ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕವಿದ ಕರಾಳ ಛಾಯೆ- ಸನತ್ ಕುಮಾರ್ ಬೆಳಗಲಿ

indian-pm-narendra-modi-russia-remains-our-principal-partnerಕಪ್ಪುಹಣ ಹೊರಗೆ ತರಲು ದಿಢೀರ್‌ನೆ ಬಾರೀ ಮೊತ್ತದ ನೋಟುಗಳ ಮಾನ್ಯತೆಯನ್ನು ರದ್ದು ಮಾಡಿದ ಪ್ರಧಾನಿ ಮೋದಿ ತಣ್ಣಗೆ ಜಪಾನ್‌ಗೆ ಹೋಗಿ ಕೂತಿದ್ದಾರೆ. ಇಲ್ಲಿ ಜನಸಾಮಾನ್ಯರು ತಮ್ಮ ಹಳೆಯ ನೋಟನ್ನು ಬದಲಿಸಿಕೊಳ್ಳಲು ಯಮಯಾತನೆ ಬದಲಿಸಿಕೊಳ್ಳುತ್ತಿರುವ ದೃಶ್ಯ ಕಾಣುತ್ತಿದ್ದೇವೆ. ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಂತವರಲ್ಲಿ ಒಬ್ಬನೇ ಒಬ್ಬ ಬಂಡವಾಳಶಾಹಿಯು, ಸಿರಿವಂತನು ಕಾಣುತ್ತಿಲ್ಲ. ಜನಸಾಮಾನ್ಯರು ಅದರಲ್ಲೂ ವೃದ್ಧಾಪ್ಯದ ಪಿಂಚಣಿ ಹಣ ಪಡೆಯಲು ಪರದಾಡುತ್ತಿರುವುದು ಎಲ್ಲಾ ಬ್ಯಾಂಕುಗಳ ಮುಂದೆ ಕಾಣುತ್ತಿದೆ. ರಾಷ್ಟ್ರಕ್ಕಾಗಿ ಇದನ್ನೆಲ್ಲ ಸಹಿಸಬೇಕೆಂದು ಮೋದಿ ಭಕ್ತರು ಉಪದೇಶಿಸುತ್ತಿದ್ದಾರೆ. ಈ ಭಕ್ತಿಯ ಉನ್ಮಾದ ಈಗ ತಾರಕಕ್ಕೇರಿದೆ. ಜನ ಸಮುದಾಯದಲ್ಲಿ ಇಂತಹ ಭಕ್ತರ ಸಂಖ್ಯೆ ಹೆಚ್ಚಾದಾಗಲೆಲ್ಲ, ದೇಶದಲ್ಲಿ ಪ್ರಜಾಪ್ರಭುತ್ವದ ಕ್ಷೀಣಿಸುತ್ತ ವ್ಯಕ್ತಿ ಆರಾಧನೆ ಹೆಚ್ಚುತ್ತದೆ. ಜನಾಂಗ ದ್ವೇಷ ಮತ್ತು ವ್ಯಕ್ತಿ ಆರಾಧನೆಗಳು ದೇಶವನ್ನು ಫ್ಯಾಶಿಸ್ಟ್ ರೂಪಕ್ಕೆ ತಳ್ಳುತ್ತವೆ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್, ಇಟಲಿಯಲ್ಲಿ ಮುಸಲೋನಿ ಇಂತಹ ಭಕ್ತರ ಹೆಗಲ ಮೇಲೆ ಕೂತು ತಮ್ಮ ದೇಶಗಳನ್ನು ಸರ್ವನಾಶ ಮಾಡಿದರು. ಆದರೆ ಆರೆಸ್ಸೆಸ್ ಗುರು ಗೋಳ್ವಾಲ್ಕರ್‌ಗೆ ಹಿಟ್ಲರ್ ಆದರ್ಶ ಪುರುಷ.

 ಭಾರತದ ಬರಲಿರುವ ದಿನಗಳು ಅತ್ಯಂತ ಆತಂಕಕಾರಿಯಾಗಿವೆ. ಒಂದೆಡೆ ನೋಟು ನಿಷೇಧದ ಇಂತಹ ಗಿಮಿಕ್ ಮಾಡುತ್ತಲೇ ಇನ್ನೊಂದೆಡೆ ಜಾತ್ಯತೀತ ಜನತಂತ್ರ ವ್ಯವಸ್ಥೆಗೆ ಚಟ್ಟ ಕಟ್ಟಲು ಸಂಘ ನಿಯಂತ್ರಿತ ಮೋದಿ ಸರಕಾರ ಮಸಲತ್ತು ನಡೆಸಿದೆ. ಜನತೆಯ ಹಕ್ಕುಗಳಿಗಾಗಿ ದನಿಯೆತ್ತುವ, ಕೊರಳುಗಳನ್ನು ಹಿಸುಕುವ ಕಾರ್ಯ ಅತ್ಯಂತ ನಾಜೂಕಾಗಿ ನಡೆದಿದೆ. ತಮ್ಮ ಪಕ್ಷದವರನ್ನು ಮತ್ತು ಪರಿವಾರದವರನ್ನು ಬಿಟ್ಟು ಉಳಿದವರನ್ನೆಲ್ಲ ದೇಶದ್ರೋಹಿಗಳೆಂದು ಕರೆದು ಬಲಿ ತೆಗೆದುಕೊಳ್ಳಲು ಷಡ್ಯಂತ್ರ ರೂಪುಗೊಂಡಿದೆ. ರೋಹಿತ್ ವೇಮುಲಾ ಸಾವು, ಕನ್ಹಯ್ಯೋಕುಮಾರ್ ಬಂಧನದಂತಹ ಹಿಂದಿನ ಉದಾಹರಣೆಗಳು ಬೇಡ. ತೀರ ಇತ್ತೀಚೆಗೆ ಜವಾಹರ್ ಲಾಲ್ ನೆಹರೂವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ತಿಂಗಳಾಗುತ್ತ ಬಂತು. ಆತನನ್ನು ಹುಡುಕಿಕೊಡುವಂತೆ ಆತನ ಒಡನಾಡಿಗಳು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಮಾಧ್ಯಮಗಳಲ್ಲಿ ಕೂಡ ಅದು ಸರಿಯಾಗಿ ವರದಿಯಾಗುತ್ತಿಲ್ಲ. ಪೊಲೀಸ್ ಬಲ ಬಳಸಿ, ಪ್ರತಿಭಟನೆಯ ದನಿ ಹತ್ತಿಕ್ಕಲಾಗುತ್ತಿದೆ. 25 ದಿನಗಳ ಹಿಂದೆ ಎಬಿವಿಪಿಯ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ನಜೀಬ್ ಅಂದೇ ರಾತ್ರಿ ಜೆಎನ್‌ಯು ಕ್ಯಾಂಪಸ್‌ನಿಂದ ನಾಪತ್ತೆಯಾದ. ಆತ ಎಲ್ಲಿದ್ದಾನೆಂದು ಯಾರಿಗೂ ಗೊತ್ತಿಲ್ಲ. ಪೊಲೀಸರು ಬಾಯಿ ಬಿಡುತ್ತಿಲ್ಲ. ತನ್ನ ಮಗನನ್ನು ಹುಡುಕಿಕೊಡುವಂತೆ ಆತನ ತಾಯಿ ರಾಜಧಾನಿ ದಿಲ್ಲಿಗೆ ಬಂದು ಪ್ರತಿಭಟನೆ ನಡೆಸಿದರೆ ಆಕೆಯನ್ನು ಪೊಲೀಸರು ಬಂಧಿಸಿದರು. ಅರ್ನಬ್ ಗೋಸ್ವಾಮಿಯಿಂದ ಹಿಡಿದು ಕನ್ನಡದ ಸುದ್ದಿ ಚಾನಲ್‌ಗಳವರೆಗೆ ಯಾರಿಗೂ ಇದು ಸುದ್ದಿಯಲ್ಲ. ಪ್ರಧಾನಿ ಯಾವುದಕ್ಕೂ ಸ್ಪಂದಿಸುವುದಿಲ್ಲ. ಗೃಹಮಂತ್ರಿ ವೌನ ತಾಳಿದ್ದಾರೆ.

ನಜೀಬ್ ಕತೆ ಹೀಗಿದ್ದರೆ, ಜೆಎನ್‌ಯು ಫ್ರೊಫೆಸರ್ ನಂದಿನಿ ಸುಂದರ್ ಅವರ ಮೇಲೆ ಛತ್ತೀಸ್‌ಗಡದ ಪೊಲೀಸರು ಸುಳ್ಳು ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂದಿನಿ ಸುಂದರ್ ಮಾತ್ರವಲ್ಲ, ಪ್ರೊ.ಅರ್ಚನಾ ಪ್ರಸಾದ್, ದಿಲ್ಲಿಯ ಜೋಶಿ-ಅಧಿಕಾರಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ವಿನೀತ್ ತಿವಾರಿ ಮತ್ತು ಛತ್ತೀಸ್‌ಗಡದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಸಂಜತ್ ಪರಾಟೆ ಹಾಗೂ ಇತರ ಇಬ್ಬರ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂದಿನಿ ಸುಂದರ್ ಯಾರು ಎಂಬುದು ಪತ್ರಿಕೆಗಳನ್ನು ಓದುವ, ಟಿವಿ ಸುದ್ದಿಗಳನ್ನು ನೋಡುವ ಎಲ್ಲರಿಗೂ ಗೊತ್ತು. ಹೆಸರಾಂತ ಮಾನವ ಹಕ್ಕುಗಳ ಹೋರಾಟಗಾರ್ತಿಯಾದ ನಂದಿನಿ ಸುಂದರ್ ಛತ್ತೀಸ್‌ಗಡದ ಆದಿವಾಸಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಡುತ್ತಿದ್ದಾರೆ. ಅಮೂಲ್ಯ ಖನಿಜ ಸಂಪತ್ತಿನಿಂದ ಕೂಡಿದ ಬಸ್ತಾರ್ ಜಿಲ್ಲೆಯಲ್ಲಿ ನೆಲೆಸಿದ ಆದಿವಾಸಿಗಳನ್ನು ಅಲ್ಲಿಂದ ಹೊರದಬ್ಬಿ ಅಮೂಲ್ಯ ಸಂಪತ್ತನ್ನು ಒಳಗೊಂಡ ಈ ಅರಣ್ಯ ಪ್ರದೇಶವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಿಟ್ಟುಕೊಡಲು ಆದಿವಾಸಿಗಳು ನಿರಾಕರಿಸುತ್ತಿದ್ದಾರೆ. ಆದಿವಾಸಿಗಳನ್ನು ಪೊಲೀಸರು ಮತ್ತು ಸೇನೆಯ ಬಲ ಬಳಸಿ, ಹೊರದಬ್ಬಲು ಛತ್ತೀಸ್‌ಗಡದ ಬಿಜೆಪಿ ಸರಕಾರ ನಡೆಸಿದ ಕುತಂತ್ರವನ್ನು ನಂದಿನಿ ಸುಂದರ್ ಮಾತ್ರವಲ್ಲ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಡಾ. ಬಿನಾಯಕ್ ಸೇನ್ ಅಂತಹವರು ಖಂಡಿಸಿದ್ದಾರೆ.

ಆದಿವಾಸಿಗಳ ಜೊತೆ ನಿಂತ ನಂದಿನಿ ಸುಂದರ ಅವರ ಬಾಯಿ ಮುಚ್ಚಿಸಲು ಬೇರೆ ಎಲ್ಲ ಅಸ್ತ್ರಗಳು ವಿಫಲಗೊಂಡಾಗ, ಛತ್ತೀಸ್‌ಗಡ ಪೊಲೀಸರು ಕಾಡಿನಲ್ಲಿ ಎಲ್ಲೋ ನಡೆದ ಕೊಲೆ ಪ್ರಕರಣವನ್ನು ತಂದು ಅವರ ತಲೆಗೆ ಕಟ್ಟಿದ್ದಾರೆ. ಇವರೊಂದಿಗೆ ಕೊಲೆ ಆರೋಪಕ್ಕೆ ಒಳಗಾದ ಜೋಶಿ-ಅಧಿಕಾರಿ ಸಂಶೋಧನಾ ಸಂಸ್ಥೆಯ ವಿನೀತ್ ತಿವಾರಿ, ಸಿಪಿಐ ಬೆಂಬಲಿಗರು, ಈ ಸಂಶೋಧನಾ ಸಂಸ್ಥೆಯ ಫ್ಯಾಶಿಸ್ಟ್ ಹುನ್ನಾರಗಳ ವಿರುದ್ಧ ಹೋರಾಡುತ್ತ ಬಂದಿದೆ. ಜೋಶಿ-ಅಧಿಕಾರಿ ಶೋಧನಾ ಸಂಸ್ಥೆ ಕಂಡರೆ ಸಂಘ ಪರಿವಾರಕ್ಕೆ ಆಗುವುದಿಲ್ಲ. ಭಾರತದ ಕಮ್ಯುನಿಸ್ಟ್ ಚಳವಳಿಯ ಸ್ಥಾಪಕರಲ್ಲಿ ಒಬ್ಬರಾದ ಪೂರ್ಣಚಂದ್ರ ಜೋಶಿ, ಹಿರಿಯ ಕಮ್ಯುನಿಸ್ಟ್ ನಾಯಕ ಗಂಗಾಧರ್ ಅಧಿಕಾರಿ ಅವರ ನೆನಪಿಗಾಗಿ 70ರ ದಶಕದ ಕೊನೆಯಲ್ಲಿ ಸ್ಥಾಪನೆಯಾದ ಈ ಸಂಶೋಧನಾ ಸಂಸ್ಥೆ ಅನೇಕ ವಿದ್ವಾಂಸರನ್ನು ಬೌದ್ಧಿಕ ಲೋಕಕ್ಕೆ ನೀಡಿದೆ. ಇತ್ತೀಚೆಗೆ ದೇಶದಲ್ಲಿ ಮನೆಮಾತಾದ ಕನ್ಹಯ್ಯೆಕುಮಾರ್ ಕೂಡ ಇದೇ ಸಂಸ್ಥೆಯಲ್ಲಿ ಬೆಳೆದು ಬಂದವರು. ಇಂತಹ ಮಹಾನ್ ಸಂಸ್ಥೆಯ ಬಾಗಿಲು ಮುಚ್ಚಿಸಲು ತಿವಾರಿ ಅವರನ್ನು ಕೊಲೆ ಆರೋಪದಲ್ಲಿ ಸಿಲುಕಿಸಿ, ಎಫ್‌ಐಆರ್ ಹಾಕಲಾಗಿದೆ. ಬಸ್ತಾರ್ ಅರಣ್ಯದಲ್ಲಿ ಶಮಂತ್ ಬಪೆಲ್ ಎಂಬ ಆದಿವಾಸಿ ವ್ಯಕ್ತಿಯ ಕೊಲೆ ನಡೆದದ್ದು ನಿಜ. ಮಾವೋವಾದಿಗಳು ಪೊಲೀಸ್ ಮಾಹಿತಿದಾರನೆಂದು ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದರೂ ಯಾರು ಮಾಡಿದ್ದಾರೆಂದು ಖಚಿತವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಜೆಎನ್‌ಯು ಪ್ರೊ.ನಂದಿನಿ ಸುಂದರ್, ಅರ್ಚನಾ ಪ್ರಸಾದ್, ವಿನಿತ್ ತಿವಾರಿ ಹಾಗೂ ಸಂಜತ್ ಪರಾಟೆಯವರು ಮಾವೋವಾದಿಗಳ ಜೊತೆ ಸೇರಿ ಕೊಲೆ ಮಾಡಿದ್ದಾರೆಂದು ಎಫ್‌ಐಆರ್ ಹಾಕಿದ್ದಾರೆ. ಆದರೆ ಈ ಎಫ್‌ಐಆರ್ ಸುಳ್ಳಿನ ಕಂತೆ. ತನ್ನ ಪತಿಯ ಸಾವಿಗೆ ಅವರು ಯಾರೂ ಕಾರಣವಲ್ಲ ಎಂದು ಶಮಂತ ಬಪೆಲ್ ಪತ್ನಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದ್ದಾರೆ. ಮಾವೋವಾದಿಗಳನ್ನು ಎದುರಿಸಲಾಗದ, ಕೈಲಾಗದ ಛತ್ತೀಸ್‌ಗಡದ ಬಿಜೆಪಿ ಸರಕಾರ ನೊಂದವರ ಪರವಾಗಿ ದನಿಯೆತ್ತುವ ಬುದ್ಧಿಜೀವಿಗಳನ್ನು, ಪತ್ರಕರ್ತರನ್ನು, ವಕೀಲರನ್ನು, ಸಂಶೋಧಕರನ್ನು ಬಾಯಿ ಮುಚ್ಚಿಸಲು ಅವರನ್ನು ಬಂಧಿಸುವ, ಸುಳ್ಳು ಕೇಸ್‌ಗಳನ್ನು ಹಾಕುವ ನೀಚ ಕೃತ್ಯಕ್ಕೆ ಕೈ ಹಾಕಿದೆೆ. ಪತ್ರಕರ್ತರ ಪಾಲಿಗೆ ಛತ್ತೀಸ್‌ಗಡ ಹಿಟ್ಲರ್ ಗ್ಯಾಸ್ ಚೇಂಬರ್‌ನಂತೆ ಆಗಿದೆ. ಪೊಲೀಸ್ ಕಿರಿಕಿರಿಗೆ ಹೆದರಿ, ಸುಮಾರು 8 ಮಂದಿ ಪತ್ರಕರ್ತರು ಛತ್ತೀಸ್‌ಗಡ ರಾಜ್ಯವನ್ನೇ ತೊರೆದಿದ್ದಾರೆ. ಇಬ್ಬರು ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿದೆ. ಕಾಡಿನಲ್ಲಿ ಆಶ್ರಮ ಮಾಡಿಕೊಂಡು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿದ್ದ ಹಿಮಾಂಶು ಚೌಧರಿಯಂತಹ ಗಾಂಧಿವಾದಿಗಳಿಗೂ ಕಿರಿಕಿರಿ ಉಂಟು ಮಾಡಿ, ರಾಜ್ಯದಿಂದ ಹೊರದಬ್ಬಲಾಗಿದೆ. ಈ ಹಿಂದೆ ಡಾ. ಬಿನಾಯಕ್ ಸೇನ್‌ರಂತಹ ವೈದ್ಯರನ್ನು ನಕ್ಸಲ್ ಬೆಂಬಲಿಗರೆಂದು ಜೈಲಿಗೆ ತಳ್ಳಲಾಗಿತ್ತು. ಆದಿವಾಸಿ ಮಕ್ಕಳ ಅಪೌಷ್ಟಿಕತೆ ವಿರುದ್ಧ ತಮ್ಮದೇ ಮಾರ್ಗದಲ್ಲಿ ಸಮರವನ್ನು ಸಾರಿದ ಬಿನಾಯಕ್ ಸೇನ್ ಬಂಧನವನ್ನು ಇಡೀ ದೇಶವೇ ಖಂಡಿಸಿತು. ಕೊನೆಗೆ ಸುಪ್ರೀಂ ಕೋರ್ಟ್ ಉಗಿದ ಮೇಲೆ ಬಿಡುಗಡೆ ಮಾಡಲಾಯಿತು. ಬಿನಾಯಕ್ ಸೇನ್ ಮಾತ್ರವಲ್ಲ ಬಸ್ತಾರ್‌ನ ಆದಿವಾಸಿ ಶಿಕ್ಷಕಿ ಸೋನಿ ಸೋರಿಗೂ ಕೂಡ ಪೊಲೀಸರು ಚಿತ್ರಹಿಂಸೆ ನೀಡಿ ಆಕೆ ತಪ್ಪಿಸಿಕೊಂಡು ಕಾಲ್ನಡಿಗೆಯಲ್ಲಿ ದಿಲ್ಲಿಗೆ ಬಂದು ತನ್ನ ಕತೆಯನ್ನು ಹೇಳಿದ್ದಳು. ದಿಲ್ಲಿ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಸಾಯಿಬಾಬಾರನ್ನು ನಕ್ಸಲ್ ಬೆಂಬಲಿಗರೆಂದು ಬಂಧಿಸಿ ಮಹಾರಾಷ್ಟ್ರ ಪೊಲೀಸರು ಚಿತ್ರಹಿಂಸೆ ನೀಡಿದರು. ಅವರ ಬಿಡುಗಡೆಗೂ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಯಿತು.
ಇನ್ನು ಗೋರಕ್ಷಣೆ ಹೆಸರಿನಲ್ಲಿ ದಾದ್ರಿ ಸೇರಿದಂತೆ ದೇಶದಲ್ಲಿ ನಡೆದ ದಲಿತರು ಮತ್ತು ಅಲ್ಪಸಂಖ್ಯಾತರ ಕೊಲೆಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇಂದ್ರದ ಮೋದಿ ಸರಕಾರ ಮತ್ತು ಸಂಘ ಪರಿವಾರ ಮತ್ತು ಅವಿವೇಕಿ ಭಕ್ತರು ಈಗ ತಮ್ಮ ವಿರೋಧದ ದನಿಯೆತ್ತುವ ಬುದ್ಧಿಜೀವಿಗಳು, ಸಾಹಿತಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿತ್ತು. ಆದರೆ ಮೋದಿ ರಾಜ್ಯದಲ್ಲಿ ಜನ ಸಮುದಾಯದಲ್ಲೇ ಫ್ಯಾಶಿಸ್ಟ್ ಬೆಂಬಲಿಗರು ಹುಟ್ಟಿಕೊಂಡಿದ್ದಾರೆ. ದೇಶಕ್ಕೆ ಈ ಸ್ಥಿತಿ ಬರಲು ಬುದ್ಧಿಜೀವಿಗಳೇ ಕಾರಣ. ಅವರು ದೇಶದ್ರೋಹಿಗಳೆಂದು ಹೀಯಾಳಿಸುತ್ತಿದ್ದಾರೆ. ದೇಶವನ್ನು ಲೂಟಿ ಮಾಡುತ್ತಿರುವ ಅಂಬಾನಿ, ಅದಾನಿಯಂತಹ ದಗಾಕೋರರ ಬಗ್ಗೆ ನಿಸರ್ಗ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಮಾತನಾಡದ, ಅವರ ಎದುರು ಬಾಲ ಆಡಿಸುವ ಈ ನಕಲಿ ದೇಶಭಕ್ತರು ಬುದ್ಧಿಜೀವಿಗಳನ್ನು ನಿತ್ಯವೂ ಹೀಯಾಳಿಸುತ್ತಿದ್ದಾರೆ. ನಿನ್ನೆ, ಮೊನ್ನೆ ಹುಟ್ಟಿದ ಹುಡುಗರು ದೇಶಕ್ಕೆ ಗಾಂಧಿ, ನೆಹರೂ, ಅಂಬೇಡ್ಕರ್ ಕೊಡುಗೆ ಏನೆಂದು ಪ್ರಶ್ನಿಸುತ್ತಿದ್ದಾರೆ. 60 ವರ್ಷ ಗಾಂಧಿ-ನೆಹರೂ ಹಾಳು ಮಾಡಿದ ದೇಶವನ್ನು ಉದ್ಧಾರ ಮಾಡಲು ಮೋದಿ ಅವತರಿಸಿ ಬಂದಿದ್ದಾರೆ ಎಂಬಂತೆ ಇವರು ಉನ್ಮಾದದಿಂದ ಮಾತನಾಡುತ್ತಿದ್ದಾರೆ. ಇದೆಲ್ಲ ತಪ್ಪೆಂದು ಹೇಳುವ ಬುದ್ಧಿಜೀವಿಗಳನ್ನು ದೇಶದ್ರೋಗಳೆಂದು ಬಿಂಬಿಸಿ ಲೇವಡಿ ಮಾಡಲಾಗುತ್ತಿದೆ.

Leave a Reply