೇಲೆ ದಂಡೆಯಾತ್ರೆ ಮಾಡುವ ಮೊದಲೇ ಆದಿಜಾಂಬವನು ಈ ನೆಲದ ಒಡೆಯನಾಗಿದ್ದ ಕಾರಣ ಮಾದಿಗರ ವಶದಲ್ಲಿ ಇಡೀ ಭಾರತ ದೇಶವಿತ್ತು. 👉🏾ಬಹು ಮುಖ್ಯವಾಗಿ ” ಭಾರತ ದೇಶ” ಎನ್ನುವ ಮೊದಲು ಜಂಬೂದ್ವೀಪ ಎನ್ನುವ ಹೆಸರು ಬಂದದ್ದಾದರೂ ಹೇಗೆ..? ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಆದಿಜಾಂಬವ ಪರಂಪರೆಯ ಮೌಖಿಕ ಕಥನಗಳು ನಮಗೆ ಬಹುಮಟ್ಟಿಗೆ ನೆರವಾಗುತ್ತವೆ

ಆದಿಜಾಂಬವ ಮಾತಂಗ ಪರಂಪರೆಯಲ್ಲಿ ಗುರುತಿಸಿಕೊಳ್ಳುವ ಮಾದಿಗರು ಸಿದೋಳ್ಳು, ಬಾಲಬಸವರು, ಮಣೆಗಾರ, ಸಮಗಾರ, ಡೋಹರ, ಮಚಗಾರ-ಮಚ್ಚಿಗ-ಚಮ್ಮಾರ, ಗೋಸಂಗಿ, ಆಸಾದಿ, ಅರುಂಧತಿಯರು, ಮಾಸ್ಟೀಕರು, ದೊಕ್ಕಲೋರು ಮುಂತಾದ ಜಂಬೂ ಸಮುದಾಯಗಳು ನಿರೂಪಿಸುವ ಜಲಜಾಂಬವ ಪುರಾಣ, ಆದಿಜಾಂಬವ ಪುರಾಣ, ಗಾರುಡಿ ಗಂಗಭಾರತ ಮುಂತಾದ ಮೌಖಿಕ ಪುರಾಣಗಳು ಜಂಬೂದ್ವೀಪದ ಹುಟ್ಟನ್ನು ಕುರಿತು ಹೇಳುತ್ತವೆ.

ಈ ಕಾಲಾತೀತ ಪುರಾಣಗಳು ಭೂಮಿಯ ಸೃಷ್ಟಿಕರ್ತನು ಜಾಂಬವನೆಂದೂ, ಆದಿಜಾಂಬವ ಜನಾಂಗದ ಆದಿಪುರುಷನಾದ ಜಾಂಬವನು ಜಂಬೂನೇರಳೆ ಮರದ ಕೆಳಗೆ ಜಗತ್ತನ್ನು ಸೃಷ್ಟಿಸಿದನೆಂದೂ, ಅವನು ಭೂಮಿ, ಸೂರ್ಯ- ಚಂದ್ರರು ಹುಟ್ಟುವುದಕ್ಕೂ ಮುನ್ನ ಹುಟ್ಟಿದ್ದನೆಂದೂ ಹೇಳುತ್ತವೆ.ಆದಿಜಾಂಬವ ಮುನಿಯೊಂದಿಗಿರುವ ಜಂಬೂವೃಕ್ಷದ ಸಂಬಂಧವು ಕೇವಲ ಆಕಸ್ಮಿಕವೇ ಅಥವಾ ಜಾಂಬವ ಸಂಸ್ಕೃತಿಯ ಮೂಲಧಾರೆಗೂ ಜಂಬೂವೃಕ್ಷ(ನೇರಳೆಮರ)ಕ್ಕೂ ಏನಾದರೂ ವಿಶಿಷ್ಟ ಸಂಬಂಧವಿದೆಯೇ..? ಎಂದು ಪರಿಶೀಲಿಸುವುದು ಅಗತ್ಯವೆನಿಸುತ್ತವೆ.

ಆದಿಜಾಂಬವರು ತಮ್ಮ ಮದುವೆ ಮೂಹೂರ್ತದ ಚಪ್ಪರದ ಕೆಳಗೆ ನಡುಮಧ್ಯದಲ್ಲಿ ಜಂಬೂನೇರಳೆ ಕಂಬವನ್ನು ನಿಲ್ಲಿಸಿ, ಆ ಕಂಬದ ಸಾಕ್ಷಿಯಲ್ಲಿ ವಧೂವರರಿಗೆ ಧಾರಾಮೂಹೂರ್ತ ನೆರವೇರಿಸುತ್ತಾರೆ. ಅಂದರೇ ಜಂಬೂವೃಕ್ಷಕ್ಕೆ ಜಂಬೂದ್ವೀಪಸ್ತರಾದ ಜಾಂಬವರೊಂದಿಗೆ ಅವಿನಾಭಾವ ಸಂಬಂಧವಿರುವುದು ತಿಳಿದುಬರುತ್ತದೆ.

ಆದಿಜಾಂಬವ ಮಾತಂಗ ಪರಂಪರೆಯಲ್ಲಿ ಪ್ರಾಚೀನ ಕಾಲದಿಂದಲೂ ಮಠ ಪರಂಪರೆಯಿದ್ದು ಕುಲಗುರುಗಳ ಸ್ಥಾನದಲ್ಲಿರುವ ಆದಿಜಾಂಬವ ಮುನಿಗಳು ಈ ಮಠ ವ್ಯವಸ್ಥೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ತಮ್ಮನ್ನು ಆರ್ಯಪ್ರಣೀತ ಋಷಿ ಅಥವಾ ಸ್ವಾಮೀಜಿ ಎಂಬ ಶಬ್ದಗಳಿಂದ ಕರೆದುಕೊಳ್ಳದೆ ಮಾತಂಗಮುನಿ, ಯುಗಮುನಿ, ಸಾಂಖ್ಯಮುನಿ, ಹೆಪ್ಪುಮುನಿ, ಬೆಪ್ಪುಮುನಿ, ಮಲ್ಲಮುನಿ, ಚಂದಾಯಮುನಿ, ನೀಲಮುನಿ, ದಕ್ಕದಮುನಿ, ಶಕ್ತಿಮುನಿ, ರುದ್ರಾಕ್ಷಿಮುನಿ, ಮಾರ್ಕಂಡಮುನಿ, ಷಡಕ್ಷರಮುನಿ, ಓಂಕಾರಮುನಿ, ಆನಂದಮುನಿ ಹೀಗೆ ಕರೆದುಕೊಳ್ಳುತ್ತಾರೆ.
ಈ ಮುನಿ ಪರಂಪರೆಯ ಹೆಣ್ಣುಮಕ್ಕಳನ್ನು ‘ಜಾಂಬವತಿ – ಗುರುತಾಯಿ’ ಎಂದು ಗೌರವಿಸಲಾಗುತ್ತದೆ. ಮತಂಗಮುನಿ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಧೂಳಯ್ಯ,ಮಾದಾರ ಮರುಳಸಿದ್ಧ, ಮಾದಾರಿ ಮಾದಯ್ಯ, ಮಂಟೇಸ್ವಾಮಿ ಮುಂತಾದ ಪುರುಷ ದಾರ್ಶನಿಕರು ಹಾಗೂ ಆರಂಜ್ಯೋತಿ (ಅರುಂಧತಿ), ಮಾತಂಗಿ(ಸರಸ್ವತಿ), ಕಲ್ಯಾಣಮ್ಮ ಮುಂತಾದ ಮಹಿಳಾ ದಾರ್ಶನಿಕ ಪ್ರತಿಭೆಗಳು ಇದೇ ಆದಿಜಾಂಬವ ಮಾತಂಗ ಪರಂಪರೆಯ ಸಾಂಸ್ಕೃತಿಕ ಔನ್ನತ್ಯವನ್ನು ಬೆಳಗಿದವರೆಂಬ ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇವರ ಬೆನ್ನಿಗಿದೆ.

ಮಾದಿಗ ಸಮುದಾಯದ ಆದಿಜಾಂಬವ ಕುಲಗುರುಗಳು ಕಾವಿಕಾಷಾಯ ವಸ್ತ್ರ, ಹಣೆಗೆ ವಿಭೂತಿ ಮತ್ತು ಗಂಧದ ಬೊಟ್ಟು, ಮೈಗೆ ಗೋರಾಜನ ಪುನುಗು ಕಸ್ತೂರಿ ಭಸಿತ ಲೇಪನ, ಮುಂಗೈಸರಿಗೆ, ಕೊರಳಿಗೆ ರುದ್ರಾಕ್ಷಿಮಾಲೆ ಮತ್ತು ಶಿವಲಿಂಗವನ್ನು ಧರಿಸುತ್ತಾರೆ. ಲಿಂಗಧಾರಣೆ ಮಾಡಿಕೊಂಡು ಇಷ್ಟಲಿಂಗವನ್ನು ಪೂಜಿಸುವ ಶೈವಾರಾಧಕ ಪರಂಪರೆಯ ಇವರು ಶಿವನನ್ನು ಜಂಬುಲಿಂಗ, ಜಂಬುನಾಥ, ಜಾಂಬುಲಿಂಗಯ್ಯ, ಜಂಬುಕೇಶ್ವರ, ಸಾಂಬಯ್ಯ, ಜಂಬಯ್ಯ ಮುಂತಾದ ಹೆಸರುಗಳಲ್ಲಿ ಆರಾಧಿಸುತ್ತಾರೆ.

ಕರ್ನಾಟಕದಲ್ಲಿರುವ ಆದಿಜಾಂಬವ ಮಠಗಳನ್ನು ಆಂಧ್ರಪ್ರದೇಶದ ಕಡಪ ಮೂಲದ ಆದಿಜಾಂಬವ ಗುರುಗಳು “ಶ್ರೀಮನೃಪ ಶಾಲಿವಾಹನ ಶಕ 1061 ರಲ್ಲಿ” (ಕ್ರಿಶ 1139 ರಲ್ಲಿ) ಸ್ಥಾಪಿಸಿದರೆಂದು ಕೋಡಿಹಳ್ಳಿ ಮಠದಲ್ಲಿ ಸಂರಕ್ಷಿಸಲಾಗಿರುವ ದಾಖಲೆಗಳಿಂದ ತಿಳಿದುಬರುತ್ತದೆ. ಆಂಧ್ರಪ್ರದೇಶದ ಶ್ರೀಶೈಲ, ಬೆಜವಾಡ, ಕೊಲ್ಲಿಪಾಕಿ (ಕೊನಲುಪಾಕ) ಕರ್ನೂಲು ಜಿಲ್ಲೆಯ ಕಡಪ, ಪೆನುಗೊಂಡೆ(ಪೆನುಕೊಂಡ), ಸೀಮಾಂಧ್ರದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಕೊಂಕಲ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ನುಲಿಯ ಚಂದಯ್ಯ ಮ ಹುಮನಾಬಾದ್ (ಬೀದರ್), ಮಾದಾರ ಮರುಳಸಿದ್ಧ ಪೀಠ ಹಿರೇಸಿಂಧೋಗಿ(ಕೊಪ್ಪಳ), ಮಾದಾರ ಮರುಳಸಿದ್ಧ ಪೀಠ ಲಕ್ಕುಂಡಿ(ಗದಗ್),ಕಗ್ಗುಂಡಿ ಹರಳಯ್ಯ ಪೀಠ ಹರಳಹಳ್ಳಿ ಪಿರಿಯಾಪಟ್ಟಣ, ವಿಶ್ವಬಂಧು ಮಾದಾರ ಮರುಳಸಿದ್ಧ ಪೀಠ ಉಜ್ಜೈನಿ, ಮಾತಂಗ ಆಶ್ರಮ ಹಂಪಿ ಮುಂತಾದ ಕಡೆಗೆ ಇಂತಹ ಗುರುಪೀಠಗಳಿದ್ದು ಕೆಲವು ನಾಶವಾಗಿದ್ದರೆ, ಕೆಲವು ಅಸ್ತಿತ್ವದಲ್ಲಿವೆ.

ಆದಿಜಾಂಬವರ ಉಪಜಾತಿಯಾದ ಸಿಂದೋಳ್ಳು ಎಂಬ ಅಲೆಮಾರಿಗಳು, ತಮ್ಮನ್ನು ಸಿಂಧೂ ಕಣಿವೆಯ ನಾಗರಿಕತೆಯ ಮೊದಲತೊಟ್ಟಿಲು ತೂಗಿದವರು ತಾವೇ ಎಂದು ‘ಸಿಂದ್ ಲೋಯಲವಾಳ್ಳು’ (ಸಿಂಧೂ ಕಣಿವೆಯವರು) ಎಂದು ಕರೆದುಕೊಳ್ಳುತ್ತಾರೆ. ಇವರನ್ನು ಜನರು ಸಿಂಧುಲು, ಬೂರ್ ಬೂರ್ ಚಾ, ಪುಟ್ಟಿಗೆ ಮಾರಿಯವರು, ಕೂಗುಮಾರಿಯವರು, ಚಿಂದುಲು, ಚಿಂದುವಾಂಡ್ಲು, ಭೋಗಂಮಾದಿಗಲು, ಚಿ(ಸಿ)ನ್ನಮಾದಿಗಲು, ಸಿಂದ್ ಮಾದಿಗರು ಮುಂತಾದ ಹೆಸರುಗಳಲ್ಲಿ ಕರೆದುಕೊಳ್ಳುತ್ತಾರೆ. ಸಂಶೋಧಕ ಕವಿ ಕೋಟಿಗಾನಹಳ್ಳಿ ರಾಮಯ್ಯ ಇವರನ್ನು ಕುರಿತು ” ಸಿಂದ್ ಮಾದಿಗರ ಸಂಸ್ಕೃತಿ'” ಮತ್ತು ದೊಡ್ಡಮನೆ ಲೋಕರಾಜ್ “ಸಿಂಧೊಳ್ಳು” ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಗೋಸಂಗಿ, ದಕ್ಕಲಿಗ, ಮಾಷ್ಟೀಕ, ಸಿಂಧೋಳ್ಳು ಮುಂತಾದ ಸಮುದಾಯಗಳು ಆದಿಜಾಂಬವ ಸಮುದಾಯದ ದ್ರಾವಿಡ ಪೂರ್ವದ ಮೂಲ ನೆಲೆಗಳ ಗುರುತುಗಳನ್ನು ಕಾಪಾಡಿಕೊಂಡು ಬಂದಿವೆ. ಇವು ಈಗ ಅಲೆಮಾರಿ ಸಮುದಾಯಗಳಾಗಿ ಮುಖ್ಯವಾಹಿನಿಯ ಮಾದಿಗರಿಂದ ಹೊರಗುಳಿದ ಮಾದಿಗರ ಹಳೆಮಕ್ಕಳು ಅಥವಾ ಹಳೆಪೈಕದವರು ಎಂದು ಗುರುತಿಸಿಕೊಂಡಿದ್ದಾರೆ. ಈಗಿನ ಆದಿಜಾಂಬವ (ಮಾದಿಗ) ಸಮುದಾಯದ ಈ ಮಾತೃ ಸಮುದಾಯಗಳು ಇಂದಿಗೂ ಅಲೆಮಾರಿ ಸಮುದಾಯಗಳಾಗಿ ಮುಖ್ಯವಾಹಿನಿಗೆ ಸೇರದೆ ಉಳಿದುಹೋಗಿರುವ ಸಾಮಾಜಿಕ ಕುರೂಪ ನಮ್ಮಲ್ಲಿ ಅಸ್ತಿತ್ವದಲ್ಲಿದೆ. ದ್ರಾವಿಡ ಪೂರ್ವ ನೆಲೆಯ ಈ ಮೂಲನಿವಾಸಿ ಮಾತೃ ಸಮುದಾಯಗಳು ಇಂದಿಗೂ ಅಗೋಚರ (unseeable) ಮತ್ತು ಅಪ್ರಸ್ತಾಪಿತ (unapproachable) ಸಮುದಾಯಗಳಾಗಿ ಉಳಿದಿರುವುದು ಹೊರದಬ್ಬುವಿಕೆ ರಾಜಕಾರಣದ (exclusive politics) ಕುರೂಪವಾಗಿದೆ. ಇನ್ನಾದರೂ ನಾವು ಒಳಗೊಳ್ಳುವಿಕೆಯ ರಾಜಕಾರಣ (inclusive politics) ಮಾಡಿದಾಗ ಮಾತ್ರ ಜಾತ್ಯತೀತ ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಸಾಧ್ಯವಿದೆ. ಆದಿಜಾಂಬವ ಮಾದಿಗರಿಂದ ಸಿಡಿದುಹೋಗಿ ಅಲೆಮಾರಿಗಳಾಗಿ ಮಾರ್ಪಟ್ಟಿರುವ ಈ ಸಿಂದೋಳ್ಳು, ದಕ್ಕಲಿಗರು, ಗೋಸಂಗಿ ಮುಂತಾದ ನಿರ್ಗತಿಕರನ್ನು ಕುರಿತು ಎಡಗೈ-ಬಲಗೈ ಎಂದು ಕಚ್ಚಾಡುವ ದಲಿತರು ಎಂದಾದರೂ ಯೋಚಿಸಿರುವರೇ?

ಡಾ.ವಡ್ಡಗೆರೆ ನಾಗರಾಜಯ್ಯ
8722724174, 9448538412

Please follow and like us:
error